ADVERTISEMENT

ಮನೆ ತೊರೆದಿದ್ದ ಆ ಕ್ಷಣ...

​ಪ್ರಜಾವಾಣಿ ವಾರ್ತೆ
Published 20 ಮೇ 2017, 19:30 IST
Last Updated 20 ಮೇ 2017, 19:30 IST
ಮನೆ ತೊರೆದಿದ್ದ ಆ ಕ್ಷಣ...
ಮನೆ ತೊರೆದಿದ್ದ ಆ ಕ್ಷಣ...   
ನಾನು ಚಿಕ್ಕ ವಯಸ್ಸಿನಲ್ಲೇ ತಂದೆಯ ಆಸರೆ ಕಳೆದುಕೊಂಡ ನತದೃಷ್ಟೆ. ಆಗ ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ತಾಯಿ ತುಂಬಾ ಕಷ್ಟಪಟ್ಟು ನಮ್ಮನ್ನು ಸಾಕುತ್ತಿದ್ದರು. ಅಂದಿನ ದಿನಗಳಲ್ಲಿ ಕೂಲಿಯೂ ಕಡಿಮೆ. ತುಂಬಾ ಕಷ್ಟದ ದಿನಗಳವು.
 
ಬೇರೆಯವರು ಓದಿ ಮುಗಿಸಿದ ಹಳೆಯ ಪುಸ್ತಕ, ಶಾಲಾ ಸಮವಸ್ತ್ರಗಳ ಆಸರೆಯಿಂದ ಶಿಕ್ಷಣ ಸಾಗುತ್ತಿತ್ತು. ನಾವೆಲ್ಲರೂ ಶಾಲೆಗೆ ರಜೆ ಇರುವಾಗ ಸಣ್ಣ ಪುಟ್ಟ ಕೆಲಸಮಾಡಿ ನಮ್ಮ ಶಿಕ್ಷಣದ ಖರ್ಚನ್ನು ತೂಗಿಸಿಕೊಳ್ಳುತ್ತಿದ್ದೆವು.
 
ಸ್ವಾಭಿಮಾನಿಯಾದ ನಮ್ಮ ತಾಯಿ ಒಂದು ತುತ್ತು ಊಟಕ್ಕೂ ನೆಂಟರ ಮನೆಗೆ ಕಳಿಸಿದವರಲ್ಲ. ಒಮ್ಮೆ ನನ್ನ ಚಿಕ್ಕಪ್ಪ ಬಂದು ‘ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆ’ ಎಂದರೂ ನಮ್ಮನ್ನು ಕಳಿಸಲಿಲ್ಲ. 
 
ಒಂದು ದಿನ ಹೀಗೆ ಬಾಯಿ ಮಾತಿಗೆ ನನ್ನನ್ನು ಗದರುತ್ತ – ‘ಚಿಕ್ಕಪ್ಪ ಕರೆದುಕೊಂಡು ಹೋಗಲು ಬಂದಾಗ ಕಳುಹಿಸಬೇಕಿತ್ತು’ ಎಂದರು. ನಾನು ಹಿಂದೆಮುಂದೆ ಯೋಚಿಸದೇ ಶಾಲೆಯ ಬ್ಯಾಗ್‌ನಲ್ಲಿ ಎರಡು ಜೊತೆ ಬಟ್ಟೆ ಹಾಕಿಕೊಂಡು ‘ನಾನು ಚಿಕ್ಕಪ್ಪನ ಹತ್ತಿರ ಹೋಗುತ್ತೇನೆ’ ಎಂದು ಹೊರಟೇಬಿಟ್ಟೆ. ಮನೆಯ ಪಕ್ಕದ ಗುಡ್ಡದಲ್ಲಿ ಹುಲ್ಲಿನ ಬೇಣ ಇತ್ತು. ಅಲ್ಲಿ ಹೋಗಿ ಕುಳಿತು ಗೊಳೋ ಎಂದು ಅತ್ತೆ. 
 
ಸ್ವಲ್ಪ ಸಮಯದ ನಂತರ ನಾನು ಮಾಡಿದ ತಪ್ಪು ಮನವರಿಕೆಯಾಯಿತು. ವಾಪಸ್ ಮನೆಗೆ ಬಂದೆ. ಅಮ್ಮನನ್ನು ಕಂಡತಕ್ಷಣ ಗಟ್ಟಿಯಾಗಿ ಹಿಡಿದುಕೊಂಡು. ‘ನನ್ನದು ತಪ್ಪಾಯಿತು. ಇನ್ನು ಯಾವತ್ತೂ ಹೀಗೆ ನಿನ್ನನ್ನು ಬಿಟ್ಟುಹೋಗುವ ಮಾತಾಡುವುದಿಲ್ಲ’ ಎಂದು ಅತ್ತುಬಿಟ್ಟೆ. 
 
‘ನೀನು ಹಿರಿಯವಳು. ತಮ್ಮಂದಿರನ್ನು ಸರಿದಾರಿಯಲ್ಲಿ ಕರೆದುಕೊಂಡು ಹೋಗಬೇಕು. ಇನ್ನು ಯಾವತ್ತೂ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬೇಡ’ ಎಂದು ಅಮ್ಮ ಸಮಾಧಾನ ಪಡಿಸಿದರು. ಆ ದಿನ ನನ್ನ ಜೀವನದಲ್ಲಿಯೇ ಮರೆಯಲಾಗದ ದಿನವಾಯಿತು.
–ದೀಪಾಲಿ ಸಾಮಂತ, ದಾಂಡೇಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.