ADVERTISEMENT

ಮಾಂದ್ಯ

ಶ್ರೀವತ್ಸ
Published 16 ಜೂನ್ 2018, 11:25 IST
Last Updated 16 ಜೂನ್ 2018, 11:25 IST
ಮಾಂದ್ಯ
ಮಾಂದ್ಯ   

ಕತ್ತಲಾವರಿಸಿದ ಆ ಕೋಣೆಯಲ್ಲಿ ದೊಡ್ಡ ಪರದೆಯ ಸ್ಮಾರ್ಟ್‌ ಟಿ.ವಿ ಒಂದೇ ಸಮನೆ ಒದರುತ್ತಿತ್ತು. ಅಲ್ಲಿ ಮೂಡಿ ಮರೆಯಾಗುತ್ತಿದ್ದ ದೃಶ್ಯಗಳು, ಶಾರದಾ ಕುಸಿದು ಕೂತಿದ್ದ ಆ ಕೋಣೆಯಲ್ಲಿ, ಬೆಳಕನ್ನು ಎತ್ತೆತ್ತಿ ಒಗೆಯುವಂತೆ ಭಾಸವಾಗುತ್ತಿದ್ದವು. ಆಗ ಚಿಮ್ಮುತ್ತಿದ್ದ ಸುದ್ದಿಯ ಚೂರುಗಳು, ಶಾರದಾಳನ್ನು ಸಾವಿರಾರು ಈಟಿಗಳಿಂದ ಇರಿಯುವಂತೆ ಎರಗೆರಗಿ ಬರುತ್ತಿದ್ದವು. ಏಳನೇ ಮಹಡಿಯಲ್ಲಿದ್ದ ತನ್ನ ವೈಭವೋಪೇತ ಫ್ಲ್ಯಾಟಿನ ಎಲ್ಲ ಕಿಟಕಿಗಳನ್ನು ಮುಚ್ಚಿ, ಪರದೆಗಳನ್ನೆಳೆದು, ಟಿವಿ ಎದುರು ಕೂತವಳನ್ನು, ಆ ಆಘಾತಕಾರಿ ಸುದ್ದಿ, ಒಂದಾದ ಮೇಲೊಂದರಂತೆ ಇನ್ನಷ್ಟು ಸುದ್ದಿವಾಹಿನಿಗಳಿಗೆ ಆಹಾರವಾಗಿ, ನಿತ್ರಾಣಗೊಳಿಸಿತ್ತು. ಇದರ ಜೊತೆಗೆ, ಆ ಸುದ್ದಿಗೆ ಶಾರದಾ ನಾಯಕಿಯೋ, ಇಲ್ಲ ಖಳನಾಯಕಿಯೋ ಎಂದು ತೀರ್ಪು ಕೊಡುವ ದೊಡ್ಡ ಕೆಲಸದಲ್ಲಿ ತಲ್ಲೀನರಾಗಿದ್ದ ಸುದ್ದಿ ನಿರೂಪಕರ ಆರ್ಭಟ, ಚರ್ಚೆಗಳು. ನಗರದ ಪ್ರತಿಷ್ಠಿತ ಅಂತರರಾಷ್ಟ್ರೀಯ ಶಾಲೆಯಲ್ಲಿ ಸಮಾಜ ಪರಿಚಯ ಪಾಠ ಮಾಡುವ ಶಾರದಾ ಟೀಚರ್ - ಈ ಸುದ್ದಿಯ ಸುತ್ತಿಗೆಯ ಹೊಡೆತಕ್ಕೆ ತತ್ತರಿಸಿಹೋಗಿದ್ದಾಳೆ, ಯಾರ ಕೈಗೂ ಸಿಗದೇ, ಮೊಬೈಲ್‌ ಕೂಡ ಆಫ್‌ ಮಾಡಿ ಎಲ್ಲೋ ತಲೆಮರೆಸಿಕೊಂಡುಬಿಟ್ಟಿದ್ದಾಳೆ ಎನ್ನುವ ಬೊಬ್ಬೆ ಪ್ರತಿ ಮೂರು ನಿಮಿಷಕ್ಕೆ ಒಂದೊಂದು ಒಬ್ಬೆಯಾಗಿ ಬಿತ್ತರವಾಗುತ್ತಲೇ ಇತ್ತು. ಹೊರಗಿನ ಪ್ರಪಂಚದಿಂದ ಸ್ವಲ್ಪ ಹೊತ್ತಾದರೂ ಸಂಬಂಧ ಕಡಿದುಕೊಂಡು, ಈ ಬಿಕ್ಕಟ್ಟಿನಿಂದ ಬಿಡುಗಡೆ ಹೊಂದುವ ಮಾರ್ಗ ಹುಡುಕಲು ಅವಳು ಯತ್ನಿಸಿದಷ್ಟೂ ಸುದ್ದಿವಾಹಿನಿಗಳು ಸ್ಯಾಟಲೈಲ್‌ ಮೂಲಕ ಬೆನ್ನುಹತ್ತಿ ದಾಳಿ ಮಾಡುತ್ತಲೇ ಇದ್ದವು.

ಅಷ್ಟು ಹೊತ್ತಿಗಾಗಲೇ ಜಗಜ್ಜಾಹೀರಾಗಿದ್ದ ಸುದ್ದಿ: ಪ್ರತಿಷ್ಠಿತ ಶಾಲೆಯಲ್ಲಿ ಸಮಾಜ ಪರಿಚಯ ಬೋಧಿಸುವ ಶಾರದಾ ಎನ್ನುವ ಹಿರಿಯ ಶಿಕ್ಷಕಿಯೊಬ್ಬರು, ಹೋಮ್‌ವರ್ಕ್‌ ಮಾಡಿಕೊಂಡು ಬಂದಿಲ್ಲ ಎನ್ನುವ ಕಾರಣಕ್ಕೆ, ಹತ್ತು ವರ್ಷದ ಸಹನಾ ಎಂಬ ವಿದ್ಯಾರ್ಥಿನಿಯ ಎಡಗೆನ್ನೆಗೆ ಬಲವಾಗಿ ಹೊಡೆದಿದ್ದಾರೆ. ಇದರಿಂದ ಆ ಬಾಲಕಿ ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದಾಳೆ.

ಈ ಸುದ್ದಿ, ಕೇವಲ ಸುದ್ದಿಯಾಗಿ ಉಳಿಯದೆ, ಶಾರದಾ ಮಿಸ್‌ ಫ್ಲ್ಯಾಟಿನೆದುರು ಘೇರಾವುಗಳಾಗಿ, ಕೂಗಾಟ-ದೊಂಬಿಗಳಾಗಿ ಮಾರ್ಪಾಡಾಗಿಯೇ ಬಿಟ್ಟಿತ್ತು. ಕೆಲವಾರು ಸಾಮಾಜಿಕ ಸಂಘಟನೆಗಳ, ಪುಡಿ ರಾಜಕಾರಣಿಗಳ- ದೊಡ್ಡ ದಂಡೇ, ಆ ಸಂತ್ರಸ್ತೆಯ ಕುಟುಂಬವರ್ಗದವರನ್ನು ಮುಂದಿಟ್ಟುಕೊಂಡು ನೆರೆದಾಗಿತ್ತು. ಟಿ.ವಿ ಕ್ಯಾಮೆರಾಗಳು, ಎಗ್ಗಿಲ್ಲದೆ ಆ ದೃಶ್ಯಗಳನ್ನು ಒಳಗೆಳೆದುಕೊಂಡು, ಸ್ಟುಡಿಯೋಗೆ ರವಾನಿಸಿ, ಇನ್ನಷ್ಟು ರಂಗು ಬಳಿದು, ಸ್ಫೋಟಿಸುವುದಕ್ಕಾರಂಭಿಸಿಯಾಗಿತ್ತು. ಇವುಗಳಿಂದ ಶಾರದಾಳ ಒಳಮನೆ ಕುಸಿಯುತ್ತಿತ್ತು.

ADVERTISEMENT

ಇದೇ ತಲ್ಲಣದಲ್ಲಿ, ಶಾರದಾ, ಗಂಡ ಚಂದ್ರಕಾಂತ್‌ಗೆ ಹಲವು ಸಲ ಕರೆ ಮಾಡಿದರೂ, ತನ್ನ ಕೆಲಸದ ಒತ್ತಡದಲ್ಲಿ ಮುಳುಗಿಹೋಗಿದ್ದ ಆತ ಉತ್ತರಿಸದೆ ಹೋಗಿದ್ದ. ಆಗವಳು ಮೆಲ್ಲನೆ ಕತ್ತು ತಿರುಗಿಸಿ, ಭಯಗ್ರಸ್ಥ ಕಣ್ಣುಗಳನ್ನು ಬಲಕ್ಕೆ ಹೊರಳಿಸಿ ದಿಟ್ಟಿಸಿದಳು. ಮಗ ರೇವಂತ ಏನೂ ಆಗಿಲ್ಲವೇನೋ ಎಂಬಂತೆ, ತನ್ನ ಗಾಲಿ ಕುರ್ಚಿಯ ಮೇಲೆ ಎಂದಿನಂತೆ ನಿರ್ಲಿಪ್ತನಾಗಿ ಕೂತಿದ್ದ. ಅವನ ಕಣ್ಣುಗಳಲ್ಲಿ ಗಾಬರಿ ಇರಲಿಲ್ಲ. ಮುಖದಲ್ಲಿ ಆತಂಕದ ಛಾಯೆ ಇನಿತಿರಲಿಲ್ಲ. ಸೊಟ್ಟಗಾಗಿರುವ ಅವನ ಕೈಗಳನ್ನು ಕುರ್ಚಿಯ ಮೇಲೆ ಊರಿ ಕೂತವನಿಗೆ ತನ್ನ ಅಮ್ಮನ ಪರಿಸ್ಥಿತಿಯ ಅರಿವೇ ಇರಲಿಲ್ಲ. ಇರಲಿಕ್ಕೆ ಸಾಧ್ಯವೂ ಇರಲಿಲ್ಲ. ಬುದ್ಧಿಮಾಂದ್ಯತೆಯ ಆ ಹುಡುಗನಿಗೆ ಈ ಅರಿವಾದರೂ ಹೇಗೆ ಬಂದೀತು ಎಂದು ಶಾರದಾಳಿಗೂ ಅನ್ನಿಸಿತು. ತನಗೊದಗಿ ಬಂದಿರುವ ಈ ಸಂಧಿಗ್ಧವನ್ನು ಹಂಚಿಕೊಂಡಲ್ಲಿ ರೇವಂತ ಹೇಗೆ ಸ್ಪಂದಿಸಿಯಾನು ಎಂಬ ಶಂಕೆಯಲ್ಲಿಯೇ ಎದ್ದು ಅವನೆಡೆಗೆ ಬಂದು ಅವನ ಮೈದಡವಿದಳು. ಆ ತಕ್ಷಣ, ಏನೋ ಹೊಳೆದವನಂತೆ, ರೇವಂತ "ಅ..ಮ್ಮ ನಂಗೆ, ಲಾ..ರೀ.. ಯಾವಗ್ಗ ಕೊಡೀಸ್ತೀಯ. ದೊಡ್ಡ್ದರೋಡಲ್ಲಿ ..ಜುರ್ರ್ರ್ರ್ ಅಂತ... ಡ್ರೈವಿಂಗ್... ಮಾಡಿತೀನಿ..." ಎಂದು ತೊದಲುತ್ತ ಅರಚುತ್ತಾ ಕುರ್ಚಿಯಿಂದೆದ್ದು ನಿಂತದ್ದೇ ತಡ, ಮೈ ಸವರುತ್ತಿದ್ದ ಅವಳ ಕೈಗಳು ಸೆಟೆದವು. ಕೈಗಳಲ್ಲಿ ಹರಿಯುತ್ತಿದ್ದ ವಾತ್ಸಲ್ಯ, ಕೋಪವಾಗಿ ಕುದಿಯತೊಡಗಿ, ಮತ್ತೆ ಅವನನ್ನು ಕುರ್ಚಿಗೆ ತಳ್ಳಿದವಳೇ... ಶಾರದಾ, ರೇವಂತನ ಬೆನ್ನ ಮೇಲೆ ಪಟ ಪಟ ಎಂದು ಹೊಡೆದೇಬಿಟ್ಟಿದ್ದಳು. ಸುದ್ದಿಯ ಕಹಿ ರೇವಂತನ ಬೆನ್ನ ಮೇಲೆ ಬಾಸುಂಡೆಗಳಾದವು. ಅದುವರೆಗೂ ತಡೆದಿಟ್ಟುಕೊಂಡಿದ್ದ ಕಣ್ಣೀರಿನ ಅಣೆಕಟ್ಟು ಒಡೆದಿತ್ತು. ರೇವಂತನನ್ನು ಅಪ್ಪಿ ಜೋರಾಗಿ ಅಳತೊಡಗಿದ ಶಾರದಾ, ಈಗಿನ ವಿಪತ್ತಿನ ಆಳ, ವಿಸ್ತಾರವನ್ನು ಊಹಿಸಿಯೇ ಕಂಗಾಲಾಗಿದ್ದವಳು. ಇಂದು ನಡೆದ, ಮುಂದೆ ನಡೆಯಲಿರುವ ಸಂಗತಿಗಳು ಆ ಕತ್ತಲಿನಲ್ಲಿ ರಾಕ್ಷಸಾಕಾರ ತಾಳಿ, ಮತ್ತೆ ಕಣ್ಮುಂದೆ ಕುಣಿಯತೊಡಗಿದವು.

ಇವತ್ತಿನ ಬೆಳಿಗ್ಗೆ ಕೂಡ ರೇವಂತನದು ಇದೇ ರಂಪಾಟ. ಲಾರಿ ಕೊಡ್ಸು ಹೈವೆನಲ್ಲಿ ಜುರ್ರ್ರ್ ಅಂತ ಹೋಗ್ಬೇಕು ಎನ್ನುವ ಅವನ ಈ ಬೇಡಿಕೆ ಶಾರದಾ ಮತ್ತು ಚಂದ್ರಕಾಂತ ದಂಪತಿಯ ತಲೆ ಕೊರೆಯುತ್ತಿರುವ ಒಂದು ಹುಳು. ಪ್ರತಿ ಕ್ಷಣವೂ ಆ ಉಪಟಳದಿಂದ ರೋಸಿಹೋಗಿದ್ದ ಅವರು ದೊಡ್ಡ ಮನೋವೈದ್ಯರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದು, ಅದರಿಂದ ಏನೂ ಪ್ರಯೋಜನವಾಗದೆ, ಕೈಚೆಲ್ಲಿಯಾಗಿತ್ತು. ಇವತ್ತಂತೂ ಆ ರಂಪಾಟದ ಸ್ವರೂಪ ಭೀಕರವಾಗಿ ದಂಪತಿ ಅವನನ್ನು ಕಟ್ಟಿ, ರೂಮಿನಲ್ಲಿ ಕೂಡಿಹಾಕಿ, ಇನ್ನೊಮ್ಮೆ ಆ ಲಾರಿ ವಿಷಯ ತೆಗೆಯೆದಂತೆ ಗದರಿಸಬೇಕಾಯಿತು. ಇದೇ ಮನಃಸ್ಥಿತಿಯಲ್ಲಿ ದಂಪತಿ ತಂತಮ್ಮ ಕೆಲಸಕ್ಕೆ ಹೋಗಿದ್ದರು.

ತನ್ನೊಳಗೆ ಬಿರುಗಾಳಿ ಎಬ್ಬಿಸುತ್ತ ಸಾಗಿ ಹೋಗುತ್ತಿದ್ದ ರೇವಂತನ ಲಾರಿ ದಿಕ್ಕುತಪ್ಪಿ ಹೋಂವರ್ಕ್‌ ಮಾಡದ ಸಹನಾಳ ಮೇಲೆ ಹರಿಹಾಯ್ದುಬಿಟ್ಟಿತ್ತು. ಶಾರದಾಳ ವೃತ್ತಿ ಬದುಕಿನ ಈ ದೊಡ್ಡ ಅಪಘಾತದ ಒಂದೊಂದು ಕ್ಷಣವನ್ನು ಸುದ್ದಿವಾಹಿನಿಗಳು ಬಿಡದೆ ಪ್ರಸಾರ ಮಾಡುತ್ತಲೇ ಇರುವಾಗ, ಚಂದ್ರಕಾಂತನ ಕರೆ ಬಂದಿತ್ತು. ಅಳುತ್ತಲೇ ಉತ್ತರಿಸಿದ್ದಳು ಶಾರದಾ...

ಚಂದ್ರಕಾಂತನಿಗೂ ಈಗಾಗಲೇ ಈ ಸುದ್ದಿಯ ಇಂಚಿಂಚೂ ಮನದಟ್ಟಾಗಿತ್ತು. ಆದರೂ ಅವನಿಂದು ಶಾರದಾಳ ಕರೆಗಳಿಗೆ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿರಲಿಲ್ಲ. ಅವನದು ಸರ್ಕಾರಿ ಕೆಲಸ. ನಗರದಲ್ಲಿ ಎದ್ದು ನಿಲ್ಲುತ್ತಿರುವ ಹೊಸ ಸಾರಿಗೆ ವ್ಯವಸ್ಥೆಯೊಂದಕ್ಕೆ ಬೇಕಾದ ಬೃಹತ್ ಕಾಂಕ್ರೀಟ್ ಕಂಬಗಳನ್ನು ಡಿಸೈನ್ ಮಾಡಿ, ಎರಕ ಹೊಯ್ದು ಅವನ್ನು ನಿಲ್ಲಿಸುವ ಬಹು ಜವಾಬುದಾರಿಯ ಕೆಲಸ. ಇಂದು, ತುಂಬ ಮುಖ್ಯವೆನಿಸುವ ಒಂದು ಭಾಗದಲ್ಲಿ ಸುಮಾರು ನೂರಿಪ್ಪತ್ತು ಅಡಿ ಎತ್ತರದ ಐದಾರು ಕಂಬಗಳನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಇತ್ತು. ಈ ಕೆಲಸ ನಿಭಾಯಿಸಲು ಸಜ್ಜಾಗಿದ್ದ ಚಂದ್ರಕಾಂತನಿಗೆ, ಈ ಕಾರ್ಯಾಚರಣೆಯ ರೂಪುರೇಷೆಗಳನ್ನು ತನ್ನಿಡೀ ತಂಡದೊಂದಿಗೆ ಹಂಚಿಕೊಳ್ಳುವಾಗಲೂ, ರೇವಂತನ ಲಾರಿಯದ್ದೇ ಗುಂಗು, ಎಂಥದೋ ಭಯದ ಮಂಪರು... ಇಡೀ ಕಂಬಗಳನ್ನೆಲ್ಲ ನಿಲ್ಲಿಸಿದಂತೆ, ಅದನ್ನೆಲ್ಲಾ ಪರಿವೀಕ್ಷಿಸಿ, ಅದರ ಮೇಲೆ ರೈಲು ಕಂಬಿಗಳನ್ನು ಜೋಡಿಸಿದಂತೆ, ಆ ಹಳಿಗಳ ಮೇಲೆ ಸಂಚಾರವನ್ನು ಉದ್ಘಾಟಿಸುವಾಗ ರೈಲು ಬೋಗಿಗಳಲ್ಲಿ ಜನಜಂಗುಳಿ ತುಂಬಿ, ಹಸಿರು ನಿಶಾನೆ ತೋರಿದಂತೆ... ರೈಲು ನಿಧಾನವಾಗಿ, ಕೂಗುತ್ತ ಚಲಿಸಿದಂತೆ... ಚಂದ್ರಕಾಂತ ಇದನ್ನೆಲ್ಲಾ ಕಂಟ್ರೋಲ್ ರೂಮಿನಿಂದ ಗಮನಿಸುತ್ತಿರುವಂತೆ... ಅರೆ... ರೈಲನ್ನು ಓಡಿಸುತ್ತಿರುವವ ಯಾರು ಎಂದು ನೋಡಿದರೆ ರೇವಂತ್.. ‘ಓಹ್ ನನ್ನ ಮಗ ರೇವಂತ್... ರೇವಂತ್... ಅವನಿಗೆ ರೈಲು ಓಡಿಸಲು ಬರೋಲ್ಲ, ದೊಡ್ಡ ಅನಾಹುತ ಆದೀತು... ನಿಲ್ಸಿ ನಿಲ್ಸಿ ಟ್ರೈನ್ನಿಲ್ಸಿ...’ ಎಂದು ಚಂದ್ರಕಾಂತ ಚೀರುತ್ತಾ ಹೊರಗೋಡಿ ಬಂದಂತೆ...

ಇದೇ ಲಾರಿ- ರೈಲನ್ನು ತನ್ನೊಳಗೆ ತುಂಬಿಟ್ಟುಕೊಂಡು, ಚಂದ್ರಕಾಂತ ವರ್ಕ್‌ ಸ್ಟಾರ್ಟ್‌ ಇಟ್ಟು ಕಾರನ್ನೇರಿ ಮನೆಯ ಕಡೆ ಹೊರಟಿದ್ದ. ಅವನ ಮನಸಿನ ರೈಲು ಹಳಿ ತಪ್ಪಿದಂತೆ ಏನೇನೋ ಯೋಚಿಸುತ್ತಿತ್ತು. ಅವನ ಗೆಳೆಯ, ನಗರದ ಹೊರವಲಯದಲ್ಲಿ ನಡೆಸುವ ಬುದ್ಧಿಮಾಂದ್ಯರ ವಸತಿಶಾಲೆಗೆ ರೇವಂತನನ್ನು ದಬ್ಬಿದ್ದು, ಅಲ್ಲಿ ಅವನಿಗೆ ಅಪೌಷ್ಟಿಕತೆ ಉಂಟಾಗಿ ಕ್ಷಯರೋಗ ಬಾಧಿಸಿದ್ದು ಎಲ್ಲ ನೆನಪಾಗುತ್ತಿತ್ತು. ಅಲ್ಲಿಂದ ಬಂದಾದ ಮೇಲೆ, ರೇವಂತನ ಲಾರಿ ಹುಚ್ಚು ಇನ್ನೂ ಅತಿಯಾಗಿ, ದಂಡಿ ದಂಡಿಯಾಗಿ ಆಟಿಕೆ ಲಾರಿಗಳನ್ನು ತಂದುಕೊಟ್ಟದ್ದಾಯಿತು... ಆದರೂ ಅವನಿಗೆ ದೊಡ್ಡ ಲಾರಿಯೇ ಬೇಕೆನ್ನುವ ಹುಂಬತನ. ತೀರಿಸಲಾಗದ ಈ ಬಯಕೆ, ತಮ್ಮ ವೃತ್ತಿಜೀವನದ ಬೇಡಿಕೆಗಳ ಮಧ್ಯೆ ಶಾರದಾ-ಚಂದ್ರಕಾಂತರ ದಾಂಪತ್ಯ ನರಕ ಸದೃಶವಾಗಿತ್ತು. ತಮ್ಮ ಪ್ರತಿಷ್ಠೆಗೆ ಭಂಗ ಬಾರದಂತೆ, ತಮ್ಮ ಮಗ ಒಬ್ಬ ಬುದ್ಧಿಮಾಂದ್ಯ ಎನ್ನುವುದು ವೃತ್ತಿ ವಲಯದಲ್ಲಿ ಯಾರಿಗೂ ಗೊತ್ತಾಗದಂತೆ ರಹಸ್ಯವಾಗಿಡಲು ಪಡುತ್ತಿರುವ ಕಷ್ಟ ಅವರಿಬ್ಬರಿಗೇಗೊತ್ತು.

ಚಂದ್ರಕಾಂತ ಅನತಿ ದೂರದಲ್ಲಿ ಕಾರು ನಿಲ್ಲಿಸಿ ತನ್ನ ಮನೆಯ ಸುತ್ತ ನೆರೆದಿದ್ದ ಜನಜಾತ್ರೆಯನ್ನು ಗಮನಿಸಿ, ಬಿಗಡಾಯಿಸುತ್ತಿರುವ ಪರಿಸ್ಥಿತಿಯನ್ನು ಒಳಗೊಳಗೇ ಲೆಕ್ಕಾಚಾರ ಮಾಡಿಕೊಂಡ. ಈಗವನು ಅಲ್ಲಿ ಹೋದರೆ, ಜನ ರೊಚ್ಚಿಗೆದ್ದು ಕಲ್ಲು ತೂರುವುದಂತೂ ನಿಜ. ಆಗಲೇ ಪೊಲೀಸ್ ವಾಹನಗಳೂ ಜಮಾಯಿಸಿವೆ. ಹಾಗೆಂದುಕೊಂಡವನು, ಮತ್ತೆ ಕಾರು ತಿರುಗಿಸಿ, ಇನ್ನಷ್ಟು ದೂರಕ್ಕೆ, ಜನ ವಿರಳವಾದ ಜಾಗದಲ್ಲಿ ನಿಲ್ಲಿಸಿಕೊಂಡು ಶಾರದಾಳಿಗೆ ಕರೆ ಮಾಡಿದ. "ಎಲ್ಲ ಪ್ರಯತ್ನ ಮಾಡಿದೆ... ಶಾರದಾ... ನಂಗೆ ಗೊತ್ತಿರೋ ದೊಡ್ಡವರ ಹತ್ರ ಗೋಗರೆದಿದ್ದು ಆಯಿತು... ನಮ್ಮ ಏರಿಯಾ ಎಸ್.ಪಿಗೆ, ಎ.ಸಿ.ಪಿಗೆ ಹೇಳ್ಸಿದ್ದು ಆಗಿದೆ... ತಡ್ಕೋ... ವರ್ಚಸ್ಸು, ದುಡ್ಡು ಕಾಸು ಏನು ನಡಿಯುತ್ತೋ ನೋಡೋಣ ..ಡಿಯರ್...' ಶಾರದಾ ಬಿಕ್ಕುತ್ತಿದ್ದಳು.

ಚಂದ್ರಕಾಂತನ ಮ್ಯಾನೇಜ್‌ಮೆಂಟ್ ಮೆದುಳು ಕೆಲಸ ಮಾಡುತ್ತಲೇ ಇತ್ತು. ಶಾರದಾಳೊಂದಿಗೆ ಫೋನ್‌ ಮಾಡುತ್ತಿದ್ದ ಅವನು ಏನೋ ನಿರ್ಧಾರಕ್ಕೆ ಬಂದವನಂತೆ ‘ರೇವಂತ ಏನ್ಮಾಡ್ತಿದಾನೆ... ಅವನೀಗ ನಮಗೆ ತುಂಬ ಮುಖ್ಯ... ಸ್ವಲ್ಪ ಸಹನೆಯಿಂದ ಅವನನ್ನು ಸಂಭಾಳಿಸು... ನಾಳೆ ಲಾರಿ ಕೊಡಿಸ್ತಾರಂತೆ ಅಪ್ಪ ಅಂತ ಪೂಸಿ ಮಾಡಿ... ನಾನು ಹೇಳಿದ ಹಾಗೆ ಮಾಡ್ಸು ಅವನ ಕೈಲಿ...’ ಎಂದು ಅವಳನ್ನು ನಿರ್ದೇಶಿಸಿ, ಫೋನ್‌ ಕಾಲ್ ಮುಗಿಸಿ... ಕಾರಿನೊಳಗೆ ಕೂತವನು ತನ್ನ ಟೈ ಸಡಿಲಿಸಿಕೊಂಡ. ಅಷ್ಟರಲ್ಲಿ ಶಾರದಾ ಕರೆ ಮಾಡಿದ್ದಳು. ಅವಳು ವಿಹ್ವಲವಾಗಿ ‘ರೀ ಇದ್ರಿಂದ ನಮ್ಮ ಮಗ ಬುದ್ಧಿಮಾಂದ್ಯ ಅಂತ ಎಲ್ರಿಗೂ ಗೊತ್ತಾಗಲ್ವೇನ್ರೀ... ಇದನ್ನು ಹೇಗೆ...’ ಎನ್ನುವಷ್ಟರಲ್ಲಿ, ಚಂದ್ರಕಾಂತ ‘ಇದೊಂದೇ ದಾರಿ... ಪ್ಲೀಸ್ ಡೂ ಇಟ್’ ಎಂದು ಆದೇಶ ಕೊಟ್ಟ. ಹಾಗೇ ಕಣ್ಣು ಮುಚ್ಚಿ ತನ್ನ ಈ ಯೋಜನೆಯ ಫಲಶ್ರುತಿಗಳ ಬಗ್ಗೆ ಅಂದಾಜಿಗೆ ಮೊದಲಾದ.

ಸ್ವಲ್ಪ ಹೊತ್ತಿನಲ್ಲಿಯೇ ಅವನ ಮೊಬೈಲ್‌ನ ಗುರ್‌ ಸದ್ದಿಗೆ ಎಚ್ಚರಗೊಂಡ ಚಂದ್ರಕಾಂತನ ಮುಖದಲ್ಲಿ ವಿವರ್ಣ ನಗು ಮೂಡಿತು. ಅದು ಶಾರದಾ, ತನ್ನ ಮೊಬೈಲಿನಲ್ಲಿ,  ರೇವಂತನನ್ನ ಬಳಸಿಕೊಂಡು ವಾಟ್ಸಪ್ಪಿನಲ್ಲಿ ಮಾಡಿದ ಒಂದು ವಿಡಿಯೋ ತುಣುಕು. ಅದನ್ನು ಪೂರ್ತಿಯಾಗಿ ನೋಡಿ, ನಿಟ್ಟುಸಿರಿಟ್ಟು, ತನ್ನ ನೂರೆಂಟು ಆಪ್ತರಿಗೆ ಆ ವಿಡಿಯೋ ತುಣುಕನ್ನು ಕಳುಹಿಸಿದ, ಸಾಮಾಜಿಕ ಜಾಲತಾಣಗಳ ಗೋಡೆಗಳ ಮೇಲೆ ರೇವಂತನ ಈ ನಿವೇದನೆಯನ್ನು ಹಚ್ಚಿದ. ಇಷ್ಟು ಮಾಡಿ, ಏನೋ ಗೆದ್ದವನಂತೆ, ಮತ್ತೆ ಕಾರಿನ ಸೀಟಿಗೊರಗಿ ಫಲಿತಾಂಶಕ್ಕಾಗಿ ಕಾದು ಕುಳಿತ.

ಅಂತೂ ಆ ವಿಡಿಯೋ ವೈರಲ್ ಆಗಿತ್ತು. ಅದನ್ನು ಯಥಾವತ್ತಾಗಿ ವಾಹಿನಿಗಳು ತೋರುತ್ತ ಹೋದವು. ರೇವಂತ ತನ್ನ ಸೊಟ್ಟ ಕೈಗಳನ್ನು ಜೋಡಿಸಿ, ಪೆದ್ದು ಮುಖ ಹೊತ್ತು, ತೊದಲುತ್ತ  ‘ನನ್ನಿಂದ ನನ್ನ ಅಮ್ಮ ಸಹನೆ ಕಳ್ಕೊಂಡು... ಹೀ..ಗೆ ... ಹೊಡೆದುಬಿಟ್ಟರು... ಆ ಸ್ಟೂಡೆಂಟ್‌ಗೆ... ನಂಗೋಸ್ಕರ... ಕ್ಷಮಿಸಿ...’ ಎನ್ನುತ್ತಿದ್ದ ದೃಶ್ಯಗಳು ಬ್ರೇಕಿಂಗ್‌ ಸುದ್ದಿಯಾದದ್ದು ಇತ್ತ ಕಾರಿನಲ್ಲಿ ಕೂತ ಚಂದ್ರಕಾಂತನಿಗೂ ತಿಳಿಯಿತು.

ಪರಿಸ್ಥಿತಿ, ರೇವಂತನ ನಿವೇದನೆಯಿಂದ ತಿಳಿಯಾದೀತೆನ್ನುವ ಸಣ್ಣ ಆಸೆಯಲ್ಲಿ, ಅವನೀಗ ನಿಧಾನವಾಗಿ ಮನೆಯ ಕಡೆ ಚಲಿಸುತ್ತಿದ್ದ. ಕಾರಿಗೆ ಇನ್ನಷ್ಟು ವೇಗ ಕೊಡುವಷ್ಟರಲ್ಲಿ ಅತ್ತ, ಶಾರದಾ, ಕವಿಯುತ್ತಿದ್ದ ಕತ್ತಲಲ್ಲಿ ಯಾವ ಮೂಲೆಯಿಂದಾದರೂ ಸಹಾಯ ಒದಗೀತೆ ಎನ್ನುವ ಹುಡುಕಾಟದಲ್ಲಿ ಉಡುಗಿಹೋಗಿದ್ದಾಗ, ಅಮ್ಮನ ಕಣ್ತಪ್ಪಿಸಿ, ರೇವಂತ ತನ್ನ ಗಾಲಿ ಕುರ್ಚಿಯಿಂದೆದ್ದು ಸದ್ದಾಗದಂತೆ ಬಾಗಿಲು ತೆಗೆದು ತನ್ನಪ್ಪ ಲಾರಿ ತಂದಿರಬೇಕೆಂಬ ಅತೀವ ನಿರೀಕ್ಷೆಯಲ್ಲಿ ಹೊರಗಡಿಯಿಟ್ಟಿದ್ದ. ಅಷ್ಟು ಹೊತ್ತಿಗಾಗಲೇ ರಸ್ತೆಯುದ್ದಕ್ಕೂ ನೆರೆದಿದ್ದ ಜನರ ಕೂಗಾಟ ಕೇಳಿದವನಿಗೆ, ತನ್ನ ಹೊಸ ಲಾರಿಯನ್ನು ಇವರೆಲ್ಲ ನೋಡಲು ಬಂದಿದ್ದಾರೆ ಎಂದೆನಿಸಿತೋ ಏನೋ-  ವಿಚಿತ್ರ ನಗೆಯೊಂದಿಗೆ, ಮೆಟ್ಟಿಲುಗಳನ್ನಿಳಿಯ ತೊಡಗಿದ. ಅದೇ ಕಟ್ಟಡದಲ್ಲಿದ್ದ ಇತರ ಮನೆಯವರು ಬಹುಶಃ ರೇವಂತನೆಂಬ ಈ ಬುದ್ಧಿಮಾಂದ್ಯ ಹುಡುಗನ ಇರುವಿಕೆಯನ್ನು ಇದೇ ಮೊದಲ ಬಾರಿ ಕಂಡವರಂತೆ ಅವನು ಕುಪ್ಪಳಿಸುತ್ತಾ ಇಳಿದೋಡುವುದನ್ನು ಬೆಪ್ಪಾಗಿ ಉಸಿರು ಹಿಡಿದು ನೋಡುತ್ತಿದ್ದರು.

ಅವನು ಎದ್ದೋಡಿದ್ದು, ಅದರಿಂದ ನೆರೆ- ಹೊರೆಯಲ್ಲಿ  ಉಂಟಾದ ಕೋಲಾಹಲ ಶಾರದಾಳಿಗೆ ಕೇಳಿಸುವಷ್ಟರಲ್ಲಿ, ರೇವಂತ ಒಳಗಿಂದ ಹೊರಗೆ ಬಂದಿದ್ದ... ಹೊರಗಿನ ಪ್ರಪಂಚ ರೇವಂತನನ್ನು ಕಾಣುತ್ತಿರುವುದಾಗಲೀ ಅಥವಾ ಅವನು ಪ್ರಪಂಚವನ್ನು ಈಗ ನೋಡುತ್ತಿರುವುದಾಗಲೀ ಆ ಎರಡೂ ಕ್ಷಣಗಳು ಒಂದಕ್ಕೊಂದು ಡಿಕ್ಕಿಯಾದಂತೆ ಸಾವರಿಸಿಕೊಳ್ಳುತ್ತಿದ್ದವು. ಕೆಳಗೆ ಸೇರಿದ್ದ ಸಮೂಹ, ವಾಟ್ಸಪ್ಪಿನ ದೃಶ್ಯದಲ್ಲಿ ಕಂಡಿದ್ದ ರೇವಂತನನ್ನು ಸುಲಭವಾಗಿ ಗುರುತಿಸಿ ‘ಆ ಮೇಡಂ ಮಗ ಇವ್ನು... ಹಿಡಿದು ಕೂಡಿಸ್ಕೊಳಿ... ಬೇಕಾಗ್ತಾನೆ ಇವ್ನು ಈ ಕೇಸ್ನಲ್ಲಿ’ ಎಂದರಚುತ್ತಾ ರೇವಂತನನ್ನು ತಮ್ಮ ಸುಪರ್ದಿಗೆಳೆದುಕೊಂಡರು. ಮಾಧ್ಯಮದವರ ಮೈಕುಗಳು ರೇವಂತನ ಬಾಯಿಯ ಬಳಿಯೇ ಸಂತೆ ನೆರೆದು ಅವನು ಆಡಬಹುದಾದ ಇನ್ನಷ್ಟು ಮಾತುಗಳನ್ನು ಹೀರಲು ತವಕಿಸುತ್ತಿದ್ದವು. ಮೌನ ಮತ್ತು ಅಸಂಗತ ನಗುವಿನ ನಡುವೆ ‘ಅಪ್ಪ ಲಾರಿ... ಅಪ್ಪ ಲಾರಿ...’ ಎನ್ನುವುದನ್ನು ಬಿಟ್ಟರೆ ರೇವಂತ ಇನ್ನೇನನ್ನೂ ಆಡಲಿಕ್ಕಿಲ್ಲ ಎನ್ನುವ ತೀರ್ಮಾನಕ್ಕೆ ಬರಲು ಜನರಿಗೆ ಬಹಳ ಹೊತ್ತು ಬೇಕಾಗಲಿಲ್ಲ. ರೇವಂತನನ್ನು ಮಧ್ಯ ಕೂಡಿಸಿಕೊಂಡ ಜನ, ಅವನ ಅಸಂಬದ್ಧ ಮಾತುಗಳನ್ನು ಸವಿಯುವುದಕ್ಕೆ ಮೊದಲಾಗಿತ್ತು. ಇವೆಲ್ಲದರ ನಡುವೆ ಏಟು ತಿಂದು ಆಸ್ಪತ್ರೆಯಲ್ಲಿದ್ದ ಹುಡುಗಿಯನ್ನು ಮರೆತೇ ಹೋಗಿದ್ದರು.

ಚಂದ್ರಕಾಂತನ ಕಾರು ತವಕದಿಂದಲೇ ಮನೆಯನ್ನು ಸಮೀಪಿಸುತ್ತಿತ್ತು. ಕಾರಿನ ಎಲ್ಲ ದೀಪಗಳನ್ನು ಆರಿಸಿಕೊಂಡು, ಮರೆಯಾಗಿ ನಿಂತು, ಸೇರಿದ್ದ ಗುಂಪನ್ನು ದಿಟ್ಟಿಸಿದ. ಗುಂಪಿನ ಗಿಜಿಗಿಜಿಯ ನಡುವಿಂದ ತೂರಿಬರುತ್ತಿದ್ದ ದೊಡ್ಡ ನಗು, ಕೇಕೆಗಳಿಗೆ ಮೂಲ ದ್ರವ್ಯವಾಗಿದ್ದ ರೇವಂತನನ್ನು ಚಂದ್ರಕಾಂತನ ಕಣ್ಣುಗಳು ಅರಸುತ್ತಿದ್ದವು. ಅಂತೂ ರೇವಂತ ಕಂಡುಬಂದ ... ತನ್ನ ಮಗನ ಮಾಂದ್ಯತೆಯನ್ನು ಸಾರಾಸಗಟಾಗಿ ಉರುವಲು ಮಾಡಿಕೊಂಡಂತೆ ಅದರ ಸುತ್ತ ಕುಣಿಯುವ ಜನರ ‘ಕ್ಯಾಂಪ್ ಫೈರ್’ ನೋಡಿ ಚಂದ್ರಕಾಂತ ಒಮ್ಮೆಲೇ ಕುಸಿದುಹೋದ. ಮತ್ತೆ ಭಯದ ಮಂಪರು... ಅವನು ಮತ್ತು ಶಾರದಾ ಒಮ್ಮೆಲೇ ಪ್ರಪಾತಕ್ಕೆ ಬಿದ್ದಂತೆ...  ಕ್ರೇನ್ ಒಂದನ್ನು ನಡೆಸುತ್ತ, ದಿಢೀರನೆ ಕಾಣಿಸಿಕೊಳ್ಳುವ ರೇವಂತ, ಇವರಿಬ್ಬರನ್ನೂ ಗಬಕ್ಕನೇ ಹಿಡಿದು ಮೇಲೆತ್ತಿದಂತೆ...

ಬೇಟೆಯಾಡುತ್ತಿದ್ದ ಆ ಮುನ್ನೋಟಗಳನ್ನು ನೋಡಲಾಗದೆ ಹಿಂದಕ್ಕೆ ತಲೆ ಹಾಕಿದ... ಹಿಂದಿನ ಸೀಟಿನಲ್ಲಿ ರೇವಂತನಿಗಾಗಿ ತಂದಿದ್ದ ಹೊಸ ಜೊಲ್ಲುಪಟ್ಟಿಯ ಪೊಟ್ಟಣ ‘ಮಾಂದ್ಯರು ಯಾರು’ ಎಂದು ಪ್ರಶ್ನೆ ಮಾಡುವಂತೆ ಕೆಕ್ಕರಿಸಿ ನೋಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.