ADVERTISEMENT

ಮೀನುಗಳ ‘ಮಹಾಮನೆ’

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2017, 19:30 IST
Last Updated 8 ಏಪ್ರಿಲ್ 2017, 19:30 IST
ಮೀನುಗಳ ‘ಮಹಾಮನೆ’
ಮೀನುಗಳ ‘ಮಹಾಮನೆ’   
ಆಶಾ ಹೆಗಡೆ
ನಸು ಗುಲಾಬಿ, ತಿಳಿ ನೀಲಿ, ಬಿಳಿ ಬಣ್ಣದ ಬಿಡಿಸಿಟ್ಟ ಪುಟ್ಟ ಕೊಡೆಗಳು, ಅದರ ಮೇಲೆ ತೆಳುವಾಗಿ ಎಳೆದಂತಹ ಕಪ್ಪುಗೆರೆಗಳು, ಮೇಲೆಲ್ಲಾ ಪೋಣಿಸಿಟ್ಟ ಬಿಳಿಯ ಮುತ್ತುಗಳು. 
 
ಕಿವಿಗೆ ಯಾವ ಬಣ್ಣದ ಆಭರಣವಿರಲಿ? ನೀಲಿ, ಗುಲಾಬಿ, ಬಿಳಿ? ಆಯ್ಕೆ ಮಾಡುತ್ತಿದ್ದಂತೆ – ಅದು ನಿಧಾನಕ್ಕೆ ಚಲಿಸಿದಾಗಲೇ ತಿಳಿಯುವುದು: ನಾವು ನೋಡುತ್ತಿರುವದು ಆಭರಣವಲ್ಲ, ಮೀನುಗಳು ಎಂದು! ಈ ಮೀನುಗಳನ್ನು ನೋಡುತ್ತಿದ್ದರೆ ಆಭರಣಗಳಂತೆಯೂ ಬಟ್ಟೆಯ ಡಿಸೈನುಗಳಂತೆಯೂ ಕಾಣಿಸುತ್ತವೆ. 
 
ಇದು ಅಮೆರಿಕದ ಜಾರ್ಜಿಯ ರಾಜ್ಯದ ಅಟ್ಲಾಂಟಾ ನಗರದ ಮತ್ಸ್ಯಾಲಯ. ಪ್ರಪಂಚದ ಎರಡನೆಯ ಅತಿ ದೊಡ್ಡ ಮತ್ಸ್ಯಾಲಯ (ಮೊದಲನೆಯದು ಸಿಂಗಾಪುರದಲ್ಲಿದೆ) ಎನ್ನುವುದು ಇದರ ಹಿರಿಮೆ.
 
ಮಾನವ ನಿರ್ಮಿತ ಗುಹೆಯಾಕಾರದ ಕಟ್ಟಡದೊಳಗೆ ಪ್ರವೇಶಿಸುತ್ತಿದ್ದಂತೆ, ಎರಡೂ ಬದಿಯಲ್ಲೂ ನೀರಿನೊಳಗೆ ಅಪ್ಪ ಮೀನು, ಅಮ್ಮ ಮೀನು, ದೊಡ್ಡ ಮೀನು, ಚಿಕ್ಕಪ್ಪ ದೊಡ್ಡಪ್ಪ ಮೀನುಗಳು, ಅಣ್ಣ, ತಮ್ಮ, ತಂಗಿ ಮೀನುಗಳು (ಬೆಳ್ಳಿ ಬಣ್ಣದ ಒಂದೇ ಜಾತಿಯ ಮೀನುಗಳು) ಗಾಜಿನ ಟ್ಯಾಂಕಿನೊಳಗೆ ಈಜುತ್ತಿದ್ದವು.
 
ಬಲಗಡೆ ಬಂಗಾರದ ಬಣ್ಣದ ಮೀನುಗಳು! ಮುಂದೆ ಹೋಗುತ್ತಿದ್ದಂತೆ, ನೆತ್ತಿಯ ಮೇಲೆ ಜುಳು ಜುಳು ಹರಿಯುವ ನೀರಿನ ಸದ್ದು. ತಲೆ ಎತ್ತಿದರೆ, ಬೃಹದಾಕಾರದ ಮೀನುಗಳು – ಇನ್ನೇನು ನಮ್ಮ ತಲೆಯ ಮೇಲೆಯೇ ಬಿದ್ದುಬಿಡುತ್ತವೇನೋ ಎನ್ನುವಷ್ಟು ಅಂತರದಲ್ಲಿ! ಮನುಷ್ಯ ನಿರ್ಮಿತ ಬಣ್ಣಗಳನ್ನು ನಾಚಿಸುವಂತಹ ವರ್ಣರಂಜಿತ ಮೀನುಗಳು! ಇಪ್ಪತ್ತು ಅಡಿ ಉದ್ದದ ಮೀನುಗಳು, ಐದು ಸೆಂಟಿಮೀಟರಿನಷ್ಟು ಚಿಕ್ಕ ಮೀನುಗಳು!
 
ಗಾಜಿನ ಹೊದಿಕೆಯ ಒಳಗೆ ದೊಡ್ಡದೊಂದು ಬಾದಾಮಿಯಾಕಾರದ ಕೊಳ ನೋಡಿ ಬೆರಗಾದೆವು. ಸುಮಾರು ನಾಲ್ಕು ಅಡಿ ಉದ್ದದ ಒಂದೇ ಅಳತೆಯ 10–12 ಶ್ವೇತವರ್ಣದ ಮೀನುಗಳು ನಗುತ್ತಾ ನಮ್ಮತ್ತ ಬರುವಂತೆ ಅನ್ನಿಸುತ್ತಿತ್ತು. ಅವುಗಳದು ನಗುಮುಖ. ಅವುಗಳ ಹೆಸರು ‘ಸ್ಮೈಲಿ ಫಿಶ್’.
 
ಅವುಗಳ ಹಿಂದೆಯೇ ದೊಡ್ಡ ದೊಡ್ಡ ಬಣ್ಣ ಬಣ್ಣದ ವೇಲ್ಸ್, ಶಾರ್ಕ್ ಮೀನುಗಳು ಫ್ಯಾಶನ್ ಶೋನಲ್ಲಿ ಮುಖ ತೋರಿಸಿಹೋಗುವ ಲಲನೆಯರಂತೆ ಸಾಗುತ್ತವೆ.  
 
ಇನ್ನೊಂದು ಜಾತಿಯ ಮೀನುಗಳು ಕುಳ್ಳಗಿದ್ದು, ಅಗಲ ಮೈಕಟ್ಟನ್ನು ಹೊಂದಿರುತ್ತವೆ. ಅವುಗಳು ಈಜಾಡುವಾಗ ತಮ್ಮ ದೇಹದ ಹಿಂಭಾಗವನ್ನು ಮಾತ್ರ ಅಲ್ಲಾಡಿಸುತ್ತಾ ಸಾಗುತ್ತವೆ. ಅದನ್ನು ನೋಡುವದು ಒಂದು ರೀತಿಯಲ್ಲಿ ತಮಾಷೆ ಎನಿಸುತ್ತದೆ.
 
ತರಬೇತುದಾರರು ದೊಡ್ಡ ಕೊಳದೊಳಗೆ ಇಳಿದು, ಅವುಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ಅವುಗಳನ್ನು ತಬ್ಬಿಕೊಂಡು ಮುತ್ತಿಕ್ಕುತ್ತಾರೆ, ಮೈ ಸವರುತ್ತಾರೆ, ತಬ್ಬಿಕೊಂಡು ಈಜುತ್ತಾರೆ. ನಾವು ಮೀನುಗಳಿಗೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಕೇಳಿದರೆ, ಕೊಳದೊಳಗಿಂದಲೇ ಉತ್ತರಿಸುತ್ತಾರೆ. ಆಸಕ್ತಿಯುಳ್ಳವರು ಹೆಚ್ಚಿನ ಹಣ ತೆತ್ತು ಅವರು ಕೊಡುವ ಉಡುಗೆ ಧರಿಸಿ, ಆ ಕೊಳದಲ್ಲಿಳಿದು ಮೀನುಗಳೊಂದಿಗೆ ಈಜಬಹುದು. 
 
ಈ ಕೊಳವನ್ನು ದಾಟಿ ಬಂದರೆ, ಪುಟ್ಟ ಪುಟ್ಟ ಮೀನುಗಳ ಬಣ್ಣ ಬಣ್ಣದ ವಿಸ್ಮಯ ಲೋಕ ತೆರೆದುಕೊಳ್ಳುತ್ತದೆ. ಮತ್ತೊಂದು ದೃಶ್ಯ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತು. ಬಟ್ಟಲಿನಾಕಾರದ ಬಿಳಿಯ ಬಣ್ಣದ ಮೇಲೆ ಪುಟ್ಟ ಬಿಳಿಯ ಮರದ ಕೊಂಬೆಗಳು. ಅದರ ಮೇಲೆ ಹಾಲಿನ ನೊರೆಯನ್ನು ತುಂಬಿಟ್ಟಂತಹ ನೋಟ. ಅದೂ ಕೂಡಾ ಒಂದು ಜಾತಿಯ ಮೀನಂತೆ.
 
ಮುಂದೆ ಪೆಂಗ್ವಿನ್ ಗಳ ಸಾಮ್ರಾಜ್ಯ. ಅವುಗಳನ್ನು ಇರಿಸಿದ್ದ ಕೋಣೆಯೊಳಗೆ ತರಬೇತಿದಾರಳು ಹೊಕ್ಕು ಆಹಾರ ನೀಡಿದಳು. ಒಂದು ಪೆಂಗ್ವಿನ್‌ಗೆ ಆಹಾರ ನೀಡಿರುವುದು ಗೊತ್ತಾದ ಕೂಡಲೇ ಉಳಿದೆಲ್ಲವೂ ಪುಟ್ಟ ಪುಟ್ಟ ಹೆಜ್ಜೆಯಿಕ್ಕುತ್ತಾ ಹೋಗುವುದನ್ನು ನೋಡುವುದೇ ಒಂದು ಸಂಭ್ರಮ. ಅವುಗಳ ಕುರುತಾಗಿಯೇ ಪುಟ್ಟ ‘4 ಡಿ’ ಸಿನಿಮಾ ಪ್ರದರ್ಶನ ಕೂಡಾ ಇರುತ್ತದೆ.
 
ಮೂವತ್ತು ನಿಮಿಷಗಳ ಪ್ರದರ್ಶನದಲ್ಲಿ, ಹಲವು  ಬಾರಿ ಅವುಗಳು ನಮ್ಮ ಅತ್ಯಂತ ಸಮೀಪದಲ್ಲಿ ಹಾದುಹೋಗುವ ಅನುಭವ ಖುಷಿ ಕೊಡುತ್ತದೆ.  ಅವುಗಳು ನೀರಿಗೆ ಧುಮುಕುವಾಗ ನಾವು ಕುಳಿತ ಕುರ್ಚಿ ಅಲುಗಾಡುತ್ತದೆ. ನೀರಿನ ಹನಿಗಳು ಮೈಮೇಲೆ ಸಿಡಿದ ಅನುಭವಾಗುತ್ತದೆ. ಇದು ‘4 ಡಿ’ ಸಿನಿಮಾದ ಪರಿಣಾಮ.
 
ಈ ಮೀನುಮನೆಯ ಮತ್ತೊಂದು ಆಕರ್ಷಕ ಪ್ರದರ್ಶನ ಡಾಲ್ಫಿನ್‌ಗಳದು. ಬೆಳಕು ಕತ್ತಲಿನ ದೀಪಗಳ ಚೆಲ್ಲಾಟವಾಗುತ್ತಿದ್ದಂತೆ, ಕೊಳದ ಆ ಬದಿಯಿಂದ ಎರಡು, ಈ ಬದಿಯಿಂದ ಎರಡು ಡಾಲ್ಫಿನ್‌ಗಳು ಜಿಗಿದು ಈಜುತ್ತಾ ಪ್ರೇಕ್ಷಕರಿಗೆ ಸ್ವಾಗತವನ್ನು ಕೋರುತ್ತವೆ.
 
ಒಂದೊಂದಾಗಿ ನೀರಿನೊಳಗಿಂದ ಮೇಲೆ ಬಂದು ಅಷ್ಟೆತ್ತರಕ್ಕೆ ಜಿಗಿದು ಮತ್ತೆ ನೀರಿಗೆ ಹೋಗುತ್ತವೆ. ನೀರಿನಿಂದ ಅರ್ಧ ಶರೀರವನ್ನು ಮಾತ್ರ ತೋರುತ್ತ ಬಳುಕುತ್ತಾ ಈಜಾಡುತ್ತವೆ. 
 
ಕೊನೆಯದಾಗಿ, ಎರಡು ಡಾಲ್ಫಿನ್‌ಗಳ ತೆರೆದ ಬಾಯಿಯ ಮೇಲೆ ಇಬ್ಬರು ಯುವತಿಯರು ನಿಂತುಕೊಳ್ಳುತ್ತಾರೆ. ಒಂದು ದಡದಿಂದ ಇನ್ನೊಂದು ದಡದವರೆಗೂ ಅವು ಯುವತಿಯರನ್ನು ಕರೆತರುತ್ತವೆ.  
 
ಡಾಲ್ಫಿನ್‌ಗಳ ಆಟದೊಂದಿಗೆ ‘ಮತ್ಸ್ಯ ಆವರಣ’ದ ಗುಂಗು ಮುಗಿದಿರುತ್ತದೆ. ಊಟ ತಿಂಡಿಗೆ ಅಲ್ಲಿಯೇ ಕ್ಯಾಂಟೀನ್ ವ್ಯವಸ್ಥೆ ಇದೆ. 10 ಮಿಲಿಯನ್ ಸಮುದ್ರ ಲವಣ ನೀರಿನಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಇಲ್ಲಿ ಜಲಚರಗಳನ್ನು ಸಾಕಲಾಗಿದೆ. 2012ರಲ್ಲಿ ಸಿಂಗಪುರದಲ್ಲಿ ಮೆರೈನ್ ಲೈಫ್ ಪಾರ್ಕ್ ಪ್ರಾರಂಭವಾಗುವ ಮುನ್ನ ಇದು ಜಗತ್ತಿನ ಅತೀ ದೊಡ್ಡ ಮತ್ಸ್ಯಾಲಯವಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.