ADVERTISEMENT

ರಂಗ ತೀರ್ಥಯಾತ್ರೆಯ ಹೆಗ್ಗೋಡು

ಮರೆಯಲಿ ಹ್ಯಾಂಗ

ಪ್ರಜಾವಾಣಿ ವಿಶೇಷ
Published 12 ಜುಲೈ 2014, 19:30 IST
Last Updated 12 ಜುಲೈ 2014, 19:30 IST

ಹೆಗ್ಗೋಡು ಕರ್ನಾಟಕದ ಸ್ವಿಟ್ಜರ್‌ಲೆಂಡ್‌ ಎನ್ನುವುದು ರಂಗಕರ್ಮಿ ಮಂಡ್ಯ ರಮೇಶ್‌ ಅವರ ಅನಿಸಿಕೆ. ಹಸಿರು, ನೀರ ನಾದ, ಕೆಸರು ರಸ್ತೆಗಳು, ಬೆಳ್ಳನೆ ಹುಡುಗಿಯರು... ಹೀಗೆ ಸೌಂದರ್ಯದ ಪರೇಡ್‌ ಒಂದು ನಿತ್ಯ ಚಾಲ್ತಿಯಲ್ಲಿರುವ ಹೆಗ್ಗೋಡು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಕೂಡ. ‘ಇಲ್ಲಿಗೆ ಮಕ್ಕಳನ್ನು ಪ್ರವಾಸಕ್ಕಾಗಿ ಕರೆತನ್ನಿ’ ಎನ್ನುವ ರಮೇಶ್‌, ತಮ್ಮಿಷ್ಟದ ಹೆಗ್ಗೋಡಿನ ಬಗ್ಗೆ ದಾಖಲಿಸಿರುವ ನೆನಪುಗಳು ಇಲ್ಲಿವೆ.

ನಾನು ಸಾಗರದ ಆ ಊರಿನತ್ತ ಪಯಣ ಬೆಳೆಸಿದ್ದು ಪ್ರವಾಸಕ್ಕಾಗಿ ಅಲ್ಲ. ಬದುಕನ್ನು ಹುಡುಕುವ ಸಲುವಾಗಿ. ನನ್ನ ಬಣ್ಣದ ಬದುಕಿನ ಕಲಿಕೆಯ ಗೂಡು ಆ ಊರು.

ಅಂದಹಾಗೆ, ನಾನು ಹೇಳುತ್ತಿರುವುದು ಸುಮಾರು ಮೂರು ದಶಕದ ಹಿಂದಿನ ಕಥೆಯನ್ನು. ಅಂದರೆ, 1983–84ರ ಇಸವಿಯದು. ಬಯಲುಸೀಮೆಯ ಹೊರಗೊಂದು ಪ್ರಪಂಚದ ಅಸ್ತಿತ್ವದ ಅರಿವೇ ನನಗಿರಲಿಲ್ಲ. ಆಗಷ್ಟೇ ಪದವಿ ಮುಗಿಸಿದ್ದೆ. ನನಗೆ ಮಂಡ್ಯವೇ ಸರ್ವಸ್ವ. ಮಲೆನಾಡಿನ ಪರಿಚಯವೇ ಇರದಿದ್ದ ನಾನು ಸಾಗರದಲ್ಲಿ ಬಸ್‌ ಹತ್ತಿ ಕಿಟಕಿ ತೆರೆದೆ. ಹೊರಗೆ ಜಿಟಿ ಜಿಟಿ ಮಳೆ. ಪೈರುಗಳು ಬೆಳೆದು ನಿಂತಿವೆ. ಜೋರಾಗಿ ಬೀಸುವ ಗಾಳಿಗೆ ಮುಗಿಲೆತ್ತರ ಚಾಚಿದ ಅಡಿಕೆ ಮರಗಳು ತೂರಾಡುತ್ತಿವೆ. ಆ ವಾತಾವರಣವೇ ವಿಸ್ಮಯವಾಗಿ ಕಂಡಿತ್ತು. ಹಿಂದೆ ಕೂತಿದ್ದವರ್‍್ಯಾರೋ ‘ಅಪ್ಪಿ, ಗ್ಲಾಸು ಮುಚ್ಚೋ’ ಎಂದರು. ‘ಅರೆ! ನನಗ್ಯಾಕೆ ಅಪ್ಪಿ ಎನ್ನುತ್ತಾರೆ’ ಎಂಬ ಯೋಚನೆ. ಇಂಥದ್ದೊಂದು ಭಾಷಾಪ್ರಯೋಗವಿದೆ ಎಂಬುದೇ ತಿಳಿದಿರಲಿಲ್ಲ. ಅಲ್ಲೊಂದು ಹವ್ಯಕರ ಭಾಷೆ, ರಾಯ್ಕರ ಭಾಷೆ, ಸಿದ್ಧಿ ಜನಾಂಗದವರ ಭಾಷೆ ಇದೆ ಎನ್ನುವುದು ಮಂಡ್ಯ ಗಡಿದಾಟದ ನನಗೆ ತಿಳಿವುದಾದರೂ ಹೇಗೆ?

ಹೆಗ್ಗೋಡು ಎಂಬ ಪುಟ್ಟ ಕುಗ್ರಾಮದಲ್ಲಿ ಇಳಿದಾಗ ನನ್ನನ್ನು ಆವರಿಸಿದ್ದು ಅಲ್ಲಿನ ಮಣ್ಣಿನ ವಾಸನೆ. ಆ ವಾಸನೆಗೆ ವಿಚಿತ್ರವಾದ ತಣ್ಣನೆ ಗುಣವಿತ್ತು. ಎಲ್ಲರ ಬಾಯಲ್ಲೂ ಸದಾ ಎಲೆ ಅಡಿಕೆ. ಫಳಫಳ ಹೊಳೆಯುವ ಬೆಳ್ಳನೆ ಹುಡುಗೀರು. ನಾನು ನೋಡಿದ್ದ, ಕೇಳಿದ್ದಕ್ಕಿಂತ ಬೇರೆಯದೇ ಪ್ರಪಂಚವಿದು ಎನಿಸಿತು. ಆ ಊರಲ್ಲೊಂದು ಸಣ್ಣ ಕ್ಯಾಂಟೀನು, ಒಂದು ದೊಡ್ಡ ರಂಗಮಂದಿರ, ಸುತ್ತಲೂ ಹಸಿರ ಹೊತ್ತ ಬೆಟ್ಟಗುಡ್ಡಗಳು, ವಾಹನಗಳ ಓಡಾಟವೇ ಇಲ್ಲದೆ ನಿರುಮ್ಮಳವಾಗಿರುತ್ತಿದ್ದ ಕೆಸರು ಮೆತ್ತಿದ ರಸ್ತೆಗಳು... ಕರ್ನಾಟಕದ ಸ್ವಿಟ್ಜರ್‌ಲೆಂಡ್‌ ಎನಿಸಿತ್ತು ಆ ಊರು. ಈ ಥರದ ಒಂದು ಊರು ಇದೆಯೇ ಎಂದು ಒಮ್ಮೆ ಬೆರಗಾಗಿದ್ದೆ.

ಮಂಡ್ಯದಿಂದ ಹೆಗ್ಗೋಡಿನ ರಂಗಭೂಮಿಗೆ ಕಾಲಿಟ್ಟ ಮೊದಲ ಹೈದ ನಾನು. ನೀನಾಸಂನ ಸಂದರ್ಶನದಲ್ಲಿ ಉತ್ತೀರ್ಣನಾದೆ. ಮುಂದೆ ಮೂರ್ನಾಲ್ಕು ವರ್ಷ ಹೆಗ್ಗೋಡು ನನ್ನ ಬದುಕಾಯಿತು. ಕೆ.ವಿ. ಸುಬ್ಬಣ್ಣ, ಯು.ಆರ್‌. ಅನಂತಮೂರ್ತಿ, ಶಿವರಾಮ ಕಾರಂತರು, ಓ.ಎಲ್. ನಾಗಭೂಷಣ ಸ್ವಾಮಿ, ಜಂಬೆ, ಟಿ.ಪಿ. ಅಶೋಕ– ಹೀಗೆ ಖ್ಯಾತನಾಮರು ಪಾಠ ಮಾಡಿದರು. ಅಚ್ಚರಿಯಾಗಿದ್ದೆಂದರೆ ಹೆಗ್ಗೋಡು ಎಂಬ ಆ ಪುಟ್ಟ ಊರನ್ನು ಇಡೀ ವಿಶ್ವವೇ ತಿರುಗಿ ನೋಡುತ್ತದೆ ಎನ್ನುವುದು. ದೇಶ ವಿದೇಶದ ವಿದ್ವಾಂಸರೆಲ್ಲರೂ ನಾಟಕ ನೋಡಲು, ಸಿನಿಮಾ ಬಗ್ಗೆ ಮಾತನಾಡಲು ಅಲ್ಲಿಗೆ ಬರುತ್ತಿದ್ದರು. ಅಲ್ಲಿನ ರಂಗಭೂಮಿಯ ಒಡನಾಟದ ನೆನಪುಗಳದ್ದು ಬೇರೆಯದೇ ಕಥನ. ಆ ಹೆಗ್ಗೋಡು ಮತ್ತು ಅದಕ್ಕೆ ಅಂಟಿಕೊಂಡಂತೆ ಒಂದೇ ಸಾಲಿನಲ್ಲಿ ಹರಡಿರುವ ಮಲೆನಾಡಿನ ಸಾಲು, ದಟ್ಟ ಕಾಡು, ನೀರು, ಮಳೆ, ಅಲ್ಲಿನ ಜನ, ಅವರ ಬದುಕು, ಆಚರಣೆ, ಸಂಸ್ಕೃತಿ, ಎಲ್ಲವೂ ಮತ್ತೆ ಮತ್ತೆ ಕಣ್ತುಂಬಿಕೊಳ್ಳಬೇಕೆನಿಸುವ, ಮರೆತೆನೆಂದರೂ ಮರೆಯಲಾಗದ ನೆನಪುಗಳು. ಸಿನಿಮಾ, ನಾಟಕಗಳ ನೆಪದಲ್ಲಿ ನೂರಾರು ಊರುಗಳನ್ನು ಸುತ್ತಾಡಿದ್ದರೂ ಹೆಗ್ಗೋಡು ನನ್ನ ಆಯ್ಕೆಯ ಪ್ರವಾಸತಾಣವಾಗಿರುವುದಕ್ಕೆ ಕಾರಣ ಹಲವು.

ನಮ್ಮಲ್ಲಿ ಸಂಕ್ರಾಂತಿಗೆ ಕಿಚ್ಚು ಹಾಯಿಸೋದು, ಗೋಪೂಜೆ, ಬಂದೂಕು ಹಾರಿಸುವುದು ಮಾಡಿದರೆ ಅಲ್ಲಿ ದೀಪಾವಳಿಗೆ ಮಾಡುತ್ತಾರೆ. ಮೇಲ್ವರ್ಗ, ಕೆಳವರ್ಗದವರ ವಿವಿಧ ಹಬ್ಬ ಹರಿದಿನಗಳು ನನ್ನ ಪಾಲಿನ ಅಚ್ಚರಿಯೂ ಆಗಿತ್ತು. ತಾಳಮದ್ದಲೆ ಎಂಬ ಜಗತ್ತಿನ ಅತ್ಯುನ್ನತ ಜನಪದ ಕಲೆಯನ್ನು ಅಲ್ಲಿ ನೋಡಿದೆ. ವರ್ತಮಾನದ ಸಂಗತಿಗಳನ್ನು ಅಳವಡಿಸಿಕೊಂಡು ಅದನ್ನು ವಿಶ್ಲೇಷಿಸುವ, ಹೋಲಿಸುವ ಅಪರೂಪದ ಅದ್ಭುತ ಕಲೆಯದು.

ಟೀವಿಗಳಿಲ್ಲದ ಕಾಲವದು. ಅಲ್ಲಿನ ಪ್ರತಿ ಮನೆಯಲ್ಲಿಯೂ ಪುಟ್ಟದೊಂದು ಲೈಬ್ರರಿ. ಬಾಯಲ್ಲಿ ಎಲೆ ಅಡಿಕೆ ತುಂಬಿಸಿಕೊಂಡು ಚಿತ್ತಾಲರ ಕಥೆಗಳು, ಸುಬ್ಬಣ್ಣನ ನಾಟಕಗಳ ಬಗ್ಗೆ ಮಾತನಾಡುತ್ತಿದ್ದರು. ಅಲ್ಲಿನ ಪ್ರತಿ ಗುಡ್ಡದಲ್ಲಿಯೂ ಒಂದು ಜಲಪಾತ. ಕ್ಯಾದಗಿ, ತುಮರಿ, ಸಿಗಂದೂರಿನ ಹಿನ್ನೀರು, ಮಂಚಿಕೇರಿ, ಈಚೆ ಬಂದರೆ ಗಾಜನೂರು, ಪಕ್ಕದಲ್ಲಿಯೇ ಕೆಳದಿ–ಇಕ್ಕೇರಿ, ಜಲಪಾತಗಳಿಂದ ತುಂಬಿರುವ ನೆರೆಯ ಉತ್ತರ ಕನ್ನಡ ಜಿಲ್ಲೆ... ಅಬ್ಬಾ! ಆ ಸುತ್ತಮುತ್ತಲ ರಮಣೀಯ ನಿಸರ್ಗವನ್ನು ವರ್ಣಿಸಲಸಾಧ್ಯ. ಅದೊಂದು ಪರಿಸರದ ಹಬ್ಬ! ಮಂಡ್ಯ ರಮೇಶ್‌ ಎಂಬ ವ್ಯಕ್ತಿತ್ವಕ್ಕೆ ಉಪಪ್ರಜ್ಞೆಯನ್ನು ತಂದುಕೊಟ್ಟ ಊರು ಹೆಗ್ಗೋಡು.

ಅಲ್ಲಿದ್ದಷ್ಟೂ ಕಾಲ ನನ್ನನ್ನು ಕಾಡಿದ್ದು ಮಲೆನಾಡಿನ ತಿನಿಸುಗಳು. ಕಬ್ಬಿನ ಹಾಲಿನಲ್ಲಿ ಮಾಡುವ ತೊಡದೇವು, ಹಲಸಿನ ಕಾಯಿಯ ಚಿಪ್ಸ್‌, ಅಲ್ಲಿನ ಊಟ ಮತ್ತೆ ಬಾಯಲ್ಲಿ ನೀರೂರಿಸುತ್ತದೆ. ಕಡು ಕಾಫಿ ಎನ್ನುವುದನ್ನು ನಾನು ಕಂಡಿದ್ದು ಮಲೆನಾಡಿನಲ್ಲಿ. ನಾನು ಅಲ್ಲಿದ್ದಾಗ 15 ಜಿಲ್ಲೆಗಳಿಂದ ಕಲಿಕಾಸಕ್ತರು ಬಂದಿದ್ದರು. ಅವರು ಬೆಳೆದ ಪರಿಸರ, ಆಹಾರ ಶೈಲಿ ಎಲ್ಲವೂ ವಿಭಿನ್ನ. ಆದರೆ ಅವರೆಲ್ಲರೂ ಆ ಊರಿನ ಊಟದ ಶೈಲಿಯನ್ನು ಒಪ್ಪಿಕೊಂಡಿದ್ದರು. ಭಾಷೆ ಆಪ್ತವಾದರೆ ಆ ಊರೂ ನಮಗೆ ಆಪ್ತವಾದಂತೆಯೇ. ಅಲ್ಲಿ ಸುಬ್ಬಣ್ಣ ಅವರನ್ನೂ ‘ಹೋಗಾ ಬಾರಾ’ ಎಂದೇ ಮಾತನಾಡಿಸುತ್ತಿದ್ದದ್ದು. ‘ಏನಿದು ಹೀಗೆ ಮಾತನಾಡಿಸುತ್ತಾರೆ, ಮರ್ಯಾದೆ ಬೇಡವೇ?’ ಎಂದು ಗಾಬರಿಯಾಗಿತ್ತು. ಅದು ಏಕವಚನದ ಪ್ರೀತಿ. ಅವರು ಇರುವುದೇ ಹಾಗೆ. ನಟನೆ ಕಲಿಯಲು ಅಲ್ಲಿ ಹೋದವನು ಹೊಸ ಬದುಕಿನ ಭಾಷೆಯನ್ನೂ ಕಲಿತೆ. ಬೆಳ್ಳನೆ ಹೊಳೆಯುವ ಹುಡುಗೀರನ್ನೂ ನೋಡುತ್ತಿದ್ದೆ. ಹಗಲು ರಾತ್ರಿ ದುಡಿಯುವ ಗಟ್ಟಿಮುಟ್ಟಾದ ಯರವರು, ಸಿದ್ಧಿ ಜನಾಂಗದ ಯುವಕರನ್ನೂ ಬೆರಗಿನಿಂದ ನೋಡುತ್ತಿದ್ದೆ. ಮನಸ್ಸಿಗೆ ತೀವ್ರ ಸಂತೋಷ, ಬೇಸರ ಆದಾಗ ಹುಣ್ಣಿಮೆ ರಾತ್ರಿಯಲ್ಲಿ ಕೆರೆಯ ಸನಿಹ ಕುಳಿತು ಚಂದಿರನೊಂದಿಗೆ ಸಂಭಾಷಿಸುತ್ತಿದ್ದೆ. ಒಂಥರಾ ನಿರುಮ್ಮಳತೆಯ, ಇಂದಿನ ದಿನಕ್ಕೆ ಸಿಗಲಾರದ ವಾತಾವರಣವದು. ಬೆಳಿಗ್ಗಿನಿಂದ ತಡರಾತ್ರಿಯವರೆಗೂ ರಂಗಭೂಮಿಯನ್ನೇ ಉಸಿರಾಡುವ ಊರದು.

ಅಲ್ಲೊಂದು ಹರಿಜನರ ಕೇರಿ ಇತ್ತು. ಅವರ ಮನೆಗಳನ್ನು ಎಷ್ಟು ಶುದ್ಧವಾಗಿ ಇಟ್ಟುಕೊಳ್ಳುತ್ತಿದ್ದರು ಎಂದರೆ, ಯಾವ ಫೈವ್‌ಸ್ಟಾರ್‌ ಹೋಟೆಲ್‌ಗಳಿಗೂ ಕಡಿಮೆ ಇಲ್ಲದಂತೆ. ಸೆಲ್‌ ಒಡೆದು ಅದರ ಪುಡಿಯನ್ನು ಸಗಣಿಗೆ ಬೆರೆಸಿ, ಅಚ್ಚಬಿಳುಪಿನ ರಂಗೋಲಿ ಬಿಡಿಸಿದರೆ ಅದರ ಅಂದವೇ ಬೇರೆ. 

ಬೇರೆ ರಾಜ್ಯಗಳಿಂದ ಬಂದವರು ಹೆಗ್ಗೋಡನ್ನು ಹುಡುಕಿಕೊಂಡು ಬರುತ್ತಾರೆ. ಜೋಗಕ್ಕೆಂದು ಬಂದವರು ಒಂದು ನಾಟಕ ನೋಡೋಣ ಎಂದು ಹೆಗ್ಗೋಡಿನತ್ತ ಕಾರು ತಿರುಗಿಸುತ್ತಾರೆ. ಹೆಗ್ಗೋಡು ಬರಿಯ ಸಾಂಸ್ಕೃತಿಕ ತಾಣವಲ್ಲ, ಅದೊಂದು  ರಂಗಯಾತ್ರಾ ಸ್ಥಳ! ಮಕ್ಕಳಿಗೆ ರಜೆ ಬಂತೆಂದರೆ ಸುಬ್ರಮಣ್ಯ, ಉಡುಪಿ, ಧರ್ಮಸ್ಥಳ ಹೀಗೆಲ್ಲಾ ಕರೆದುಕೊಂಡು ಹೋಗುತ್ತಾರಲ್ಲ, ಅಂಥವರಿಗೆ ನಾನು, ‘ಹೆಗ್ಗೋಡಿಗೆ ಕರೆದುಕೊಂಡು ಹೋಗಿ. ರಂಗ ತೀರ್ಥಯಾತ್ರೆ ಆಗುತ್ತದೆ’ ಎಂದು ಹೇಳುತ್ತೇನೆ.

ನಿಜ. ನನ್ನ ಪ್ರಕಾರ ಹೆಗ್ಗೋಡು ರಂಗ ಪ್ರವಾಸಿ ತಾಣ. ಅದಕ್ಕೊಂದು ಆಕರ್ಷಣೆ ಇದೆ. ಸುತ್ತಲೂ ಗುಡ್ಡಗಳಿವೆ, ದಟ್ಟ ಕಾಡುಗಳಿವೆ. ಹಸಿರಿದೆ. ಹೊಸಜಗತ್ತನ್ನು ಮುಕ್ತವಾಗಿ ಅಧ್ಯಯನ ಮಾಡುವುದಕ್ಕೆ ಯಾವ ರೀತಿಯ ಪರಿಸರ ಬೇಕು ಎನ್ನುವುದಕ್ಕೆ ಆ ಊರು ನಿದರ್ಶನ. ಆ ಊರು ಸಂಸ್ಕೃತಿ ಚಿಂತಕರನ್ನು ರೂಪಿಸಿದೆ. ಹೊರಗಿನಿಂದ ಬಂದ ನನ್ನಂಥವನನ್ನೇ ಹೀಗೆ ಕಡೆದಿದೆ; ಇನ್ನು ಊರುಮನೆಯವರನ್ನು ಹೇಗೆ ಪ್ರಭಾವಿಸಿರಬಹುದು?

ಮನುಷ್ಯ ಮುಖಾಮುಖಿಯಾಗಿ ಒಡನಾಡುವ ಗಳಿಗೆಗಳನ್ನು ಹತ್ತಿರದಿಂದ ನೋಡಿದ್ದು ಅಲ್ಲಿ. ಹೆಗ್ಗೋಡು ಹೊಸ ಅನುಭವ ಕೊಡುವ ಜಾಗ. ನಿಮ್ಮ ವ್ಯಕ್ತಿತ್ವಕ್ಕೆ ಹೊಸ ರೂಪು ಕೊಡುವ, ಸಾಂಸ್ಕೃತಿಕವಾಗಿ ಮನಸನ್ನು ಒಲಿಸಿಕೊಳ್ಳುವಂಥ ಜಾಗವೇ ನಿಜವಾದ ಪ್ರವಾಸಿ ತಾಣ. ಸಾಂಸ್ಕೃತಿಕವಾಗಿ ಸೆಳೆಯದಿದ್ದರೆ ಆ ಊರು ಬೇರೆ ಪರಿಣಾಮ ಬೀರುವುದಿಲ್ಲ. ಧಾರ್ಮಿಕವಾಗಿ, ರಾಜಕೀಯವಾಗಿ ಏನೇ ಮಾಡಿದ್ದರೂ ಸಾಂಸ್ಕೃತಿಕವಾಗಿ ಹೆಜ್ಜೆಗುರುತು ಮೂಡಿಸದಿದ್ದರೆ ಅದಕ್ಕೆ ಮಹತ್ವವಿಲ್ಲ. ಶೇಕ್ಸ್‌ಪಿಯರ್‌ ಹುಟ್ಟಿದ್ದು, ಕುವೆಂಪು ಜನಿಸಿದ ಕುಪ್ಪಳ್ಳಿ ಎಲ್ಲವೂ ಸಾಂಸ್ಕೃತಿಕವಾಗಿ ಸೆಳೆಯುತ್ತವೆ. ಮಲೆನಾಡಿನ ದಟ್ಟ ಕಾಡಿನಿಂದ ಕರಾವಳಿಯ ಕಡಲತಟದವರೆಗೆ ಚಾಚಿಕೊಂಡಿರುವ ಆ ಇಡೀ ಸಾಲು ನನ್ನನ್ನು ಮತ್ತೆ ಮತ್ತೆ ಕಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT