ADVERTISEMENT

ರಾಮಾ ರಾಮಾ ರೇ...

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 19:30 IST
Last Updated 2 ಸೆಪ್ಟೆಂಬರ್ 2017, 19:30 IST
ರಾಮಾ ರಾಮಾ ರೇ...
ರಾಮಾ ರಾಮಾ ರೇ...   

ಸಿದ್ದಗಂಗಯ್ಯ ಕಂಬಾಳು

ಇದೊಂದು ಚಿಕ್ಕ ಘಟನೆ. ಆದರೆ, ಆ ದಿನಕ್ಕೆ ಆ ಕ್ಷಣಕ್ಕೆ ತಲೆ ಬಿಸಿಯಾದಂತಹ ವಿಷಯ. ಅಂದು ರಾಮಾ ರಾಮಾ ರೇ ಚಿತ್ರದ ಮುಹೂರ್ತ. ಬಿಜಾಪುರದಿಂದ 50ಕಿ.ಮೀ ದೂರದ ಬಸ್ನಾಳ್ ಎಂಬ ಚಿಕ್ಕ ಹಳ್ಳಿಯ ಒಂದು ದೇವಸ್ಥಾನದಲ್ಲಿ ಪೂಜೆ. ದೇವಸ್ಥಾನದ ಪಕ್ಕದ ಮನೆಯಲ್ಲೇ ಚಿತ್ರೀಕರಣವಿದ್ದರಿಂದ ಆ ಜಾಗದಲ್ಲೇ ಚಿಕ್ಕದಾಗಿ ಪೂಜೆ ಮಾಡಿ ಶೂಟಿಂಗ್ ಶುರು ಮಾಡಿಬಿಡುವ ಯೋಚನೆ ನಮ್ಮದಾಗಿತ್ತು.

ಚಿತ್ರದ ಮುಖ್ಯ ಪಾತ್ರಧಾರಿ ಜೀಪು ಬೆಳಗ್ಗೆಯೇ ದೇವಸ್ಥಾನದ ಮುಂದೆ ಹಾಜರ್. ಪೂಜೆ ಶುರುವಾಯಿತು. ನಮಗೆ ಆ ಹಳ್ಳಿಯ ಚಿಕ್ಕಮಕ್ಕಳಿಂದ ಮುಹೂರ್ತದ ಕ್ಲಾಪ್ ಮಾಡಿಸಬೇಕೆಂಬ ಆಸೆ. ಮೊದಲೇ ಚಿತ್ರೀಕರಣ ನೋಡಿರದ ಜನ, ಅನೇಕ ಮಕ್ಕಳು ಅದಾಗಲೇ ಅಲ್ಲಿ ಸೇರಿದ್ದರು. ಸರಿ ನಾವಂದುಕೊಂಡಂತೆ ಚಿಕ್ಕದಾಗಿ ಪೂಜಾ ಕಾರ್ಯಕ್ರಮ ಮುಗಿಸಿ, ತೆಂಗಿನಕಾಯಿ ನಿವಾಳಿಸಿ ಹೊಡೆದು ಸಮಯಕ್ಕೆ ಸರಿಯಾಗಿ ಚಿತ್ರೀಕರಣ ಶುರುಮಾಡಬೇಕು, ಜೀಪನ್ನು ಅದರ ಜಾಗದಲ್ಲಿ ನಿಲ್ಲಿಸಬೇಕು.

ADVERTISEMENT

ಜೀಪಿನ ಕೀ ಇಲ್ಲ. ಎಲ್ಲರಲ್ಲೂ ಕೇಳಿದ್ದಾಯ್ತು. ಜೀಪು ನಿಲ್ಲಿಸಿದ ಹುಡುಗ ಜೀಪಿನ ಕೀ ಅದರಲ್ಲೇ ಬಿಟ್ಟಿದ್ದೆ ಎಂದು ಹೇಳಿದ. ಸರಿ ಸುತ್ತ ಮುತ್ತ ಎಲ್ಲ ಹುಡುಕಿ ಮುಹೂರ್ತಕ್ಕೆಂದು ಬಂದಿದ್ದ ಹುಡುಗರನ್ನೇ ‘ಜೀಪಿನ ಕೀ ನೋಡಿದ್ರೇನೋ ಹುಡುಗ್ರಾ’ ಎಂದು ಕೇಳಿದ್ದಕ್ಕೆ ಹುಡುಗರು ನಗುತ್ತಾ ‘ಕೀ ಅಲ್ಲೇ ಇತ್ತು ನಾವೇ ಆಟ ಆಡಲು ತೆಗೆದುಕೊಂಡೆವು’ ಎಂದರು. ‘ಸರಿ ಕೀ ಕೊಡ್ರಪ್ಪ, ಶೂಟಿಂಗ್ ಶುರುಮಾಡಬೇಕು’ ಎಂದಾಗ ಮಕ್ಕಳು ‘ಕೀ ಈಗ ನಮ್ಮ ಬಳಿ ಇಲ್ಲ, ಬೇರೆ ಹುಡುಗರು ತೆಗೆದುಕೊಂಡು ಹೋದರು’ ಎಂದರು. ‌

ಸರಿ ಆ ಬೇರೆ ಹುಡುಗರು ಎಲ್ಲಿಗೆ ಹೋಗಿರಬಹುದೆಂದು ಅಂದಾಜಿಸಿ ಅವರನ್ನು ಕರೆದುಕೊಂಡು ಬರಲು ಹೇಳಿ ಚಿತ್ರತಂಡ ಕಾಯುತ್ತಾ ಕುಳಿತಿದ್ದಾಯಿತು. ಆ ಬೇರೆ ಹುಡುಗರು ಬಂದರು. ಕೀ ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರ. ‘ಕೀ ನನ್ನ ಬಳಿ ಇತ್ತು, ಇವನು ಕೇಳಿದ. ಕೊಡಲ್ಲ ಅಂದೆ, ಕಿತ್ತಾಟ ಶುರುವಾಯಿತು. ಸಿಟ್ಟಾಗಿ ಕೀಯನ್ನು ಊರಾಚೆ ಇರುವ ಹಳ್ಳದಲ್ಲಿ ಬಿಸಾಡಿದೆ’. ನಮಗೆಲ್ಲಾ ಏನು ಮಾಡಬೇಕೆಂದು ತಿಳಿಯದಾಯಿತು. ಅಷ್ಟರೊಳಗೆ ನಾವಂದುಕೊಂಡಂಕ್ಕಿಂತ ಒಂದೂವರೆ ಗಂಟೆ ಕಳೆದರೂ ಚಿತ್ರೀಕರಣ ಶುರುವಾಗಿರಲಿಲ್ಲ. ‘ಸರಿ ಅದ್ಯಾವ ಕೊಳಕ್ಕೆ ಎಸೆದೆ ಅದನ್ನು ತೋರಿಸು ನಾವು ತೆಗೆದುಕೊಳ್ಳುತ್ತೇವೆ’ ಎಂದು ನಮ್ಮ ತಂಡದ ಒಂದಿಬ್ಬರು ಹುಡುಗರು ಆ ಮಕ್ಕಳ ಜೊತೆಗೆ ಹಳ್ಳದ ಕಡೆ ಹೋದರು.

ಅಲ್ಲಿ ಹೋಗಿ ನೋಡಿದರೆ ಅದೊಂದು ಕೊಚ್ಚೆ ತುಂಬಿದ ಹಳ್ಳ, ಹುಡುಗರು ಅದರಲ್ಲಿ ಕೀ ಎಸೆದವೆಂದು ಹೇಳುತ್ತಿದ್ದಾರೆ. ಪಾಪ ನಮ್ಮ ಹುಡುಗರು ಬೇಸರಿಸಿಕೊಳ್ಳದೆ ಆ ಕೊಚ್ಚೆ ತುಂಬಿದ ಹಳ್ಳದೊಳಗಿಳಿದು, ಕಾಲನ್ನು ಆಡಿಸುತ್ತಾ ಕಾಲಿಗೆ ಕೀ ತಾಗಿದರೆ ಯಾವ ಸ್ಪರ್ಶಾನುಭವವಾಗುವುದೋ ಹಾಗಾದಾಗಲೆಲ್ಲಾ ಕಾಲಿಗೆ ಸಿಕ್ಕಿದ್ದನ್ನು ತೆಗೆದು ನೋಡುತ್ತಾ ಮುಕ್ಕಾಲು ಗಂಟೆಗಳಷ್ಟು ಸಮಯ ಹುಡುಕಿದರೂ ಕೀ ಸಿಕ್ಕಲಿಲ್ಲ. ಬೇಸರದಲ್ಲೇ ಚಿತ್ರೀಕರಣ ಸ್ಥಳಕ್ಕೆ ಬಂದ ನಮ್ಮ ಹುಡುಗರು ‘ಕೀ ಸಿಗಲಿಲ್ಲ’ ಎಂದು ಹೇಳಿ ನಮ್ಮ ಜೊತೆ ಸುಮ್ಮನೆ ಕುಳಿತರು.

ಇನ್ನು ಕೂತು ಪ್ರಯೋಜನವಿಲ್ಲ ಎಂದು ತೀರ್ಮಾನಕ್ಕೆ ಬಂದ ನಾವು ಅಂದಿನ ಚಿತ್ರೀಕರಣವನ್ನು ಮಾಡಲು ಅಣಿಯಾದೆವು. ಅಷ್ಟರವರೆಗೂ ಇಲ್ಲದ ಮಳೆ ಅದೆಲ್ಲಿಂದಲೋ ಧೋ ಎಂದು ಸುರಿಯಲು ಶುರುಮಾಡಿತು. ಅಲ್ಲಿಯವರೆಗೂ ಹುಡುಕಿ, ದಣಿದು, ಸುಸ್ತಾಗಿದ್ದ ನಮ್ಮ ಹುಡುಗರಿಗೆ ಆ ಮಳೆ ಹೊಸ ಹುರುಪು ನೀಡಿತು. ನಂತರ ಅಂದಿನ ಚಿತ್ರೀಕರಣವನ್ನು ಜೀಪು ತಳ್ಳುತ್ತಾ ಮಾಡುವ ಮೂಲಕ ಮುಗಿಸಿಕೊಂಡೆವು. ನಂತರ ಮಾರನೆಯ ದಿನ ಬಿಜಾಪುರದಿಂದ ಒಬ್ಬರನ್ನು ಕರೆಸಿ ಡೂಪ್ಲಿಕೇಟ್ ಕೀ ಮಾಡಿಸಿದ್ದಾಯಿತು.

ಚಿತ್ರೀಕರಣ ಮುಗಿಯುವವರೆಗೂ ಆ ಕೀಯನ್ನು ವಜ್ರದಂತೆ ಕಾಪಾಡಿದ್ದಾಯಿತು. ಮುಹೂರ್ತದ ದಿನವೇ ನಡೆದ ಈ ಪ್ರಹಸನ ಒಂದು ರೀತಿಯ ಬೇಸರ, ಸಂತೋಷ, ಮತ್ತು ಚಿತ್ರೀಕರಣದ ಸಮಯಗಳಲ್ಲಿ ಬರಬಹುದಾದ ಪ್ರಾಕ್ಟಿಕಲ್ ತೊಂದರೆಗಳಿಗೆ ಸಾಕ್ಷಿ.

***

ನೀರ ಮೇಗಲ ಗುಳ್ಳೆ ಒಡೆದು...

ರಾಮಾ ರಾಮಾ ರೇ... ಪ್ರಯಾಣವೇ ಒಂದು ದೊಡ್ಡ ಕಥನಮಾಲೆ. ಪ್ರತಿಯೊಂದು ಸನ್ನಿವೇಶವೂ ವಿಚಿತ್ರ. ಇದೆಲ್ಲವನ್ನೂ ಒಟ್ಟಾಗಿ ಡಾಕ್ಯುಮೆಂಟರಿಯ ರೂಪದಲ್ಲಿ ಜನರನ್ನು ತಲುಪಿಸಬೇಕು ಅದರಲ್ಲೂ ನಿರ್ಮಾಪಕರಿಲ್ಲದ, ಕಡಿಮೆ ಬಜೆಟ್ಟಿನ, ಹೊಸ ತಂಡಗಳಿಗೆ ತಲುಪಿಸಬೇಕೆಂಬ ಯೋಚನೆ ನಮ್ಮದಾಗಿತ್ತು.

ಆದರೆ ಹಾರ್ಡ್‌ಡಿಸ್ಕ್ ಎನ್ನುವ ನೀರ ಮೇಗಲ ಗುಳ್ಳೆ ಒಡೆದು ಅದರೊಳಗಿದ್ದ ಎಲ್ಲಾ ಫೂಟೇಜ್ ಒಂದು ನೆನಪಾಗಿ ಮಾತ್ರ ಉಳಿಯಿತು. ನಂತರ ಬಂದ ಯೋಚನೆಯೇ ರಾಮಾ ರಾಮಾ ರೇ... ಪುಸ್ತಕ. ನಮ್ಮೆಲ್ಲಾ ಅನುಭವಗಳನ್ನೂ ಒಂದು ಪುಸ್ತಕ ರೂಪದಲ್ಲಿ ಕ್ರೋಡೀಕರಿಸಬೇಕು ಎಂಬ ಆಸೆಗೆ ಬೆನ್ನೆಲುಬಾಗಿ ನಿಂತಿರುವುದು ಸಿದ್ದಗಂಗಯ್ಯ ಕಂಬಾಳು ಅವರು.

ಈಗಾಗಲೇ ಪುಸ್ತಕದ ಕಾರ್ಯ ಶುರುವಾಗಿದ್ದು ಇನ್ನೇನು ಸ್ವಲ್ಪ ದಿನಗಳಲ್ಲೆ ನಿಮ್ಮ ಕೈಗೆ ತಲುಪಿಸುವ ಯೋಚನೆ ಚಿತ್ರತಂಡಕ್ಕಿದೆ. ಮೇಲೆ ಹೇಳಿರುವ ಪ್ರಹಸನದಂತೆ ಇನ್ನೂ ಅನೇಕ ವಿಷಯಗಳು ನಿಮ್ಮನ್ನು ತಲುಪಲಿದೆ. ರಾಮಾ ರಾಮಾ ರೇ... ಗೆ ನೀವೆಲ್ಲಾ ತೋರಿದ ಪ್ರೀತಿ, ಪ್ರೋತ್ಸಾಹಕ್ಕೆ ಇಡೀ ತಂಡ ಕೃತಜ್ಞರಾಗಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.