ADVERTISEMENT

ವ್ಯಾಘ್ರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2017, 19:30 IST
Last Updated 7 ಜನವರಿ 2017, 19:30 IST
ವ್ಯಾಘ್ರ
ವ್ಯಾಘ್ರ   

ಮೂಲ: ವಿಲಿಯಮ್ ಬ್ಲೇಕ್ (1757)

ಕನ್ನಡಕ್ಕೆ ರೂಪಾಂತರ: ಎಚ್.ಎಸ್.ವಿ.


ಧಗ ಧಗ ಜ್ವಲಿಸೊ ವ್ಯಾಘ್ರ ವ್ಯಾಘ್ರ;
ನಟ್ಟಿರುಳಿನ ಕಗ್ಗಾಡ ಮಹೋಗ್ರ.
ಯಾವತಿ ಮಾನುಷ ನೋಟ ಮಾಟ
ಮಾಡಿತೊ ಈ ಎದೆಯೊಡೆವ  ಸಮಗ್ರ

ಯಾವ ದೂರ ಕಮ್ಮರಿಯೋ, ಬಾನೋ
ನಿನ್ನ ಕಣ್ಬೆಂಕಿ ಉರಿಯಿತೊ ಏನೊ.
ಯಾವ ರೆಕ್ಕೆ ದೀಧಿತಿಯೋ–ಗತಿಯೋ
ಕೈ, ಹಿಡಿದವೊ ಬೆದರದೆ ಸಿಡಿಲನ್ನು.

ಯಾವ ತೋಳೊ ಎಂಥಾ ಕಮ್ಮಟವೋ
ನಿನ್ನೆದೆ ಸ್ನಾಯುವ ಬಿಗಿದವೊ ಏನೊ.
ಹೃದಯವು, ಡವ ಡವ ಬಡಿಯೋ ಹೊತ್ತು
ಅಪ್ರಾಕೃತ ಕೈಕಾಲ್ ಮೂಡಿತ್ತೊ.

ಎಂಥಾ ಸುತ್ತಿಗೆ? ಎಂಥಾ ಚೈನು,
ಕುಲುಮೆ ತಯಾರಿಸಿತೋ ಮಿದುಳನ್ನು?
ಯಾವ ಬಡಿಗಲ್ಲು? ಎಂಥ ಇಕ್ಕಳ,
ಕಾಸಿ ಬಡಿದವೋ ಪಂಜಗಳನ್ನು?

ನಕ್ಷತ್ರವೆ ಕೆಳಗೊಗೆದವೊ ಭಲ್ಲೆ,
ದಿವ ಹದಗೊಳಿಸಿತೊ ಕಂಬನಿಯಲ್ಲೆ;
ಕರ್ತೃ ನೋಡಿ ನಕ್ಕನೆ ಕೃತಿಯನ್ನ?
ಕುರಿ ಮಾಡೋನಾ ಮಾಡಿದ ನಿನ್ನ?

ಧಗ ಧಗ ಜ್ವಲಿಸೊ ವ್ಯಾಘ್ರ ವ್ಯಾಘ್ರ,
ನಟ್ಟಿರುಳಿನ ಕಗ್ಗಾಡ ಮಹೋಗ್ರ:
ಅಂಜದೆ ಯಾವತಿಮಾನುಷ ಸೃಷ್ಟಿ
ಮಾಡಿತೊ ಈ ಎದೆಯೊಡೆವ  ಸಮಗ್ರ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.