ADVERTISEMENT

ಶಾರ್ಪ್ ಶೂಟರ್ ಆರ್ಚರ್

ಡಾ.ಡಿ.ಎಸ್.ಕೃಷ್ಣರಾವ್
Published 20 ಡಿಸೆಂಬರ್ 2014, 10:53 IST
Last Updated 20 ಡಿಸೆಂಬರ್ 2014, 10:53 IST
ಶಾರ್ಪ್ ಶೂಟರ್ ಆರ್ಚರ್
ಶಾರ್ಪ್ ಶೂಟರ್ ಆರ್ಚರ್   

ಪ್ರಾಣಿವಲಯದಲ್ಲಿ ಆಹಾರ ಸಂಪಾದನೆ ಪ್ರಾಣಿಯಿಂದ ಪ್ರಾಣಿಗೆ ಭಿನ್ನವಾಗಿರುತ್ತದೆ. ಕಪ್ಪೆ, ಊಸರವಳ್ಳಿ, ಕೆಲವು ಸಾಲಮಂಡರ್‌ಗಳು ತಮ್ಮ ನಾಲಿಗೆಯನ್ನು ಮಿಂಚಿನ ವೇಗದಲ್ಲಿ ಕಬಂಧ ಬಾಹುವಿನಂತೆ ಹೊರಚಾಚಿ ಆಹಾರವನ್ನು ಶಿಕಾರಿ ಮಾಡುತ್ತವೆ. ಬಲೆಯನ್ನು ಹೆಣೆಯುವ ಜೇಡ, ಹುಳ ಕೀಟಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಆನೆ ತನ್ನ ದೃಢ ಸೊಂಡಿಲನ್ನು ಆಹಾರ ಗಳಿಕೆಯ ಸಾಧನವಾಗಿ ಉಪಯೋಗಿಸುತ್ತದೆ.

ಮತ್ಸ್ಯ ಪ್ರಪಂಚದಲ್ಲಿ, ಹೆಚ್ಚಿನ ಮೀನುಗಳು ನೀರಿನ ಅಂಗಳದಲ್ಲೇ ದೊರಕುವ ಆಹಾರವನ್ನು ಸೇವನೆ ಮಾಡುತ್ತವೆ. ಕೆಲವು ಮೀನುಗಳು ತಮ್ಮ ದವಡೆ ಹಲ್ಲುಗಳನ್ನು ಉಪಯೋಗಿಸಿ ಪ್ರಾಣಿಗಳನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಆದರೆ, ಪುಟ್ಟದಾದ ಆರ್ಚರ್‌ ಮೀನುಗಳ ಬೇಟೆ ಬೇರೆಯದೇ ಬಗೆಯದು. ಆಹಾರದ ಆಯ್ಕೆ ಹಾಗೂ ಬೇಟೆಯಲ್ಲಿ ಆರ್ಚರ್ ಮೀನಿನ ವೈಖರಿ ಇತರ ಮೀನುಗಳಿಗಿಂತ ಅತ್ಯಂತ ಭಿನ್ನ. ಇದು ತನ್ನ ‘ಸೂಪರ್ ಸ್ಪೆಷಲ್’ ಬಾಯಿಯ ಬತ್ತಳಿಕೆಯಲ್ಲಿ ‘ಜಲಾಸ್ತ್ರ’ವನ್ನು ತಯಾರಿಸಿ, ಉಡಾಯಿಸಿ ಆಹಾರದ ಶಿಕಾರಿ ಮಾಡುತ್ತದೆ.

ಇದು ಮಾಂಸಹಾರಿ ಮೀನಾಗಿದ್ದು, ನೆಲಮೂಲದ ಹುಳಹುಪ್ಪಟೆಗಳೇ ಇದರ ಆಹಾರ, ನದಿ ಮತ್ತು ಸಮುದ್ರ ಸಂಗಮವಾಗುವ ಅಳಿವೆ, ಗಿಡಗಂಟೆಗಳ ಹಸಿರು ಇರುವ ಪ್ರದೇಶಗಳ ವಾಸಿಯಾದ ಆರ್ಚರ್ ಮೀನು ಸಮುದ್ರ ಹಾಗು ಸಿಹಿ ನೀರ ಪ್ರದೇಶಗಳಲ್ಲೂ ಜೀವಿಸಬಲ್ಲದು. ಭಾರತದಿಂದ ಫಿಲಿಪೈನ್ಸ್, ಆಸ್ಟ್ರೇಲಿಯ ಹಾಗೂ ಪಾಲಿನೇಶ್ಯ ವಲಯಗಳಲ್ಲಿ ಈ ಮೀನು ಕಂಡುಬರುತ್ತದೆ. ಇದರ ದೇಹ ಆಳವಾಗಿದ್ದು ಪಾರ್ಶ್ವಿಕವಾಗಿ ಚಪ್ಪಟೆಯಾಗಿರುತ್ತದೆ. ಆರ್ಚರ್ ಮೀನು ತನ್ನ ಬಾಯಿಯನ್ನು ಸ್ವಲ್ಪ ಹೊರಚಾಚಬಲ್ಲದು. ಹತ್ತು ಮೀಟರ್‌ಗೂ ಹೆಚ್ಚು ಉದ್ದಕ್ಕೆ (ಒಂದು ಬಸ್ ಉದ್ದ) ಬೆಳೆಯುವ ದೈತ್ಯ ಮೀನುಗಳು ಸಾಗರದಲ್ಲಿ ಇರುವಾಗ, ಹೆಚ್ಚೆಂದರೆ ಐದರಿಂದ ಹತ್ತು ಸೆಂಟಿ ಮೀಟರ್‌ ಉದ್ದ ಬೆಳೆಯುವ ಆರ್ಚರ್ ಮೀನು  ಪುಟಾಣಿ ಮೀನೇ ಸರಿ.

ಆಹಾರ ಶಿಕಾರಿ ವಿಷಯದಲ್ಲಿ ಆರ್ಚರ್ ಮೀನುಗಳನ್ನು ‘ಶಾರ್ಪ್ ಶೂಟರ್ಸ್’ ಅಂದರೆ ತಪ್ಪಾಗಲಾರದು. ಧನುರ್ವಿದ್ಯೆಯಲ್ಲಿ ಪರಿಣಿತರಾದ ಏಕಲವ್ಯ, ಅರ್ಜುನರ ಗುರಿ ತಪ್ಪುತಿರಲಿಲ್ಲವೆಂದು ನಾವು ಪುರಾಣ ಕಥೆಗಳಲ್ಲಿ ಕೇಳಿ, ಓದಿದ್ದೇವೆ. ಇಂಥದೇ ತಾಳ್ಮೆ, ಏಕಾಗ್ರತೆ ಆರ್ಚರ್ ಮೀನಿಗೆ ಸ್ವಾಭಾವಿಕವಾಗಿಯೇ ಸಿದ್ಧಿಸಿರುತ್ತದೆ. ಇದು ತನ್ನ ಬಾಯಿಯಿಂದ ನೀರಿನ ಬಾಣವನ್ನು ಸೃಷ್ಟಿ ಮಾಡಿ, ಅಲ್ಲಿಂದಲೇ ಪ್ರಯೋಗಿಸುತ್ತದೆ. ಈ ಆಯುಧ ನೀರಿನ ಪರಿಸರದ ಹೊರಗೆ, ನೀರಿನೆಡೆಗೆ ಚಾಚಿರುವ ಗಿಡಗಂಟೆಯ ಕೊಂಬೆ ರೆಂಬೆಗಳ ಮೇಲೆ ಇರುವ ಹುಳ ಹುಪ್ಪಟೆಗಳ ಮೇಲೆ ದಾಳಿ ಮಾಡುತ್ತದೆ.

ನೀರಿನ ಮಾಧ್ಯಮದೊಳಗಿನಿಂದ ಹೊರಗೆ ನೋಡುವಾಗ ಬೆಳಕಿನ ಕಿರಣಗಳ ವಕ್ರೀಭವನದಿಂದ ವಸ್ತುವಿನ ನಿಜವಾದ ಸ್ಥಾನ ತಿಳಿಯುವುದು ಕಷ್ಟ. ಆದರೆ, ಆರ್ಚರ್ ಮೀನಿನ ಸೂಕ್ಷ್ಮ ಕಣ್ಣುಗಳಿಗೆ, ವಕ್ರೀಭವನದಿಂದ ಆಗುವ ಲೋಪವನ್ನು ತಿದ್ದುಪಡಿ ಮಾಡಿಕೊಳ್ಳುವ ಶಕ್ತಿಯಿದ್ದು, ಆಹಾರದ ಸ್ಥಾನವನ್ನು ನಿರ್ದಿಷ್ಟವಾಗಿ ತಿಳಿಯಲು ಸಾಧ್ಯ.

ಆರ್ಚರ್ ಮೀನು ತನ್ನ ವಿಶೇಷ ರಚನೆಯ ಬಾಯಿಯಿಂದ ನಿಯಂತ್ರಿತ ಒತ್ತಡದಿಂದ ನೀರಿನ ಬಾಣವನ್ನು  ಪ್ರಯೋಗಿಸುವುದರಿಂದ, ಹಿಂಬದಿಯ ನೀರು ಮುಂಬದಿಯ ನೀರಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತದೆ. ಹಾಗಾಗಿ, ಈ ನೀರು ಗುರಿಮುಟ್ಟುವ ವೇಳೆಗೆ, ಜಾವೆಲಿನ್ ರೂಪದ ನೀರು ಶಾಟ್‌ಪುಟ್‌ ಚೆಂಡಿನಾಕಾರಕ್ಕೆ ರೂಪಾಂತರಗೊಂಡು ಮಿಕಕ್ಕೆ ಅಪ್ಪಳಿಸುತ್ತದೆ. ಹಗಲುಗನಸು ಕಾಣುತ್ತಾ ಕೂತಿರುವ ಹುಳ, ‘ತಾನೆಲ್ಲಿದ್ದೆ, ಈಗ ಎಲ್ಲಿದ್ದೇನೆ’ ಎಂದು ಅರಿಯುವ ಮುನ್ನವೇ ನೀರುಪಾಲಾಗಿರುತ್ತದೆ. ನೀರಿಗೆ ಬಿದ್ದ ಆಹಾರವನ್ನು ಪಾಪದ ಕೀಟವನ್ನು ಆರ್ಚರ್‌ ಮೀನು ಮೀನಾಮೇಷ ಎಣಿಸದೆ ಆಪೋಶನ ತೆಗೆದುಕೊಳ್ಳುತ್ತದೆ.

ನೀರನ್ನು ಚಿಮ್ಮಿಸುವಾಗ ಆರ್ಚರ್ ಮೀನು ತನ್ನ ದೇಹವನ್ನು ನೀರಿನ ಮಟ್ಟಕ್ಕೆ ವಕ್ರವಾಗಿ ಹೊಂದಿಸಿಕೊಳ್ಳುತ್ತದೆ. ನಾಲಿಗೆಯನ್ನು ದೋಣಿಯಾಕಾರದಲ್ಲಿ ಬಗ್ಗಿಸಿ, ನೀರಿನ ಕ್ಷಿಪಣಿಯನ್ನು ಶಕ್ತಿಯುತವಾಗಿ ಉಡಾಯಿಸುತ್ತದೆ. ಸುಮಾರು 5 ಮೀಟರ್‌ ದೂರದವರೆಗೂ ಇದು ನೀರನ್ನು ಚಿಮ್ಮಬಲ್ಲದು. ಆದರೆ ಒಂದರಿಂದ ಎರಡು ಮೀಟರ್‌ ದೂರದಲ್ಲಿರುವ ಲಕ್ಯ್ಷವನ್ನು ಮಾತ್ರ ಕರಾರುವಾಕ್ಕಾಗಿ ಹೊಡೆದುರುಳಿಸಬಲ್ಲದು. ಒಂದು ಪಕ್ಷ ಗುರಿ ಮಿಸ್‌ ಆದರೆ, ತಕ್ಷಣ ಇನ್ನೊಂದು ಪ್ರಯತ್ನ ಮಾಡದೆ ‘ನನ್ನ ಹಣೆಯಲ್ಲಿ ಬರೆದಿಲ್ಲ’ ಎಂದುಕೊಂಡು ನಿರುತ್ಸಾಹದಿಂದ ಸುಮ್ಮನೆ ಕೂರುವ ಪ್ರಾಣಿಯಲ್ಲ ಇದು.

ಬಾಲ್ಯಾವಸ್ಥೆಯಲ್ಲಿ ಶೂಟಿಂಗ್‌ನಲ್ಲಿ ಆರ್ಚರ್ ಮೀನು ಅಷ್ಟು ಪರಿಣಿತವಾಗಿರುವುದಿಲ್ಲ. ಹಾಗಾಗಿ, ಈ ಹಂತದಲ್ಲಿ ಗುಂಪಾಗಿ ಬೇಟೆಯಾಡುತ್ತವೆ. ಇದೊಂದು ರೀತಿಯಲ್ಲಿ ಸಾಮಾಜಿಕ ಕಲಿಕೆ. ಕೆಲವು ವೇಳೆ ನೀರಿನ ಹೊರಕ್ಕೆ ಲಘು ಲಂಘನ ಮಾಡಿ ಭಕ್ಯ್ಷವನ್ನು ಹಿಡಿಯುವ ಆರ್ಚರ್‌ಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.