ADVERTISEMENT

ಶಿಲಾವರ್ತುಲದಲ್ಲಿ ಸೂರ್ಯಾಸ್ತ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 19:30 IST
Last Updated 28 ಜನವರಿ 2017, 19:30 IST
ಶಿಲಾವರ್ತುಲದಲ್ಲಿ ಸೂರ್ಯಾಸ್ತ
ಶಿಲಾವರ್ತುಲದಲ್ಲಿ ಸೂರ್ಯಾಸ್ತ   

ಇಂಗ್ಲೆಂಡ್‌ನ ಸ್ಯಾಲಿಸ್‌ಬರಿ ಸಮತಟ್ಟು ಪ್ರದೇಶದಲ್ಲಿ ಬೃಹತ್ ಶಿಲಾಕೃತಿಗಳ ಪಳೆಯುಳಿಕೆಗಳಿವೆ. ಈ ಸ್ಮಾರಕಗಳಿಗೆ ‘ಸ್ಟೋನ್ಹೆಂಜ್‌ ಹೆಂಜ್’ ಎಂಬ ಹೆಸರಿದೆ. ‘ವಿಶ್ವ ಪರಂಪರೆ ಪಟ್ಟಿ’ಗೆ ಸೇರಿರುವ ಇದು ಕ್ರಿ.ಪೂ. 3000ದಿಂದ 1500ರ ಅವಧಿಯಲ್ಲಿ ನಿರ್ಮಿತವಾಗಿರಬಹುದು ಎಂಬ ಅಂದಾಜಿದೆ.

ಮೊದಲು ಶಿಲಾಸ್ತಂಭಗಳ ಎರಡು ವರ್ತುಲಗಳಿದ್ದವು. ಆ ವರ್ತುಲಗಳ ಕೇಂದ್ರ ಭಾಗದಲ್ಲಿಯೂ ಕೆಲವು ಶಿಲೆಗಳು ಇದ್ದವು. ಕುದುರೆಯ ಗೊರಸಿನ ಆಕಾರದಲ್ಲಿ ಅವು ಇದ್ದವು. ಹೊರ ವರ್ತುಲದ ವ್ಯಾಸ 30 ಮೀಟರ್‌ನಷ್ಟಿತ್ತು. ಆ ವರ್ತುಲದಲ್ಲಿ ಇದ್ದ ಪ್ರತಿ ಶಿಲೆಯು 25 ಟನ್‌ನಷ್ಟು ಭಾರದ್ದಾಗಿದ್ದು, ನಾಲ್ಕು ಮೀಟರ್ ಎತ್ತರವಿತ್ತು.

ಅವುಗಳಿಗೆ ಆಧಾರ ಒದಗಿಸಿದ್ದ ಪ್ರತಿ ಸ್ತಂಭ 7 ಟನ್‌ನಷ್ಟಿತ್ತು. ಯಾವುದೇ ತಂತ್ರಜ್ಞಾನದ ನೆರವಿಲ್ಲದೆ ಇಷ್ಟು ಭಾರದ ಶಿಲೆಗಳನ್ನು ಈ ಆಕಾರದಲ್ಲಿ ಜೋಡಿಸಿದ್ದಾದರೂ ಹೇಗೆ ಎನ್ನುವುದು ಜಿಜ್ಞಾಸೆ.ಚಳಿಗಾಲದ ‘ಅಯನ ಸಂಕ್ರಮಣ’ ಕಾಲದಲ್ಲಿ ಸೂರ್ಯಾಸ್ತವನ್ನು ಈ ಸ್ಥಳದಲ್ಲಿ ನೋಡುವುದೇ ಮುದದ ಅನುಭವ.

ಶಿಲಾಸ್ತಂಭಗಳ ವರ್ತುಲಾಕಾರದ ಮೇಲೆ ಸೂರ್ಯೋದಯ ಕೂಡ ಪ್ರಕೃತಿ ಸೌಂದರ್ಯದ ಪ್ರತೀಕ. ಬೇಸಿಗೆಯಲ್ಲಿ ಸಂಕ್ರಮಣ ಆದಾಗ ಸೂರ್ಯೋದಯ ನೋಡಿ, ವಾದ್ಯಗಳಿಂದ ಜನ ಧ್ವನಿ ಹೊಮ್ಮಿಸುತ್ತಾರೆ. ಚಳಿಗಾಲದಲ್ಲಿ ಸೂರ್ಯಾಸ್ತಕ್ಕೂ ಅದೇ ಸಂಭ್ರಮ. ಕಳೆದ ವರ್ಷದ ಡಿಸೆಂಬರ್ 21ರಂದು ‘ಅಯನ ಸಂಕ್ರಮಣ’ದ ದಿನವಿತ್ತು. ಕಡಿಮೆ ಹಗಲು, ಸುದೀರ್ಘಾವಧಿ ರಾತ್ರಿ ಇರುವ ಆ ದಿನ ಜನರ ಸಂಭ್ರಮಕ್ಕೆ ಪಾರವೇ ಇಲ್ಲ. ಈ ಕಾಲದಲ್ಲಿ ಮಾತ್ರ ಜನರು ಶಿಲಾಸ್ತಂಭಗಳ ತಾಣದಲ್ಲಿ ನಡೆದಾಡಬಹುದು.

ಇರಾನ್ ಆಚರಣೆ
ಹಿಂದೆ ಪರ್ಷಿಯಾ ಆಗಿದ್ದ ಈಗಿನ ಇರಾನ್‌ನಲ್ಲಿ ‘ಯಾಲ್ಡಾ’ ಎಂಬ ಆಚರಣೆ ನಡೆದುಕೊಂಡು ಬಂದಿದೆ. ಇಸ್ಲಾಂ ಧರ್ಮಕ್ಕೆ ಮುಂಚೆ ಜೊರೋಸ್ಟ್ರಿಯನಿಸಂ ಅನುಯಾಯಿಗಳಿದ್ದ ಕಾಲದಿಂದ ಬಂದಿರುವ ಆಚರಣೆ ಇದು. ಪ್ರಾಚೀನ ಪರ್ಷಿಯನ್ನರು ‘ಅಯನ ಸಂಕ್ರಮಣ’ವನ್ನು ದುಷ್ಟಶಕ್ತಿಗಳು ತುಂಬಿದ ದಿನ ಎಂದು ಭಾವಿಸಿದ್ದರು. ಅದಕ್ಕೇ ಕತ್ತಲು ದೀರ್ಘ ಕಾಲ ಇರುತ್ತದೆ ಎನ್ನುವುದು ಪ್ರತೀತಿ. ಮರುದಿನ ಅಹುರಾ ಮಜ್ದಾ ದೇವರನ್ನು ಆರಾಧಿಸುತ್ತಿದ್ದರು.

ಆ ದಿನ ಸೂರ್ಯೋದಯವಾದ ಮೇಲೆ ಕಷ್ಟಗಳು ನೀಗತೊಡಗುತ್ತವೆ ಎಂಬ ನಂಬಿಕೆ ಇತ್ತು. ಬೆಳಕಿನ ದೇವರು ‘ಮಿತ್ರ’ ಸೇರಿದಂತೆ ಹಲವು ದೈವಗಳಿಗೆ ಆ ದಿನ ಇಡೀ ರಾತ್ರಿ ಜನರು ಪಂಜಿನ ಬೆಳಕಿನಲ್ಲಿ ಪೂಜೆ ಸಲ್ಲಿಸುತ್ತಿದ್ದರು. ‘ಯಾಲ್ಡಾ’ ಎಂದರೆ ‘ಹುಟ್ಟು’ ಎಂಬ ಅರ್ಥವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.