ADVERTISEMENT

ಶ್ರವಣಬೆಳಗೊಳ 2015

ಕವಿತೆ

ಡಾ.ಸಿದ್ದಲಿಂಗಯ್ಯ
Published 7 ಮಾರ್ಚ್ 2015, 19:30 IST
Last Updated 7 ಮಾರ್ಚ್ 2015, 19:30 IST

ಗಡಿಗಳಿಂದ ಯೋಧರಂತೆ ಗುಡಿಗಳಿಂದ ದೇವರಂತೆ
ಮನೆಗಳಿಂದ ನೆಂಟರಂತೆ ಗುಡಿಸಲಿಂದ ಗೆಳೆಯರಂತೆ
ಊರಿನಿಂದ ಧೀರರಂತೆ ಕಾಡಿನಿಂದ ಹುಲಿಗಳಂತೆ
ಶ್ರವಣಬೆಳಗೊಳಕ್ಕೆ ಬಂದ ಬಳಗ ಯಾವುದು?

ಹೊಲಗಳಿಂದ ಗದ್ದೆಯಿಂದ ತೋಟದಿಂದ ಪೇಟೆಯಿಂದ
ಹಳದಿ ಕೆಂಪು ಧ್ವಜವ ಹಿಡಿದು ಕನ್ನಡಕ್ಕೆ ಮನವ ಮಿಡಿದು
ಮುಗಿಲಿನಿಂದ ನೆಲಕೆ ಇಳಿದ ಸೂರ್ಯ ಚಂದ್ರ ತಾರೆಯಂತೆ
ಬಾಹುಬಲಿಯ ಪದಕೆ ಬಿದ್ದ ಬೆಳಕು ಯಾವುದು?

ಜೈಕಾರದ ಝೇಂಕಾರವು ಹತ್ತು ಲೋಕಗಳಿಗೆ ಹಬ್ಬಿ
ಕನ್ನಡ ಭುವನೇಶ್ವರಿಯನು ಹೊತ್ತು ಮೆರೆಸಿ ಹರುಷಗೊಂಡ
ಕುಣಿದು ಮಣಿದು ದಣಿಯದಂತೆ ಗೆಲುವಿನಿಂದ ತಲೆಯನೆತ್ತಿ
ಮುನ್ನಡೆಯುವ ರಣಧೀರರ ಪಡೆಯು ಯಾವುದು?
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯು ಹರಸಲೆಂದು
ಪುಂಡಲೀಕ ಹಾಲಂಬಿಯ ನುಡಿಸೇವೆಯ ನೋಡಲೆಂದು
ಬಾಲಕೃಷ್ಣರಭಿಮಾನದ ಕೈಂಕರ್ಯವ ಕಾಣಲೆಂದು
ನದಿಗಳಂತೆ ಹರಿದು ಬಂದ ಜನವು ಯಾವುದು?

ADVERTISEMENT

ಕನ್ನಡಜನ ಕನ್ನಡಮನ ಕನ್ನಡತನ ಬಂದಿತಣ್ಣ
ಕೀಳರಿಮೆಯ ನೈರಾಶ್ಯದ ಕತ್ತಲನು ಅಳಿಸಿತಣ್ಣ
ಕನ್ನಡಿಗರ ಎದೆಗಳಲ್ಲಿ ಹೋರಾಡುವ ಕಿಚ್ಚು ಹಚ್ಚಿ
ಝಗಮಗಿಸುತ ಜ್ವಲಿಸಲಣ್ಣ ಕನ್ನಡ ಜ್ಯೋತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.