ADVERTISEMENT

ಸಾಂಟಾ ಗ್ರಾಮ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 19:30 IST
Last Updated 4 ಫೆಬ್ರುವರಿ 2017, 19:30 IST
ಸಾಂಟಾ ಗ್ರಾಮ
ಸಾಂಟಾ ಗ್ರಾಮ   

ಫಿನ್ಲೆಂಡ್ ರಾಜಧಾನಿ ರೊವೊನೀಮಿಯಿಂದ ಎಂಟು ಕಿ.ಮೀ. ದೂರದಲ್ಲಿ ‘ಫಾದರ್ ಕ್ರಿಸ್್ಮಸ್’ನ ಸ್ವಯಂ ಘೋಷಿತ ಹಳ್ಳಿಯೊಂದು ಇದೆ. 1985ರಲ್ಲಿ ಈ ಗ್ರಾಮ ಸೃಷ್ಟಿಯಾಯಿತು. ಒಂದು ಅಂಚೆ ಕಚೇರಿ, ಹಿಮದ ಥಿಯೇಟರ್ ಹಾಗೂ ಥೀಮ್ ಪಾರ್ಕ್‌ಗಳು ಇಲ್ಲಿನ ಆಕರ್ಷಣೆ.

ಸಾಂಟಾ ಅಂಚೆ ಕಚೇರಿಯು ಜನಪದ ಕಥೆಯ ಮಾದರಿಯಲ್ಲಿ ಸ್ಥಾಪಿತವಾಗಿದೆ. ಅದು ಸಾಮಾನ್ಯ ಅಂಚೆ ಕಚೇರಿಗಳಂತೆಯೇ ಕಾರ್ಯನಿರ್ವಹಿಸುತ್ತದೆ. ಸ್ಟಾಂಪ್‌ಗಳು, ಲಕೋಟೆಗಳು ಅಲ್ಲಿ ದೊರೆಯುತ್ತವೆ. ಕ್ರಿಸ್ಮಸ್ ಕಾರ್ಡ್ ಉಚಿತವಾಗಿ ಲಭ್ಯವಾಗುವ ಸ್ಥಳವದು. ಅದನ್ನು ಯಾವುದೇ ಸ್ನೇಹಿತರಿಗೆ ಬರೆದು ಕಳುಹಿಸಬಹುದು. ವಿಶ್ವದ ವಿವಿಧೆಡೆಗಳಿಂದ ಮಕ್ಕಳು ಸಾಂಟಾಗೆ ಬರೆದು ಕಳುಹಿಸಿದ ಪತ್ರಗಳನ್ನು ಕೂಡ ಅಲ್ಲಿ ಓದಬಹುದು. ಸಾಂಟಾ ತರಹವೇ ಕಾಣುವ ಕುಳ್ಳರಿಂದ ಅಂಚೆ ಕಚೇರಿಯು ತುಂಬಿದೆ.

ನೆಲಮಾಳಿಗೆಯಲ್ಲಿರುವ ಸಾಂಟಾ ಪಾರ್ಕ್ ಡಿಸ್ನಿ ಶೈಲಿಯಲ್ಲಿದೆ. ಸೇಂಟ್ ನೊಕೊಲಸ್ ನಿವಾಸದ ಮರುಸೃಷ್ಟಿಯಂತೆ ಇರುವ ಪಾರ್ಕ್‌ನಲ್ಲಿ ಸಾಂಟಾನನ್ನು ಭೇಟಿಯಾಗಬಹುದು. ಅವನ ಜತೆ ಫೋಟೊ ತೆಗೆಸಿಕೊಳ್ಳಬಹುದು. ಚಿಕ್ಕ ಮಕ್ಕಳಿಗಾಗಿಯೇ ವಿಶೇಷ ರೀತಿಯಲ್ಲಿ ಈ ಪಾರ್ಕ್ ಅನ್ನು ವಿನ್ಯಾಸಗೊಳಿಸಲಾಗಿದೆ. ಮಾಯಾ ಜಾರುಬಂಡೆ, ಸಾಂಟಾ ಜೊತೆ ಹಿಮಸಾರಂಗದ ಗಾಡಿಯಲ್ಲಿ ಸವಾರಿ, ರುಡಾಲ್ಫ್ ಓಟ ಇವೆಲ್ಲವೂ ಪಾರ್ಕ್‌ನ ಆಕರ್ಷಣೆಗಳು. ಕೆಂಪು ಮೂತಿಯ ಹಿಮಸಾರಂಗ ಎಲ್ಲರಿಗೂ ಅಚ್ಚುಮೆಚ್ಚು.

ಸ್ನೋಲ್ಯಾಂಡ್ ಮಕ್ಕಳಿಗೆ ತುಂಬ ಇಷ್ಟವಾದ ಸ್ಥಳ. ಹಿಮಶಿಲ್ಪ ಮಾಡುವುದನ್ನು ಕೆಲವರು ಖುಷಿ ಪಟ್ಟರೆ, ಇನ್ನು ಕೆಲವು ಮಕ್ಕಳು ಹಿಮಾಚ್ಛಾದಿತ ಬಯಲಿನ ಸೌಂದರ್ಯ ಆಸ್ವಾದಿಸುತ್ತಾರೆ. ಹಿಮಗಾಡಿಯಲ್ಲಿನ ಸಂಚಾರ ರೋಮಾಂಚನಕಾರಿ. ‘ದಿ ಆರ್ಕ್ಟಿಕ್‌ ಸ್ನೋ ಥಿಯೇಟರ್’ ಅಲ್ಲಿನ ಮತ್ತೊಂದು ಆಕರ್ಷಣೆ.
ಸಾಂಟಾಗೆ ನೀವೂ ಪತ್ರ ಬರೆಯಬಹುದು.

ವಿಳಾಸ: ಸಾಂಟಾ ಕ್ಲಾಸ್, ಎಫ್ಐಎನ್-96930, ಆರ್ಕ್ಟಿಕ್‌ ಸರ್ಕಲ್, ಫಿನ್ಲೆಂಡ್. ತಕ್ಷಣಕ್ಕೆ ನಿಮ್ಮ ಪತ್ರಕ್ಕೆ ಉತ್ತರ ಸಿಗದೇ ಇರಬಹುದು. ಯಾಕೆಂದರೆ, ಈಗ ಸಾಂಟಾ ಹೆಚ್ಚು ಬ್ಯುಸಿ ಆಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.