ADVERTISEMENT

ಸಾವಿನ ಗೋಡೆ ಜಿಗಿದ ಗುಂಡುಮಣಿ

ನಾಗತಿಹಳ್ಳಿ ಚಂದ್ರಶೇಖರ
Published 31 ಡಿಸೆಂಬರ್ 2016, 19:30 IST
Last Updated 31 ಡಿಸೆಂಬರ್ 2016, 19:30 IST
ಸಾವಿನ ಗೋಡೆ ಜಿಗಿದ ಗುಂಡುಮಣಿ
ಸಾವಿನ ಗೋಡೆ ಜಿಗಿದ ಗುಂಡುಮಣಿ   
ನನ್ನ ಪ್ರಿಯ ಶಿಷ್ಯ ಗುಂಡುಮಣಿ ತೀರಿಕೊಂಡ (ನಿಧನ: ಡಿ. 26) ಸುದ್ದಿ ಮುಟ್ಟಿದಾಗ ಕೆ.ಸಿ.ಎನ್‌. ಚಂದ್ರಶೇಖರ್‌ ಅವರ ‘ಬೆಳ್ಳಿಹೆಜ್ಜೆ’ ಕಾರ್ಯಕ್ರಮದಲ್ಲಿದ್ದೆ. ಏಕೋ ಮನಸ್ಸು ದುಃಖ ಮೀರಿದ ವಿಹ್ವಲತೆಯಿಂದ ಚಡಪಡಿಸಿತು. ‘ಅಂತಿಮ ದರ್ಶನಕ್ಕೆ ಬರ್‍ತಿದ್ದೀನಿ’ ಎಂದು ಗುಂಡುಮಣಿಯ ಮಗ ಅರ್ಜುನ್‌ ಸಾಗರ್‌ಗೆ ಕರೆ ಮಾಡಿ ಸೂಚಿಸಿದೆ. ‘ಆದಷ್ಟು ಬೇಗ ಬನ್ನಿ. ಪ್ರಾಣ ಹೋಗಿ ಬಹಳ ಹೊತ್ತಾಗಿದೆ. ಹೆಚ್ಚು ಹೊತ್ತು ಇಟ್ಟುಕೊಳ್ಳುವಂತಿಲ್ಲ. ಅಪ್ಪನಿಗೆ ನಿಮ್ಮನ್ನು ಕಂಡರೆ ಅಪಾರ ಪ್ರೀತಿ.
 
ನಿಮಗಾಗಿ ಕಾಯ್ತೇನೆ’ ಎಂದ ಅರ್ಜುನ್‌. ಸಮಾರಂಭ ಅರ್ಧಕ್ಕೆ ಬಿಟ್ಟು ‘ಶ್ರೀಕಂಠ’ ಚಿತ್ರದ ನಿರ್ದೇಶಕ, ನನ್ನ ಕಿರಿಯ ಮಿತ್ರ ಮಂಜುಸ್ವರಾಜ್‌ ಜೊತೆ ಮಾಡಿಕೊಂಡು ತುಮಕೂರಿನತ್ತ ಹೊರಟೆ. ತೊಟ್ಟಿಕ್ಕುತ್ತಿದ್ದ ಕತ್ತಲನ್ನು ಸೀಳಿಕೊಂಡು ನಾಗಾಲೋಟದಿಂದ ಹೊರಟೆವು. ನನ್ನ ಸಹಾಯಕ ಚೆಂಗಪ್ಪ ರೇಸಿಗಿಳಿದವನಂತೆ ಓಡಿಸುತ್ತಿದ್ದ. ನನಗೋ ಗುಂಡುಮಣಿಯ ಗತ ನೆನಪುಗಳ ನಾಗಾಲೋಟ. ಗುಂಡುಮಣಿ ಕಾಯಕದಲ್ಲಿ ತೊಡಗಿದ್ದಾಗಲೇ ತೀರಿಕೊಂಡಿದ್ದ.
 
ಸಾಹಿತ್ಯದಲ್ಲಾಗಲೀ ನಿರ್ದೇಶನ ವೃತ್ತಿಯಲ್ಲಾಗಲೀ ಆಸಕ್ತಿ ಹೊಂದಿರದ ಗುಂಡುಮಣಿ ನನ್ನ ಪ್ರೀತಿಯ ತೆಕ್ಕೆಗೆ ಸಿಕ್ಕಿದ್ದು ಸೋಜಿಗ. ತಲೆ ಬೋಳಿಸಿದ, ಗುಂಡು ದೇಹದ, ಅಚ್ಚಕಪ್ಪಿನ ಈತನನ್ನು ಯಾವ ಮಗುವಿನ ಮುಂದೆ ನಿಲ್ಲಿಸಿ ಈತನಿಗೊಂದು ಹೆಸರು ಸೂಚಿಸು ಎಂದು ಕೇಳಿದರೂ ಅದು ‘ಗುಂಡುಮಣಿ’ ಎನ್ನುತ್ತಿತ್ತು. ಈತನ ನಿಜವಾದ ಹೆಸರು ಲೋಕೇಶ್‌. ಆದರೆ ತನ್ನ ದೇಹಾಕೃತಿಯಿಂದ ಗುಂಡುಮಣಿ ಎಂದೇ ಹೆಸರಾಗಿದ್ದ. 
 
ಒಂದು ಕಾಲಕ್ಕೆ ‘ಎಸ್‌ಎಫ್‌ಐ’ನಲ್ಲಿ ಕೆಲಸ ಮಾಡಿ, ‘ಆಟೋ ಯೂನಿಯನ್‌’ ಸೆಕ್ರೆಟರಿಯಾಗಿದ್ದವನು. ಅದಾವ ಮಾಯೆಯಲ್ಲೋ ಸಿನಿಮಾ ವಾಲ್‌ರೈಟಿಂಗ್‌ಗೆ ಅಂಟಿಕೊಂಡ. ‘ಗುರುಗಳೇ ನಾನ್‌ ಬರೆದ್ರೆ ಆ ಸಿನ್ಮಾ ಸಿಲ್ವರ್‌ಜುಬಿಲಿ ಗ್ಯಾರಂಟಿ’ ಎನ್ನುತ್ತಿದ್ದ. ನಾನು ಒಪ್ಪುವ ಮೊದಲೇ ಬೆಂಗಳೂರಿನಿಂದ ಬೆಳಗಾವಿವರೆಗೆ ಸಾವಿನಂಚಿನಲ್ಲಿದ್ದ ಮುರುಕುಗೋಡೆಗಳ ಮೇಲೆಲ್ಲಾ ‘ಅಮೃತಧಾರೆ’ ಹರಿಸಿಬಿಟ್ಟ. ಹಿಂಬಾಗಿಲಿಲ್ಲದ ಮಾರುತಿ ವ್ಯಾನ್‌ನಲ್ಲಿ ಬಣ್ಣ, ಬ್ರಶ್‌, ಸ್ಟೌ, ಒಂದಿಷ್ಟು ಹುಡುಗರನ್ನು ತುಂಬಿಕೊಂಡು ವರ್ಣಮೇಧ ಯಾಗಕ್ಕೆ ಹೆದ್ದಾರಿಗುಂಟ ಹೊರಟು ಸಂಜೆವರೆಗೆ ಬಿಸಿಲು ಧೂಳೆನ್ನದೆ ಸಿನಿಮಾಕ್ಷರ ಬರೆಯುತ್ತಾ – ಕತ್ತಲಾದ ಊರಲ್ಲಿ ತಂಗಿ, ಮೈಕೈ ನೋವಿನ ನೆಪದಲ್ಲಿ ‘ಒರಿಜನಲ್‌ ಚಾಯ್ಸ್‌’ ಏರಿಸಿ, ಬಿರ್ಯಾನಿ ಬಾರಿಸಿ, ನಿದ್ರೆ ಬಂದಲ್ಲಿ ಮಲಗಿ ಮುಂಜಾನೆ ಎದ್ದು ಟೀ ಬನ್ನು ಸೇವಿಸಿ ಮತ್ತೆ ಕಾಯಕಕ್ಕೆ ಇಳಿಯುತ್ತಿದ್ದ. ವಿಜಾಪುರದ ಬೀದಿಯಲ್ಲಿ ಅವನ (49 ವರ್ಷದ) ಬದುಕು ಮುಗಿದೇಹೋಯಿತು.
 
ಈ ಭಿತ್ತಿಬರಹಗಾರನ ಕೋಟಲೆಗಳು ಹಲವಿದ್ದವು. ಅಣ್ಣ–ಅಪ್ಪ ಎಂದು ಹಲುಬಿ ಖಾಸಗಿ ಗೋಡೆಗಳ ಮಾಲೀಕರನ್ನು ಒಪ್ಪಿಸಿದರೂ; ಸರ್ಕಾರಿ ಗೋಡೆಗಳ ಮೇಲೆ ಬರೆದರೆ ಕಾರ್ಪೊರೇಶನ್‌ನವರು, ಪೊಲೀಸರು ಸುಲಿಗೆ ಮಾಡುತ್ತಿದ್ದರು. ‘ಲೈಸೆನ್‌್ಸ ತಗೊಂಡು ಕಾನೂನು ಪ್ರಕಾರ ಬರೆಯೋಕೆ ಆಗಲ್ವಾ?’ ಅಂತ ಕೇಳಿದ್ದಕ್ಕೆ – ‘ಕಾನೂನು ಪ್ರಕಾರ ಹೋದ್ರೆ ಒಂದೇ ಒಂದೂ ಬರ್‍ಯೋಕಾಗಲ್ಲ; ಒಂದು ಪೋಸ್ಟರೂ ಅಂಟಿಸೋಕಾಗಲ್ಲ’ ಎನ್ನುತ್ತಿದ್ದ. ‘ಅವರದನ್ನು ಅಳ್ಸಿ ನಮ್ದನ್‌ ಬರಿ’ ಅಂತ ಸಿನಿಮಾ ಪ್ರೊಡ್ಯೂಸರ್‌ಗಳೂ, ರಾಜಕೀಯ ಪಕ್ಷದವರೂ ಅವನಿಗೆ ಧಮಕಿ ಹಾಕುತ್ತಿದ್ದುದುಂಟು. ಮಹಾಕಾವ್ಯ ಬರೆದ ಕವಿ ತನ್ನ ಹೆಸರು ಹಾಕಿಕೊಳ್ಳಲು ಹಿಂಜರಿಯಬಹುದು, ಆದರೆ ನಮ್ಮ ಗುಂಡುಮಣಿ ಎದ್ದುಕಾಣುವಂತೆ ತನ್ನ ಹೆಸರು ಬರೆದು ಅಸಂಖ್ಯಾತ ಮೊಬೈಲು ನಂಬರುಗಳನ್ನೂ ದಾಖಲಿಸಿಬಿಡುತ್ತಿದ್ದ. 
 
ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುವುದು, ಬಿಡುಗಡೆಯ ದಿನ ಜನ ಕರೆಸಿ ತಮಟೆ ಬಾರಿಸುವ ಗುತ್ತಿಗೆ, ಚಿತ್ರಮಂದಿರಕ್ಕೆ ಜನ ಕರೆಸಿ ಫ್ರೀ ಟಿಕೆಟ್‌ ಹಂಚಿ ‘ಹೌಸ್‌ಫುಲ್‌’ ಬೋರ್ಡ್‌ ತೂಗಿಸುವ ನಿರ್ಮಾಪಕರ ವ್ಯವಹಾರ ಜಾಣ್ಮೆಯಲ್ಲಿ ನಿಷ್ಟೆಯಿಂದ ಪಾಲ್ಗೊಳ್ಳುವಿಕೆ, ಭಿತ್ತಿಬರಹದ ಜತೆಗೆ ಈ ಬಗೆಯ ಕಲೆಯಲ್ಲೂ ಆತ ನಿಷ್ಣಾತನಾಗಿದ್ದ. ಕೆಲಸ ಮುಗಿದರೂ ಹಣ ಕೊಡದೆ ಅಲೆಸುತ್ತಿದ್ದ ಗಾಂಧಿನಗರದ ವಿತರಕರನ್ನು ದಿನಾ ಬೈಯುತ್ತಲೇ ಅದೇ ಕಚೇರಿಗಳಿಗೆ ಎಡತಾಕುತ್ತಿದ್ದ.
 
ನಿರ್ಮಾಪಕ ಮುಂಜಾನೆ ಎದ್ದು ಕಣ್ಣುಜ್ಜಿಕೊಂಡು ಆಚೆಗೆ ಬಂದ ಕೂಡಲೇ ಅವನ ಸಿನಿಮಾ ಜಾಹೀರಾತು ಕಣ್ಣಿಗೆ ರಾಚುವಂತೆ ಬರೆದಿರುತ್ತಿದ್ದ. ನಾನು ವಾಕಿಂಗ್‌ ಮಾಡುವ ಜಾಗಗಳು ನನ್ನ ಸಿನಿಮಾ ಜಾಹೀರಾತು ಬರಹಗಳಿಂದ ತುಂಬಿಹೋಗಿರುತ್ತಿದ್ದವು. ಹೀಗೆ ಇಂಪ್ರೆಸ್‌ ಮಾಡಬಲ್ಲ ಕೌಶಲ್ಯ ಅವನಿಗಿತ್ತು. ನಮ್ಮ ನಾಗತಿಹಳ್ಳಿಯ ಎಲ್ಲಾ ಗೋಡೆಗಳ ಮೇಲೂ ಬರೆದು ಊರಿನವರ ಭೇಷ್‌ಗಿರಿಗೆ ಪಾತ್ರನಾಗಿದ್ದ. ಇವನ ಉತ್ಸಾಹ, ಹುಂಬತನ ಕೆಲವೊಮ್ಮೆ ಅತಿರೇಕ ಮುಟ್ಟುತ್ತಿತ್ತು.
ನಾನು ಹೊಟ್ಟೆ ಹುಣ್ಣಾಗುವಂತೆ ನಕ್ಕ ಒಂದು ಘಟನೆಯನ್ನಿಲ್ಲಿ ನಮೂದಿಸಲೇಬೇಕು. ಒಂದು ನಟ್ಟಿರುಳು ಗುಂಡುಮಣಿಯಿಂದ ಕರೆ. ‘ಗುರುಗಳೇ ನಮ್ಮತ್ರ ಲಂಚ ತಿಂದು, ಈಗ ನಮ್ನೇ ಒಳಗಾಕಿದ್ದಾರೆ. ದಯವಿಟ್ಟು ಹಾಸನ ಪೊಲೀಸರಿಗೆ ಒಂದ್‌ ಮಾತು ಹೇಳಿ. ಅರೆಬೆತ್ತಲೆ ನಿಲ್ಸಿ ಚಚ್ಚಿದಾರೆ. ಒಂದೇ ಒಂದ್‌ ಕಡೆ ‘ಅಮೃತಧಾರೆ’ ಅಂತ ಬರೆದಿದ್ದಕ್ಕೆ ಇಂಥಾ ಶಿಕ್ಷೇನ?’ ಎಂದು ಅತ್ತುಕೊಂಡ. ನಾನು ಆ ಠಾಣಾಧಿಕಾರಿಗೆ ಕರೆ ಮಾಡಿ ಬಿಡುಗಡೆ ಮಾಡುವಂತೆ ವಿನಂತಿಸಿದೆ.
 
ಆತ, ‘ಸಾರ್‌,  ನೀವೇ ನನ್‌ ಜಾಗದಲ್ಲಿದ್ರೆ ಅವನನ್ನ ಜೈಲಿಗ್‌ ಕಳಿಸ್ತಿದ್ರಿ. ಬರೀಬಾರ್‍ದ ಜಾಗದಲ್ಲಿ ಬರೆದವ್ನೆ’ ಎಂದು ಕಿಡಿ ಕಾರಿ ನನ್ನ ಕುತೂಹಲ ಹೆಚ್ಚಿಸಿದರು. ವಿಚಾರಿಸಿದಾಗ ಬೆಚ್ಚಿಬೀಳುವ ಸರದಿ ನನ್ನದಾಗಿತ್ತು. ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್‌ ಗಾಡಿಯ ಮೇಲೆ ಗುಂಡುಮಣಿ ಅಮೃತಧಾರೆ ಅಂತ ಬರೆಯಲು ಹೋಗಿ ಸಿಕ್ಕಿಬಿದ್ದಿದ್ದ!’. ನೋಡ್ತಾ ಇರಿ ಗುರುಗಳೆ, ಒಂದಿನಾ ಏರೋಪ್ಲೇನ್‌ ಮೇಲೂ ಬರ್‍ಯೋನೇ ನಾನು’ ಅನ್ನುತ್ತಿದ್ದ ಗುಂಡುಮಣಿ ವರ್ಣಗಳೊಂದಿಗೆ ಆಟವಾಡುತ್ತ ವರ್ಣರಂಜಿತ ವ್ಯಕ್ತಿಯಾಗಿದ್ದ.
 
ಬಹುಪತ್ನಿವಲ್ಲಭನಾಗಿದ್ದ ಗುಂಡುಮಣಿಗೆ ತನ್ನ ಬಗ್ಗೆ ಅಭಿಮಾನವಿತ್ತು. ಕರ್ವಾಲೋ ಕಾದಂಬರಿಯ ಬಿರ್‍ಯಾನಿ ಕರಿಯಪ್ಪನಂತೆ, ಈ ವೃತ್ತಿಯಲ್ಲಿರುವ ತನ್ನಂಥವರು ಏಕೆ ಒಂದಕ್ಕಿಂತ ಹೆಚ್ಚು ಮದುವೆಯಾಗಬೇಕೆಂದು ತರ್ಕಬದ್ಧವಾಗಿ ಸಮರ್ಥಿಸುತ್ತಿದ್ದ. ಯಾವುದೋ ಒಂದು ವಾಹಿನಿಯ ಪೂರ್ವಜನ್ಮ ವಿಶ್ಲೇಷಣೆಯ ಜನ್ಮರಹಸ್ಯ ಭೇದಿಸುವ ಅವೈಜ್ಞಾನಿಕವಾದ ಕಾರ್ಯಕ್ರಮದಲ್ಲಿ ಪತ್ನಿಯರೊಂದಿಗೆ ಭಾಗವಹಿಸಿ, ತಾನು ಕಳೆದ ಜನ್ಮದಲ್ಲಿ ಒಂದು ಅತೃಪ್ತ ಹೋರಿಯಾಗಿದ್ದುದೇ ಇದಕ್ಕೆಲ್ಲಾ ಕಾರಣವೆಂದು ಒಬ್ಬ ಧೂರ್ತ ಸ್ವಾಮೀಜಿಯ ಬಾಯಲ್ಲಿ ಹೇಳಿಸಿ, ಕುಟುಂಬದಲ್ಲಿ ಭಿನ್ನಮತ ಮೂಡದಂತೆ ನೋಡಿಕೊಂಡಿದ್ದ. ಮೂಲತಃ ಶ್ರಮಜೀವಿಯೂ ವ್ಯವಹಾರ ನಿಪುಣನೂ ಆಗಿದ್ದ ನನ್ನ ಪ್ರೀತಿಯ ಗುಂಡುಮಣಿ ನಲವತ್ತೊಂಬತ್ತರ ಹರೆಯದಲ್ಲೇ ಮೃತ್ಯುಗೋಡೆಯನ್ನು ಜಿಗಿದು ನಿರ್ಗಮಿಸಿದ್ದು ನನಗೆ ಅಪಾರ ದುಃಖ ತಂದಿದೆ.
 
ಯಾವ ಸಮಾನ ಅಭಿರುಚಿ ಇಲ್ಲದೆಯೂ ಈತನನ್ನು ಏಕೆ ಹಚ್ಚಿಕೊಂಡೆ? ನನ್ನ ತಾರುಣ್ಯದ ದಿನಗಳಲ್ಲಿ ನಾನೂ ಮೈಲಿಗಲ್ಲು, ನಾಮಫಲಕ, ಚಿತ್ರಮಂದಿರಗಳ ಜಾಹೀರಾತು ಬರೆಯುತ್ತಿದ್ದೆ. ಮೈಲಿಗಲ್ಲು ಬರೆಯುವಾಗ ಅಕ್ಷರಕ್ಕೆ ಇಪ್ಪತ್ತೈದು ಪೈಸೆ ಕೂಲಿ ಸಿಗುತ್ತಿತ್ತು. ಆದ್ದರಿಂದ ಕಡಿಮೆ ಅಕ್ಷರಗಳ ಊರಿನ ಮಂಡ್ಯ ಮುಂತಾದವುಗಳನ್ನು ಇಷ್ಟಪಡದೆ; ಹೆಚ್ಚು ಅಕ್ಷರಗಳುಳ್ಳ ಚನ್ನರಾಯಪಟ್ಟಣ– ಚಿಕ್ಕಮಂಗಳೂರು ಮುಂತಾದವುಗಳನ್ನು ಇಷ್ಟಪಡುತ್ತಿದ್ದೆ. ಸೈಕಲ್ಲೇರಿ ಬರೆಯುತ್ತಾ ಹೋದಂತೆ ಒಂದು ಊರು ದೂರವಾಗುತ್ತಾ ಇನ್ನೊಂದು ಊರು ಹತ್ತಿರವಾಗುತ್ತ ಸಾಗುವ ಕ್ರಮ ನನ್ನನ್ನು ಕತೆಗಾರನನ್ನಾಗಿಸಿರಬಹುದು.
 
ನಾವು ತುಮಕೂರಿನ ರುದ್ರಭೂಮಿ ತಲುಪಿದಾಗ ತಡವಾಗಿತ್ತು. ಎಲ್ಲ ನಮಗಾಗಿ ಕಾದಿದ್ದರಿಂದ ಪಾಪಪ್ರಜ್ಞೆ ಬಾಧಿಸಿತು. ಗುಂಡುಮಣಿಯ ಮಗಳು ರೇಖಾ ಭೋರಿಡುತ್ತಿದ್ದಳು. ನಟಿಯೊಬ್ಬಳ ನಾಯಿಮರಿಗೆ ಹುಶಾರಿಲ್ಲದಿದ್ದರೂ ಸುತ್ತುವರಿಯುವ ಕ್ಯಾಮೆರಾಗಳು ನಮ್ಮ ಬಡ ಕಾರ್ಮಿಕ ಗುಂಡುಮಣಿಯ ಕಳೇಬರದ ಹತ್ತಿರಕ್ಕೂ ಸುಳಿದಿರಲಿಲ್ಲ. ಗುಂಡುಮಣಿಯ ಅಂತಿಮ ದರ್ಶನ ಪಡೆದು ಅವನ ಕಾಲಿಗೆ ನಮಸ್ಕರಿಸಿದೆ. ಬಣ್ಣದ ಹೂಗಳಿಂದ ಪ್ರಿಯ ಶಿಷ್ಯ ಗುಂಡುಮಣಿ ಅಲಂಕರಿಸಲ್ಪಟ್ಟಿದ್ದ.
 
‘ತು೦ಬಾ ದೂರಕ್ಕೆ ಹೋಗ್ತಿದ್ದೀನಿ. ಬೇಗ ನಿಮ್ಮ ಹೊಸಾ ಸಿನ್ಮಾ ಟೈಟಲ್ ಹೇಳಿ, ಅಲ್ಲೆಲ್ಲ ಬರೆದು ಬರ್ತೀನಿ’ ಎ೦ದು ಅವನು ಹೇಳುತ್ತಿರುವ೦ತೆ ಭಾಸವಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.