ADVERTISEMENT

ಮೈಮೇಲೆ ಬಂದಿದ್ದ ರಾಗ ಮಧುವಂತಿ

ಅಬ್ದುಲ್‌ ರಷೀದ್‌
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST
ಚಿತ್ರ: ಮದನ್‌ ಸಿ.ಪಿ.
ಚಿತ್ರ: ಮದನ್‌ ಸಿ.ಪಿ.   

ನೀಳ ಜಡೆಯ ನರ್ತಕಿಯಂತಿರುವ ನಿನ್ನ ನಡುವಿನ
ತಿರುವುಗಳು ಈ ನಡುಹಗಲ ಮಧ್ಯಾಹ್ನ ನನ್ನ ಮೈಮೇಲೆ ಬಂದಂತೆ
ಕುಣಿಯುತ್ತಿವೆ. ಈ ಮಂಕು ಕವಿದ ಕೋಣೆಯಲ್ಲೂ
ಬೆವರುತ್ತ  ಹೊಳೆಯುತ್ತಿರುವ ನಿನ್ನ ಚಕಿತ ಮೈಯ ಮಿಂಚು
ನಿನ್ನ ನಾಲಗೆಯ ತುದಿಯ ಹೊರಳು
ಹೊರಡಿಸುತ್ತಿರುವ ಹೊಸ ಸದ್ದುಗಳು,
ನಿನ್ನ ಮೈದಾನದಂತಿರುವ ಬೆನ್ನ ತಗ್ಗಲ್ಲಿ ತನ್ನಷ್ಟಕ್ಕೆ ಆಡುತ್ತಿರುವ
ಬಾಲಕನಂತಹ ನನ್ನ ಮಿದುಳೊಳಗಿನ ಸಣ್ಣಪುಟ್ಟ ಆಸೆಗಳು,
ಬಾಲ್ಯದ ನದಿಯಲ್ಲಿ ಕಾಲಾಡಿಸುತ್ತಿದ್ದ ಆ ದಿನಗಳನ್ನು
ನಿನ್ನ ಕಣ್ಣ ಕೊಳದಲ್ಲಿ ಈ ನಡುವಯಸ್ಸಿನಲ್ಲಿ ಕಾಣುತ್ತಿರುವೆನು
ಎಂದೂ ತೀರದ ಹಾಗಿರುವ ಝರಿಯ ಸಣ್ಣಗಿನ ಹರಿವಂತೆ
ತೆರೆದಿಟ್ಟ ಕಿಟಕಿಯಿಂದ ಮಧ್ಯಾಹ್ನದ ರಾಗ ಮಧುವಂತಿ
ಅರಿವೇ ಇಲ್ಲದ ಹಾಗೆ ನಮ್ಮೀರ್ವರ ಆತ್ಮದೊಳಕ್ಕೆ ಹಾದು ಹೋಗುತ್ತಿರುವುದು

2

ಒಂದು ಮಹಾಪ್ರಪಾತದಂತಹ ಪ್ರಣಯ ಶಿಖರದಿಂದ
ಮುಗ್ಗರಿಸಿ ಒಬ್ಬನೇ ಕಣ್ಣು ತಗ್ಗಿಸಿ ಸುಮ್ಮನೇ ನಡೆಯುತ್ತಿದ್ದ
ಪ್ರಕ್ಷುಬ್ದ ವಿರಾಗಿಯಂತೆ ನಿನ್ನ ಕಣ್ಣೆದುರು
ಹಾದು ಹೋಗುತ್ತಿದ್ದವನು ನಾನು.
ಹಸಿರ ಹುಲ್ಲುಗಾವಲ ಮೇಲೆ ಹರಿಯುತ್ತಿರುವ
ತಣ್ಣಗಿನ ಬೆಳಕ ಪ್ರಖರತೆಯ ನಡುವಿಂದ
ನಡೆದು ಬರುತ್ತಿರುವ ನೀಲನವಿಲಂತೆ
ಎದುರಲ್ಲಿ ನಡೆದು ಬಂದು ನಾಚಿಕೊಂಡಿದ್ದವಳು ನೀನು.
ಬೆಳಕಿನ ಕಾಯವ ಕಳೆದು ನಿಸ್ಸೂರಾಗಿ ಕುಂತಿದ್ದವನ ಮುಂದೆ
ಸಂಭವಿಸಿದ ಮಧ್ಯಾಹ್ನದ ರಾಗ ಮಧುವಂತಿ
ಈಗಲೂ ಮೈಮೇಲೆ  ಕುಣಿಯುತ್ತಿರುವ ನೀಲಾಂಜನೆಯಂತವಳು!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.