ADVERTISEMENT

ಬೆಂಗಳೂರಲ್ಲೊಂದು ಹಳ್ಳಿಯ ಬೆಳಕು!

ಸುಭಾಸ ಯಾದವಾಡ
Published 27 ಮೇ 2019, 19:30 IST
Last Updated 27 ಮೇ 2019, 19:30 IST
ಬಬಲೇಶ್ವರ ಸಂಘದ ಹುಡುಗರು 
ಬಬಲೇಶ್ವರ ಸಂಘದ ಹುಡುಗರು    

ಆ ಬೆಳಕಿನ ಹೆಸರು; ಬಬಲೇಶ್ವರ ಬೆಳಕು. ಬಬಲೇಶ್ವರ, ಉತ್ತರ ಕರ್ನಾಟಕದ ವಿಜಯಪುರ ತಾಲ್ಲೂಕಿನ ಒಂದು ಪುಟ್ಟ ಹಳ್ಳಿ. ಇತ್ತೀಚೆಗೆ ಅದು ತಾಲ್ಲೂಕು ಕೇಂದ್ರವಾಗಿದೆ. ಅಲ್ಲಿನ ಕೆಲವು ಜನ ಬೇರೆ ಬೇರೆ ಉದ್ದೇಶಗಳಿಗಾಗಿ ಬೆಂಗಳೂರು ಸೇರಿದ್ದಾರೆ. ಅವರಲ್ಲಿ ಉದ್ಯೋಗಕ್ಕಾಗಿ ಬಂದ ಯುವಕರು, ಓದಿಗಾಗಿ ಬಂದ ವಿದ್ಯಾರ್ಥಿಗಳು, ಓದು, ನೌಕರಿ ಎಲ್ಲ ಮುಗಿಸಿ ಅಲ್ಲಿಯೇ ವಾಸವಾಗಿರುವ ನಿವೃತ್ತರು ಇದ್ದಾರೆ.

ಬೆಂಗಳೂರಿನಲ್ಲಿರುವ ಬಬಲೇಶ್ವರದ ಶೇ 80ರಷ್ಟು ನಿವಾಸಿಗಳ ಜನರ ಮಾಹಿತಿ ಸಂಗ್ರಹಿಸಿರುವ ಆ ಊರಿನ ಸಾಫ್ಟ್‌ವೇರ್ ಎಂಜಿನಿಯರ್ ಬಸವರಾಜ ನೀಲಕಂಠ ಯಾದವಾಡ, ‘ಬಬಲೇಶ್ವರ ಬೆಳಕು’ ಎಂಬ ಸ್ನೇಹಿತರ ಕೂಟ ಮಾಡಿದ್ದಾರೆ. ಈ ಬೆಳಕು ಆರಂಭವಾಗಿದ್ದು 2015ರಲ್ಲಿ. ಇವರೇ ಆ ಕೂಟದ ಅಧ್ಯಕ್ಷರು. ಈಗ ಟ್ರಸ್ಟ್‌ ರೂಪದಲ್ಲಿ ಅದನ್ನು ನೋಂದಾಯಿಸಿದ್ದಾರೆ. ‘ಮೊದಲು ನಮ್ಮೂರಿನವರು ಬೆಂಗಳೂರಿನ ಯಾವ್ಯಾವ ಬಡಾವಣೆಯಲ್ಲಿದ್ದಾರೆ, ಏನೇನು ಮಾಡುತ್ತಿದ್ದಾರೆ ಎಂಬ ಯಾವ ಮಾಹಿತಿ ಇರಲಿಲ್ಲ. ಈಗ ಅದನ್ನು ಸಂಗ್ರಹಿಸಿದ್ದೇವೆ’ ಎನ್ನುತ್ತಾರೆ ಅವರು.

‘ಬಬಲೇಶ್ವರ ಬೆಳಕು’ ಹೆಸರಿನ ಹಿಂದೆ ಒಂದೆರಡು ಸಾಲಿನ ಕಥೆ ಇದೆ. ಹಿಂದೆ ಬಬಲೇಶ್ವರದಲ್ಲಿ ಒಬ್ಬ ಮಹಾನ್ ಸಂತ ಆಗಿ ಹೋದರು. ಅವರ ಹೆಸರು ಶಾಂತವೀರಸ್ವಾಮಿ. ಜಾತಿ, ಮತ, ಪಂಥಗಳೆನ್ನದೆ ಎಲ್ಲ ಜನರನ್ನು ಅವರು ಪ್ರೀತಿಸುತ್ತಿದ್ದರು. ಅವರನ್ನು ಜನ ‘ಬಬಲೇಶ್ವರದ ಭಾಗ್ಯನಿಧಿ’ ಎಂದೂ, ‘ಬಬಲೇಶ್ವರದ ಬೆಳಕು’ ಎಂದೂ ಕರೆಯುತ್ತಿದ್ದರು. ಅದೇ ಹೆಸರನ್ನು ಈ ಕೂಟ ತನ್ನದಾಗಿಸಿಕೊಂಡಿದೆ. ಶಾಂತವೀರಸ್ವಾಮಿಗಳ ಉತ್ತರಾಧಿಕಾರಿಯಾಗಿರುವ ಮಹಾದೇವ ಶಿವಾಚಾರ್ಯಸ್ವಾಮೀಜಿ ಈ ಕೂಟದ ಗೌರವಾಧ್ಯಕ್ಷರು.

ADVERTISEMENT

ಈ ಕೂಟ ಸ್ಥಾಪನೆಯಾಗಿದ್ದು ಕೇವಲ ಮನರಂಜನೆ ಕಾರ್ಯಕ್ರಮಕ್ಕಲ್ಲ. ತಮ್ಮ ಊರು ಬಬಲೇಶ್ವರದ ಅಭಿವೃದ್ಧಿಗೆ ಏನಾದರೂ ಕೊಡುಗೆ ನೀಡುವುದಕ್ಕಾಗಿ. ಹೀಗಾಗಿ ಬೆಂಗಳೂರಿನಲ್ಲಿರುವ ಬಬಲೇಶ್ವರದ ‘ಕಿರಣಗಳು’ ಒಗ್ಗೂಡಿ, ಬೆಂಗಳೂರಿನಲ್ಲಿದ್ದುಕೊಂಡೇ ಊರಿಗೆ ಬೆಳಕಾಗುವ ಕೆಲಸ ಮಾಡುತ್ತಿದ್ದಾರೆ.

‘ಪ್ರತಿ ತಿಂಗಳ ಮೊದಲ ರವಿವಾರ ಮಧ್ಯಾಹ್ನ 2ರ ಹೊತ್ತಿಗೆ ಎಲ್ಲ ಸದಸ್ಯರು ಸಭೆ ಸೇರುತ್ತಾರೆ. ಮುಂದಿನ ಅಭಿವೃದ್ಧಿ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸುತ್ತೇವೆ. ಅದಕ್ಕೆ ಕ್ರಿಯಾ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಮುಂದಾಗುತ್ತವೆ’ ಎಂದು ವಿವರಿಸುತ್ತಾರೆ ಟ್ರಸ್ಟ್‌ ಉಪಾಧ್ಯಕ್ಷ ಅಶೋಕ್ ಓಜಿ.

ಈ ಟ್ರಸ್ಟ್ ಸದಸ್ಯರು ಬಬಲೇಶ್ವರದ ಶಾಲೆಗೆ ಗಣಕ ಯಂತ್ರಗಳನ್ನು ಕಾಣಿಕೆಯಾಗಿ ಕೊಟ್ಟಿದ್ದಾರೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ದೇಶ ರಕ್ಷಣೆಗಾಗಿ ದುಡಿದ ಹಾಗೂ ದುಡಿಯುತ್ತಿರುವ ತಮ್ಮೂರಿನ 39 ಯೋಧರನ್ನು ಗುರುತಿಸಿ ಸನ್ಮಾನಿಸಿದ್ದಾರೆ. ಈ ಸಂಘಟನೆಯವರು ಈ ಕಾರ್ಯಕ್ರಮ ಮಾಡಿದಾಗಲೇ ಆ ಊರಿನವರಿಗೆ, ತಮ್ಮೂರಲ್ಲಿ ಇಷ್ಟೊಂದು ಯೋಧರು ಇದ್ದಾರೆ ಎಂಬುದು ಗೊತ್ತಾಗಿದ್ದು.

ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜದ ವಿಕಾಸಕ್ಕೆ ಶಿಕ್ಷಕರು ನೀಡುವ ಕೊಡುಗೆ ಬಹಳ ದೊಡ್ಡದು. ಅದನ್ನು ಗುರುತಿಸಿದ ಕೂಟ ಇತ್ತೀಚೆಗೆ ಬಬಲೇಶ್ವರದಲ್ಲಿ ಕೆಲಸ ಮಾಡುತ್ತಿರುವ ಹಾಗೂ ನಿವೃತ್ತರಾದ ಸುಮಾರು ನೂರು ಜನ ಶಿಕ್ಷಕರನ್ನು ಸನ್ಮಾನಿಸಿದ್ದಾರೆ. ಸನ್ಮಾನದ ವೇಳೆ ಪ್ರತಿಯೊಬ್ಬರಿಗೂ ಒಂದೊಂದು ಗಿಡವನ್ನು ಕಾಣಿಕೆಯಾಗಿ ನೀಡಿದ್ದಾರೆ.

ಬಬಲೇಶ್ವರ ಬೆಳಕಿನ ತಂಡದಲ್ಲಿ 80 ಸದಸ್ಯರಿದ್ದಾರೆ. ಅದರಲ್ಲಿ 40 ಮಂದಿ ಹಿರಿಯರು. 40 ಯುವಕರು. ಯುವಕರೇ ಈ ಕೂಟದ ಸಕ್ರೀಯ ಸದಸ್ಯರು. ಎಲ್ಲರದ್ದೂ ಸೇವಾ ಮನೋಭಾವ. ಅವರು ಯಾವುದೇ ಆರ್ಥಿಕ ಲಾಭ ನಿರೀಕ್ಷಿಸುವುದಿಲ್ಲ.

‘ಪರಿಸರ ರಕ್ಷಣೆ; ಶಿಕ್ಷಣ ಹಾಗೂ ಉದ್ಯೋಗ ಮಾರ್ಗದರ್ಶನ; ಅನಾಥರಿಗೆ, ವೃದ್ಧರಿಗೆ ಹಾಗೂ ಬಡವರಿಗೆ ಸಹಾಯ ನೀಡುವುದು; ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವುದು; ಹುಟ್ಟಿದ ಊರಿನ ಋಣವನ್ನು ಸ್ಮರಿಸಿಕೊಂಡು ಬಬಲೇಶ್ವರಕ್ಕೆ ಸಾಧ್ಯವಾದ ಎಲ್ಲ ನೆರವು-ಸಹಾಯ-ಸಹಕಾರ ನೀಡುವುದು ನಮ್ಮ ಕೂಟದ ಧ್ಯೇಯವಾಗಿದೆ’ ಎನ್ನುತ್ತಾರೆ ಕೂಟದ ಪ್ರಧಾನ ಕಾರ್ಯದರ್ಶಿ ಗುರುರಾಜ ರೂಗಿ.

‘ಕೂಟ ಬೆಂಗಳೂರಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿದೆ. ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಹಿರಿಯ ಜೀವಿಗಳಿಗೆ ಪೌಷ್ಟಿಕ ಆಹಾರ ನೀಡಿದೆ. ಬಡವರಿಗೆ ಆಸರೆಯಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಮಾರ್ಗದರ್ಶನ-ಸಲಹೆ-ತರಬೇತಿಗಳನ್ನು ನೀಡುತ್ತದೆ’ ಎಂದು ಈ ಕೂಟದ ಖಜಾಂಚಿ ಕಂಠೆಪ್ಪ ಕೋಟ್ಯಾಳ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.