ರಾಷ್ಟ್ರಪಿತ ಮೋಹನದಾಸ ಕರಮಚಂದ ಗಾಂಧಿ ಅವರಿಗೆ ಸಂಬಂಧಿಸಿದ ಹಲವು ವಸ್ತುಗಳನ್ನು, ಅತ್ಯಪರೂಪದ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಂಡವರು ಬೆಂಗಳೂರಿನ ಜವಳಿ ಉದ್ಯಮಿ ಜಯಪ್ರಕಾಶ್ ಸರ್ಡಾ.
***
ಮಹಾತ್ಮ ಗಾಂಧಿ ಅವರ ಕುರಿತಾಗಿ 150ಕ್ಕೂ ಹೆಚ್ಚಿನ ದೇಶಗಳು ಹೊರತಂದ ಅಂಚೆ ಚೀಟಿಗಳು, ವಿವಿಧ ದೇಶಗಳ ಗಾಂಧಿ ನಾಣ್ಯಗಳು, ಗಾಂಧಿ ಅವರಿಗೆ ಬಂದ ಪತ್ರಗಳು, ಅವರು ಬೇರೆಯವರಿಗೆ ಬರೆದ 8 ಪತ್ರಗಳ ಮೂಲಪ್ರತಿ, ಅವರ ಹತ್ಯೆಯ ಎಫ್‌ಐಆರ್ ಮೂಲಪ್ರತಿ, ವಿವಿಧ ಸಂದರ್ಭಗಳಲ್ಲಿ ಅವರ ವೈದ್ಯಕೀಯ ವರದಿಗಳ ಪ್ರತಿಗಳು, ಬಳಸಿದ ಚರಕ, ಅವರು ಹೊರ ತಂದ ಮೂರು ಪ್ರಮುಖ ಪತ್ರಿಕೆಗಳ ಪ್ರತಿಗಳು, ಹತ್ಯೆಯಾದ ದಿನ ಸುದ್ದಿ ಪ್ರಕಟಿಸಿದ ದಿನ ಪತ್ರಿಕೆಗಳು, ಗಾಂಧಿ ಅವರ ಮೂಲ ಛಾಯಾಚಿತ್ರಗಳು...
– ಹೀಗೆ ರಾಷ್ಟ್ರಪಿತ ಮೋಹನದಾಸ ಕರಮಚಂದ ಗಾಂಧಿ ಅವರಿಗೆ ಸಂಬಂಧಿಸಿದ ಹಲವು ವಸ್ತುಗಳನ್ನು, ಅತ್ಯಪರೂಪದ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಂಡವರು ಬೆಂಗಳೂರಿನ ಜವಳಿ ಉದ್ಯಮಿ ಜಯಪ್ರಕಾಶ್ ಸರ್ಡಾ. ಶಾಂತಿನಗರದ ನಿವಾಸಿಯಾಗಿರುವ ಸರ್ಡಾ ಅವರು ತಮ್ಮಲ್ಲಿರುವ ಸಂಗ್ರಹಗಳ ಪ್ರತಿಯೊಂದು ವಸ್ತುಗಳ ಬಗ್ಗೆ ದೀರ್ಘ ವಿವರಣೆಯನ್ನೂ ನೀಡಬಲ್ಲರು.
ಅವರು ಪ್ರದರ್ಶಿಸಿದ ಮಾಲ್ಟಾ ದೇಶದ ಗಾಂಧಿ ಚಿತ್ರವಿರುವ ಬೆಳ್ಳಿಯ ನಾಣ್ಯದ ಭಾರ ಒಂದು ಕೆ.ಜಿ. ಇದೆ. 2004ರಲ್ಲಿ ಈ ನಾಣ್ಯವನ್ನು ಹೊರತರಲಾಗಿತ್ತು. ಅವರ ಸಂಗ್ರಹದಲ್ಲಿರುವ ಗಾಂಧೀಜಿ ಅವರು ಬಳಸಿದ ಚರಕವೂ ಅಮೂಲ್ಯವಾದದ್ದೇ. ‘ಯಾರ ಬಳಿಯೂ ಇರದಷ್ಟು ಗಾಂಧಿ ಕುರಿತ ದಾಖಲೆಗಳನ್ನು ಹೊಂದಿದ್ದೇನೆ. ಕ್ರೈಸ್ಟ್ ಕಾಲೇಜು, ಜೈನ್ ಕಾಲೇಜು, ಬಾಲ್ಡ್‌ವಿನ್ಸ್, ಬಿಷಪ್ ಕಾಟನ್ಸ್ ಸೇರಿದಂತೆ ಬೆಂಗಳೂರಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಇವುಗಳ ಪ್ರದರ್ಶನ ಏರ್ಪಡಿಸಿದ್ದೇನೆ. ಈ ವಸ್ತುಗಳ ಸುರಕ್ಷಿತ ಸಾಗಣೆ ಸುಲಭವಲ್ಲದ ಕಾರಣ ನಗರದಿಂದ ಹೊರಗೆಲ್ಲೂ ಪ್ರದರ್ಶನ ನೀಡಲು ಹೋಗಿಲ್ಲ’ ಎನ್ನುತ್ತಾರೆ 50 ವರ್ಷ ವಯಸ್ಸಿನ ಜಯಪ್ರಕಾಶ್. ಗಾಂಧಿ ಕುರಿತ ಅಂಚೆ ಚೀಟಿ, ಅಂಚೆ ಪರಿಕರಗಳ ಪ್ರದರ್ಶಿಕೆಗೆ ಅವರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
‘ಶಾಲಾ ದಿನಗಳಲ್ಲಿ ಅಂಚೆ ಚೀಟಿ ಸಂಗ್ರಹದ ಹವ್ಯಾಸವಿತ್ತು. ನಂತರ ಗಾಂಧೀಜಿ ಅಂಚೆ ಚೀಟಿಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಯಿತು. ನಂತರ ಗಾಂಧೀಜಿ, ಸರ್ದಾರ್ ಪಟೇಲ್, ಸುಭಾಷಚಂದ್ರ ಬೋಸ್ ಅವರಿಗೆ ಸೇರಿದ ದಾಖಲೆಗಳು, ಕಡತಗಳನ್ನು ಸಂಗ್ರಹಿಸತೊಡಗಿದೆ. ಹರಾಜಿನಲ್ಲಿ ಕೊಂಡವು ಅಧಿಕ. ಈಗ ಇಂಥ ದಾಖಲೆಗಳೇ ಸುಮಾರು ಆರು ಸಾವಿರದಷ್ಟಿವೆ’ ಎಂದು ಅವರು ಹವ್ಯಾಸ ಬೆಳೆದುಬಂದ ದಾರಿಯನ್ನು ಚುಟುಕಾಗಿ ತೆರೆದಿಟ್ಟರು. ಗಾಂಧೀಜಿ ಅವರಿಗೆ ಸಂಬಂಧಿಸಿದ 300 ಛಾಯಾಚಿತ್ರಗಳೂ ಸರ್ಡಾ ಅವರಲ್ಲಿವೆ.
‘1935 ಅಥವಾ 1939 ಇರಬೇಕು, ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ ಪ್ರಮುಖ ಪ್ರತಿನಿಧಿಗಳಿಗೆ ಧ್ವಜದ ಚಿತ್ರವಿರುವ ಕಪ್ ಮತ್ತು ಸಾಸರ್‌ಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು. ಈ ಧ್ವಜದ ಮಧ್ಯೆ ಚರಕದ ಚಿತ್ರವಿದೆ. ಅವುಗಳೂ ನನ್ನ ಸಂಗ್ರಹದಲ್ಲಿವೆ. ನನ್ನ ಪ್ರಕಾರ ಇವುಗಳೂ ಬೆಲೆ ಕಟ್ಟಲಾಗದ ಆ್ಯಂಟಿಕ್‌ಗಳು’ ಎನ್ನುತ್ತಾರೆ.
ಗಾಂಧೀಜಿ ಸಂಪಾದಕರಾಗಿದ್ದ ಯಂಗ್ ಇಂಡಿಯಾ, ದಿ ಇಂಡಿಯನ್ ಒಪೀನಿಯನ್, ಹರಿಜನ ಸೇವಕ್ ಪತ್ರಿಕೆಗಳ ನೂರಾರು ಪ್ರತಿಗಳನ್ನೂ ಅವರು ಫೈಲ್‌ಗಳಲ್ಲಿ ಒಪ್ಪವಾಗಿ ಜೋಡಿಸಿಟ್ಟಿದ್ದಾರೆ. ಗಾಂಧಿ ಹತ್ಯೆಯ ವರದಿ ಹೊಂದಿರುವ ದೇಶ –ವಿದೇಶಗಳ, 9 ಭಾಷೆಗಳ 14 ಪತ್ರಿಕೆಗಳನ್ನು ಅವರು ಹೊಂದಿದ್ದಾರೆ. ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಬಳಸಿದ ‘ಜೈಹಿಂದ್’ ಎಂಬ ಉಲ್ಲೇಖವಿರುವ ಶಾಲುಗಳೂ ಅವರ ಸಂಗ್ರಹದಲ್ಲಿವೆ.
1857ರಿಂದ ಹಿಡಿದು ಸ್ವಾತಂತ್ರ್ಯದ ಅವಧಿಯವರೆಗೆ, ಮಹತ್ವದ ಘಟನಾವಳಿಗಳನ್ನು ದಾಖಲಿಸಿರುವ ದೇಶ, ಹೊರದೇಶಗಳ 10,000 ಪತ್ರಿಕೆಗಳು ಅವರಲ್ಲಿವೆ. 1670ರ ಫ್ರಾನ್ಸ್‌ನ Chatteau ಹೆಸರಿನ ಪತ್ರಿಕೆಯೂ ಈ ಸಂಗ್ರಹದಲ್ಲಿದೆ. ‘ಈ ಸಂಗ್ರಹ ಕಾರ್ಯದಲ್ಲಿ ಅಣ್ಣ ಪ್ರವೀಣ್ ಕುಮಾರ್‌ನನಗೆ ಎಲ್ಲ ರೀತಿಯ ನೆರವು ನೀಡಿದ್ದಾರೆ’ ಎಂದು ನೆನಪಿಸಿಕೊಳ್ಳುತ್ತಾರೆ ಸರ್ಡಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.