ADVERTISEMENT

ನೆನೆವುದೆನ್ನ ಮನ ಕುವೆಂಪುರನ್ನ..

ಚ.ಹ.ರಘುನಾಥ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಚಂದ್ರಶೇಖರ ಪಾಟೀಲ
ಚಂದ್ರಶೇಖರ ಪಾಟೀಲ   

ಮೈಸೂರು: ಮೈಸೂರಿನ ಜೊತೆಗೇ ನೆನಪಾಗುವ ಹೆಸರು ಕುವೆಂಪು. ಅವರು ಈ ನಾಡಿನ ಎಲ್ಲ ವೈಚಾರಿಕ-ಸಾಮಾಜಿಕ ಚಳವಳಿಗಳಿಗೆ ಬೆಂಬಲವಾಗಿದ್ದವರು. ಅವರ ಮಾರ್ಗದರ್ಶನದಲ್ಲೇ ಮೈಸೂರಿನಲ್ಲಿ ಜಾತಿವಿನಾಶ ಆಂದೋಲನಕ್ಕೆ ಚಾಲನೆ ದೊರೆಯಿತು. ಎಪ್ಪತ್ತರ ದಶಕದಲ್ಲಿ ನಮ್ಮ ಕರ್ನಾಟಕ ಕಲಾವಿದರು ಮತ್ತು ಬರಹಗಾರರ ಒಕ್ಕೂಟವನ್ನು ಅವರೇ ಉದ್ಘಾಟಿಸಿದ್ದರು...

83ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲರು ಕುವೆಂಪು ಅವರನ್ನು ನೆನಪಿಸಿಕೊಂಡು ಭಾವುಕರಾದರು. ಸಮ್ಮೇಳನದ ಮುನ್ನಾ ದಿನ 'ಪ್ರಜಾವಾಣಿ' ಜೊತೆ ಮಾತನಾಡಿದ ಅವರು, ಪ್ರಸಕ್ತ ಸಮ್ಮೇಳನದ ಹಿನ್ನೆಲೆಯಲ್ಲಿ ಕುವೆಂಪು ಪ್ರತಿಪಾದಿಸಿದ ವಿಚಾರಧಾರೆ ಇರುವ ಇಂಗಿತ ವ್ಯಕ್ತಪಡಿಸಿದರು.

’ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ, ಗೋಕಾಕ್‍‍ ಚಳವಳಿ ಸೇರಿದಂತೆ ಅನೇಕ ಚಳವಳಿಗಳ ಹಿಂದೆ ಕುವೆಂಪು ಪ್ರತಿಪಾದಿಸಿದ ವೈಚಾರಿಕ ಪ್ರಜ್ಞೆಯಿತ್ತು. ಕಳೆದ ಶತಮಾನದಲ್ಲಿ ಸಾಂಸ್ಕೃತಿಕ ಮಹತ್ವ ಇದ್ದ ಬಹುದೊಡ್ಡ ಕವಿ ಹಾಗೂ ಈಗಲೂ ರೆಲವೆಂಟ್‍‍ ಆಗಿರುವ ಕವಿ’ ಎಂದರು.

ADVERTISEMENT

1957ರಲ್ಲಿ ಧಾರವಾಡದಲ್ಲಿ ನಡೆದ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕುವೆಂಪು ವಹಿಸಿದ್ದರು. ಅದಾದ 60 ವರ್ಷಗಳ ನಂತರ ಮೈಸೂರಿನಲ್ಲಿ ನಡೆಯುತ್ತಿರುವ ಸಮ್ಮೇಳನದ ಅಧ್ಯಕ್ಷತೆ ಧಾರವಾಡದವನಾದ ನನಗೆ ಸಂದಿದೆ. ಇದು ಪರಂಪರೆಯ ಕೊಂಡಿಯ ರೂಪದಲ್ಲಿ ದೊರೆಯುತ್ತಿರುವ ಗೌರವ ಎಂದು ಭಾವಿಸಿರುವುದಾಗಿ ಹೇಳಿದರು.

ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಚಂಪಾ ಸಮಕಾಲೀನ ಸಂಗತಿಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ‘ಹಿಂದಿನ ಸಮ್ಮೇಳನಗಳ ಬಹುತೇಕ ಅಧ್ಯಕ್ಷರು ನಾಡು-ನುಡಿಯ ಇತಿಹಾಸ ನೆನಪಿಸಿಕೊಳ್ಳಲು ತಮ್ಮ ಭಾಷಣದ ಹೆಚ್ಚು ಭಾಗವನ್ನು ಮೀಸಲಿಟ್ಟಿದ್ದರು. ಅದೇ ಸಂಗತಿಗಳನ್ನು ಮತ್ತೆ ಪ್ರಸ್ತಾಪಿಸುವ ಬದಲು, ಸಮಕಾಲೀನ ತವಕ-ತಲ್ಲಣಗಳನ್ನು ಭಾಷಣದಲ್ಲಿ ಪ್ರಸ್ತಾಪಿಸಲಿದ್ದೇನೆ. ನಾನು ಕನ್ನಡ ಸಾಹಿತ್ಯದ ನೇರ ವಿದ್ಯಾರ್ಥಿ ಅಲ್ಲವಾದುದರಿಂದ, ಈ ಹೊತ್ತಿನ ಕನ್ನಡದ ವಿವಿಧ ಸಾಧ್ಯತೆಗಳ ಬಗ್ಗೆ ಹೆಚ್ಚು ಮಾತನಾಡಲಿದ್ದೇನೆ’ ಎಂದರು.

ನಮ್ಮ ಜೊತೆಗೇ ಇದ್ದ ದಾಬೋಲ್ಕರ್, ಪನ್ಸಾರೆ, ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಕೊಲೆಯಾದರು. ಹೀಗೆ ಕಳೆದುಕೊಂಡವರನ್ನು ಮರೆಯುತ್ತಿದ್ದೇವೆ. ಹೋರಾಟದಲ್ಲಿ ನಂಬಿಕೆಯಿಟ್ಟ ನಾವು ಗಂಭೀರವಾಗಿ ಚಿಂತನೆ ಮಾಡಬೇಕಾದ ಸಂಗತಿಯಿದು ಎಂದು ಚಂಪಾ ಹೇಳಿದರು. ಮೂರು ದಿನಗಳ ಸಮ್ಮೇಳನದಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆಯುವ ಆಶಯ ವ್ಯಕ್ತಪಡಿಸಿದರು.

ಮೈಸೂರಿಗಿದು 5ನೇ ಸಮ್ಮೇಳನ: ಚಂಪಾ ಅಧ್ಯಕ್ಷತೆಯ 83ನೇ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆಯಾಗುವ ಮೂಲಕ ನುಡಿಹಬ್ಬಕ್ಕೆ ಐದನೇ ಸಲ ಆತಿಥ್ಯ ವಹಿಸುತ್ತಿರುವ ಹೆಮ್ಮೆ ಮೈಸೂರಿಗೆ ದೊರೆತಿದೆ. ಈ ಮೂಲಕ ಹೆಚ್ಚು ಸಮ್ಮೇಳನಗಳನ್ನು ಆಯೋಜಿಸಿದ ನಗರ ಎನ್ನುವ ಹೆಗ್ಗಳಿಕೆಯನ್ನು ಬೆಳಗಾವಿಯೊಂದಿಗೆ ಹಂಚಿಕೊಂಡಿದೆ. ಬೆಳಗಾವಿ ಈಗಾಗಲೇ ಐದು ನುಡಿಹಬ್ಬಗಳ ಆತಿಥ್ಯ ವಹಿಸಿದೆ. ವಿಶ್ವಕನ್ನಡ ಸಮ್ಮೇಳನಗಳಿಗೆ ವೇದಿಕೆಯಾಗಿರುವುದು ಇವೆರಡು ನಗರಗಳ ಮತ್ತೊಂದು ವಿಶೇಷ.

ಮೈಸೂರಿನಲ್ಲಿ ಮೊದಲ ಸಾಹಿತ್ಯ ಸಮ್ಮೇಳನ ನಡೆದುದು 1917ರಲ್ಲಿ. ಎಚ್‍.ವಿ.ನಂಜುಂಡಯ್ಯ ಆ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1930, 1955 ಹಾಗೂ 1991ರಲ್ಲಿ ನಡೆದ ಸಮ್ಮೇಳನಗಳ ಅಧ್ಯಕ್ಷತೆಯನ್ನು ಆಲೂರು ವೆಂಕಟರಾವ್‌, ಶಿವರಾಮ ಕಾರಂತ ಹಾಗೂ ಕೆ.ಎಸ್.ನರಸಿಂಹಸ್ವಾಮಿ ವಹಿಸಿದ್ದರು.

**

ಕಳೆದ ಬಾರಿಗಿಂತ 10 ಸಾವಿರ ಹೆಚ್ಚು ಆಸನಗಳಿವೆ. ರಾಯಚೂರಿನಲ್ಲಿ ಒಂದೂವರೆ ಲಕ್ಷ ಜನ ಭಾಗವಹಿಸಿದ್ದರು. ಈ ಬಾರಿಯೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.
–ಮನು ಬಳಿಗಾರ್, ಕಸಾಪ ಅಧ್ಯಕ್ಷ

ಮೈಸೂರಿನಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಗುರುವಾರ ಸಂಜೆ ಖಾದ್ಯ ತಯಾರಿಯಲ್ಲಿ ತೊಡಗಿದ್ದ ಬಾಣಸಿಗರು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.