ADVERTISEMENT

ಅಕಾಲಿಕ ಮಳೆಯಿಂದ ಇಳುವರಿ ಕುಸಿತ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಈ ವರ್ಷ ಮಾವಿನ ಇಳುವರಿ ಶೇ 20ರಷ್ಟು ಕುಸಿ­ಯುವ ಸಾಧ್ಯತೆ ಇದ್ದು, ದೇಶೀಯ ಮಾರು­ಕಟ್ಟೆಯಲ್ಲಿ ಹಣ್ಣಿನ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ‘ಭಾರ­ತೀಯ ವಾಣಿಜ್ಯೋ ದ್ಯಮ ಮಹಾಸಂಘ’ (ಅಸೋಚಾಂ) ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಯುಎಇ, ಇಂಗ್ಲೆಂಡ್‌, ಸೌದಿ ಅರೇ ಬಿಯಾ, ಖತಾರ್‌, ಕುವೈತ್‌, ಬಾಂಗ್ಲಾ ದೇಶದಿಂದ ಈ ಬಾರಿ ಮಾವಿಗೆ ಬೇಡಿಕೆ ಹೆಚ್ಚಿದೆ. ಮಳೆ ಹಾನಿ ಜತೆಗೆ ರಫ್ತು ಬೇಡಿಕೆ ಹೆಚ್ಚಿರುವುದೂ ಕೂಡ ಬೆಲೆ ಏರಿಕೆಗೆ ಕಾರಣವಾ­ಗಬಹುದು ಎಂದು ಈ ಅಧ್ಯಯನ ಹೇಳಿದೆ.

ಕಳೆದ ವರ್ಷ 180 ಲಕ್ಷ ಟನ್‌ಗಳ­ಷ್ಟು ಮಾವು ಫಸಲು ಬಂದಿತ್ತು. ಆದರೆ, ಈ ಬಾರಿ ಅಕಾಲಿಕ ಮಳೆಯಿಂದಾಗಿ ಆಂಧ್ರ ಪ್ರದೇಶ, ಬಿಹಾರ, ಗುಜರಾತ್‌, ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಶೇ 50ರಷ್ಟು ಮಾವಿನ ಗಿಡಗಳು ಹಾನಿ ಗೊಳಗಾಗಿವೆ. ಇದರಿಂದ ಒಟ್ಟಾರೆ ಇಳುವರಿ ಶೇ 15ರಿಂದ ಶೇ 20ರಷ್ಟು ಇಳಿಯುವ ಸಾಧ್ಯತೆ ಇದೆ. ರಫ್ತು ಕೂಡ ಇಳಿಕೆಯಾಗಲಿದೆ ಎಂದು ‘ಅಸೋಚಾಂ’ ಪ್ರಧಾನ ಕಾರ್ಯದರ್ಶಿ ಡಿ.ಎಸ್‌.ರಾವತ್‌ ವಿವರ ನೀಡಿದ್ದಾರೆ.

2010–11ರಲ್ಲಿ ರೂ.164 ಕೋಟಿ ಮೌಲ್ಯದ ಮಾವು ರಫ್ತಾಗಿತ್ತು. 2012–13ರಲ್ಲಿ ಇದು ಶೇ 27ರಷ್ಟು ಏರಿಕೆ ಕಂಡು ರೂ.267 ಕೋಟಿ ವಹಿವಾಟು ದಾಖಲಾಗಿತ್ತು. ಒಟ್ಟು ಮಾವು ರಫ್ತಿನಲ್ಲಿ ಶೇ 61ರಷ್ಟು ಪಾಲನ್ನು  ‘ಯುಎ­ಇ’ ಹೊಂದಿದೆ. ಭಾರತದಲ್ಲಿ ಒಂದು ಸಾವಿ­ರಕ್ಕೂ ಹೆಚ್ಚು ವಿಭಿನ್ನ ತಳಿಗಳ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.