ADVERTISEMENT

ಅಕ್ರಮ; ಖಾಸಗಿ ಬಸ್ ಮಾಲೀಕರ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 19:30 IST
Last Updated 23 ಸೆಪ್ಟೆಂಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ‘ಖಾಸಗಿ ಬಸ್‌ನ ಕೆಲ ಮಾಲೀಕರು ತಾತ್ಕಾಲಿಕ ಸಾರಿಗೆ ಸಂಚಾರಕ್ಕೆ (ಕ್ಯಾಷ್ಯುವಲ್ ಕಾಂಟ್ರ್ಯಾಕ್ಟ್) ಪರವಾನಗಿ ಪಡೆದು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ ದೂರ ಮಾರ್ಗಗಳಿಗೆ ಬಸ್ ಓಡಿಸುತ್ತಿದ್ದಾರೆ. ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

ಶನಿವಾರ ನಗರದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಯಾಣಿಕರಿಗೆ ಹೊಟೆಲ್, ಶಾಪಿಂಗ್ ಮಾಲ್, ಬಟ್ಟೆ ಅಂಗಡಿ ಹೀಗೆ ಎಲ್ಲ ರೀತಿಯ ಸೌಕರ್ಯಗಳು ಲಭಿಸುವ ರೀತಿಯಲ್ಲಿ ‘ಬಸ್ ಪೋರ್ಟ್’ ಎಂಬ ವಿನೂತನ ಕಲ್ಪನೆಯಡಿ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡುವ ಚಿಂತನೆ ನಡೆದಿದೆ. ಪ್ರಥಮ ಹಂತದಲ್ಲಿ ಪ್ರಾಯೋಗಿಕವಾಗಿ ನೆಲಮಂಗಲ ಬಸ್ ನಿಲ್ದಾಣವನ್ನು ಬಸ್ ಪೋರ್ಟ್ ಮಾದರಿಯಲ್ಲಿ ನಿರ್ಮಿಸುವ ಉದ್ದೇಶವಿದೆ. ಪರಿಶೀಲನೆ ನಡೆಸಿ ಅಧಿಕಾರಿಗಳು ಈ ಕುರಿತು ವರದಿ ಸಲ್ಲಿಸಲಿದ್ದಾರೆ ಎಂದು ಹೇಳಿದರು.‌

ಫ್ಲೈಬಸ್ ಸೇವೆ
ವಿಮಾನ ನಿಲ್ದಾಣಕ್ಕೆ ಹೋಗುವವರಿಗಾಗಿಯೇ ಅತ್ಯಂತ ಸುಸಜ್ಜಿತವಾದ ಫ್ಲೈ ಬಸ್ ಸೇವೆ ಪ್ರಾರಂಭಿಸಲಾಗಿದೆ. ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಫ್ಲೈಬಸ್ ಸೇವೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಹಂತ ಹಂತವಾಗಿ ಇದನ್ನು ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಿರುಪತಿ, ಕೊಯಮತ್ತೂರು, ಸೇಲಂ, ಮಡಿಕೇರಿ, ಕಲ್ಲಿಕೋಟೆಗೆ ಫ್ಲೈ ಬಸ್ ಸೇವೆ ಮುಂದಿನ ತಿಂಗಳಿಂದ ಕಾರ್ಯಾಚರಣೆ ಮಾಡಲಿದೆ ಎಂದು ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.