ADVERTISEMENT

ಅಚ್ಛೇ ದಿನ್ ನಮ್ಮ ಕೈಯ್ಯಲ್ಲೇ ಇದೆ!

ಶ್ರೀಪಾದ ಜೋಶಿ
Published 29 ಜುಲೈ 2014, 19:30 IST
Last Updated 29 ಜುಲೈ 2014, 19:30 IST
ಅಚ್ಛೇ ದಿನ್ ನಮ್ಮ ಕೈಯ್ಯಲ್ಲೇ ಇದೆ!
ಅಚ್ಛೇ ದಿನ್ ನಮ್ಮ ಕೈಯ್ಯಲ್ಲೇ ಇದೆ!   

ರೀ, ನಿಮ್ಮನ್ನು ಕೇಳ್ಕೊಂಡು ಯಾರೋ ಬಂದಿದ್ದಾರೆ...
ಭಾನುವಾರದ ರಜಾ ಮೂಡ್‌ನಲ್ಲಿ ಹಳೆಯ ಪೇಪರ್ ಹರಡಿ ಕುಳಿತುಕೊಂಡಿದ್ದ ನನಗೆ ಪತ್ನಿ ಹೇಳಿದಳು.
ಯಾರಂತೆ?
ಪ್ರಶ್ನಿಸಿದೆ.
ಅದಾರೋ ಅರುಣ್ ಜೈಟ್ಲಿ ಅಂತೆ...
ಆ ಕಡೆಯಿಂದ ಉತ್ತರ ಬಂತು.
ಆ ಹೆಸರಿನವರು ಯಾರೂ ನನಗೆ ಪರಿಚಯ ಇಲ್ವಲ್ಲ?...
ಮನಸ್ಸಿನಲ್ಲಿ ಹೇಳಿಕೊಂಡು ಆಕೆಗೂ ಅದನ್ನೇ ಹೇಳಿದೆ.

ಏನೋ ಗೊತ್ತಿಲ್ಲ. ಮೋದಿ ಅನ್ನೋರು ಕಳಿಸಿದ್ರಂತೆ... ರೀ ಇವರು ಮೊನ್ನೆ ಟಿವಿಯಲ್ಲಿ ಬರುತ್ತಿದ್ರು ಕಣ್ರೀ... ಎಂದು ಆಕೆ ಸಖೇದಾಶ್ಚರ್ಯದಿಂದ ಹೇಳಿದಳು.
ಹೊರ ಬಾಗಿಲಿಗೆ ಬಂದೆ.
ಕಣ್ಣುಜ್ಜಿಕೊಂಡೆ.
‘ನಮಸ್ಕಾರ, ನಾನು ಅರುಣ್ ಜೈಟ್ಲಿ, ಕೇಂದ್ರ ಹಣಕಾಸು ಸಚಿವ. ನರೇಂದ್ರ ಮೋದಿ ಅವರು ಅಚ್ಛೇ ದಿನ್ ಆನೇವಾಲೇ ಹೈ ಎಂದು ನಿಮ್ಮಿಂದ ವೋಟು ಹಾಕಿಸಿಕೊಂಡು ಗೆದ್ದು ಬಂದಿದ್ದಾರೆ. ಅವರು ಪ್ರತಿ ತಿಂಗಳು 10 ಸಾವಿರ ರೂಪಾಯಿ ಕೊಟ್ಟು ಬರಲು ಹೇಳಿದ್ದಾರೆ. ಅದಕ್ಕೇ ಬಂದೆ’ ಎಂದು ಹೇಳಿದರು ಬಂದ ವ್ಯಕ್ತಿ.
* * *
ಮತ್ತೊಮ್ಮೆ ಕಣ್ಣುಜ್ಜಿಕೊಂಡೆ. ಓಹ್‌! ಅದು ಕನಸು ಎಂದು ಸ್ಪಷ್ಟವಾಯಿತು.
ಹೌದಲ್ಲವೇ?
ನರೇಂದ್ರ ಮೋದಿ ಅಥವಾ ಅರುಣ್ ಜೈಟ್ಲಿ ನಮ್ಮಂಥ ಬಡಪಾಯಿಯ ಮನೆಗೆ ಬರಲು ಸಾಧ್ಯವೇ ಎಂದು ನನ್ನನ್ನೇ ಪ್ರಶ್ನಿಸಿಕೊಂಡೆ.
ಹಾಗಾದರೆ ಅಚ್ಛೇ ದಿನ್ ಬರುವುದಾದರೂ ಹೇಗೆ ಎಂದು ಒಂದು ಕ್ಷಣ ಯೋಚಿಸಿದೆ. ಟೀಪಾಯ್ ಮೇಲೆ ಕೇಂದ್ರ ಬಜೆಟ್ ವಿವರಗಳಿದ್ದ ಪತ್ರಿಕೆ ಇತ್ತು. ಅದರ ಮೇಲೆ ಒಂದು ಬಾರಿ ಕಣ್ಣು ಹಾಯಿಸಿದೆ.

ಹೌದಲ್ಲ! ನಮಗೆ ಅಚ್ಛೇ ದಿನ್ ಬರಲು ಬೇರೆಯವರು ಏನು ಮಾಡಿಯಾರು? ನಮ್ಮ ಪ್ರಯತ್ನವೂ ಬೇಕಲ್ಲವೇ ಎಂದು ಮನಸ್ಸಿನಲ್ಲೇ ಅಂದುಕೊಂಡೆ.
ಪತ್ರಿಕೆಯಲ್ಲಿದ್ದ ಮೂರು ಅಂಶಗಳು ನನ್ನ ಗಮನ ಸೆಳೆದವು. ಆದಾಯ ತೆರಿಗೆಗೆ ಸಂಬಂಧಿಸಿದ ಅಂಶಗಳವು. ಮೊದಲನೆಯದಾಗಿ ಆದಾಯ ತೆರಿಗೆಯ ಸಾಮಾನ್ಯ ವಿನಾಯ್ತಿ ಮಿತಿ (ಸ್ಟಾಂಡರ್ಡ್ ಡಿಡಕ್ಷನ್ ಲಿಮಿಟ್) ಪ್ರಮಾಣವನ್ನು ಎರಡು ಲಕ್ಷ ರೂಪಾಯಿಯಿಂದ ಎರಡೂವರೆ ಲಕ್ಷಕ್ಕೆ ಏರಿಸಲಾಗಿತ್ತು. ಅಂದರೆ 50 ಸಾವಿರ ರೂಪಾಯಿಗಳ ಲಾಭ. ಅಂದರೆ ಆದಾಯ ತೆರಿಗೆಗೆಂದು ನನ್ನ ಸಂಬಳದಲ್ಲಿ ಆಗುತ್ತಿದ್ದ ಕಡಿತದಲ್ಲಿ ಸ್ವಲ್ಪ ಹಣ ನನ್ನ ಜೇಬಲ್ಲೇ ಉಳಿಯುವುದು ಖಚಿತವಾಯಿತು. ಸ್ವಲ್ಪ ಖುಷಿಯಾಯಿತು. ಜತೆಗೆ ಮನಸ್ಸಿಗೆ ಸ್ವಲ್ಪ ನಿರಾಳವೂ ಆಯಿತು.

ಎರಡನೇ ಅಂಶದ ಕಡೆ ನೋಡಿದೆ. ಅದು ನಾಗರಿಕರು ಮಾಡುವ ಉಳಿತಾಯಕ್ಕೆ ಸಂಬಂಧಪಟ್ಟದ್ದು. ಆದಾಯ ತೆರಿಗೆ ಕಾಯ್ದೆಯ 80 ಸಿ ಸೆಕ್ಷನ್‌ ನಡಿ ಇದುವರೆಗೆ ಒಂದು ಲಕ್ಷ ರೂಪಾಯಿಯವರೆಗಿನ ಉಳಿತಾಯಕ್ಕೆ ತೆರಿಗೆ ವಿನಾಯ್ತಿ ಇತ್ತು. ಅದನ್ನು ಒಂದೂವರೆ ಲಕ್ಷ ರೂಪಾಯಿಗೆ ಹೆಚ್ಚಿಸಿದ ಸುದ್ದಿ ಅದು. ಅಂದರೆ ಇನ್ನು ಮುಂದೆ ಈ ಯೋಜನೆಯಡಿ ಒಂದೂವರೆ ಲಕ್ಷ ರೂಪಾಯಿಯವರೆಗೆ ಉಳಿತಾಯ ಮಾಡಿದರೆ ಅದು ತೆರಿಗೆಯಿಂದ ಮುಕ್ತವಾಗಿರುತ್ತದೆ. ಜನರಲ್ಲಿ ಉಳಿತಾಯ ಮನೋಭಾವ ಉತ್ತೇಜಿಸುವ ಈ ಅಂಶವೂ ಖುಷಿ ನೀಡಿತು.

ಮೂರನೇ ಅಂಶ ಸದ್ಯಕ್ಕೆ ನನಗೆ ಅನ್ವಯ ಆಗುವುದಿಲ್ಲವಾದರೂ ಆ ಗುಂಪಿನವರಿಗಾದರೂ ನೆರವಾಗುವಂಥದು. ಜತೆಗೆ ಇದುವರೆಗೆ ಆ ಗುಂಪಿಗೆ ಸೇರದವರನ್ನು ಅತ್ತ ಸೆಳೆದುಕೊಂಡು ಹೋಗುವಂಥದು. ಅದು ಗೃಹ ಸಾಲಕ್ಕೆ ಸಂಬಂಧಪಟ್ಟದ್ದು. ಇದುವರೆಗೆ ಗೃಹ ಸಾಲದ ಮೇಲಿನ ತೆರಿಗೆ ವಿನಾಯ್ತಿ ಒಂದೂವರೆ ಲಕ್ಷಕ್ಕೆ ಮಿತಿಗೊಂಡಿತ್ತು. ಈಗ ಅದನ್ನು ಎರಡು ಲಕ್ಷ ರೂಪಾಯಿಗೆ ಏರಿಸಲಾಗಿದೆ. ಅಂದರೆ ಇಲ್ಲೂ 50 ಸಾವಿರ ರೂಪಾಯಿ ಲಾಭ.
ಅಂದರೆ ಕೇಂದ್ರದ ಈ ಬಾರಿಯ ಬಜೆಟ್ ಒಟ್ಟಾರೆ ಒಂದೂವರೆ ಲಕ್ಷದಷ್ಟು ತೆರಿಗೆ ವಿನಾಯ್ತಿ ನೀಡಿ ಜನರಲ್ಲಿ ಹೊಸ ಆಸೆ ಚಿಗುರಿಸಿದೆ.

ಇದನ್ನು ಅರಿತು ಕೆಲವರಾದರೂ ಹೆಚ್ಚುವರಿ ಉಳಿತಾಯ ಮಾಡಲು ಮುಂದಾಗಬಹುದು. ಇನ್ನು ಕೆಲವರು ತಲೆ ಮೇಲೊಂದು ಸೂರು ಕಟ್ಟಿಕೊಳ್ಳಲು ಗೃಹಸಾಲಕ್ಕೆ ಮುಂದಾಗಬಹುದು. ಹುಬ್ಬಳ್ಳಿಯಂಥ ಪಟ್ಟಣದಲ್ಲಿ ನಿವೇಶನವಿದ್ದರೂ ಕನಿಷ್ಠ 15ರಿಂದ 20 ಲಕ್ಷ ರೂಪಾಯಿಯವರೆಗೆ ಗೃಹ ಸಾಲ ಮಾಡಬೇಕಾದೀತು. ಒಟ್ಟಾರೆ ಗೃಹಸಾಲಕ್ಕೆ ಹೋಲಿಸಿದರೆ ಈ ವಿನಾಯ್ತಿ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನಿಸಿದರೂ, ಅಷ್ಟಾದರೂ ಸಿಕ್ಕಿದೆಯಲ್ಲ ಎಂಬ ನೆಮ್ಮದಿ ಮೂಡಬಹುದು. ಇವೆರಡಕ್ಕೆ ಮುಂದಾಗದಿದ್ದರೂ ಕನಿಷ್ಠ ಪಕ್ಷ ಸ್ಟ್ಯಾಂಡರ್ಡ್ ಡಿಡಕ್ಷನ್ ಲಿಮಿಟ್ ಲಾಭವಾದರೂ ಎಲ್ಲ ನೌಕರ ವರ್ಗಕ್ಕೂ ಸಿಕ್ಕೇ ಸಿಗುತ್ತದೆ. ಅಂದರೆ ಅಷ್ಟರ ಮಟ್ಟಿಗೆ ಅಚ್ಛೇ ದಿನ್ ಬಂದಂತೆ ಎಂದು ಮನಸ್ಸು ಹೇಳಿತು.

ಈ ಹಿಂದಿನ ಬಜೆಟ್‌ಗಳಲ್ಲಿ ಕೇವಲ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಏರಿಸಲಾಗುತ್ತಿತ್ತು. ಉಳಿದ ಎರಡು ಅಂಶಗಳು ಅಂದರೆ ಉಳಿತಾಯದ ಮಿತಿಯ ಮೇಲಿನ ತೆರಿಗೆ ವಿನಾಯ್ತಿ ಮತ್ತು ಗೃಹ ಸಾಲದ ಮೇಲಿನ ತೆರಿಗೆ ವಿನಾಯ್ತಿಯ ಬಗ್ಗೆ ಹಿಂದಿನ ಹಣಕಾಸು ಸಚಿವರು ಚಿಂತಿಸಿದ್ದಿಲ್ಲ. ಇದೂ ಅಚ್ಛೇ ದಿನ್‌ ಬಂದ ಲಕ್ಷಣವೇ ಅಲ್ಲವೇ ಎಂದು ಮನಸ್ಸು ಹೇಳಿತು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.