ADVERTISEMENT

ಅನಿರೀಕ್ಷಿತ ಹಣಕಾಸು ಸ್ಥಿತಿ ಎದುರಿಸಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2016, 19:30 IST
Last Updated 8 ನವೆಂಬರ್ 2016, 19:30 IST
ಅನಿರೀಕ್ಷಿತ ಹಣಕಾಸು ಸ್ಥಿತಿ ಎದುರಿಸಲು ಸಿದ್ಧತೆ
ಅನಿರೀಕ್ಷಿತ ಹಣಕಾಸು ಸ್ಥಿತಿ ಎದುರಿಸಲು ಸಿದ್ಧತೆ   

ಸುರಕ್ಷಿತವಾದ ಹಣಕಾಸು ಭವಿಷ್ಯದ ಬಗ್ಗೆಯೇ ಪ್ರತಿಯೊಬ್ಬರು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅದಕ್ಕಾಗಿ ಅವರು  ಕಷ್ಟಪಟ್ಟು ಕೆಲಸವನ್ನೂ ಮಾಡುತ್ತಾರೆ, ಯೋಜನೆ ರೂಪಿಸುತ್ತಾರೆ ಹಾಗೂ ಗುರಿ ತಲುಪಲು ಹಣ ಉಳಿಸುತ್ತ ಬಂದಿರುತ್ತಾರೆ. ಕೆಲವು ಅನಿರೀಕ್ಷಿತ ವೆಚ್ಚಗಳನ್ನು  ಸರಿದೂಗಿಸಿಕೊಳ್ಳಲು ಕೆಲಮಟ್ಟಿಗೆ ಸಿದ್ಧತೆ ಮಾಡಿಕೊಂಡಿರಬಹುದು.   ಮುಂಚಿತವಾಗಿಯೂ ಅಷ್ಟಿಷ್ಟು ಹಣ ಉಳಿಸಿರಬಹುದು. ಆದರೆ, ಕೆಲವು ವೆಚ್ಚಗಳನ್ನು ಊಹಿಸಿಕೊಳ್ಳಲು ಸಾಧ್ಯವೇ ಇರುವುದಿಲ್ಲ.

ಹೊಸ ಕನ್ನಡಕ, ಹೊಸ ಮೊಬೈಲ್, ಕೊನೆ ಕ್ಷಣದಲ್ಲಿ ಸಿದ್ಧವಾದ ಪ್ರವಾಸ ಇಲ್ಲವೇ ದಿಢೀರನೇ ಎದುರಾಗುವ ವೈದ್ಯಕೀಯ ವೆಚ್ಚ ಇವುಗಳ ಬಗ್ಗೆ ಮುಂಚಿತವಾಗಿ ಯೋಜನೆ ಮಾಡಿಕೊಂಡಿರಲು ಸಾಧ್ಯವಿಲ್ಲ. ಆದರೆ ಅವುಗಳಿಗೆ ಹಣ  ಬೇಕೇ ಬೇಕು.  

ಹೀಗೆ ಅನಿರೀಕ್ಷಿತವಾಗಿ ಎದುರಾಗುವ ಕೆಲವು ವೆಚ್ಚಗಳು ಈ ಕೆಳಗಿನಂತಿವೆ.
1. ವೈದ್ಯಕೀಯ ವೆಚ್ಚ

ಯಾರಾದರೂ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದನ್ನು  ನಿರ್ಲಕ್ಷ್ಯ ಮಾಡಬಹುದು ಇಲ್ಲವೇ ಮುಂದಕ್ಕೆ ಹಾಕಬಹುದು. ‘ಸದ್ಯಕ್ಕೆ ನನಗೆ ಅದರ ಅಗತ್ಯವಿಲ್ಲ’ ಎಂಬ ಸಬೂಬನ್ನು   ನೀಡಬಹುದು. ‘ನಾನು ಆರೋಗ್ಯ ವಾಗಿದ್ದೀನಿ. ಆದ್ದರಿಂದ ಆರೋಗ್ಯ ವಿಮೆ ಏಕೆ’ ಎಂದೂ ಅನೇಕರು ಅಭಿಪ್ರಾಯಪಡುತ್ತಾರೆ. ಆದರೆ, ಯಾವುದೇ ಅಪಘಾತ ಇಲ್ಲವೇ ಅನಿರೀಕ್ಷಿತವಾಗಿ ಎದುರಾಗುವ ಸಂದರ್ಭಗಳನ್ನು ಮುಂದೂಡಲು ಸಾಧ್ಯವೇ ಇಲ್ಲ.

ಇವುಗಳು ಜೇಬಿಗೆ ಭಾರವಾಗುತ್ತವೆ. ಇದಕ್ಕೆ ಹಣ ವ್ಯಯಿಸಲೇ ಬೇಕು. ಇಂತಹ ಸಂದರ್ಭದಲ್ಲಿ ವೈದ್ಯಕೀಯ ವೆಚ್ಚ ಏರುತ್ತಲೇ ಇರುತ್ತದೆ. ಒಂದು ವೇಳೆ ಆರೋಗ್ಯ ವಿಮೆ ಇಲ್ಲದೇ ಹೋದರೆ ಸಾಲ ಮಾಡುವುದು ಅನಿವಾರ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು: ದಿಢೀರನೆ ಎದುರಾಗುವ ವೈದ್ಯಕೀಯ ವೆಚ್ಚ ಭರಿಸಲು ವೈದ್ಯಕೀಯ ವಿಮೆ ಮಾಡಿಸಿಕೊಂಡಿರಲೇ ಬೇಕು.

2. ಉದ್ಯೋಗದ ಅಭದ್ರತೆ
ನೀವು ಕೆಲಸ ಮಾಡುತ್ತಿರುವುದು ಯಾವುದೇ ಬಹುರಾಷ್ಟ್ರೀಯ ಕಂಪೆನಿಯೇ ಆಗಿರಲಿ, ಅಥವಾ ಭರವಸೆಯ ನವೋದ್ಯಮೇ ಆಗಿರಲಿ ಉದ್ಯೋಗ ಭದ್ರತೆ ಎಂಬುದು ಇಂದು ಗಗನ ಕುಸುಮವಾಗಿ ಬಿಟ್ಟಿದೆ. ನಿಮ್ಮ ಉದ್ಯೋಗ ಅಭದ್ರತೆಯಲ್ಲಿದೆ ಎಂದಾಗ  ಹಣಕಾಸು ದೃಷ್ಟಿಯಿಂದ ಕೆಲಸ ಕಳೆದುಕೊಳ್ಳು ವುದಕ್ಕಿಂತ ಮೊದಲೇ ಸಿದ್ಧತೆ ಮಾಡಿ ಕೊಳ್ಳಬೇಕು. ಇಲ್ಲದಿದ್ದರೆ  ಉಳಿಗಾಲವಿಲ್ಲ.

ಇಂತಹ ಸಂದರ್ಭದಲ್ಲಿ ಏನು ಮಾಡಬೇಕು: ನಮ್ಮ ಅತೀ ಅವಶ್ಯಕತೆಗಳಾದ ಆಹಾರ, ವಸತಿ  ಮತ್ತು ಇತರ ವ್ಯಯಿಸಬೇಕಾದ ಹಣದ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು.ಕಳೆದುಕೊಂಡ ಆದಾಯಕ್ಕೆ ಸರಿಯಾಗಿ  ಕೌಟುಂಬಿಕ ಬಜೆಟ್‌್ ಅನ್ನು ನಿಗದಿಪಡಿಸಬೇಕು.  ಉಳಿದ ಹಣವನ್ನು ತುರ್ತು ನಿಧಿಯಲ್ಲಿಡಿ.

3. ಹೂಡಿಕೆ ಬಗ್ಗೆ ನಿರಾಸಕ್ತಿ
ಹಲವು ಸಂದರ್ಭದಲ್ಲಿ ನಾವು ಹಣ ಹೂಡಿಕೆಯ ಬಗ್ಗೆಯೂ ಸಾಕಷ್ಟು  ನಿರಾಸಕ್ತಿ ತಾಳಿರುತ್ತೇವೆ. ಕೆಲವು ವೇಳೆ ಲಾಭವಾಗುವ ಹೂಡಿಕೆಗಳನ್ನು ಮಾತ್ರ ಮಾಡಲು ಆಸಕ್ತಿ ತೋರಿಸುತ್ತೇವೆ.

ಭವಿಷ್ಯದಲ್ಲಿ ಏನು ಆಗಲಿದೆ ಎಂಬ ಬಗ್ಗೆ ನಾವು ಈಗಿನದಕ್ಕಿಂತ ಹೆಚ್ಚು ಊಹಿಸುತ್ತೇವೆ. ಉದಾಹರಣೆಗೆ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದರೆ ಲಾಭವಾಗುತ್ತದೆ ಎಂದೇ ಪ್ರತಿಯೊಬ್ಬರೂ  ಭಾವಿಸುತ್ತಾರೆ. ಆದರೆ, ಆಗುವುದೇ ಬೇರೆ. ಅಚಾನಕ್‌ ಆದ ಬೆಳವಣಿಗೆಯೊಂದು ಭವಿಷ್ಯದ ಯೋಜನೆಗಳನ್ನೇ ಬುಡಮೇಲು ಮಾಡುತ್ತದೆ.

ಇದಕ್ಕೇನು ಮಾಡಬೇಕು: ಹೆಚ್ಚು ದಕ್ಷತೆಯಿಂದ ಕೂಡಿರುವ ಹಣಕಾಸು ಯೋಜನೆಗಳನ್ನು ಮಾಡಬೇಕು. ಗುರಿ ಸಾಧಿಸುವ ಮತ್ತು ಲಾಭದಾಯಕ ಹೂಡಿಕೆ ತೀರ್ಮಾನಗಳನ್ನು ಕೈಗೊಳ್ಳಬೇಕು.

4. ಕೌಟುಂಬಿಕ ಜವಾಬ್ದಾರಿಗಳು
ಪ್ರತಿಯೊಬ್ಬರಿಗೂ ಕುಟುಂಬದ ಜವಾಬ್ದಾರಿಗಳು ಇದ್ದೇ ಇರುತ್ತವೆ. ಮಕ್ಕಳ ವಿದ್ಯಾಭ್ಯಾಸ ಅಥವಾ ಪೋಷಕರಿಗೆ ನೆರವಾಗಲು ಹಣಕಾಸಿನ ಬೆಂಬಲ ಇರಲೇಬೇಕು. ಆಗೆಲ್ಲ ಸೂಕ್ತ ಹಣಕಾಸಿನ ಮೂಲಗಳು ಇರಲೇಬೇಕು.

ಇಂತಹ ಸಂದರ್ಭದಲ್ಲಿ... ಹಣಕಾಸಿನ ಭದ್ರತೆಗಾಗಿ ಹೂಡಿಕೆ ಮತ್ತು ಉಳಿತಾಯ ಯೋಜನೆಗಳನ್ನು ರೂಪಿಸಬೇಕು. ಜೀವ ವಿಮೆ,   ನಿವೃತ್ತಿ ಉಳಿತಾಯದಿಂದ ಕುಟುಂಬದ ಅವಶ್ಯಕತೆಗಳಿಗೆ ಹಣ ಹೊಂದಿಸಬಹುದು.

5. ಪ್ರಾಕೃತಿಕ ವಿಪತ್ತುಗಳು
ಯಾವುದೇ ಸಂದರ್ಭದಲ್ಲಿ ಏನೇನೊ ಕಾರಣಗಳಿಗೆ ಮುಷ್ಕರಗಳು ನಡೆದಾಗ ಘಟಿಸುವ ಘಟನೆಗಳು ನಮ್ಮ ನಿಯಂತ್ರಣದಲ್ಲೇ ಇರುವುದಿಲ್ಲ. ನೈಸರ್ಗಿಕ ಪ್ರಕೋಪ ಸಂದರ್ಭಗಳಲ್ಲಿ ಮನೆಗೆ ಹಾನಿಯಾಗಬಹುದು, ಮನೆಯ ವಸ್ತುಗಳು ನಾಶವಾಗಬಹುದು. ಇವುಗಳ ಜತೆಗೆ ವೈದ್ಯಕೀಯ ತುರ್ತು ಪರಿಸ್ಥಿತಿ ಉಂಟಾದರಂತೂ  ಕಿಸೆಗೆ ಭಾರ ಹೆಚ್ಚುತ್ತದೆ. ಇದು  ಉದ್ಯೋಗದ ಮೇಲೂ ಪರಿಣಾಮ ಬೀರುತ್ತದೆ.

ಇಂತಹ ಸಂದರ್ಭದಲ್ಲಿ ಏನು ಮಾಡಬೇಕು: ನಿಮ್ಮ ನೆರೆಹೊರೆಯವರ ಬಗ್ಗೆ ತಲೆಕೆಡಿಸಿಕೊಳ್ಳದೇ ಪ್ರಾಕೃತಿಕ ವಿಪತ್ತಿ ನಿಂದ ರಕ್ಷಣೆ ಪಡೆದುಕೊಳ್ಳಲು ವಾಸದ ಮನೆಗೂ ವಿಮೆ ಮಾಡಿಸಿರಬೇಕು. ಇದರಿಂದ ಮನೆ ಅಲ್ಲದೆ ಮನೆಯ ವಸ್ತುಗಳಿಗೂ ರಕ್ಷಣೆ ದೊರೆಯುತ್ತದೆ.

ಮನೆಯ ರಕ್ಷಣೆಗಾಗಿ ಉತ್ತಮ ರಕ್ಷಣಾ ಪಾಲಿಸಿ ಖರೀದಿಸಲು ಸಮಯ ಹೊಂದಿಸಿದಕೊಂಡು  ಪ್ರಯತ್ನಿಸಿದರೆ ಖಂಡಿತವಾಗಿಯೂ ಲಾಭವಿದೆ. ಹೆಚ್ಚುವರಿ ಆರೋಗ್ಯ ವಿಮೆ ಇದ್ದರೆ ವಿಪತ್ತಿನ ಸಂದರ್ಭದಲ್ಲಿಯೂ ಅದು ನೆರವಿಗೆ ಬರುತ್ತದೆ.

ಇಷ್ಟೆಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ಕೆಲವು ಸಂದರ್ಭಗಳು ನಿಮ್ಮ ನಿಯಂತ್ರಣದಲ್ಲಿ ಇಲ್ಲದೇ ಹೋಗಬಹುದು. ಇದರಿಂದ ಅನಿರೀಕ್ಷಿತವಾಗಿ ಹಣ ಭರಿಸಬೇಕು. ಆದರೂ ಉಳಿತಾಯ, ಹೂಡಿಕೆ, ಜೀವನದ ಭದ್ರತೆ ಬಗ್ಗೆ ಸ್ವಲ್ಪ ಆಲೋಚನೆ ಮಾಡಿ ಅಷ್ಟಿಷ್ಟು ಹಣ ಉಳಿತಾಯ ಮಾಡಿದರೆ ಒಳ್ಳೆಯದು.
(  ಸ್ಕ್ರಿಪ್‌ಬಾಕ್ಸ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.