ADVERTISEMENT

ಅರವಿಂದ ಸುಬ್ರಮಣಿಯನ್‌ ಸೇವೆ ವಿಸ್ತರಣೆ

ಪಿಟಿಐ
Published 23 ಸೆಪ್ಟೆಂಬರ್ 2017, 19:30 IST
Last Updated 23 ಸೆಪ್ಟೆಂಬರ್ 2017, 19:30 IST
ಅರವಿಂದ ಸುಬ್ರಮಣಿಯನ್‌
ಅರವಿಂದ ಸುಬ್ರಮಣಿಯನ್‌   

ನವದೆಹಲಿ: ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರ ಸೇವಾ ಅವಧಿಯನ್ನು ಕೇಂದ್ರ ಸರ್ಕಾರ ಒಂದು ವರ್ಷದವರೆಗೆ ವಿಸ್ತರಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

2014ರ ಅಕ್ಟೋಬರ್‌ನಲ್ಲಿ ಸುಬ್ರಮಣಿಯನ್‌ ಅವರನ್ನು ಮೂರು ವರ್ಷಗಳ ಅವಧಿಗೆ ಸಿಇಎ ಆಗಿ ನೇಮಕ ಮಾಡಲಾಗಿತ್ತು. 2017ರ ಅಕ್ಟೋಬರ್‌ 16ಕ್ಕೆ ಅವರ ಸೇವಾ ಅವಧಿ ಮುಕ್ತಾಯವಾಗಲಿದೆ. ಆದರೆ ಸರ್ಕಾರ ಒಂದು ವರ್ಷ ವಿಸ್ತರಣೆ ನೀಡಿರುವುದರಿಂದ 2018ರ ಅಕ್ಟೋಬರ್‌ವರೆಗೂ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ.

‘ದೇಶದ ಅರ್ಥ ವ್ಯವಸ್ಥೆಗೆ ಎದುರಾಗಿರುವ ಸವಾಲುಗಳನ್ನು ಎದುರಿಸಲು ಹಲವಾರು ಮಾರ್ಗೊಪಾಯಗಳನ್ನು ಅನುಸರಿಸುವ ಅಗತ್ಯವಿದೆ’ ಎಂದು ಅರವಿಂದ ಸುಬ್ರಮಣಿಯನ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಜಿಡಿಪಿ ಪ್ರಗತಿ ಇಳಿಮುಖವಾಗಿದೆ. ಬಂಡವಾಳ ಹೂಡಿಕೆ ಹೆಚ್ಚಾಗುತ್ತಿಲ್ಲ. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ನಾವು ಹಲವು ಮಾರ್ಗಗಳನ್ನು ಅನುಸರಿಸಬೇಕಿದೆ. ಆ ಮೂಲಕ ವಿನಿಮಯ ದರ, ಸಾರ್ವಜನಿಕ ಹೂಡಿಕೆ ಮತ್ತು ಆರ್ಥಿಕ ಸ್ಥಿರತೆ ಸಾಧಿಸಬೇಕಿದೆ’ ಎಂದು ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಸೂಲಿಯಾಗದ ಸಾಲ (ಎನ್‌ಪಿಎ) ಹೆಚ್ಚುತ್ತಿರುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ಪ್ರವರ್ಧಮಾನಕ್ಕೆ ಬರುತ್ತಿರುವ ಎಲ್ಲಾ ದೇಶಗಳು ಸಹ ಕರೆನ್ಸಿ ಮೌಲ್ಯ ಏರಿಕೆ ಸಮಸ್ಯೆ ಎದುರಿಸುತ್ತಿವೆ. ಬಂಡವಾಳ ಒಳಹರಿವು ಹೆಚ್ಚಾದಂತೆಲ್ಲಾ ವಿನಿಮಯ ದರದ ಮೇಲಿನ ಒತ್ತಡವೂ ಹೆಚ್ಚುತ್ತಿದೆ.

‘ಜನವರಿ ಮತ್ತು ಏಪ್ರಿಲ್‌ ಅವಧಿಯಲ್ಲಿ ರೂಪಾಯಿ ಮೌಲ್ಯದಲ್ಲಿ ಭಾರಿ ಏರಿಕೆ ಕಂಡು ಬಂದಿತ್ತು. ಅದರಿಂದ ರಫ್ತು ಮತ್ತು ಆಮದು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಕಂಡುಬಂದಿದೆ. ಆರ್‌ಬಿಐ ಕಳೆದ ಮೂರು ತಿಂಗಳಿನಿಂದ ಕರೆನ್ಸಿ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಮಾಡಿ, ರೂಪಾಯಿ ಮೌಲ್ಯದಲ್ಲಿ ಸ್ಥಿರತೆ ಸಾಧಿಸುವ ಪ್ರಯತ್ನ ನಡೆಸುತ್ತಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.