ADVERTISEMENT

ಅರ್ಧದಷ್ಟು ಎಟಿಎಂ ಬಂದ್‌?

ವಿಶ್ವನಾಥ ಎಸ್.
Published 16 ಮೇ 2017, 19:30 IST
Last Updated 16 ಮೇ 2017, 19:30 IST
ಅರ್ಧದಷ್ಟು ಎಟಿಎಂ ಬಂದ್‌?
ಅರ್ಧದಷ್ಟು ಎಟಿಎಂ ಬಂದ್‌?   

ಬೆಂಗಳೂರು: ‘ಎಟಿಎಂಗಳ ನಿರ್ವಹಣಾ ವೆಚ್ಚ ಭರಿಸಲು ಆಗದೆ ಬ್ಯಾಂಕ್‌ಗಳು ಅರ್ಧದಷ್ಟು ಎಟಿಎಂಗಳನ್ನು ಮುಚ್ಚುವ ಬಗ್ಗೆ ಗಂಭೀರ ಚಿಂತನೆ ನಡೆಸಿವೆ.

‘ಬ್ಯಾಂಕ್‌ಗಳು ಪೈಪೋಟಿ ಮೇಲೆ ಎಟಿಎಂಗಳನ್ನು ಆರಂಭಿಸಿದ್ದರಿಂದ ಒಂದು ಬೀದಿಯಲ್ಲಿ ಕನಿಷ್ಠ ಐದರಿಂದ ಆರು ಎಟಿಎಂಗಳಿವೆ. ಹೀಗೆ ದೇಶದಾದ್ಯಂತ ಸದ್ಯ, 2.25 ಲಕ್ಷ ಎಟಿಎಂಗಳಿವೆ. ಇದರಲ್ಲಿ, ಈ ವರ್ಷಾಂತ್ಯದ ಒಳಗೆ ಅಂದಾಜು 1 ಲಕ್ಷದಿಂದ 1.20 ಲಕ್ಷ ಎಟಿಎಂಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಹಿರಿಯ  ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ, ಒಂದು ಎಟಿಎಂ ನಿರ್ವಹಣೆ ಮಾಡಲು ತಿಂಗಳಿಗೆ ₹60 ಸಾವಿರ ವೆಚ್ಚವಾಗುತ್ತಿದೆ. ಇದನ್ನು ಸರಿದೂಗಿಸಲು ಆ ಎಟಿಎಂನಲ್ಲಿ ಒಂದು ದಿನಕ್ಕೆ ಕನಿಷ್ಠ 100 ಬಾರಿ ಹಣ ಪಡೆಯಬೇಕು.

ADVERTISEMENT

ಬೆಂಗಳೂರು ನಗರದಲ್ಲಿ ಬ್ಯಾಂಕ್‌ವೊಂದರ ಕನಿಷ್ಠ 400  ರಿಂದ 500 ಎಟಿಎಂಗಳನ್ನು ಮುಚ್ಚಿದರೆ ಅದರಿಂದ ಬ್ಯಾಂಕ್‌ಗೆ ಪ್ರತಿ ತಿಂಗಳು ಅಂದಾಜು ₹ 3 ಕೋಟಿ ಉಳಿತಾಯವಾಗಲಿದೆ.  ಹೀಗೆ 1.20 ಲಕ್ಷ ಎಟಿಎಂಗಳನ್ನು ಮುಚ್ಚಿದರೆ ಅದರಿಂದ ಬ್ಯಾಂಕಿಂಗ್‌ ವಹಿವಾಟಿನಲ್ಲಿ  ಪ್ರತಿ ತಿಂಗಳೂ ₹ 725 ಕೋಟಿಗಳಷ್ಟು ಉಳಿತಾಯವಾಗುವ ನಿರೀಕ್ಷೆ ಇದೆ.

ಎಟಿಎಂ ಮೇಲ್ದರ್ಜೆಗೆ: ದೇಶದಲ್ಲಿರುವ ಎಟಿಎಂಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಸಾಫ್ಟ್‌ವೇರ್‌ ಮೇಲ್ದರ್ಜೆಗೆ (ಅಪ್‌ಗ್ರೇಡ್‌) ಏರಿಸುವ ಕಾರ್ಯ ಆರಂಭವಾಗಿದೆ. ಈ ಕಾರ್ಯ ಪೂರ್ಣಗೊಳ್ಳಲು ಇನ್ನೂ ಎರಡು ದಿನಗಳು ಬೇಕಾಗಲಿದೆ ಎಂದು ಬ್ಯಾಂಕಿನ ಉನ್ನತ ಮೂಲಗಳು ತಿಳಿಸಿವೆ.

‘ಶೇ 95 ರಷ್ಟು ಎಟಿಎಂಗಳು ವಿಂಡೋಸ್‌ ಎಕ್ಸ್‌ಪಿ ಸಾಫ್ಟ್‌ವೇರ್‌ನಿಂದ ನಡೆಯುತ್ತಿವೆ. ಈ ಸಾಫ್ಟ್‌ವೇರ್‌ ಬಹಳ ಹಳೆಯದಾಗಿದ್ದು, ಸ್ವತಃ ಮೈಕ್ರೊಸಾಫ್ಟ್‌ ಕಂಪೆನಿಯೇ ಅದನ್ನು ಬಳಸದಂತೆ ಸೂಚನೆ ನೀಡಿತ್ತು. ಅದನ್ನು ನಿರ್ಲಕ್ಷ್ಯ ಮಾಡಿರುವುದರಿಂದ ಈಗ ಸಮಸ್ಯೆ ಎದುರಾಗಿದೆ’ ಎಂದು ವಿವರಿಸಿದರು.

‘ಸಾಫ್ಟ್‌ವೇರ್ ಮೇಲ್ದರ್ಜೆಗೇರಿಸುವ ಕೆಲಸ ಆಗಬೇಕು. ಒಂದು ಎಟಿಎಂನಲ್ಲಿ ಯಾವುದೇ ಬ್ಯಾಂಕ್‌ ಖಾತೆಯ ಹಣವನ್ನಾದರೂ ಪಡೆಯಬಹುದು.  ಸರ್ಕಾರಿ ಸ್ವಾಮ್ಯದ ಮತ್ತು ಹೆಚ್ಚು ವಹಿವಾಟು ನಡೆಸುವ ಬ್ಯಾಂಕ್‌ಗಳ ಎಟಿಎಂಗಳು ಹಲವಾರು ಬ್ಯಾಂಕ್‌ಗಳ ಸರ್ವರ್‌  ಸಂಪರ್ಕದಲ್ಲಿರುತ್ತವೆ.    ಹೀಗೆ ಒಂದಕ್ಕಿಂತ ಹೆಚ್ಚು ಸರ್ವರ್‌ಗಳ ಜತೆ ಸಂಪರ್ಕದಲ್ಲಿರುವ ಎಟಿಎಂಗಳಿಗೆ ಆಯಾ ಬ್ಯಾಂಕ್‌ಗಳು ಪ್ರತ್ಯೇಕವಾಗಿ ಸಾಫ್ಟ್‌ವೇರ್ ಮೇಲ್ದರ್ಜೆಗೇರಿಸುವ ಕೆಲಸ ಮಾಡಬೇಕು ಎನ್ನುವ ಸೂಚನೆ ಬಂದಿದೆ.

ಒಂದು ಎಟಿಎಂ ಸಾಫ್ಟ್‌ವೇರ್ ಮೇಲ್ದರ್ಜೆಗೇರಿಸಲು ಮೂರು ಗಂಟೆ ಬೇಕಾಗುತ್ತದೆ. ಹಲವಾರು ಬ್ಯಾಂಕ್‌ಗಳು ಈ ಕಾರ್ಯದಲ್ಲಿ ತೊಡಗಿರುವುದರಿಂದ  ಇನ್ನೆರಡು ದಿನಗಳವರೆಗೆ ಎಟಿಎಂಗಳಿಂದ ಹಣ ಪಡೆಯುವುದಕ್ಕೆ ಅಡಚಣೆ ಎದುರಾಗಲಿದೆ’  ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ರಾಷ್ಟ್ರೀಕೃತ ಬ್ಯಾಂಕ್‌ನ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಗ್ರಾಹಕರಿಗೆ ಒಂದೆರಡು ದಿನ ತೊಂದರೆ ಆಗುತ್ತದೆ ಎಂದು ಹೇಳುವುದೇ ತಪ್ಪು. ಏಕೆಂದರೆ ನೋಟು ರದ್ದತಿ ಆದಾಗ  ಎದುರಾಗಿದ್ದ ನಗದು ಕೊರತೆ ಈಗಲೂ ಮುಂದುವರೆದಿದೆ. ಬೆಂಗಳೂರು ನಗರದಲ್ಲಿಯೂ, ಪ್ರಮುಖ ಬ್ಯಾಂಕ್‌ಗಳಿಗೆ ಸೇರಿದ ಎಟಿಎಂಗಳಲ್ಲಿ ಅರ್ಧಕ್ಕಿಂತಲೂ ಕಡಿಮೆ ಎಟಿಎಂಗಳಲ್ಲಿ ಮಾತ್ರ  ನಗದು ಸಿಗುತ್ತಿದೆ’ ಎಂದರು.

ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿ ಮಂಗಳವಾರ ಗ್ರಾಹಕರೊಬ್ಬರು ಐದು ಎಟಿಎಂಗಳಿಗೆ ಅಲೆದರೂ  ನಗದು ಸಿಗಲಿಲ್ಲ. ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ ವಿಚಾರಿಸಿದಾಗ, ‘ಎಟಿಎಂನಲ್ಲಿ ಹಣ ಇದೆ. ಆದರೆ ಸಾಫ್ಟ್‌ವೇರ್‌ ಮೇಲ್ದರ್ಜೆಗೆ ಏರಿಸುವ ಉದ್ದೇಶದಿಂದ ಬ್ಯಾಂಕಿನವರೇ ವಹಿವಾಟು ಸ್ಥಗಿತಗೊಳಿಸಿದ್ದಾರೆ’ ಎಂದು ಕಾವಲುಗಾರ ತಿಳಿಸಿದ್ದನ್ನು  ಸ್ಥಳೀಯ ನಿವಾಸಿಯೊಬ್ಬರು ತಮಗಾದ ಅನುಭವವನ್ನು ಪತ್ರಿಕೆ ಜತೆ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.