ADVERTISEMENT

ಆರ್‌ಬಿಐ ಬಡ್ಡಿ ದರ ಕಡಿತ?

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST
ಆರ್‌ಬಿಐ ಬಡ್ಡಿ ದರ ಕಡಿತ?
ಆರ್‌ಬಿಐ ಬಡ್ಡಿ ದರ ಕಡಿತ?   

ನವದೆಹಲಿ : ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಈ ಬಾರಿಯ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರಗಳನ್ನು ಮತ್ತೆ ಶೇ 0.25ರಷ್ಟು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ನೋಟು ರದ್ದತಿಯ ಪರಿಣಾಮ ತಗ್ಗಿಸುವ ಉದ್ದೇಶದಿಂದ ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರು ದರ ಕಡಿತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪ್ರಮುಖ ಬ್ಯಾಂಕ್‌ಗಳ ಮುಖ್ಯಸ್ಥರು ಅಂದಾಜಿಸಿದ್ದಾರೆ.

ನೋಟು ರದ್ದತಿ ನಂತರ ನಡೆಯುತ್ತಿರುವ ಮೊದಲ ಹಣಕಾಸು ನೀತಿ ಪರಾಮರ್ಶೆ ಇದಾಗಿದೆ. ಹಣಕಾಸು ನೀತಿ ಸಮಿತಿಯ ಶಿಫಾರಸು ಆಧರಿಸಿದ ಎರಡನೆ ಹಣಕಾಸು ನೀತಿ ಪರಾಮರ್ಶೆಯೂ ಇದಾಗಿದೆ. ಬ್ಯಾಂಕ್‌ಗಳ ಠೇವಣಿ ಸಂಗ್ರಹದಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿರುವುದೂ ಬಡ್ಡಿ ದರ ಕಡಿತಕ್ಕೆ ಕಾರಣವಾಗಬಹುದು.

ಪಟೇಲ್‌ ಅವರು ಅಧಿಕಾರವಹಿಸಿಕೊಂಡ ನಂತರ ಅಕ್ಟೋಬರ್‌ನಲ್ಲಿ ನಡೆಸಿದ್ದ ಹಣಕಾಸು ನೀತಿ ಪರಾಮರ್ಶೆಯಲ್ಲಿಯೂ ಶೇ 0.25ರಷ್ಟು (ಶೇ 6.25ಕ್ಕೆ) ಬಡ್ಡಿ ದರ ಕಡಿತ ಮಾಡಿದ್ದರು.

ಸಾಮಾನ್ಯವಾಗಿ ಮಂಗಳವಾರ ಹಣಕಾಸು ನೀತಿ ಪ್ರಕಟಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ವಾರದ ಮಧ್ಯಭಾಗದಲ್ಲಿ (ಬುಧವಾರ) ನಿಗದಿಯಾಗಿದೆ. ‘ಹಣದುಬ್ಬರ ಕಡಿಮೆ ಮಟ್ಟದಲ್ಲಿ ಇರುವುದರಿಂದ ಆರ್‌ಬಿಐ, ಶೇ 0.25ರಷ್ಟು ಬಡ್ಡಿ ದರ ಕಡಿತವಾಗಲಿದೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ’ ಎಂದು ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶರ್ಮಾ ಹೇಳಿದ್ದಾರೆ.

ಐಡಿಬಿಐ ಬ್ಯಾಂಕ್‌ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಆರ್‌. ಕೆ. ಬನ್ಸಲ್‌ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ನೋಟು ರದ್ದತಿಯ ಪ್ರಭಾವ ಕಂಡು ಬರಲಿರುವುದರಿಂದ ಮುಂಬರುವ ಎರಡು ತ್ರೈಮಾಸಿಕಗಳು ತುಂಬ ಮಹತ್ವದ್ದಾಗಿದೆ’ ಎನ್ನುವುದು ಅವರ ಅನಿಸಿಕೆಯಾಗಿದೆ.

ನಗದು ನಿರ್ವಹಣೆ ಉದ್ದೇಶಕ್ಕೆ ಆರ್‌ಬಿಐ ತಾತ್ಕಾಲಿಕ ನೆಲೆಯಲ್ಲಿ ನವೆಂಬರ್‌ 28ರಂದು ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್‌)  ಶೇ 100ರಷ್ಟು (ಶೇ 4ರಿಂದ ಶೇ 8ಕ್ಕೆ) ಹೆಚ್ಚಿಸಲು ಕೇಳಿಕೊಂಡಿತ್ತು.  ‘ಬ್ಯಾಂಕ್‌ಗಳಲ್ಲಿನ ಠೇವಣಿ ಹೆಚ್ಚಳದ ಕಾರಣಕ್ಕೆ ಕೈಗೊಂಡ ಸಿಆರ್‌ಆರ್‌ನ ತಾತ್ಕಾಲಿಕ ಏರಿಕೆ ನಿರ್ಧಾರವು ಚಿಂತೆಗೆ ಕಾರಣವಾಗಿಲ್ಲ.

ಆದರೆ, ಗರಿಷ್ಠ ಪ್ರಮಾಣದ ನಗದು ಮತ್ತು ಬಡ್ಡಿ ದರಗಳ ಮಧ್ಯೆ ಸಮತೋಲನ ಸಾಧಿಸಲು ಆರ್‌ಬಿಐ ಅಲ್ಪಾವಧಿ ಬಡ್ಡಿ ದರವನ್ನು  ಶೇ 0.25 ರಷ್ಟು ಇಳಿಸುವ ಅಗತ್ಯ ಇದೆ’ ಎಂದು  ಯೆಸ್‌ ಬ್ಯಾಂಕ್‌ ತಿಳಿಸಿದೆ.

ನೋಟು ರದ್ದತಿಯಿಂದಾಗಿ ಸರಕು ಮತ್ತು ಸೇವೆಗಳ ಬೇಡಿಕೆ ಕುಸಿದು ಹಣದುಬ್ಬರ ಪರಿಸ್ಥಿತಿ ಸುಧಾರಿಸಲಿದೆ. 2016–17ನೆ ಹಣಕಾಸು ವರ್ಷದಲ್ಲಿ ಇನ್ನೊಂದು ಸುತ್ತಿನ (ಶೇ 0.25 ರಿಂದ ಶೇ 0.50) ಬಡ್ಡಿ ದರ ಕಡಿತ ನಿರೀಕ್ಷಿಸಲಾಗುತ್ತಿದೆ ಎಂದು ಎಸ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ. ‘ಸಿಆರ್‌ಆರ್‌ ಹೆಚ್ಚಿಸಿದ್ದರೂ, ಬ್ಯಾಂಕ್‌ಗಳಲ್ಲಿ ₹ 1.5 ಲಕ್ಷ ಕೋಟಿಗೂ ಹೆಚ್ಚುವರಿ ಹಣ ಉಳಿಯಲಿದೆ’ ಎಂದೂ  ಬ್ಯಾಂಕಿಂಗ್‌ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.