ADVERTISEMENT

ಇಂದಿನಿಂದ ವಿಶ್ವ ಆರ್ಥಿಕ ವೇದಿಕೆ ಸಮಾವೇಶ

​ಪ್ರಜಾವಾಣಿ ವಾರ್ತೆ
Published 15 ಜನವರಿ 2017, 19:30 IST
Last Updated 15 ಜನವರಿ 2017, 19:30 IST
ಇಂದಿನಿಂದ ವಿಶ್ವ ಆರ್ಥಿಕ ವೇದಿಕೆ ಸಮಾವೇಶ
ಇಂದಿನಿಂದ ವಿಶ್ವ ಆರ್ಥಿಕ ವೇದಿಕೆ ಸಮಾವೇಶ   

ದಾವೋಸ್‌ : ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) 47ನೇಯ ಐದು ದಿನಗಳ ಸಮಾವೇಶವು ಸೋಮವಾರದಿಂದ ಇಲ್ಲಿ ನಡೆಯಲಿದೆ. ಸರ್ಕಾರಿ ಮುಖ್ಯಸ್ಥರು, ಉದ್ಯಮ ಪ್ರಮುಖರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಸ್ವಿಟ್ಜರ್ಲೆಂಡ್‌ನ  ಈ ವಿಹಾರಧಾಮದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

‘ಜಾಗತಿಕ ಆರ್ಥಿಕತೆ ಹಾಗೂ ತ್ವರಿತವಾಗಿ ಸ್ಪಂದಿಸುವ ಮತ್ತು ಹೊಣೆಗಾರಿಕೆಯ ನಾಯಕತ್ವ’  ಕುರಿತು  ಸಮಾವೇಶದಲ್ಲಿ ಸಂವಾದ ನಡೆಯಲಿದೆ. ಭಯೋತ್ಪಾದನೆ ವಿರುದ್ಧ ನಡೆಯುತ್ತಿರುವ ಸಮರವೂ ಪ್ರಮುಖವಾಗಿ ಚರ್ಚೆಗೆ ಬರಲಿದೆ.

ಬ್ರಿಟನ್‌ ಪ್ರಧಾನಿ ತೆರೆಸಾ ಮೇ,  ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌, ಬಾಂಗ್ಲಾದೇಶದ ಪ್ರಧಾನಿ ಶೇಖ್  ಹಸೀನಾ ಸೇರಿದಂತೆ ವಿವಿಧ ದೇಶಗಳ ಸರ್ಕಾರಿ  ಮುಖ್ಯಸ್ಥರು ಮತ್ತು ಭಾರತದ 100 ಕ್ಕೂ ಹೆಚ್ಚು  ಸಿಇಒಗಳು,  ಸಚಿವರು ಭಾಗವಹಿಸಲಿದ್ದಾರೆ.  ಕ್ಸಿ ಜಿನ್‌ಪಿಂಗ್‌ ಅವರು ಸಮಾವೇಶದಲ್ಲಿ ಭಾಗವಹಿಸಲಿರುವ ಚೀನಾದ ಮೊದಲ ಅಧ್ಯಕ್ಷರಾಗಿದ್ದಾರೆ. ಪ್ರತಿನಿಧಿಗಳಲ್ಲಿ ಶಿಕ್ಷಣ ತಜ್ಞರು, ಸ್ವಯಂ ಸೇವಾ ಸಂಘಟನೆಗಳ ಸದಸ್ಯರೂ ಇರಲಿದ್ದಾರೆ.

ಭಾರತದ ನಿಯೋಗ: ಕೇಂದ್ರ ಸಚಿವರಾದ  ನಿತಿನ್‌ ಗಡ್ಕರಿ, ನಿರ್ಮಲಾ ಸೀತಾರಾಮನ್‌, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ, ಕೈಗಾರಿಕಾ ನೀತಿ ಮತ್ತು  ಉತ್ತೇಜನಾ ಸಚಿವಾಲಯದ ಕಾರ್ಯದರ್ಶಿ ರಮೇಶ್‌ ಅಭಿಷೇಕ್‌, ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ನೇಮಕಗೊಂಡಿರುವ ಎನ್‌. ಚಂದ್ರಶೇಖರನ್‌  ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು  ಅವರು ಭಾರತದ ನಿಯೋಗದಲ್ಲಿ ಇರಲಿದ್ದಾರೆ.

ವಿಚಾರಗೋಷ್ಠಿಗಳಲ್ಲಿ ನೋಟುಗಳ ರದ್ದತಿ, ಅಮೆರಿಕದ ಅಧ್ಯಕ್ಷರಾಗಲಿರುವ ಡೊನಾಲ್ಡ್‌ ಟ್ರಂಪ್‌ ಅವರ ಅಧಿಕಾರಾವಧಿಯಲ್ಲಿ ಜಾಗತೀಕರಣಕ್ಕೆ ಹಿನ್ನಡೆ ಉಂಟಾಗಲಿರುವ ಸಾಧ್ಯತೆ ಮತ್ತಿತರ ವಿಷಯಗಳು ಪ್ರಮುಖವಾಗಿ ಚರ್ಚೆಗೆ ಬರಲಿವೆ. ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮತ್ತು ಪರಿಸರ ಸಂಬಂಧಿ ಗಂಡಾಂತರಗಳ ಹೆಚ್ಚಳವು ಮುಂದಿನ 10 ವರ್ಷಗಳಲ್ಲಿ ವಿಶ್ವವು ಎದುರಿಸಬೇಕಾದ ಪ್ರಮುಖ ಸಮಸ್ಯೆಗಳಾಗಿವೆ ಎಂದು ವಿಶ್ವ ಆರ್ಥಿಕ ವೇದಿಕೆ ಅಂದಾಜಿಸಿದೆ. ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ದಿನವೇ ಸಮಾವೇಶ ಕೊನೆಗೊಳ್ಳಲಿದೆ.

ಸಮಾವೇಶದ ಸಂದರ್ಭದಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ವಿಶೇಷ ಅಧಿವೇಶನ ನಡೆಯಲಿದೆ. ಭ್ರಷ್ಟಾಚಾರ ವಿರೋಧಿ ಕ್ರಮ, ತೆರಿಗೆ ಸುಧಾರಣೆ ಮತ್ತು ಆರ್ಥಿಕ ಸೇರ್ಪಡೆಯ ಪರಿಣಾಮಗಳ ಕುರಿತು ಸಂವಾದ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.