ADVERTISEMENT

ಇದೇ 20ರಿಂದ ‘ಜಿಎಸ್‌ಟಿಆರ್‌–3ಬಿ’ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 19:30 IST
Last Updated 18 ನವೆಂಬರ್ 2017, 19:30 IST
ಇದೇ 20ರಿಂದ ‘ಜಿಎಸ್‌ಟಿಆರ್‌–3ಬಿ’ ಪರಿಷ್ಕರಣೆ
ಇದೇ 20ರಿಂದ ‘ಜಿಎಸ್‌ಟಿಆರ್‌–3ಬಿ’ ಪರಿಷ್ಕರಣೆ   

ಬೆಂಗಳೂರು: ‘ನವೆಂಬರ್‌ 20 ರಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಜಿಎಸ್‌ಟಿಆರ್‌–3ಬಿ ರಿಟರ್ನ್‌ ಅರ್ಜಿಯಲ್ಲಿ ಬದಲಾವಣೆ ಅಥವಾ ಪರಿಷ್ಕರಣೆ ಮಾಡಲು ಜಿಎಸ್‌ಟಿಎನ್‌ ಜಾಲತಾಣದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಜಿಎಸ್‌ಟಿಎನ್‌ ಸಚಿವರ ತಂಡದ ಅಧ್ಯಕ್ಷ, ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್ ಮೋದಿ ತಿಳಿಸಿದರು.

‘ಜುಲೈ ತಿಂಗಳಿನಲ್ಲಿ ಮಾತ್ರ ಜಿಎಸ್‌ಟಿಆರ್‌–3ಬಿ ಅರ್ಜಿಯಲ್ಲಿ ಬದಲಾವಣೆ ಮಾಡಲು ಅವಕಾಶ ನೀಡಲಾಗಿತ್ತು. ಆ ಬಳಿಕ ಬದಲಾವಣೆಗೆ ಅವಕಾಶ ನೀಡಿರಲಿಲ್ಲ. ಇದರಿಂದ 2 ಲಕ್ಷಕ್ಕೂ ಅಧಿಕ ತೆರಿಗೆದಾರರು ಸಲ್ಲಿಸಿರುವ ‘ಜಿಎಸ್‌ಟಿಆರ್‌–3ಬಿ’ನಲ್ಲಿ ಇರುವ ತಪ್ಪುಗಳನ್ನು ಸರಿಪಡಿಸಲು ಆಗಿಲ್ಲ’ ಎಂದು ಅವರು ವಿವರಿಸಿದರು.

ಜಿಎಸ್‌ಟಿಆರ್‌–2ಬಿ ಸಮಸ್ಯೆ:   ‘ಜಿಎಸ್‌ಟಿಆರ್‌–2 ಸಲ್ಲಿಕೆಗೆ  ಹೆಚ್ಚು ಸಮಸ್ಯೆಯಾಗುತ್ತಿದೆ. ಜಿಎಸ್‌ಟಿಆರ್‌–1ನಲ್ಲಿ ಸರಕುಗಳ ಮಾರಾಟಕ್ಕೆ ಸಂಬಂಧಿಸಿದ ಇನ್‌ವೈಸ್‌ ಅಪ್ಲೋಡ್‌ ಆಗಿದೆ. ಅದನ್ನು ಜಿಎಸ್‌ಟಿಆರ್‌–2ನಲ್ಲಿ ಖರೀದಿಗೆ ಸಂಬಂಧಿಸಿದ ಇನ್‌ವೈಸ್‌ ಜತೆ ಹೋಲಿಕೆ ಮಾಡಬೇಕು. ಈ ಹಂತದಲ್ಲಿ ಸಮಸ್ಯೆ ಎದುರಾಗಿದೆ. ಇದನ್ನು ಬಗೆಹರಿಸಲು ಹೆಚ್ಚಿನ ಸಮಯ ಹಿಡಿಯುತ್ತಿದೆ ಎಂದು ಮೋದಿ ಹೇಳಿದರು.

ADVERTISEMENT

‘ಕಳೆದ ಒಂದು ತಿಂಗಳಿನಲ್ಲಿ ಜಿಎಸ್‌ಟಿಎನ್‌ ಸಮಸ್ಯೆ ಬಗೆಹರಿಸುವ ಸಲುವಾಗಿ ಇನ್ಫೊಸಿಸ್ ಸಂಸ್ಥೆ 100 ಎಂಜಿನಿಯರ್‌ಗಳನ್ನು ನೇಮಿಸಿ
ಕೊಂಡಿದೆ. ಇದರಿಂದ ಒಟ್ಟು ಎಂಜಿನಿಯರ್‌ಗಳ ಸಂಖ್ಯೆ 621ಕ್ಕೆ ಏರಿಕೆಯಾಗಿದೆ’ ಎಂದು ಮಾಹಿತಿ ನೀಡಿದರು.

₹95,141 ಕೋಟಿ ಸಂಗ್ರಹ

ಜಿಎಸ್‌ಟಿಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ₹ 95,131 ಕೋಟಿ ವರಮಾನ ಸಂಗ್ರಹವಾಗಿದೆ ಎಂದು ಸಚಿವರ ತಂಡ ಮಾಹಿತಿ ನೀಡಿದೆ.

ಸೆಪ್ಟೆಂಬರ್‌ನಲ್ಲಿ ₹ 93,141 ಕೋಟಿ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ತೆರಿಗೆ ಸಂಗ್ರದಲ್ಲಿ ಏರಿಕೆ ಕಂಡುಬರುತ್ತಿದೆ ಎಂದು ತಿಳಿಸಿದೆ.

ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗುತ್ತಿದ್ದ ವರಮಾನ ನಷ್ಟದ ಪ್ರಮಾಣ ಆಗಸ್ಟ್‌ನಲ್ಲಿ ಶೇ 28.4 ರಷ್ಟಿತ್ತು. ಇದು ಅಕ್ಟೋಬರ್‌ನಲ್ಲಿ ಶೇ 17.6ಕ್ಕೆ ಇಳಿಕೆ ಕಂಡಿದೆ. ವ್ಯವಸ್ಥೆಯು ನಿಧಾನವಾಗಿ ಸ್ಥಿರತೆ ಸಾಧಿಸುತ್ತಿದೆ ಎನ್ನುವುದನ್ನು ಇದು ಸೂಚಿಸುತ್ತಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.