ADVERTISEMENT

ಇನ್ಫೊಸಿಸ್‌: 10ನೇ ವಿಕೆಟ್‌ ಪತನ

ಸುದ್ದಿ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2014, 19:30 IST
Last Updated 1 ಜೂನ್ 2014, 19:30 IST
ಇನ್ಫೊಸಿಸ್‌: 10ನೇ ವಿಕೆಟ್‌ ಪತನ
ಇನ್ಫೊಸಿಸ್‌: 10ನೇ ವಿಕೆಟ್‌ ಪತನ   

ದೇಶದ 2ನೆ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆಯಾಗಿರುವ ಬೆಂಗ­ಳೂರು ಮೂಲದ ಇನ್ಫೊಸಿಸ್‌ನ ಅಧ್ಯಕ್ಷ   ಬಿ. ಜಿ. ಶ್ರೀನಿವಾಸ್ ಅವರು ಸಂಸ್ಥೆ ತೊರೆಯುವ ಮೂಲಕ ಹತ್ತನೇ ವಿಕೆಟ್‌ ಪತನವಾಗಿದೆ.

ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾಗಿ­ರುವ ಎನ್‌. ಆರ್‌. ನಾರಾ­ಯಣ ಮೂರ್ತಿ ಅವರು, 2013ರ ಜೂನ್‌ನಲ್ಲಿ ಸಂಸ್ಥೆಯ ಅಧ್ಯಕ್ಷ­ರಾಗಿ ಮರು ನೇಮಕಗೊಂಡ ನಂತರ, ಸಂಸ್ಥೆ ತೊರೆದ ಉನ್ನತ ಮಟ್ಟದ ಅಧಿಕಾರಿಗಳ ಸಂಖ್ಯೆ 10ಕ್ಕೆ ಏರಿದೆ.

ಇವರ ಪೈಕಿ ಅಶೋಕ್ ವೆಮೂರಿ, ವಿ. ಬಾಲಕೃಷ್ಣನ್ ಮತ್ತು ಬಿ. ಜಿ. ಶ್ರೀನಿವಾಸ್‌ ಅವರು ಸಂಸ್ಥೆಯ ಸಿಇಒ ಹುದ್ದೆಗೆ ಏರುವ ಎಲ್ಲ ಅರ್ಹತೆಗಳನ್ನು ಹೊಂದಿದ್ದರು. ಸಂಸ್ಥೆ ತೊರೆದ ಉನ್ನತ ಅಧಿಕಾ­ರಿಗಳೆಲ್ಲ ಸಾಫ್ಟ್‌ವೇರ್‌ ಉದ್ದಿಮೆ­ಯಲ್ಲಿನ ಸಣ್ಣ – ಪುಟ್ಟ ಪ್ರತಿಸ್ಪರ್ಧಿ ಸಂಸ್ಥೆಗಳ ಉನ್ನತ ಹುದ್ದೆ ಅಲಂಕರಿ­ಸಿರುವುದಕ್ಕೆ ಯಾರ ಬಳಿಯೂ ತೃಪ್ತಿದಾಯಕ ವಿವರಣೆ ಇಲ್ಲ.

ಮುಂದಿನ ವರ್ಷ ನಿವೃತ್ತರಾಗಲಿದ್ದ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾಗಿರುವ ಸಿಇಒ, ಎಸ್‌. ಡಿ. ಶಿಬುಲಾಲ್‌ ಅವರ ನಂತರ ಸಿಇಒ ಹುದ್ದೆಗೆ ಶ್ರೀನಿವಾಸ್‌ ಅವರ ಹೆಸರೇ ಚಾಲ್ತಿಯಲ್ಲಿದ್ದರಿಂದ ಅಷ್ಟರ ಮಟ್ಟಿಗೆ ಸದ್ಯಕ್ಕೆ  ಅಲ್ಲೊಂದು ನಿರ್ವಾತ ಸ್ಥಿತಿ ನಿರ್ಮಾಣವಾ­ದಂತಾಗಿದೆ. ಶಿಬುಲಾಲ್‌ ಕೂಡ ತಮ್ಮ ನಿವೃತ್ತಿಯ ಅವಧಿಗೆ ಮುನ್ನವೇ ಸಂಸ್ಥೆ ತೊರೆಯು­ವುದಾಗಿ ಈ ಮೊದಲೇ ಇಂಗಿತ ವ್ಯಕ್ತಪಡಿಸಿದ್ದಾರೆ.
ತಾವು ಸಿಇಒ ಹುದ್ದೆಗೆ ಏರುವುದಿಲ್ಲ ಎನ್ನುವುದು ಬಿ. ಜಿ. ಶ್ರೀನಿವಾಸ್ ಅವರಿಗೆ ಮನದಟ್ಟಾಗಿತ್ತೇ? ಇದೇ ಕಾರಣಕ್ಕೆ ಅವರು ಹುದ್ದೆಗೆ ರಾಜೀನಾಮೆ ನೀಡಿದರೆ ಎನ್ನುವುದೂ ಖಚಿತಪಟ್ಟಿಲ್ಲ.

ಸಂಸ್ಥೆಯನ್ನು ಈ ಮೊದಲಿನ ಗರಿಷ್ಠ ಲಾಭದಾಯಕ, ದೈತ್ಯ ಸಂಸ್ಥೆಯ ಖ್ಯಾತಿಗೆ ತಂದು ನಿಲ್ಲಿಸುವ  ಮೂರ್ತಿ ಅವರ ಪ್ರಯತ್ನಗಳು ಯಶಸ್ವಿಯಾಗುವ ಬಗ್ಗೆಯೇ ಈಗ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.

ಹೊರಗಿನವರಿಗೆ ಮನ್ನಣೆ?
ಶ್ರೀನಿವಾಸ್ ಅವರ ನಿರ್ಗಮನದಿಂದ ಸಂಸ್ಥೆಯ ಸ್ಥಾಪಕರಲ್ಲದವರು ಸಿಇಒ ಹುದ್ದೆಗೆ ಏರುವ ಸಾಧ್ಯತೆ ಈಗ ಹೆಚ್ಚಿದೆ. ಮೂಲತಃ ಸಂಸ್ಥೆಗೆ ಸೇರದ ವ್ಯಕ್ತಿಯೇ ಈಗ ಇನ್ಫೊಸಿಸ್‌ಗೆ ಹೊಸ ಶಕ್ತಿ ಮತ್ತು ಹೊಸ ಆಲೋಚನೆ ತುಂಬಬಹುದು ಎಂದು ನಿರೀಕ್ಷಿಸಲಾಗಿದೆ.
ವಿಶ್ವದಾದ್ಯಂತ ಮನ್ನಣೆಗೆ ಪಾತ್ರ­ವಾಗಿರುವ  ಬ್ರ್ಯಾಂಡ್‌ ಹೆಸರು, ಪರಿಣತ ಮಾನವ ಸಂಪನ್ಮೂಲ, ಗರಿಷ್ಠ ಸಂಖ್ಯೆಯ ಗ್ರಾಹಕರು  ಮತ್ತಿತರ ಅನುಕೂಲಗಳ ಮೂಲಕ ಸಂಸ್ಥೆಯು ನಾರಾಯಣ ಮೂರ್ತಿ ಅವರ ಸಮರ್ಥ ನಾಯಕತ್ವದಲ್ಲಿ ಸಾಫ್ಟ್‌ವೇರ್‌ ದಿಗ್ಗಜ ಎನ್ನುವ ಹೆಗ್ಗಳಿಕೆಯನ್ನು ಮರಳಿ ಪಡೆಯಬಹುದಾಗಿದೆ.

ಸಂಸ್ಥೆಯ ಸಿಬ್ಬಂದಿಗೆ ಪತ್ರ ಬರೆದಿರುವ ಮೂರ್ತಿ ಅವರು ಇದೇ ಬಗೆಯ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಒಂದು ವರ್ಷದ ಹಿಂದೆ ನಾರಾಯಣ ಮೂರ್ತಿ ಅವರು ಇನ್ಫೊಸಿಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಸಂಸ್ಥೆಯ ವಹಿವಾಟು ಪುನಶ್ಚೇತನಕ್ಕೆ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಇನ್ನೊಂದೆಡೆ ಉನ್ನತ ಹುದ್ದೆಗಳಲ್ಲಿ ಇದ್ದವರು ಸಂಸ್ಥೆ ತೊರೆಯುತ್ತಿರುವುದು ಷೇರುಪೇಟೆ ಸೇರಿದಂತೆ ಜನಸಾಮಾನ್ಯ­ರಲ್ಲಿಯೂ ಅಚ್ಚರಿ ಮೂಡಿಸಿರು­ವುದಂತೂ ನಿಜ.

ಟಿಸಿಎಸ್‌, ಎಚ್‌ಸಿಎಲ್‌ ಮತ್ತಿತರ ಸಂಸ್ಥೆಗಳು ಇನ್ಫೊಸಿಸ್‌ಗಿಂತ ಉತ್ತಮ ಲಾಭ ಬಾಚಿಕೊಳ್ಳುತ್ತಿದ್ದಾಗ, ವಹಿವಾಟಿನಲ್ಲಿ ಹಿಂದೆ ಬಿದ್ದಿದ್ದ ಸಂಸ್ಥೆಯ ಪುನಶ್ಚೇತನಕ್ಕೆ ನಾರಾಯಣ ಮೂರ್ತಿ ಅವರನ್ನು ಮರಳಿ ಕರೆತರಲಾಗಿತ್ತು.

ಹೊಸ ಸಿಇಒ ಶೋಧ
ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ (Chief Executive Officer and Mana­ging Director – CEO AND MD) ಹುದ್ದೆ ಭರ್ತಿಗೆ ಈಗಾಗಲೇ ಚಾಲನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.