ADVERTISEMENT

ಇನ್ಫೊಸಿಸ್‌ ತೊರೆದು ತಪ್ಪು ಮಾಡಿದೆ; ಸಹ ಸ್ಥಾಪಕರ ಮಾತು ಕೇಳಲಿಲ್ಲ: ನಾರಾಯಣಮೂರ್ತಿ ವಿಷಾದ

ಪಿಟಿಐ
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST
ಇನ್ಫೊಸಿಸ್‌ ತೊರೆದು ತಪ್ಪು ಮಾಡಿದೆ; ಸಹ ಸ್ಥಾಪಕರ ಮಾತು ಕೇಳಲಿಲ್ಲ: ನಾರಾಯಣಮೂರ್ತಿ ವಿಷಾದ
ಇನ್ಫೊಸಿಸ್‌ ತೊರೆದು ತಪ್ಪು ಮಾಡಿದೆ; ಸಹ ಸ್ಥಾಪಕರ ಮಾತು ಕೇಳಲಿಲ್ಲ: ನಾರಾಯಣಮೂರ್ತಿ ವಿಷಾದ   

ನವದೆಹಲಿ: ತಾವು ಕಟ್ಟಿ ಬೆಳೆಸಿದ ಸಾಫ್ಟ್‌ವೇರ್‌ ದೈತ್ಯ ಸಂಸ್ಥೆ ಇನ್ಫೊಸಿಸ್‌ನಿಂದ 2014ರಲ್ಲಿ ಹೊರ ಬಂದಿರುವುದಕ್ಕೆ ಎನ್‌. ಆರ್‌. ನಾರಾಯಣಮೂರ್ತಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

‘ಸಂಸ್ಥೆಯಲ್ಲಿ ಮುಂದುವರೆಯಲು ಸಹ ಸ್ಥಾಪಕರು ನೀಡಿದ್ದ ಸಲಹೆಗೆ ನಾನು ಕಿವಿಗೊಡಬೇಕಾಗಿತ್ತು. ಹಾಗೆ ಮಾಡದೆ ತಪ್ಪು ಮಾಡಿದೆಯೆಂದು ಭಾಸವಾಗುತ್ತಿದೆ’ ಎಂದು ಹೇಳಿದ್ದಾರೆ.

‘ಸಹ ಸ್ಥಾಪಕರಲ್ಲಿ ಬಹುತೇಕರು ಸಂಸ್ಥೆ ತೊರೆಯಬೇಡಿ. ಇನ್ನಷ್ಟು ವರ್ಷಗಳ ಕಾಲ ಮುಂದುವರೆಯಿರಿಯೆಂದು ಮನವಿ ಮಾಡಿಕೊಂಡಿದ್ದರು. ನಾನು ಅದಕ್ಕೆ ಓಗೊಟ್ಟಿರಲಿಲ್ಲ. ಆ ಬಗ್ಗೆ ನನಗೆ ವಿಷಾದ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ನಿಮ್ಮ ವೈಯಕ್ತಿಕ ಬದುಕಿನ ಅಥವಾ ವೃತ್ತಿ ಕುರಿತ ಅತಿದೊಡ್ಡ ಖೇದಕರ ಸಂಗತಿ ಯಾವುದು ಎನ್ನುವ ಪ್ರಶ್ನೆಗೆ  ಉತ್ತರ ನೀಡುತ್ತ ಅವರು ಈ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಸಿಎನ್‌ಬಿಸಿ ಟಿವಿ18 ಚಾನೆಲ್‌ನಲ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಕಾರ್ಪೊರೇಟ್‌ ಆಡಳಿತಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಸಿಇಒ ವಿಶಾಲ್‌ ಸಿಕ್ಕಾ ಮತ್ತು ಆಡಳಿತ ಮಂಡಳಿಯ ನಿರ್ಧಾರಗಳನ್ನು ಇತ್ತೀಚಿನ ದಿನಗಳಲ್ಲಿ ನಾರಾಯಣ ಮೂರ್ತಿ ಅವರು ಟೀಕಿಸುತ್ತಲೇ ಬಂದಿದ್ದಾರೆ.

‘ನಾನೊಬ್ಬ ಭಾವುಕ ಜೀವಿ. ನನ್ನ ಬಹುತೇಕ ನಿರ್ಧಾರಗಳು ಪರಿಪೂರ್ಣತೆ ಆಧರಿಸಿರುತ್ತವೆ. ಬಹುಶಃ ನಾನು ನನ್ನ ಸಹ ಸ್ಥಾಪಕರ ಸಲಹೆ ಕೇಳಬೇಕಾಗಿತ್ತು’ ಎಂದು ಹೇಳಿಕೊಂಡಿದ್ದಾರೆ.

‘ಅಮೆರಿಕದ ನಾಸ್ದಾಕ್‌ ಷೇರುಪೇಟೆಯಲ್ಲಿ ಸಂಸ್ಥೆಯ ಷೇರು ವಹಿವಾಟಿಗೆ ಚಾಲನೆ ನೀಡಿರುವುದು ನನ್ನ ಉದ್ದಿಮೆ ವಹಿವಾಟಿನ ಅತಿದೊಡ್ಡ ಯಶಸ್ಸು. ಈ ಷೇರು ವಹಿವಾಟು ಆರಂಭಿಸಿದ ಭಾರತದ ಮೊದಲ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಇನ್ಫೊಸಿಸ್‌ ಪಾತ್ರವಾಗಿತ್ತು’ ಎಂದು ಹೇಳಿದ್ದಾರೆ.

ಇನ್ಫೊಸಿಸ್ ಸ್ಥಾಪಿಸಿದ 33 ವರ್ಷಗಳ ನಂತರ ಅವರು ಸಂಸ್ಥೆಯಿಂದ ಹೊರ ಬಂದಿದ್ದರು. 21 ವರ್ಷಗಳಷ್ಟು ದೀರ್ಘಕಾಲದವರೆಗೆ  ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. 2014ರ ಅಕ್ಟೋಬರ್‌ನಲ್ಲಿ ’ಎಸ್‌ಎಪಿ’ಯ (SAP) ನಿರ್ದೇಶಕ ಮಂಡಳಿ ಸದಸ್ಯರಾಗಿದ್ದ ವಿಶಾಲ್‌ ಸಿಕ್ಕಾ ಅವರು ಸಿಇಒ ಆಗಿ ನೇಮಕಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.