ADVERTISEMENT

ಇನ್ಫೊಸಿಸ್‌ ಬೆಳವಣಿಗೆ ಮೇಲೆ ‘ಸೆಬಿ’ ನಿಗಾ

ಸಂಸ್ಥಾಪಕರು ಮತ್ತು ನಿರ್ದೇಶಕ ಮಂಡಳಿ ಮಧ್ಯೆ ಭಿನ್ನಾಭಿಪ್ರಾಯ ತಾರಕಕ್ಕೆ

ಪಿಟಿಐ
Published 12 ಫೆಬ್ರುವರಿ 2017, 19:30 IST
Last Updated 12 ಫೆಬ್ರುವರಿ 2017, 19:30 IST
ಇನ್ಫೊಸಿಸ್‌ ಬೆಳವಣಿಗೆ ಮೇಲೆ ‘ಸೆಬಿ’ ನಿಗಾ
ಇನ್ಫೊಸಿಸ್‌ ಬೆಳವಣಿಗೆ ಮೇಲೆ ‘ಸೆಬಿ’ ನಿಗಾ   

ಬೆಂಗಳೂರು / ನವದೆಹಲಿ (ಪಿಟಿಐ): ಕಾರ್ಪೊರೇಟ್‌ ಆಡಳಿತ ಕುರಿತು ಐ.ಟಿ ದೈತ್ಯ ಸಂಸ್ಥೆ ಇನ್ಫೊಸಿಸ್‌ನ ಸಂಸ್ಥಾಪಕರು ಮತ್ತು ನಿರ್ದೇಶಕ ಮಂಡಳಿ ಮಧ್ಯೆ ಉಂಟಾಗಿರುವ ಭಿನ್ನಾಭಿಪ್ರಾಯಗಳು ತಾರಕಕ್ಕೆ ಏರಿರುವ ಬೆಳವಣಿಗೆ ಮೇಲೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ನಿಗಾ ಇರಿಸಿದೆ.

ಸಂಸ್ಥೆಯಲ್ಲಿನ ಸಣ್ಣಪುಟ್ಟ ಮತ್ತು ಸಾಂಸ್ಥಿಕ ಷೇರುದಾರರ ಹಿತಾಸಕ್ತಿಗೆ ಯಾವುದೇ ಕಾರಣಕ್ಕೂ ಧಕ್ಕೆ ಒದಗದಂತೆ ನೋಡಿಕೊಳ್ಳಲು ಅಗತ್ಯ ಗಮನ ನೀಡಲಾಗುತ್ತಿದೆ ಎಂದು ‘ಸೆಬಿ’  ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಾಟಾ ಸಮೂಹ, ಯುನೈಟೆಡ್‌ ಸ್ಪಿರಿಟ್ಸ್‌ ಮತ್ತು ರಿಕೊಹ್‌ ಇಂಡಿಯಾ ನಂತರ ಇನ್ಫೊಸಿಸ್‌ನಲ್ಲಿ ಕಾರ್ಪೊರೇಟ್‌ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿರುವುದು ಈಗ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

‘ಇನ್ಫೊಸಿಸ್‌ನಲ್ಲಿನ ವಿದ್ಯಮಾನಗಳನ್ನು ನಿರಂತರವಾಗಿ ಗಮನಿಸಲಾಗುತ್ತಿದೆ. ಸಂಸ್ಥೆಯಲ್ಲಿನ ಬೆಳವಣಿಗೆಗಳ ಕುರಿತು ಮಾಧ್ಯಮ ವರದಿಗಳ ಬಗ್ಗೆ ವಿವರಣೆ ಪಡೆಯಲು ಷೇರುಪೇಟೆಗಳಿಗೆ ಸೂಚಿಸಲಾಗಿದೆ.

‘ವೃತ್ತಿಪರತೆಯಿಂದ ನಿರ್ವಹಿಸಲಾಗುತ್ತಿರುವ ಸಂಸ್ಥೆಗಳು ವಿದೇಶಿ ಹೂಡಿಕೆದಾರರ ಗಮನ ಸೆಳೆಯುತ್ತವೆ. ಆಡಳಿತ ಮಂಡಳಿಯಲ್ಲಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಳ್ಳುವಂತಹ ನಕಾರಾತ್ಮಕ ಬೆಳವಣಿಗೆಗಳು ವಿದೇಶಿ ಬಂಡವಾಳದ ಒಳಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ’ ಎಂದು ‘ಸೆಬಿ’ ಅಧಿಕಾರಿ ತಿಳಿಸಿದ್ದಾರೆ.

ಸಾಂಸ್ಥಿಕ ಹೂಡಿಕೆದಾರರಿಗೆ ಪೈ ಒತ್ತಾಯ: ಸಂಸ್ಥೆಯು ತನ್ನ ಹಣಕಾಸು ಸಂಪನ್ಮೂಲ ಮತ್ತು ಬಂಡವಾಳದ ಇತರ ಮೂಲಗಳನ್ನು ಯಾವ ರೀತಿ ಹಂಚಿಕೆ ಮಾಡುತ್ತಿದೆ ಎನ್ನುವುದನ್ನು ಸಾಂಸ್ಥಿಕ ಹೂಡಿಕೆದಾರರು ಪ್ರಶ್ನಿಸಬೇಕು ಎಂದು ಸಂಸ್ಥೆಯ ಮಾಜಿ ಸಿಎಫ್‌ಒ ಟಿ. ಎ. ಮೋಹನದಾಸ್‌ ಪೈ ಒತ್ತಾಯಿಸಿದ್ದಾರೆ.

ಸಂಸ್ಥೆಯ  ಬಳಿ ನಗದು, ನಗದಿಗೆ ಸಮನಾದ ಮತ್ತು ಹೂಡಿಕೆ ಸೇರಿ ₹ 35, 697 ಕೋಟಿಗಳಷ್ಟು ಸಂಪತ್ತು (ಲಿಕ್ವಿಡ್‌ ಅಸೆಟ್ಸ್‌) ಇದೆ. ಈ ಅಗಾಧ ಪ್ರಮಾಣದ ಸಂಪತ್ತಿನ ಹೂಡಿಕೆ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಸಾಂಸ್ಥಿಕ ಹೂಡಿಕೆದಾರರು ನಿರ್ದೇಶಕ ಮಂಡಳಿಯನ್ನು ಪ್ರಶ್ನಿಸುವ ಅಗತ್ಯ ಇದೆ. ಕಾರ್ಪೊರೇಟ್‌  ಆಡಳಿತ ವ್ಯವಸ್ಥೆಯ ಪಾಲನೆಯು ಸಂಸ್ಥೆಯ ಪ್ರತಿಷ್ಠೆಗೆ ಸಂಬಂಧಿಸಿರುವುದರಿಂದ ಆ ಬಗ್ಗೆ  ಪ್ರಶ್ನಿಸುವುದು  ಅವರ ಪ್ರಾಥಮಿಕ ಕರ್ತವ್ಯ ಕೂಡ ಆಗಿದೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಹೂಡಿಕೆದಾರರ ಜತೆ ಸಿಕ್ಕಾ ಭೇಟಿ
ಸ್ಥಾಪಕರು ಮತ್ತು ನಿರ್ದೇಶಕ ಮಂಡಳಿ ಮಧ್ಯೆ ಸಂಘರ್ಷ ಮುಂದುವರೆದಿರುವಂತೆಯೇ ಸಂಸ್ಥೆಯ ಸಿಇಒ ವಿಶಾಲ್‌ ಸಿಕ್ಕಾ ಅವರು ಸೋಮವಾರ ಮುಂಬೈನಲ್ಲಿ ಸಾಂಸ್ಥಿಕ ಹೂಡಿಕೆದಾರರನ್ನು ಭೇಟಿಯಾಗಲಿದ್ದಾರೆ.

ಹೂಡಿಕೆದಾರರ ಜತೆಗಿನ ಸಭೆ ಈ ವಿವಾದ ಬಹಿರಂಗಗೊಳ್ಳುವ ಮುಂಚೆಯೇ ನಿಗದಿಯಾಗಿತ್ತು.  ನಿರ್ದೇಶಕ ಮಂಡಳಿಯ ಕೆಲ ಸದಸ್ಯರ ಜತೆಗೂಡಿ ಸಿಕ್ಕಾ ಅವರು ಮಾಧ್ಯಮಗಳ ಜತೆ ಮಾತನಾಡಲಿದ್ದಾರೆ.

ಹಂಗಾಮಿ ಅಧ್ಯಕ್ಷರ ನೇಮಕಕ್ಕೆ ಒತ್ತಾಯ
ನಿರ್ದೇಶಕ ಮಂಡಳಿ ಅಧ್ಯಕ್ಷ ರಾಮಸ್ವಾಮಿ ಶೇಷಸಾಯಿ ಅವರ ರಾಜೀನಾಮೆಗೆ ಒತ್ತಾಯಿಸಿರುವ ಸಂಸ್ಥೆಯ ಮಾಜಿ ಸಿಎಫ್‌ಒ ವಿ. ಬಾಲಕೃಷ್ಣನ್‌, ಹಂಗಾಮಿ ಹೊಸ ಅಧ್ಯಕ್ಷರನ್ನು ನೇಮಕ ಮಾಡುವಂತೆ ಒತ್ತಾಯಿಸಿದ್ದಾರೆ.

‘ಕಾರ್ಪೊರೇಟ್‌ ಆಡಳಿತ ನಿಯಮಗಳ ಪಾಲನೆಯಲ್ಲಿನ ಲೋಪಗಳಿಗೆ ಅಧ್ಯಕ್ಷರೇ ಹೊಣೆ ಹೊರಬೇಕು. ಈ ವಿವಾದದಲ್ಲಿ ನಿರ್ದೇಶಕ ಮಂಡಳಿ ಯಾವುದೇ ಕಾರಣಕ್ಕೂ ಸಂಘರ್ಷದ ಹಾದಿ ತುಳಿಯಬಾರದು’ ಎಂದೂ ಅವರು ಸಲಹೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.