ADVERTISEMENT

ಇನ್ಫೊಸಿಸ್‌ ಬೋರ್ಡ್‌ರೂಂ ಕಲಹ ತೀವ್ರ

ಕಾರ್ಪೊರೇಟ್‌ ಆಡಳಿತಕ್ಕೆ ತಿಲಾಂಜಲಿ: ಮೂರ್ತಿ ಟೀಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2017, 19:30 IST
Last Updated 10 ಫೆಬ್ರುವರಿ 2017, 19:30 IST
ಕಿರಣ್‌ ಮಜುಂದಾರ್‌ ಷಾ
ಕಿರಣ್‌ ಮಜುಂದಾರ್‌ ಷಾ   

ಬೆಂಗಳೂರು: ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್‌ ಸೇವಾ ರಫ್ತು ಸಂಸ್ಥೆ ಇನ್ಫೊಸಿಸ್‌ನಲ್ಲಿ ಸ್ಥಾಪಕರು ಮತ್ತು ನಿರ್ದೇಶಕ ಮಂಡಳಿ ಮಧ್ಯೆ ಕಾರ್ಪೊರೇಟ್‌ ಆಡಳಿತ ಪಾಲನೆ ಬಗ್ಗೆ ಮೂಡಿರುವ ಭಿನ್ನಾಭಿಪ್ರಾಯ ದಿನೇ ದಿನೇ ಹೊಸ ಸ್ವರೂಪ ಪಡೆಯುತ್ತಿದೆ.

ಸಂಸ್ಥೆ ಬಿಟ್ಟು ಹೊರ ನಡೆದ ಉನ್ನತ ಅಧಿಕಾರಿಗಳಿಗೆ ಗುತ್ತಿಗೆ ಒಪ್ಪಂದದ ಅನ್ವಯ ಭಾರಿ ಮೊತ್ತದ ಪರಿಹಾರ ನೀಡಿರುವುದು ಮತ್ತು ಸಿಇಒ ವಿಶಾಲ್‌ ಸಿಕ್ಕಾ ಅವರಿಗೆ ದೊಡ್ಡ ಮೊತ್ತದ ವೇತನ ನಿಗದಿ ಮಾಡಿರುವುದನ್ನು ಇನ್ಫೊಸಿಸ್‌ನ ಸ್ಥಾಪಕರಲ್ಲಿ ಒಬ್ಬರಾಗಿರುವ ಎನ್‌. ಆರ್‌. ನಾರಾಯಣಮೂರ್ತಿ ಅವರು ಬಹಿರಂಗವಾಗಿ ಪ್ರಶ್ನಿಸಿದ್ದಾರೆ.

‘ಈ ಹಿಂದೆಯೂ ಉನ್ನತ ಹುದ್ದೆಯಲ್ಲಿ ಇದ್ದವರು ಸಾಕಷ್ಟು ಸಂಖ್ಯೆಯಲ್ಲಿ ಸಂಸ್ಥೆ ತೊರೆದರೂ, ಅವರಿಗೆ ನಾವು ಪರಿಹಾರ ಮೊತ್ತ ನೀಡಿರಲಿಲ್ಲ. ಆದರೆ, ಈಗಿನ ಬೆಳವಣಿಗೆಗಳು ಕೆಲಮಟ್ಟಿಗೆ ಗೊಂದಲ ಮೂಡಿಸಿವೆ’ ಎಂದು ನಾರಾಯಣ ಮೂರ್ತಿ ಅವರು ಖಾಸಗಿ ಟಿವಿ ವಾಹಿನಿ ಸಿಎನ್‌ಬಿಸಿ–ಟಿವಿ18ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಯಾವುದೋ ಮಾಹಿತಿ ಸೋರಿಕೆಯಾಗದಂತೆ ಬಾಯಿ ಮುಚ್ಚಿಸಲು ಈ ದೊಡ್ಡ ಮೊತ್ತ ಪಾವತಿ ಮಾಡಿರಬಹುದೇ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎಂದೂ ಅವರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಸಿಕ್ಕಾ ಅವರ ವೇತನ, ಸಂಸ್ಥೆ ತೊರೆದ ಉನ್ನತ ಅಧಿಕಾರಿಗಳಿಗೆ ದೊಡ್ಡ ಮೊತ್ತದ ಪರಿಹಾರ ನೀಡಿಕೆ ಮತ್ತು ಕೆಲ ಸ್ವತಂತ್ರ ನಿರ್ದೇಶಕರ ನೇಮಕ ವಿಷಯದಲ್ಲಿ ಸಂಸ್ಥೆಯ ಸ್ಥಾಪಕರು ಮತ್ತು ನಿರ್ದೇಶಕ ಮಂಡಳಿಯಲ್ಲಿ ಭಿನ್ನಾಭಿಪ್ರಾಯ ಮೂಡಿದೆ.

ಈ ವಿದ್ಯಮಾನಗಳಲ್ಲಿ ಸಂಸ್ಥೆಯು ಪಾಲಿಸಿಕೊಂಡು ಬಂದಿದ್ದ ಕಾರ್ಪೊರೇಟ್‌ ಆಡಳಿತದ ಪರಿಪಾಲನೆಆಗುತ್ತಿಲ್ಲ ಎಂಬುದು ಸಹಸ್ಥಾಪಕರ  ಪ್ರಮುಖ ಆರೋಪವಾಗಿದೆ. ಇದು ಬೋರ್ಡ್‌ರೂಂ ಕಲಹಕ್ಕೆ ಕಾರಣವಾಗಿದೆ.

ಮೂರ್ತಿ ನಿಲುವಿಗೆ ಪೈ ಬೆಂಬಲ: ‘ಕಾರ್ಪೊರೇಟ್‌ ಆಡಳಿತದ ಬಗ್ಗೆ ನಾರಾಯಣಮೂರ್ತಿ ಅವರು ಎತ್ತಿರುವ ಪ್ರಶ್ನೆಗಳು ಹೆಚ್ಚು  ಸಮಂಜಸವಾಗಿವೆ. ಮಾಜಿ ಸಿಎಫ್‌ಒಗೆ ಪರಿಹಾರ ನೀಡುವಲ್ಲಿ ಅವಸರದಲ್ಲಿ ತೀರ್ಮಾನಕ್ಕೆ ಬರಲಾಗಿದೆ’ ಎಂದು ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಟಿ. ಎ. ಮೋಹನದಾಸ್‌ ಪೈ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವಿಶಾಲ್‌ ಸಿಕ್ಕಾ ಅವರು ಕೈಗೊಂಡ ನಿರ್ಧಾರ ಪಾರದರ್ಶಕವಾಗಿದೆ. ಈ ವಿಷಯದಲ್ಲಿ ನಿರ್ದೇಶಕ ಮಂಡಳಿಯು ಸಿಕ್ಕಾ ಅವರ ಪರವಾಗಿ ನಿಲ್ಲಲಿದೆ ಎಂದು ಮಂಡಳಿಯ ಅಧ್ಯಕ್ಷ ಆರ್‌. ಶೇಷಸಾಯಿ ಅವರು  ಪ್ರಕಟಣೆಯಲ್ಲಿ ತಿಳಿಸಿದ್ದರು.

ಸಂಸ್ಥೆಯ ಎಲ್ಲ ಪಾಲುದಾರರ ಸಲಹೆ ಸ್ವೀಕರಿಸಲು ಮಂಡಳಿ ತೆರೆದ ಮನಸ್ಸು ಹೊಂದಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ  ನಂಬಿಕೆಯ ಹೊಣೆಗಾರಿಕೆ ಈಡೇರಿಸುವುದಕ್ಕೆ ಬದ್ಧವಾಗಿದೆ ಎಂದು ಮಂಡಳಿ ವಿವರಣೆ ನೀಡಿತ್ತು.

ಶೇಷಸಾಯಿ ರಾಜೀನಾಮೆಗೆ ಒತ್ತಾಯ: ‘ಸಂಸ್ಥೆಯ ಪ್ರಮುಖ ಷೇರುದಾರರು ಮತ್ತು ನಿರ್ದೇಶಕ ಮಂಡಳಿ ಮಧ್ಯೆ ಸಂವಹನ ಕಡಿದು ಹೋಗಿದೆ. ನಿರ್ದೇಶಕ ಮಂಡಳಿ ಪುನರ್‌ ರಚಿಸಬೇಕಾಗಿದೆ. ಹೀಗಾಗಿ ಅಧ್ಯಕ್ಷ ಶೇಷಸಾಯಿ ಅವರು ರಾಜೀನಾಮೆ ನೀಡಬೇಕು’ ಎಂದು ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಿ. ಬಾಲಕೃಷ್ಣನ್‌ ಒತ್ತಾಯಿಸಿದ್ದಾರೆ.

ಸಿಕ್ಕಾ ಬೆಂಬಲಕ್ಕೆ ಮಜುಂದಾರ್‌ ಷಾ
‘ನಿರ್ದೇಶಕ ಮಂಡಳಿಯಲ್ಲಿ ಕಾರ್ಪೊರೇಟ್‌ ಆಡಳಿತ ಕುಸಿದು ಬಿದ್ದಿಲ್ಲ . ಟಾಟಾ ಸಮೂಹದಲ್ಲಿ ಕೇಳಿ ಬಂದಿದ್ದ ಕಾರ್ಪೊರೇಟ್‌ ಆಡಳಿತದ ನಿಯಮ ಪಾಲಿಸದ ಆರೋಪಗಳಿಗೆ ಇನ್ಫೊಸಿಸ್‌ನಲ್ಲಿನ ಬೆಳವಣಿಗೆಗಳನ್ನು ಹೋಲಿಸುವುದು ಸರಿಯಲ್ಲ’ ಎಂದು ಸಂಸ್ಥೆಯ ಸ್ವತಂತ್ರ ನಿರ್ದೇಶಕಿ ಕಿರಣ್‌ ಮಜುಂದಾರ್‌ ಷಾ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT