ADVERTISEMENT

ಇಪಿಎಫ್‌ಒ: ಆಡಳಿತ ವೆಚ್ಚ ಕಡಿತ

ಪಿಟಿಐ
Published 27 ಮೇ 2018, 19:30 IST
Last Updated 27 ಮೇ 2018, 19:30 IST
ಇಪಿಎಫ್‌ಒ: ಆಡಳಿತ ವೆಚ್ಚ ಕಡಿತ
ಇಪಿಎಫ್‌ಒ: ಆಡಳಿತ ವೆಚ್ಚ ಕಡಿತ   

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಆಡಳಿತಾತ್ಮಕ ವೆಚ್ಚದಲ್ಲಿ ಕಡಿತ ಮಾಡಲು ನಿರ್ಧರಿಸಿದೆ.

ಇದೇ ಜೂನ್‌ 1 ರಿಂದ ಹೊಸ ದರಗಳು ಜಾರಿಗೆ ಬರಲಿವೆ. ಮಾಲೀಕರು ತಮ್ಮ ನೌಕರರಿಗೆ ಪಾವತಿಸಿದ  ವೇತನದ ಮೇಲಿನ ಆಡಳಿತಾತ್ಮಕ ವೆಚ್ಚವನ್ನು ಶೇ 0.65 ರಿಂದ ಶೇ 0.50ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಕಾರ್ಮಿಕ ಸಚಿವಾಲಯವು ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.

‘ದೇಶದಲ್ಲಿನ 5 ಲಕ್ಷಕ್ಕೂ ಹೆಚ್ಚು ಉದ್ದಿಮೆ ಸಂಸ್ಥೆಗಳಿಗೆ ಇದರಿಂದ ವಾರ್ಷಿಕ ಒಟ್ಟಾರೆ ₹ 900 ಕೋಟಿಗಳಷ್ಟು ಉಳಿತಾಯ ಆಗಲಿದೆ. ನೌಕರರನ್ನು ಸಾಮಾಜಿಕ ಸುರಕ್ಷತಾ ಯೋಜನೆ ವ್ಯಾಪ್ತಿಗೆ ತರಲು ಈ ನಿರ್ಧಾರವು ಮಾಲೀಕರಿಗೆ ಉತ್ತೇಜನ ನೀಡಲಿದೆ’ ಎಂದು ಕೇಂದ್ರೀಯ ಭವಿಷ್ಯ ನಿಧಿ ಕಮಿಷನರ್‌ ವಿ. ಪಿ. ಜಾಯ್‌ ಹೇಳಿದ್ದಾರೆ.

ADVERTISEMENT

ಸದಸ್ಯರ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವುದರಿಂದ ಆಡಳಿತಾತ್ಮಕ ವೆಚ್ಚ ಕಡಿತದಿಂದ ‘ಇಪಿಎಫ್‌ಒ’ದ  ಹಣಕಾಸು ಪರಿಸ್ಥಿತಿ ಮೇಲೆ ಯಾವುದೇ ಪರಿಣಾಮ ಉಂಟಾಗುವ ಸಾಧ್ಯತೆ ಇಲ್ಲ ಎಂದು ನಿರೀಕ್ಷಿಸಲಾಗಿದೆ.

ವಹಿವಾಟು ಹೆಚ್ಚಳ ಮತ್ತು ಆಡಳಿತಾತ್ಮಕ ವೆಚ್ಚದ ರೂಪದಲ್ಲಿ ಗರಿಷ್ಠ ಪ್ರಮಾಣದ ವರಮಾನ ಸಂಗ್ರಹವಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಮಾಲೀಕರು ತಮ್ಮ ಉದ್ಯೋಗಿಗಳಿಗೆ ಪಾವತಿಸುವ ಒಟ್ಟು ವೇತನದ ಅನುಪಾತಕ್ಕೆ ಅನುಗುಣವಾಗಿ ಆಡಳಿತಾತ್ಮಕ ವೆಚ್ಚ ವಿಧಿಸಲಾಗುತ್ತಿದೆ.

ಸಾಮಾಜಿಕ ಸುರಕ್ಷತಾ ಯೋಜನೆ ನಿರ್ವಹಿಸಲು ಭವಿಷ್ಯ ನಿಧಿ ಸಂಘಟನೆಯು ಹಿಂದಿನ ವರ್ಷ ಮಾಲೀಕರಿಂದ ₹ 3,800 ಕೋಟಿಗಳಷ್ಟು ಮೊತ್ತವನ್ನು ಆಡಳಿತಾತ್ಮಕ ವೆಚ್ಚದ ರೂಪದಲ್ಲಿ ಸಂಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.