ADVERTISEMENT

ಈರುಳ್ಳಿ: ಸತತ ಮಳೆಗೆ ನೆಲಕಚ್ಚಿದ ದರ

ಪ್ರಸಕ್ತ ವರ್ಷ ದಾವಣಗೆರೆಯಲ್ಲಿ 250 ಹೆಕ್ಟೇರ್‌ ಬೆಳೆಹಾನಿ

ಮಲ್ಲೇಶ್ ನಾಯಕನಹಟ್ಟಿ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ದಾವಣಗೆರೆ: ‘ಫಸಲಿಗೆ ಬರುವವರೆಗೆ ಈರುಳ್ಳಿ ಬೆಳೆ ನಿರ್ವಹಣೆ ಕಷ್ಟ. ರೋಗ ಹರಡಿತೆಂದರೆ ರೈತರ ಬೆನ್ನೆಲುಬು ಮುರಿದಂತೆಯೇ. ಮುಂಗಾರು ಹಂಗಾಮಿನ ನಂತರ ಬೆಳೆ ಕೈ ಸೇರಬೇಕು ಎನ್ನುವಷ್ಟರಲ್ಲಿ ನಿರಂತರ ಮಳೆ ಹಿಡಿದಿದೆ. ಕಟಾವು ಆಗಿರುವ ಈರುಳ್ಳಿ ಬಿಸಿಲು ಕಾಣದೆ ಕೊಳೆತರೆ, ಹೊಲ­ದಲ್ಲಿನ ಬೆಳೆ ಮಳೆಯಲ್ಲೇ ತೇಲುತ್ತಿದೆ. ಏನ್ ಮಾಡೋದು... ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ!’

– ಜಿಲ್ಲೆಯ ಈರುಳ್ಳಿ ಉತ್ಪಾದನಾ ಕೇಂದ್ರ ಜಗಳೂರು ತಾಲ್ಲೂಕಿನ ಕಮಂಡಲಗುಂದಿ ಗ್ರಾಮದ ರೈತ ಮಹಿಳೆ ಹನುಮಕ್ಕ ಅವರ ಅಳಲು ಇದು.
ಜಿಲ್ಲೆಯಲ್ಲಿ ಪ್ರತಿವರ್ಷ ಸರಾಸರಿ 3,500 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗುತ್ತಾ ಬಂದಿದೆ. ಜಗ­ಳೂರು, ಹರಪನಹಳ್ಳಿ, ಚನ್ನಗಿರಿ, ಹೊನ್ನಾಳಿ ತಾಲ್ಲೂಕುಗಳಿಂದ ವರ್ಷಕ್ಕೆ ಸುಮಾರು 45 ಸಾವಿರ ಟನ್ ಈರುಳ್ಳಿ ದೊರೆಯುತ್ತಿದೆ. ಬಿತ್ತನೆ ಬೀಜಕ್ಕಾಗಿ ಮಹಾರಾಷ್ಟ್ರವನ್ನು ಅವಲಂಬಿಸಿದ್ದ ಇಲ್ಲಿನ ಬೆಳೆಗಾರರು ಈ ಮುಂಚೆ ‘ಸತಾರ’ ತಳಿಯನ್ನು ಹೆಚ್ಚಾಗಿ ಬೆಳೆಯುತ್ತಾ ಬಂದಿದ್ದರು. ಈಗ ಈ ತಳಿಯನ್ನು ಸ್ವತಃ ಬೀಜೋತ್ಪಾದನೆ ಮೂಲಕ ಸ್ಥಳೀಯವಾಗಿ ಬೆಳೆಯ­ತೊಡಗಿದ್ದಾರೆ. ಇದಾದ ನಂತರ ಈರುಳ್ಳಿ ಬಿತ್ತನೆಯ ಪ್ರದೇಶ 500 ಹೆಕ್ಟೇರ್‌ನಷ್ಟು ವಿಸ್ತಾರಗೊಂಡಿದೆ ಎಂದು ತೋಟಗಾರಿಕೆ ಇಲಾಖೆ ಅಂಕಿ–ಅಂಶಗಳು ವಿವರಿಸುತ್ತವೆ.

ಪ್ರಸಕ್ತ ವರ್ಷ ನಿರಂತರ ಮಳೆ­ಯಿಂದಾಗಿ ಜಿಲ್ಲೆಯಲ್ಲಿ ಈರುಳ್ಳಿ ಬೆಳೆ ನೆಲಕಚ್ಚಿದೆ. ಕಟಾವು ಆಗಿರುವ ಅಲ್ಪಸ್ವಲ್ಪ ಬೆಳೆಯನ್ನು ರಕ್ಷಿಸಿಕೊಳ್ಳಲು ಬೆಳೆ­ಗಾ­ರರು ಹೆಣಗಾಡುತ್ತಿದ್ದಾರೆ. ಇದ­ರಿಂದಾಗಿ ಮಾರುಕಟ್ಟೆಗೆ ನಿತ್ಯ 700 ಕ್ವಿಂಟಲ್‌ನಷ್ಟು ಆವಕವಾಗುತ್ತಿದ್ದ ಈರುಳ್ಳಿ ಪೂರೈಕೆ ಕುಸಿದಿದೆ. ಒಣ ಹವೆ ಬೇಡುವ ಈರುಳ್ಳಿಯನ್ನು ದೀರ್ಘಕಾಲ ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಎಷ್ಟು ಸಾಧ್ಯವೋ ಅಷ್ಟನ್ನು ರೈತರು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಆದರೆ,  ಲಾರಿ ಸಾಗಣೆ ವೆಚ್ಚ ಭರಿಸುವಷ್ಟೂ ದರ ಸಿಗುತ್ತಿಲ್ಲ ಎಂದು ಈರುಳ್ಳಿ ಬೆಳೆಗಾರರು ಅಲವತ್ತುಕೊಳ್ಳುತ್ತಾರೆ.

‘ಉತ್ತಮ ಗುಣಮಟ್ಟದ ಈರುಳ್ಳಿಗೆ ಒಂದು ಕ್ವಿಂಟಲ್‌ಗೆ  ₨1,400, ಮಧ್ಯಮ ಗುಣಮಟ್ಟಕ್ಕೆ ₨1 ಸಾವಿರ, ಕನಿಷ್ಠ ಗುಣಮಟ್ಟದ ಈರುಳ್ಳಿಗೆ ₨ 500 ಸಿಗುತ್ತಿದೆ. ಆದರೆ ಹೋದ  ವರ್ಷ  ಒಂದು ಕ್ವಿಂಟಲ್‌ ಈರುಳ್ಳಿ ದರ ₨4 ಸಾವಿರದಷ್ಟಿತ್ತು. ಇದರಿಂದಾಗಿ ಶ್ರಮ­ಪಟ್ಟ ರೈತರು ಸ್ವಲ್ಪಮಟ್ಟಿಗೆ ಸಾಲದಿಂದ ಋಣಮುಕ್ತರಾಗಿದ್ದರು. ಅದೇ ರೀತಿ ಈ ವರ್ಷವೂ ಸೂಕ್ತ ದರ ದೊರೆಯ­ಬಹುದು ಎಂಬ ಆಸೆಯಿಂದ ಬೆಳೆದ­ವರಿಗೆ ನಿರಾಸೆಯಾಗಿದೆ. ಬಿಡದೇ ಸುರಿಯು­ತ್ತಿರುವ ಮಳೆಯಿಂದಾಗಿ  ಕೈಕೈ ಹಿಸುಕಿಕೊಳ್ಳುವಂತಾಗಿದೆ’ ಎಂದು ಈರುಳ್ಳಿ ಬೆಳೆಗಾರ ಮುಸ್ಟೂರಿನ ತಿಪ್ಪಣ್ಣ ಸಂಕಷ್ಟ ತೋಡಿಕೊಳ್ಳುತ್ತಾರೆ.

2012–13ನೇ ವರ್ಷದಲ್ಲಿ ಜಿಲ್ಲೆಯ ಮಾರುಕಟ್ಟೆಯಲ್ಲಿ 2.46ಲಕ್ಷ ಕ್ವಿಂಟಲ್‌ನಷ್ಟು ಈರುಳ್ಳಿ ಆವಕವಾಗಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿಯ ವಾರ್ಷಿಕ ವರದಿಯ ಅಂಕಿ–ಅಂಶದ ಪ್ರಕಾರ ಕಳೆದ ಸಾಲಿನ ಅಕ್ಟೋಬರ್ ಅಂತ್ಯದವರೆಗೆ 90ಸಾವಿರ ಕ್ವಿಂಟಲ್ ಈರುಳ್ಳಿ ಪೂರೈಕೆಯಾಗಿತ್ತು. ಈ ಬಾರಿ ಈರುಳ್ಳಿ ಪೂರೈಕೆ 50 ಸಾವಿರ ಕ್ವಿಂಟಲ್‌ ಕೂಡ ದಾಟಿಲ್ಲ.

ಸರ್ಕಾರಕ್ಕೆ ವರದಿ
ಈ ಬಾರಿ ದಾವಣಗೆರೆ ಜಿಲ್ಲೆ­ಯಲ್ಲಿ ಮಳೆಯಿಂದ ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಹಾನಿ ಸಂಭವಿಸಿದೆ. ಪರಿಹಾರ­ಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸ­­ಲಾಗಿದೆ.

-–ಉಮಾಶಂಕರ ಮಿರ್ಜಿ, ತೋಟಗಾರಿಕೆ ಉಪನಿರ್ದೇಶಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.