ADVERTISEMENT

ಉದ್ಯಮಗಳಿಗೆ ರಿಯಾಯ್ತಿ: ಸಂಪುಟ ಉಪ ಸಮಿತಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 31 ಜುಲೈ 2014, 19:30 IST
Last Updated 31 ಜುಲೈ 2014, 19:30 IST

ಬೆಂಗಳೂರು: ಭಾರಿ ಮತ್ತು ಮಧ್ಯಮ ಕೈಗಾರಿಕೆಗಳು ರಾಜ್ಯದಿಂದ ಆಂಧ್ರ ಪ್ರದೇಶದತ್ತ ವಲಸೆ ಹೋಗುವುದನ್ನು ತಪ್ಪಿಸಲು ಹೂಡಿಕೆದಾರರಿಗೆ ಸಾಧ್ಯವಿ ರುವ ಎಲ್ಲ ರಿಯಾಯ್ತಿ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಕೈಗಾರಿಕಾ ಬೆಳವಣಿಗೆಗೆ ಸಂಬಂಧಿಸಿದ ಸಚಿವ ಸಂಪುಟ ಉಪ ಸಮಿತಿ ನಿರ್ಧರಿಸಿದೆ.

ಅದು ಗುರುವಾರ ವಿಧಾನಸೌಧ ದಲ್ಲಿ ಸಭೆ ನಡೆಸಿ, ಹೂಡಿಕೆದಾರರನ್ನು ಆಕರ್ಷಿಸಲು ಕೈಗೊಳ್ಳಬೇಕಿರುವ ಕ್ರಮ ಗಳ ಕುರಿತು ಚರ್ಚಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್‌ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಉದ್ದಿಮೆಗಳಿಗೆ ತೆರಿಗೆ ರಿಯಾಯ್ತಿ ಮತ್ತು ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸಭೆ ಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಧಾರವಾಡದಲ್ಲಿ ಮೋಟಾರು ವಾಹನ ತಯಾರಿಕಾ ಘಟಕ ಆರಂಭಿಸಲು ಮುಂದಾಗಿರುವ ಹೊಂಡಾ ಕಂಪೆನಿಗೆ ಮೌಲ್ಯವರ್ಧಿತ ತೆರಿಗೆಯಲ್ಲಿ ಶೇಕಡ 70ರಷ್ಟು ವಿನಾಯಿತಿ ನೀಡಲು ಸಮಿತಿ ನಿರ್ಣಯ ಕೈಗೊಂಡಿದೆ.  ಹಿಂದುಳಿದ ಪ್ರದೇಶಗಳಲ್ಲಿ ಹೂಡಿಕೆ ಮಾಡುವವರಿಗೆ ಮೌಲ್ಯವರ್ಧಿತ ತೆರಿಗೆ, ಪ್ರವೇಶ ಶುಲ್ಕ ಮತ್ತು ಮುದ್ರಾಂಕ ಶುಲ್ಕ ವಿನಾಯಿತಿ ನೀಡುವ ನಿರ್ಧಾರವನ್ನೂ ಕೈಗೊಂಡಿದೆ.

ಮಂಗಳೂರಿನ ಜೆಬಿಎಫ್‌ ಪೆಟ್ರೋಕೆಮಿಕಲ್ಸ್, ಟಾಟಾ ಮೋಟಾರ್ಸ್‌ ಧಾರವಾಡದಲ್ಲಿ ಆರಂಭಿಸಲಿರುವ ವಾಹನ ತಯಾರಿಕಾ ಘಟಕ ಹಾಗೂ ಆದಿತ್ಯ ಬಿರ್ಲಾ ಸಮೂಹದ ರಾಜೇಶ್ವರಿ ಸಿಮೆಂಟ್ಸ್ (ಗುಲ್ಬರ್ಗ) ಸೇರಿದಂತೆ ಕೆಲವು ಉದ್ದಿಮೆಗಳಿಗೆ ವಿಶೇಷ ವಿನಾಯಿತಿಗಳನ್ನು ನೀಡುವ ಪ್ರಸ್ತಾವಗಳಿಗೆ ಸಮಿತಿ ಒಪ್ಪಿಗೆ ಸೂಚಿಸಿದೆ. ಉದ್ದಿಮೆಗಳ ಸ್ಥಾಪನೆಗೆ ಪೂರಕವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತುನೀಡುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.