ADVERTISEMENT

ಉದ್ಯಮಿ ಚಿತ್ತ ಪೆಟ್ರೋಲ್ ಬಂಕ್‌ನತ್ತ!

ನೀವೂ ಉದ್ಯಮಿಯಾಗಿ

ಸುಭಾಸ ಎಸ್.ಮಂಗಳೂರ
Published 28 ಅಕ್ಟೋಬರ್ 2014, 19:30 IST
Last Updated 28 ಅಕ್ಟೋಬರ್ 2014, 19:30 IST

ಊರಿಗೊಂದು ಸ್ಕೂಟರ್ ಇದ್ದ ಕಾಲ ಹೋಗಿ, ಮನೆಗೊಂದು ಬೈಕ್ ಬಂದಾಗಿದೆ. ಬೆಂಗಳೂರು ಅಲ್ಲದೇ ಎರಡನೇ ಹಂತದ ನಗರಗಳಾದ ಹುಬ್ಬಳ್ಳಿ–ಧಾರವಾಡ, ಮೈಸೂರು, ಮಂಗಳೂರಿನಲ್ಲಿ ಬೈಕ್‌ಗಳ ಜತೆಯಲ್ಲೇ ಕಾರುಗಳ ಸಂಖ್ಯೆಯೂ ಅಧಿಕವಾಗಿದೆ. ಹೀಗಾಗಿ, ಹೊಸ ಪೆಟ್ರೋಲ್ ಬಂಕ್‌ಗಳ ಸ್ಥಾಪನೆ ಅತ್ಯಗತ್ಯ ಹಾಗೂ ಅನಿವಾರ್ಯವೂ ಆಗಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ ಪೆಟ್ರೋಲಿಯಂ ಕಂಪೆನಿಗಳು ಇದೀಗ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಪೆಟ್ರೋಲ್ ಬಂಕ್ ತೆರೆಯಲು ಪೈಪೋಟಿ ನಡೆಸಿವೆ. ಅಷ್ಟೇ ಅಲ್ಲ, ಯುವಜನರಿಗೆ ಉದ್ಯಮಿಗಳಾಗಲು ‘ಮುಕ್ತ’ ಅವಕಾಶವನ್ನೂ ಕಲ್ಪಿಸುತ್ತಿವೆ.

ಅದು 1970–80ರ ದಶಕ. ಊರಿಗೊಂದು ಸ್ಕೂಟರ್, ತಾಲ್ಲೂಕಿಗೊಂದು ಪೆಟ್ರೋಲ್ ಬಂಕ್ ಇದ್ದ ಕಾಲ. ಪರಿಸ್ಥಿತಿ ಹೀಗಿರುವಾಗ ದಾರಿ ಮಧ್ಯೆ ಪೆಟ್ರೋಲ್ ಖಾಲಿಯಾದರೆ ವಾಹನಗಳನ್ನು ಮೈಲು ದೂರ ತಳ್ಳಬೇಕಾದ ಅನಿವಾರ್ಯತೆ. ಆದರೆ, ಈಗ ಕಾಲ ಬದಲಾಗಿದೆ. ಊರಿಗೊಂದು ಸ್ಕೂಟರ್ ಹೋಗಿ, ಮನೆಗೊಂದು ಬೈಕ್ ಬಂದಾಗಿದೆ. ಬೆಂಗಳೂರು ಸೇರಿದಂತೆ ಎರಡನೇ ಹಂತದ ನಗರಗಳಾದ ಹುಬ್ಬಳ್ಳಿ–ಧಾರವಾಡ, ಮೈಸೂರು, ಮಂಗಳೂರಿನಲ್ಲಿ ಬೈಕ್‌ಗಳ ಜತೆಯಲ್ಲೇ ಕಾರುಗಳ ಸಂಖ್ಯೆಯೂ ಅಧಿಕವಾಗಿದೆ. ಹೀಗಾಗಿ, ಹೊಸ ಪೆಟ್ರೋಲ್ ಬಂಕ್‌ಗಳ ಸ್ಥಾಪನೆ ಅತ್ಯಗತ್ಯ ಹಾಗೂ ಅನಿವಾರ್ಯವೇ ಆಗಿದೆ. ಕೇಂದ್ರ ಸರ್ಕಾರ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ ಪೆಟ್ರೋಲಿಯಂ ಕಂಪೆನಿಗಳು ಇದೀಗ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಔಟ್‌ಲೆಟ್ (ಪೆಟ್ರೋಲ್ ಬಂಕ್) ತೆರೆಯಲು ಪೈಪೋಟಿ ನಡೆಸಿವೆ. ಅಷ್ಟೇ ಅಲ್ಲ, ಯುವಜನರಿಗೆ ಉದ್ಯಮಿಗಳಾಗುವ ‘ಮುಕ್ತ’ ಅವಕಾಶ ಕಲ್ಪಿಸುತ್ತಿವೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚು ಹೆಚ್ಚು ಔಟ್‌ಲೆಟ್‌ಗಳನ್ನು ತೆರೆಯುವ ಮೂಲಕ ಗ್ರಾಹಕರಿಗೆ ಅನುಕೂಲ ಕಲ್ಪಿಸುತ್ತಿವೆ. ಅಷ್ಟೇ ಅಲ್ಲ, ಯುವ ಉದ್ಯಮಿಗಳಿಗೆ ಹೇರಳ ಅವಕಾಶ ಒದಗಿಸುತ್ತಿವೆ. ಇತ್ತೀಚಿನ ವರದಿಯಂತೆ ಇಂಡಿಯನ್ ಆಯಿಲ್ ಹಾಗೂ ಹಿಂದೂಸ್ತಾನ ಪೆಟ್ರೋಲಿಯಂ ಕಂಪೆನಿಗಳು ರಾಜ್ಯದಲ್ಲಿ 800ಕ್ಕೂ ಅಧಿಕ ಔಟ್‌ಲೆಟ್‌ ತೆರೆಯಲು ಅಧಿಸೂಚನೆ ಹೊರಡಿಸಿದ್ದು, ಉದ್ಯಮಿಗಳು ಪೆಟ್ರೋಲ್ ಬಂಕ್ ಆರಂಭಿಸುವತ್ತ ಚಿತ್ತ ಹರಿಸಿದ್ದಾರೆ.

ಆಯ್ಕೆ ಪ್ರಕ್ರಿಯೆ ಹೇಗೆ?
ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಔಟ್‌ಲೆಟ್‌ಗಳನ್ನು ತೆರೆಯುವ ಸಂಬಂಧ ಪೆಟ್ರೋಲಿಯಂ ಸಚಿವಾಲಯವು ಇದೇ ಅಕ್ಟೋಬರ್ 9ರಂದು ಪರಿಷ್ಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅದರಂತೆ, ಇನ್ನು ಮುಂದೆ ಮುಕ್ತ ವಿಭಾಗದಲ್ಲಿ ಬಿಡ್ (ಹರಾಜು) ಮೂಲಕ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಭಾಗದಲ್ಲಿ ಡ್ರಾ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ADVERTISEMENT

‘ರೂ40 ಸಾವಿರ ನಿರೀಕ್ಷೆ’

ಹೊಸದಾಗಿ  ಔಟ್‌ಲೆಟ್‌  ಆರಂಭಿಸಲು  ಬಯಸಿದ್ದೇನೆ. ಸ್ವಂತ ಜಾಗದಲ್ಲಿ ರೂ12.51 ಲಕ್ಷ (ಠೇವಣಿ ಮೊತ್ತ) ಆರಂಭಿಕ  ಬಂಡವಾಳದೊಂದಿಗೆ ಇಂಧನ ಮಾರಾಟ ಉದ್ಯಮಕ್ಕೆ ಕಾಲಿಡುತ್ತಿದ್ದೇನೆ. ಖರ್ಚು, ವೆಚ್ಚ ಕಳೆದು ತಿಂಗಳಿಗೆ ರೂ40 ಸಾವಿರ ಆದಾಯ ಬಂದರೆ ಸಾಕು. ಸದ್ಯ ನಾನು ರಸಗೊಬ್ಬರ ಮತ್ತು ಕ್ರಿಮಿನಾಶಕ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಇದು ವರ್ಷದಲ್ಲಿ ಮೂರು ತಿಂಗಳ ವ್ಯಾಪಾರ. ಒಂಬತ್ತು ತಿಂಗಳು ಖಾಲಿ ಇರಬೇಕು. ಹೀಗಾಗಿ, ಪೆಟ್ರೋಲ್ ಬಂಕ್‌ ಆರಂಭಿಸಲು ಉತ್ಸುಕನಾಗಿದ್ದೇನೆ.
ನರಸಿಂಹಲು ಕುಂಬಾರ
ಯುವ ಉದ್ಯಮಿ, ಕೊಂಚಾವರಂ, ಗುಲ್ಬರ್ಗ

ವಯೋಮಿತಿ
ನಗರ ಹಾಗೂ ಪಟ್ಟಣ (ರೆಗ್ಯುಲರ್ ರಿಟೇಲ್ ಔಟ್‌ಲೆಟ್‌ಗಳು– ROs) ಮತ್ತು ಗ್ರಾಮೀಣ ಭಾಗದ ಔಟ್‌ಲೆಟ್‌ಗಳು(RROs) ಹೆದ್ದಾರಿ ಪಕ್ಕದಲ್ಲಿ ಇರು ವಂತಿಲ್ಲ. ಪೆಟ್ರೋಲ್‌ ಬಂಕ್ ಆರಂಭಿಸುವ ಉದ್ಯಮಿಯ ವಯಸ್ಸು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 55 ವರ್ಷ ಇರಬೇಕು.

ವಿದ್ಯಾರ್ಹತೆ
ಗ್ರಾಮೀಣ ಪ್ರದೇಶಗಳಲ್ಲಿ ಔಟ್‌ಲೆಟ್ ಆರಂಭಿಸಲು ಎಸ್‌್ಎಸ್‌ಎಲ್‌ಸಿ ಹಾಗೂ ನಗರ ಪ್ರದೇಶದಲ್ಲಿ ಆರಂಭಿಸಲು ಪಿಯುಸಿ ಓದಿರಬೇಕು. ಮುಕ್ತ ವಿಭಾಗದಲ್ಲಿ ಪದವಿ ಹೊಂದಿರಬೇಕು ಎಂದು ಸೂಚಿಸಲಾಗಿದೆ.

ಹಣಕಾಸು ಸ್ಥಿತಿಗತಿ
ಪಟ್ಟಣ/ನಗರ ಪ್ರದೇಶಗಳಲ್ಲಿ ಔಟ್‌ಲೆಟ್ (ಪೆಟ್ರೋಲ್‌ ಬಂಕ್‌) ಪ್ರಾರಂಭಿಸಲು ರೂ25 ಲಕ್ಷ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಔಟ್‌ಲೆಟ್ ಆರಂಭಿಸಲು ರೂ12 ಲಕ್ಷ ಬಂಡವಾಳ ಇರಬೇಕು. ಫಿಕ್ಸೆಡ್ ಡಿಪಾಜಿಟ್, ಉಳಿತಾಯ ಖಾತೆ, ಪೋಸ್ಟ್, ಬಾಂಡ್ ಅಥವಾ ಷೇರುಗಳಲ್ಲಿ ಈ ಹಣ ಇರುವ ಬಗ್ಗೆ ಖಚಿತಪಡಿಸುವ ದಾಖಲೆ ಸಲ್ಲಿಸಬೇಕು. ಆದರೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಆಯ್ಕೆಗೆ ಇದು ಕಡ್ಡಾಯ ಮಾನದಂಡವೇನೂ ಅಲ್ಲ. ಅಲ್ಲದೇ, ಎಲ್ಲ ವಿಭಾಗಗಳಲ್ಲಿ ಅರ್ಜಿ ಸಲ್ಲಿಸುವವರು ಜಾಗ ಹೊಂದಿರಬೇಕು. ಅದು ಸ್ವಂತ, ಗುತ್ತಿಗೆ ಆಧಾರ, ಕಾರ್ಪೋರೇಷನ್ ಜಾಗ ಆಗಿರಬಹುದು.

ಬಂಕ್‌ನಲ್ಲಿ ಏನೆಲ್ಲ ಇರಬೇಕು?
ಪೆಟ್ರೋಲ್ ಬಂಕ್ ಸುತ್ತ ಕಾಂಪೌಂಡ್, ಪೆಟ್ರೋಲ್/ಡೀಸೆಲ್ ಸಂಗ್ರಹಕ್ಕೆ ಟ್ಯಾಂಕ್‌ಗಳು, ಸೂಚನಾ ಫಲಕಗಳು, ಡಿಸ್ಪೆನ್ಸರಿ ಯೂನಿಟ್, ಕಚೇರಿ, ಸ್ಟೋರ್ ರೂಂ, ಶೌಚಾಲಯ, ಶುದ್ಧ ಕುಡಿಯುವ ನೀರು, ಏರ್ ಫಿಲ್ಲಿಂಗ್ ಯೂನಿಟ್ ಮತ್ತು ದೂರವಾಣಿ ಸೌಲಭ್ಯ ಒದಗಿಸಬೇಕು ಎಂದು ಪೆಟ್ರೋಲಿಯಂ ಸಚಿವಾಲಯ ಸೂಚಿಸಿದೆ.

ಇಲ್ಲೂ ರಿಯಾಯಿತಿ ಮಾರಾಟ!

‘ಈ ಮೊದಲು 10 ವಾಹನಗಳು ಇದ್ದವರು ಒಂದು ಲೀಟರ್‌ ಲಾಭಾಂಶದಲ್ಲಿ ಶೇ 30ರಷ್ಟು ರಿಯಾಯಿತಿ ನೀಡಬೇಕು. ಅಂದರೆ, ನಿಮ್ಮ ಬಂಕ್‌ಗಳಲ್ಲೇ ಇಂಧನ ತುಂಬಿಸುತ್ತೇವೆ ಎಂಬ ಬೇಡಿಕೆ ಇಡುತ್ತಿದ್ದರು. ಈಗ ಒಂದು ವಾಹನ ಇರುವವರೂ ರಿಯಾಯಿತಿ ಕೇಳುತ್ತಿದ್ದಾರೆ. ಒಂದು ಲೀಟರ್ ಪೆಟ್ರೋಲ್ ಮಾರಾಟದಿಂದ ರೂ2.08 ಹಾಗೂ ಡೀಸೆಲ್‌ನಿಂದ ರೂ1.24 ಉಳಿಯುತ್ತದೆ. ಇದರಲ್ಲಿ ಶೇ 30ರಷ್ಟು ಅಂದರೆ ಕ್ರಮವಾಗಿ 60 ಪೈಸೆ ಮತ್ತು 35 ಪೈಸೆ ರಿಯಾಯಿತಿ ನೀಡಬೇಕು ಎಂದು ಗ್ರಾಹಕರು ಒತ್ತಾಯಿಸುತ್ತಾರೆ. ಮೊದಲೇ ಇದು ಪೈಪೋಟಿ ಹಾಗೂ ಗ್ರಾಹಕರ ಆಧಾರಿತ ಮಾರುಕಟ್ಟೆಯಾಗಿದೆ. ಹೀಗಾಗಿ ಪೆಟ್ರೋಲ್ ಬಂಕ್ ನಡೆಸುವುದು ಸುಲಭವಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಹೇಳುತ್ತಾರೆ.
ಬೈಕ್, ತ್ರಿಚಕ್ರ, ನಾಲ್ಕು, ಆರು ಚಕ್ರ ವಾಹನ ಸೇರಿದಂತೆ ದೇಶದಾದ್ಯಂತ ಪ್ರತಿನಿತ್ಯ ಒಂದು ಲಕ್ಷ ವಾಹನಗಳು ರಸ್ತೆಗೆ ಇಳಿಯುತ್ತಿವೆ ಎಂದು ಅಂದಾಜಿಸಲಾಗಿದೆ. ಹೀಗಾಗಿ, ಪೆಟ್ರೋಲ್ ಮತ್ತು ಡೀಸೆಲ್‌ಗೂ ಬೇಡಿಕೆ ಹೆಚ್ಚುತ್ತಿದ್ದು, ಅದಕ್ಕೆ ಅನುಗುಣವಾಗಿ ಔಟ್‌ಲೆಟ್‌ ತೆರೆಯಲು ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.

ಸಿಗುವ ಕಮಿಷನ್?
ತೈಲ ಮಾರಾಟಗಾರರಿಗೆ ಪ್ರಸ್ತುತ ಪೆಟ್ರೋಲ್‌ಗೆ ಪ್ರತಿಶತ ರೂ2.08 ಮತ್ತು ಡೀಸೆಲ್‌ಗೆ ರೂ1.24ರಷ್ಟು ಕಮಿಷನ್‌ ಸಂದಾಯವಾಗುತ್ತಿದೆ. ಅಲ್ಲದೇ, ಆಯಿಲ್ ಮಾರಾಟದಿಂದ ರೂ10ರಿಂದ ರೂ15 ಲಾಭಾಂಶವೂ ದೊರಕುತ್ತಿದೆ. ಕಮಿಷನನ್ನು ಶೇ 5ಕ್ಕೆ ಹೆಚ್ಚಿಸಬೇಕು ಹಾಗೂ ದರಪಟ್ಟಿಯ ಮೌಲ್ಯಕ್ಕೆ ಅನುಗುಣವಾಗಿ ಕಮಿಷನ್ ನೀಡಬೇಕು ಎಂಬುದು ಪೆಟ್ರೋಲ್ ಬಂಕ್‌ಗಳ ಮಾಲೀಕರ ಬಹುದಿನಗಳ ಬೇಡಿಕೆ.

ಬೆಲೆಯಲ್ಲಿ ಇಳಿಕೆ ಏಕೆ?
ಕಳೆದ ಎರಡು–ಮೂರು ತಿಂಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಗ್ರಾಹಕರು ಹರ್ಷಗೊಂಡಿದ್ದಾರೆ. ಆದರೆ, ಪೆಟ್ರೋಲ್ ಬೆಲೆ ಇನ್ನೂ ಇಳಿಕೆಯಾಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಲೆಕ್ಕಾಚಾರ ಹಾಕಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಗಳ ಬೆಲೆ ಇಳಿಕೆ ಕಂಡಿದ್ದು, ನಾಲ್ಕು ವರ್ಷಗಳ ಹಿಂದೆ ಇದ್ದ ಬೆಲೆ ತಲುಪಿದೆ.

ಇದು ಇನ್ನೂ ಕಡಿಮೆ ಆಗುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ಅಮೆರಿಕದಲ್ಲಿ ಕಚ್ಚಾತೈಲ ಉತ್ಪಾದನೆಯಲ್ಲಿ ಶೇ 70ರಷ್ಟು ಏರಿಕೆಯಾಗಿದೆ. ಯುರೋಪ್‌, ಜಪಾನ್‌ ಸೇರಿದಂತೆ ಕೆಲವು ಮುಂದುವರಿದ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತದ ಪರಿಣಾಮ ಪೆಟ್ರೋಲ್‌ ಉತ್ಪನ್ನಗಳ ಬೇಡಿಕೆ ತಗ್ಗಿದ್ದು, ಪರಿಣಾಮ ತೈಲ ಉತ್ಪನ್ನಗಳ ದರ ಇಳಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಸೋಸಿಯೇಷನ್ ಬೇಡಿಕೆ
ಅಖಿಲ ಭಾರತ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಕಳೆದ ಅನೇಕ ವರ್ಷಗಳಿಂದ ಪೈಸೆ ಲೆಕ್ಕದಲ್ಲಿ ಲಾಭಾಂಶ ಹಂಚಿಕೆ ಮಾಡುವ ಬದಲು ಶೇ 5ರಷ್ಟು ಕಮಿಷನ್ ನೀಡಬೇಕು ಎಂದು ಬೇಡಿಕೆ ಇಡುತ್ತಲೇ ಬಂದಿದೆ. ಅಷ್ಟೇ ಅಲ್ಲ, ಕಮಿಷನ್ ಹೆಚ್ಚಳಕ್ಕೆ ಒತ್ತಾಯಿಸಿ ಅನೇಕ ಬಾರಿ ಪ್ರತಿಭಟನೆಗೂ ಮುಂದಾಗಿದೆ.

ಬೇಡಿಕೆಯ ಮೌಲ್ಯದ (Invoice Value) ಶೇ 5ರಷ್ಟು ಕಮಿಷನ್ ಕೊಡಬೇಕು.  ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಏಳಿತವಾದರೂ ಸದ್ಯ ನಿಗದಿಪಡಿಸಿರುವ ಲಾಭಾಂಶದಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ. ಇದನ್ನು ಸರಿಪಡಿಸಬೇಕು. ಲೀಟರ್‌ಗೆ ಪೈಸೆ ಲೆಕ್ಕದಲ್ಲಿ ಕಮಿಷನ್ ನಿಗದಿಪಡಿಸಿದ್ದರಿಂದ ವ್ಯವಹಾರಕ್ಕೆ ಹೊಡೆತ ಬೀಳುತ್ತಿದೆ. ಅಲ್ಲದೇ, ಬದಲಾಗುತ್ತಿರುವ ಸಂಚಾರ ನಿಯಮ, ರಸ್ತೆ ಅಗಲೀಕರಣ, ಮೇಲ್ಸೇತುವೆ, ಬೈಪಾಸ್ ನಿರ್ಮಾಣದಿಂದ ಆ ಜಾಗದಲ್ಲಿದ್ದ ಪೆಟ್ರೋಲ್ ಬಂಕ್‌ಗಳ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಶೇ 5ರಷ್ಟು ಕಮಿಷನ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

‘ಎರಡು ದಶಕಗಳ ಹಿಂದೆ ಪೆಟ್ರೋಲ್ ಬಂಕ್ ಆರಂಭಿಸಲು ಅರ್ಜಿ ಕರೆಯಲಾಗುತ್ತಿತ್ತು. ಮುಕ್ತ ವಿಭಾಗದಲ್ಲಿ ಅರ್ಜಿ ಸಲ್ಲಿಸುವವರು ನಿಗದಿತ ಜಾಗ ಹೊಂದಿರುವುದು ಕಡ್ಡಾಯವಾಗಿತ್ತು. ಆದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ತೈಲ ಮಾರಾಟ ಕಂಪೆನಿಯೇ ಗುತ್ತಿಗೆ ಆಧಾರದಲ್ಲಿ ಜಾಗವನ್ನು ಪಡೆದು, ನೀಡುತ್ತಿತ್ತು. ಅಲ್ಲದೇ, ಆಯ್ಕೆಯ ಸಂದರ್ಭದಲ್ಲಿ ಸಂದರ್ಶನ ನಡೆಸಲಾಗುತ್ತಿತ್ತು. ಆದರೆ, ಈಗ ಪೈಪೋಟಿ ಹೆಚ್ಚಾಗಿದ್ದು. ಪೆಟ್ರೋಲ್ ಬಂಕ್ ಆರಂಭಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೇ, ಕಂಪೆನಿಗಳು ಕೂಡ ಅತ್ಯಂತ ಪಾರದರ್ಶಕವಾಗಿ ಮತ್ತು ಮುಕ್ತವಾಗಿ ಉದ್ಯಮಿಗಳಿಗೆ ಪೆಟ್ರೋಲ್ ಬಂಕ್ ಆರಂಭಿಸಲು ಅವಕಾಶ ನೀಡುತ್ತಿವೆ. ಇದು ಒಳ್ಳೆಯ ಬೆಳವಣಿಗೆ’ ಎನ್ನುತ್ತಾರೆ ಗುಲ್ಬರ್ಗದ ಪೆಟ್ರೋಲ್ ಬಂಕ್ ಮಾಲೀಕ ವಿಜಯಕುಮಾರ ಪವಾರ.

‘ಶೇ 80ರಷ್ಟು ಸಾಲ ಲಭ್ಯ’

ಸ್ವಂತ ಅಥವಾ ಲೀಸ್ ಆಧಾರ ಜಾಗ ಪಡೆದು, ಪೆಟ್ರೋಲ್ ಬಂಕ್ ಆರಂಭಕ್ಕೆ ಅನುಮತಿ ಸಿಕ್ಕಿ ರುವ ಉದ್ಯಮಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ನೀಡ ಲಾಗುವುದು. ತಿಂಗಳಿಗೆ ರೂ15 ಲಕ್ಷ ವ್ಯವಹಾರ ಮಾಡಿದರೆ, ಅದರ ಶೇ 80ರಷ್ಟು ಅಂದರೆ ರೂ12 ಲಕ್ಷದವರೆಗೆ ಸಾಲ ಕೊಡಲಾಗುತ್ತದೆ. ಕಂಪೆನಿಯ ಮಾರಾಟ ವ್ಯವಸ್ಥಾಪಕರು ಎಷ್ಟು ಮೊತ್ತದ ಪೆಟ್ರೋಲ್/ಡೀಸೆಲ್ ಮಾರಾಟವಾಗುತ್ತದೆ ಎಂದು ಆರಂಭದ ಪ್ರತಿ 15 ದಿನಕ್ಕೊಮ್ಮೆ ಲೆಕ್ಕ ಹಾಕುತ್ತಾರೆ. ಅದನ್ನು ಆಧರಿಸಿ ಸಾಲ ನೀಡಲಾಗುತ್ತದೆ.
ಶಂಕರ ಬಾಣಿ
ಲೀಡ್ ಬ್ಯಾಂಕ್ ವ್ಯವಸ್ಥಾಪಕ

‘ಯಶಸ್ಸಿಗೆ ಮೂರು ಸೂತ್ರ’
ಗ್ರಾಹಕರನ್ನು ಸೆಳೆಯುವ ಮೂಲಕ ಪೆಟ್ರೋಲ್, ಡೀಸೆಲ್‌ನ ಮಾರಾಟ ಪ್ರಮಾಣ ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ಹಣವನ್ನು (ಮೂಲ ಬಂಡವಾಳ) ಬೇರೆಡೆ ವರ್ಗಾಯಿಸಬಾರದು. ಪೆಟ್ರೋಲ್ ಬಂಕ್ ಖಾಲಿ ಇರದಂತೆ ನೋಡಿಕೊಳ್ಳಬೇಕು. ಈ ಮೂರು ಸೂತ್ರಗಳನ್ನು ಪಾಲಿಸಿದಲ್ಲಿ ಒಬ್ಬ ಯಶಸ್ವಿ ಉದ್ಯಮಿಯಾಗಬಹುದು. ಅಡಚಣೆ ಎಂಬ ಕಾರಣಕ್ಕೆ ಇಲ್ಲಿ ಹೂಡಿಕೆ ಮಾಡಿರುವ ಹಣವನ್ನು ಬೇರೆ ಕೆಲಸಕ್ಕೆ ಬಳಸಿಕೊಳ್ಳಲೇಬಾರದು. ದಶಕಗಳ ಹಿಂದೆ ಪೆಟ್ರೋಲ್ ಬಂಕ್ ಆರಂಭಿಸಲು ಸಂದರ್ಶನ ನಡೆಸಲಾಗುತ್ತಿತ್ತು. ಅಲ್ಲದೇ, ಆಯ್ಕೆ ಪ್ರಕ್ರಿಯೆ ಈಗಿನಷ್ಟು ಪಾರದರ್ಶಕವಾಗಿರಲಿಲ್ಲ. ಈಗ ಎಲ್ಲರಿಗೂ ಮುಕ್ತ ಅವಕಾಶಗಳಿವೆ. ಯುವ ಉದ್ಯಮಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
–ಅರುಣ ಪವಾರ, ಉದ್ಯಮಿ, ಗುಲ್ಬರ್ಗ

‘ಹೆಚ್ಚಿದ ಪೈಪೋಟಿ’
ದಶಕಗಳ ಹಿಂದೆ ಪೆಟ್ರೋಲ್ ಬಂಕ್‌ಗಳ ಸಂಖ್ಯೆ ಕಡಿಮೆ ಇತ್ತು. ಅಲ್ಲದೇ, ವಾಹನಗಳ ಸಂಖ್ಯೆಯೂ ಕಡಿಮೆ ಇತ್ತು. ಆಗ ಇಷ್ಟೊಂದು ಸ್ಪರ್ಧೆ, ಪೈಪೋಟಿ ಇರಲಿಲ್ಲ. ಈಗ ವಾಹನಗಳ ಸಂಖ್ಯೆ ಹೆಚ್ಚಿತ್ತಿದೆ. ಹೀಗಾಗಿ, ಪೆಟ್ರೋಲಿಯಂ ಕಂಪೆನಿಗಳು ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಔಟ್‌ಲೆಟ್ಸ್ ತೆರೆಯಲು ಮುಂದಾಗುತ್ತಿವೆ. ಈಗ ಪೈಸೆ ಲೆಕ್ಕದಲ್ಲಿ ಲಾಭಾಂಶ ಹಂಚಿಕೆ ಮಾಡಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಳಿತವಾದರೂ ಲಾಭಾಂಶ ಅಷ್ಟೇ ಇರುತ್ತದೆ. ಹೀಗಾಗಿ, ಶೇಕಡ ಆಧಾರದ ಮೇಲೆ ಲಾಭಾಂಶ ನೀಡಬೇಕು ಎಂಬುದು ನಮ್ಮ ಮನವಿ.
–ವಿಜಯಕುಮಾರ ಪಾಟೀಲ
ಪೆಟ್ರೋಲ್ ಬಂಕ್ ಮಾಲೀಕ, ಗುಲ್ಬರ್ಗ

‘ಕಮಿಷನ್ ಹೆಚ್ಚಳ ಅಗತ್ಯ’
1964ರಿಂದ 2007ರವರೆಗೆ ಗುಲ್ಬರ್ಗ ಜಿಲ್ಲೆ ಚಿಂಚೋಳಿ ತಾಲ್ಲೂಕಿನಲ್ಲಿ ಕೇವಲ ಒಂದೇ ಪೆಟ್ರೋಲ್‌ ಪಂಪ್‌ ಇತ್ತು. 2007ರಲ್ಲಿ ನಾನು ಆರಂಭಿಸಿದೆ. ಈಗ ಬಂಕ್‌ಗಳ ಸಂಖ್ಯೆ 8ಕ್ಕೆ ಏರಿದೆ. ಅಲ್ಲದೇ, ಗ್ರಾಮೀಣ ಪ್ರದೇಶಗಳಲ್ಲೂ ಔಟ್‌ಲೆಟ್‌ ಆರಂಭಿಸಲಾಗುತ್ತಿದೆ. ಒಂದೇ ಬಂಕ್‌ಗೆ ಸೀಮಿತರಾಗಿದ್ದ ಗ್ರಾಹಕರು ಹರಿದು ಹಂಚಿ ಹೋಗಿದ್ದಾರೆ. ಹೆಚ್ಚು ಔಟ್‌ಲೆಟ್‌ ತೆರೆದಂತೆ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಆದರೆ, ಉದ್ಯಮಿಗಳಿಗೆ ನಷ್ಟವಾಗಲಿದೆ. ಆದ್ದರಿಂದ ಪ್ರತಿ ಲೀಟರ್‌ಗೆ ನೀಡುವ ಕಮಿಷನ್‌ ಹೆಚ್ಚಿಸಬೇಕು. ಆರು ಮಂದಿ ಸಿಬ್ಬಂದಿ ಸಂಬಳ, ನಿರ್ವಹಣೆ ಸೇರಿದಂತೆ ತಿಂಗಳಿಗೆ ಕನಿಷ್ಠ
ರೂ 50 ಸಾವಿರ ಖರ್ಚಾಗುತ್ತಿದೆ.
–ಬಸವಣ್ಣ ಎಸ್‌.ಪಾಟೀಲ
ಪೆಟ್ರೋಲ್ ಬಂಕ್ ಮಾಲೀಕ, ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.