ADVERTISEMENT

ಎಐಐಬಿಗೆ 20 ದೇಶಗಳ ಅಂಕಿತ

ಏಷ್ಯಾ ಪ್ರಾದೇಶಿಕ ಅಭಿವೃದ್ಧಿಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ಬೀಜಿಂಗ್(ಪಿಟಿಐ): ಪ್ರಾದೇಶಿಕ ಅಭಿವ­ದ್ಧಿ­ಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಥಾಪಿಸಲಾಗಿರುವ ‘ಏಷ್ಯಾ ಮೂಲ­ಸೌಕರ್ಯ ಹೂಡಿಕೆ ಬ್ಯಾಂಕ್‌’ಗೆ (ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌–ಎಐ ಐಬಿ) ಭಾರತ ಸೇರಿ ಏಷ್ಯಾದ 20 ರಾಷ್ಟ್ರಗಳು ಶುಕ್ರವಾರ ಸಹಿ ಮಾಡಿವೆ.

ಚೀನಾ ನೇತೃತ್ವದಲ್ಲಿ ಸ್ಥಾಪನೆಯಾಗು­ತ್ತಿ­ರುವ ಈ ಬ್ಯಾಂಕ್‌ಗೆ ಭಾರತ ಸೇರಿದಂತೆ ವಿಯೆಟ್ನಾಂ, ಉಜ್ಬೇಕಿ ಸ್ತಾನ್, ಥಾಯ್ಲೆಂಡ್, ಶ್ರೀಲಂಕಾ, ಸಿಂಗಪುರ, ಕತಾರ್, ಒಮನ್, ಫಿಲಿಪ್ಪೀನ್ಸ್, ಪಾಕಿಸ್ತಾನ, ನೇಪಾಳ, ಬ್ರೂನಿ, ಬಾಂಗ್ಲಾದೇಶ, ಕಾಂಬೋಡಿಯಾ, ಕಜಕಿಸ್ತಾನ, ಕುವೈತ್, ಲಾವೊ ಪೀಪಲ್ಸ್‌ ಡೆಮಾಕ್ರಟಿಕ್ ರಿಪಬ್ಲಿಕ್, ಮಲೇಷ್ಯಾ, ಮಂಗೋಲಿಯಾ ಹಾಗೂ ಮ್ಯಾನ್ಮಾರ್ ಸದಸ್ಯ ರಾಷ್ಟ್ರಗಳಾಗಿವೆ.

ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿ­ಸಿದಂತೆ ಏಷ್ಯಾದ ದೇಶಗಳು, ಪಾಶ್ಚಿಮಾತ್ಯ ರಾಷ್ಟ್ರಗಳದ್ದೇ ಮೇಲುಗೈ­ಯಾ­ಗಿರುವ ‘ವಿಶ್ವಬ್ಯಾಂಕ್‌’ ಮತ್ತು ‘ಅಂತರ ರಾಷ್ಟ್ರೀಯ ಹಣಕಾಸು ನಿಧಿ’ (ಐಎಂಎಫ್‌) ಮೇಲೆ ಹೆಚ್ಚಿನ ಅವ­ಲಂಬನೆ ಹೊಂದುವುದನ್ನು ತಪ್ಪಿಸುವುದೇ ‘ಎಐಐಬಿ’ ಉದ್ದೇಶವಾಗಿದೆ.
ಬೀಜಿಂಗ್‌ನ ‘ಗ್ರೇಟ್‌ ಹಾಲ್‌ ಆಫ್‌ ಪೀಪಲ್‌’ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಭಾರ­ತದ ಪರವಾಗಿ ಹಣಕಾಸು ವ್ಯವಹಾರ­ಗಳ ವಿಭಾಗದ ಜಂಟಿ ಕಾರ್ಯದರ್ಶಿ ಉಷಾ ತಿಟುಸ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

‘ಪ್ರಾದೇಶಿಕ ಮೂಲಸೌಕರ್ಯ ಅಭಿವೃದ್ಧಿಗೆ ಈ ನೂತನ ಬ್ಯಾಂಕ್‌ ಹಣಕಾಸು ನೆರವು ಒದಗಿಸಲಿದೆ. ಆ ಮೂಲಕ ಎಡಿಬಿ, ಐಎಂಎಫ್‌ನಂತಹ ಬ್ಯಾಂಕ್‌ಗಳಿಗೆ ಪರ್ಯಾಯವಾಗಿ ಕಾರ್ಯ­ನಿರ್ವಹಿಸಲಿದೆ’ ಎಂದು ಉಷಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಬ್ರೆಜಿಲ್‌ನಲ್ಲಿ ನಡೆದ ‘ಬ್ರಿಕ್ಸ್‌’ ಶೃಂಗಸಭೆ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು  ಪ್ರಧಾನಿ ನರೇಂದ್ರ ಮೋದಿ ಜತೆಗಿನ ಸಭೆ ವೇಳೆ ‘ಎಐಐಬಿ’ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿ, ಸಹಭಾಗಿತ್ವದ ಆಮಂತ್ರಣ ಕೂಡ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಜಿನ್ ಪ್ರಧಾನ ಕಾರ್ಯದರ್ಶಿ: ಚೀನಾದ ಹಣಕಾಸು ಖಾತೆ ಉಪ ಸಚಿವ  ಹಾಗೂ ‘ಏಷ್ಯಾ ಅಭಿವೃದ್ಧಿ ಬ್ಯಾಂಕ್’ನ (ಎಡಿಬಿ) ಮಾಜಿ ಉಪಾ ಧ್ಯಕ್ಷರೂ ಆಗಿರುವ  ಜಿನ್ ಲಿಕುನ್ ಅವರು ‘ಎಐಐಬಿ’ ಪ್ರಧಾನ ಕಾರ್ಯದರ್ಶಿ­ಯಾಗಿ ನೇಮಿಸಲಾಗಿದೆ. ಬೀಜಿಂಗ್‌ನಲ್ಲಿ ಬ್ಯಾಂಕ್‌ನ ಪ್ರಧಾನ ಕಚೇರಿ ಇರಲಿದ್ದು, 2015ರಿಂದ ಕಾರ್ಯಾರಂಭಿಸುವ ಸಾಧ್ಯತೆ ಯಿದೆ.

ಬಂಡವಾಳ ₨6.15 ಲಕ್ಷ ಕೋಟಿ: ಒಪ್ಪಂದದಂತೆ ‘ಎಐಐಬಿ’ ಅಧಿಕೃತ ಬಂಡವಾಳ ಒಟ್ಟು 10 ಸಾವಿರ ಕೋಟಿ ಡಾಲರ್ (₨6.15 ಲಕ್ಷ ಕೋಟಿ) ಆಗಿದೆ. ಮೊದಲಿಗೆ ಚಂದಾದಾರರ ಹೂಡಿಕೆ 5 ಸಾವಿರ ಕೋಟಿ ಡಾಲರ್‌ (₨3.7 ಲಕ್ಷ ಕೋಟಿ) ಇರಲಿದೆ. ಜಿಡಿಪಿ, ಮತದಾನ ಹಕ್ಕು: ಬ್ಯಾಂಕ್‌ನ ನಿರ್ಣಯಗಳಿಗೆ ಸದಸ್ಯ ರಾಷ್ಟ್ರಗಳ ‘ಒಟ್ಟು ಆಂತರಿಕ ಉತ್ಪನ್ನ’ (ಜಿಡಿಪಿ) ಹಾಗೂ ‘ಖರೀದಿ ಸಾಮರ್ಥ್ಯದ ಹೋಲಿಕೆ’ (ಪಿಪಿಪಿ) ಸೂತ್ರದ ಆಧಾರದ ಮೇಲೆ ಮತ ಚಲಾಯಿಸುವ ಹಕ್ಕನ್ನು ನಿಗದಿಪಡಿಸಲು ತೀರ್ಮಾನಿಸಲಾಗಿದೆ.

ಈ ಸೂತ್ರದ ಅನ್ವಯ, ಚೀನಾ ನಂತರ ಭಾರತ ‘ಎಐಐಬಿ’ಯ ಎರಡನೇ ಅತಿ ದೊಡ್ಡ  ಪಾಲುದಾರ ರಾಷ್ಟ್ರವಾಗಲಿದೆ. ಬ್ರೆಜಿಲ್‌ನ ಫೋರ್ಟಲೆಜಾದಲ್ಲಿ ಇದೇ ಜುಲೈನಲ್ಲಿ ನಡೆದ ‘ಬ್ರಿಕ್ಸ್‌‘ ಶೃಂಗಸಭೆ­ಯಲ್ಲಿ ಭಾರತದ ಪ್ರತಿಪಾ ದನೆಯಂತೆ ಅಸ್ತಿತ್ವಕ್ಕೆ ಬಂದಿರುವ ‘ಬ್ರಿಕ್ಸ್‌ ಅಭಿವೃದ್ಧಿ ಬ್ಯಾಂಕ್’ನ ಸಾಲಿಗೆ ‘ಎಐಐಬಿ’ ಕೂಡ ಸೇರ್ಪಡೆ ಯಾಗಲಿದೆ. ಶಾಂಗೈನಲ್ಲಿ ಬ್ರಿಕ್ಸ್‌ ಬ್ಯಾಂಕ್‌ನ ಪ್ರಧಾನ ಕಚೇರಿ ಇದ್ದು,  ಭಾರತ ಈ ಬ್ಯಾಂಕ್‌ನ ಪ್ರಥಮ ಅಧ್ಯಕ್ಷ ರಾಷ್ಟ್ರವಾಗಿದೆ ಎಂಬುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.