ADVERTISEMENT

ಎಚ್‌ಎಎಲ್‌ನ ಡೋರ್ನಿಯರ್‌ ವಾಣಿಜ್ಯ ಹಾರಾಟ ಶೀಘ್ರ

ಪಿಟಿಐ
Published 26 ಡಿಸೆಂಬರ್ 2017, 19:38 IST
Last Updated 26 ಡಿಸೆಂಬರ್ 2017, 19:38 IST
ಎಚ್‌ಎಎಲ್‌ನ ಡೋರ್ನಿಯರ್‌ ವಾಣಿಜ್ಯ ಹಾರಾಟ ಶೀಘ್ರ
ಎಚ್‌ಎಎಲ್‌ನ ಡೋರ್ನಿಯರ್‌ ವಾಣಿಜ್ಯ ಹಾರಾಟ ಶೀಘ್ರ   

ನವದೆಹಲಿ: ಭಾರತದಲ್ಲಿಯೇ ತಯಾರಿಸಿದ ವಿಮಾನದ ವಾಣಿಜ್ಯ ಹಾರಾಟ ಶೀಘ್ರದಲ್ಲಿಯೇ ನಿಜವಾಗಲಿದೆ.

ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌), ತಯಾರಿಸಿರುವ 19 ಸೀಟುಗಳ ಡೋರ್ನಿಯರ್ ವಿಮಾನದ ಪರೀಕ್ಷಾರ್ಥ ಹಾರಾಟವು ಪೂರ್ಣಗೊಂಡಿದ್ದು, ವಾಣಿಜ್ಯ ಸೇವೆಗೆ ಸಿದ್ಧಗೊಂಡಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಡೋರ್ನಿಯರ್‌ಗೆ ಈ ವಾರ ವಾಣಿಜ್ಯ ಬಳಕೆಯ ಪ್ರಮಾಣ ಪತ್ರ ನೀಡುವ ನಿರೀಕ್ಷೆ ಇದೆ ಎಂದು ‘ಎಚ್‌ಎಎಲ್‌’ನ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ‘ಡೋರ್ನಿಯರ್‌ 228’ ವಿಮಾನವನ್ನು ಎಚ್‌ಎಎಲ್‌, ಸ್ವಿಡ್ಜರ್ಲೆಂಡ್‌ನ ತಂತ್ರಜ್ಞಾನ ಸಂಸ್ಥೆ ಆರ್‌ಯುಎಜಿ ನೆರವಿನಿಂದ ತಯಾರಿಸಿದೆ. ಇದನ್ನು ರಕ್ಷಣಾ ಪಡೆಗಳ ಬಳಕೆಗೆ ಮತ್ತು ಯುರೋಪ್‌ ಮಾರುಕಟ್ಟೆಗಾಗಿ ತಯಾರಿಸಲಾಗಿದೆ.

ವಾಣಿಜ್ಯ ಉದ್ದೇಶಕ್ಕೆ ಇದರ ಬಳಕೆ ಜಾರಿಗೆ ತರಲು ಕಾನ್ಪುರದಲ್ಲಿ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಇದೇ 28ರಂದು ಪ್ರಮಾಣ ಪತ್ರವು ‘ಎಚ್‌ಎಎಲ್‌’ನ ಕೈಸೇರಲಿದೆ ಎಂದು ‘ಡಿಜಿಸಿಎ’ ಅಧಿಕಾರಿಗಳು ತಿಳಿಸಿದ್ದಾರೆ.

ವಾಣಿಜ್ಯ ಉದ್ದೇಶಕ್ಕೆ ಇವುಗಳ ಬಳಕೆ ಜಾರಿಗೆ ಬರುವುದರಿಂದ ಕೇಂದ್ರ ಸರ್ಕಾರದ ‘ಭಾರತದಲ್ಲಿಯೇ ತಯಾರಿಸಿ’ ಕಾರ್ಯಕ್ರಮಕ್ಕೆ ಭಾರಿ ಉತ್ತೇಜನ ಸಿಗಲಿದೆ. ಸದ್ಯಕ್ಕೆ ದೇಶಿ ವಿಮಾನ ಯಾನ ಸಂಸ್ಥೆಗಳು ಎಲ್ಲ ಗಾತ್ರದ ವಿಮಾನಗಳಿಗೆ ವಿದೇಶಿ ಸಂಸ್ಥೆಗಳನ್ನೇ ನೆಚ್ಚಿಕೊಂಡಿವೆ.

ಪ್ರಾದೇಶಿಕ ವಿಮಾನ ಸೇವೆಗೂ (ಉಡಾನ್‌) ಇದರಿಂದ ಭಾರಿ ಉತ್ತೇಜನ ದೊರೆಯಲಿದೆ. ಈ ವಿಮಾನಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದರೆ ಅದನ್ನು ಪೂರೈಸಲು ಕಾನ್ಪುರದಲ್ಲಿ ವಿಶೇಷ ಜೋಡಣಾ ಘಟಕ ಸ್ಥಾಪಿಸಲಾಗಿದೆ ಎಂದು ಎಚ್‌ಎಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.