ADVERTISEMENT

ಎಫ್‌ಎಂಸಿಜಿ ಉತ್ಪನ್ನ ಬೆಲೆ ಕಡಿತ

ಪಿಟಿಐ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST
ಎಫ್‌ಎಂಸಿಜಿ ಉತ್ಪನ್ನ ಬೆಲೆ ಕಡಿತ
ಎಫ್‌ಎಂಸಿಜಿ ಉತ್ಪನ್ನ ಬೆಲೆ ಕಡಿತ   

ನವದೆಹಲಿ: ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ) ತಯಾರಿಕೆಯ ಪ್ರಮುಖ ಸಂಸ್ಥೆಗಳಾದ ಡಾಬರ್‌, ಐಟಿಸಿ, ಎಚ್‌ಯುಎಲ್‌ ಮತ್ತು ಮ್ಯಾರಿಕೊ ತಮ್ಮ ಹಲವಾರು ಉತ್ಪನ್ನಗಳ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಗ್ಗಿಸಿವೆ.

ತೆರಿಗೆ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರವು ಗ್ರಾಹಕ ಉತ್ಪನ್ನ ತಯಾರಿಕಾ ಸಂಸ್ಥೆಗಳಿಗೆ ತಾಕೀತು ಮಾಡಿದ ಬೆನ್ನಲ್ಲೇ ಸಂಸ್ಥೆಗಳು ಈ ಬೆಲೆಕಡಿತದ ನಿರ್ಧಾರ ಪ್ರಕಟಿಸಿವೆ.

ಜಿಎಸ್‌ಟಿ ತೆರಿಗೆ ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಶಾಂಪೂ, ಚರ್ಮ ಸಂರಕ್ಷಣೆ ಮತ್ತು ಇತರ ಉತ್ಪನ್ನಗಳ ಬೆಲೆ ಇಳಿಸುವುದಾಗಿ ಡಾಬರ್‌ ಪ್ರಕಟಿಸಿದೆ. ಎಲ್ಲ ಸರಕುಗಳ  ಬೆಲೆ ಕಡಿತವು ಸರಾಸರಿ ಶೇ 8 ರಿಂದ ಶೇ 10ರಷ್ಟು ಇರಲಿದೆ. ಮುಂದಿನ ತಿಂಗಳು ಮಾರುಕಟ್ಟೆಗೆ ಬರುವ ಹೊಸ ಸರಕಿನ ಗರಿಷ್ಠ ಮಾರಾಟ ಬೆಲೆಯನ್ನು (ಎಂಆರ್‌ಪಿ) ಪರಿಷ್ಕರಿಸುವುದಾಗಿಯೂ ಸಂಸ್ಥೆ ತಿಳಿಸಿದೆ.

ADVERTISEMENT

‘ಸಗಟು ಮತ್ತು ಚಿಲ್ಲರೆ ಮಾರಾಟಗಾರರ ಸದ್ಯದ ದಾಸ್ತಾನಿನ ಬೆಲೆಯಲ್ಲಿ ಶೇ 9ರಷ್ಟು ಕಡಿತ ಮಾಡಲಾಗುವುದು’ ಎಂದು ಡಾಬರ್‌ ಇಂಡಿಯಾದ ಮುಖ್ಯ ಹಣಕಾಸು ಅಧಿಕಾರಿ ಲಲಿತ್‌ ಮಲಿಕ್‌ ತಿಳಿಸಿದ್ದಾರೆ.

50 ಗ್ರಾಂ ಪ್ಯಾಕ್‌ನ ಬ್ರೂಗೋಲ್ಡ್‌ ಕಾಫಿ ದರವನ್ನು ₹ 145 ರಿಂದ ₹ 111ಕ್ಕೆ ಇಳಿಸಿರುವುದಾಗಿ ಹಿಂದೂಸ್ತಾನ್‌ ಯುನಿಲಿವರ್‌ (ಎಚ್‌ಯುಎಲ್‌) ವಕ್ತಾರ ತಿಳಿಸಿದ್ದಾರೆ.

‘ಡಿಯೊಡರಂಟ್ಸ್‌, ಹೇರ್‌ ಜೆಲ್‌, ಹೇರ್‌ ಕ್ರೀಮ್‌ ಮತ್ತು ಬಾಡಿಕೇರ್‌ ಉತ್ಪನ್ನಗಳ ಗರಿಷ್ಠ ಮಾರಾಟ ಬೆಲೆಯನ್ನು (ಎಂಆರ್‌ಪಿ) ಕಡಿತ ಮಾಡಲಾಗಿದೆ’ ಎಂದು ಮ್ಯಾರಿಕೊ ಸಿಎಫ್‌ಒ ವಿವೇಕ್‌ ಕರ್ವೆ ತಿಳಿಸಿದ್ದಾರೆ.

‘ಉತ್ಪನ್ನಗಳ ಹೊಸ ತಯಾರಿಕೆಯನ್ನು ಹೊಸ ಎಂಆರ್‌ಪಿಗೆ ಅನುಗುಣವಾಗಿ ಶೀಘ್ರದಲ್ಲಿಯೇ ಕಾರ್ಯಗತಗೊಳಿಸಲಾಗುವುದು. ಸದ್ಯದ ದಾಸ್ತಾನಿನ ಮೇಲೆ ಪರಿಷ್ಕೃತ ದರ ಅಂಟಿಸಿ ಮಾರಾಟ ಮಾಡಲಾಗುವುದು ಇಲ್ಲವೇ ವಿತರಕರು ಮತ್ತು ವರ್ತಕರಿಗೆ ಹೆಚ್ಚುವರಿ ರಿಯಾಯ್ತಿ ನೀಡಲಾಗುವುದು’ ಎಂದು ಅವರು ಹೇಳಿದ್ದಾರೆ.

ಶಾಂಪೂ, ಡಿಟರ್ಜೆಂಟ್‌ ಮತ್ತು ಸೌಂದರ್ಯ ಪ್ರಸಾಧನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಹೊರೆಯನ್ನು ಶೇ 28ರಿಂದ ಶೇ 18ಕ್ಕೆ ಇಳಿಸಲಾಗಿದೆ. ಹೊಸ ದರಗಳು ಈ ತಿಂಗಳ 15ರಿಂದಲೇ  ಜಾರಿಗೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.