ADVERTISEMENT

ಐಸ್‌ಕ್ರೀಮ್‌ ಉದ್ಯಮ ವೇಗದ ಬೆಳವಣಿಗೆ

ಗಣೇಶ್ ಅಮೀನಗಡ
Published 14 ಏಪ್ರಿಲ್ 2015, 19:30 IST
Last Updated 14 ಏಪ್ರಿಲ್ 2015, 19:30 IST

ಚಳಿಗಾಲ ಹೊರತುಪಡಿಸಿ ವರ್ಷದ ಉಳಿದೆಲ್ಲಾ ಅವಧಿಯಲ್ಲೂ ಐಸ್‌ಕ್ರೀಮ್‌ ತಿನ್ನುವವರಿದ್ದಾರೆ. ಬಗೆಬಗೆಯ ಐಸ್‌ಕ್ರೀಮ್‌ ಸೇವನೆ ಈಗ ಆಧುನಿಕ ಜೀವನಶೈಲಿಯ ಭಾಗವೇ ಆಗಿಬಿಟ್ಟಿದೆ. ಹಾಗಾಗಿ ರಾಜ್ಯದಲ್ಲಿ ಐಸ್‌ಕ್ರೀಮ್‌ ಉದ್ಯಮದ ವಾರ್ಷಿಕ ವಹಿವಾಟು ರೂ250–300 ಕೋಟಿ ಮೀರಿದೆ   ವಿವರ ಇಲ್ಲಿದೆ

ಅದೊಂದು ಕಾಲವಿತ್ತು. ಬೇಸಿಗೆಯಲ್ಲಿ ಮನೆ ಮುಂದೆ ‘ಬರ್ಪರೇ ಬರ್ಪು’ (ಐಸ್‌) ಎಂದು ಮಾರುವವನಿಗೆ ಕಾಯುತ್ತಾ ಕೂರುತ್ತಿದ್ದೆವು. ಆತ ಕೂಗಿದ ಕೂಡಲೇ ಮನೆಯಲ್ಲಿದ್ದ ಹಳೆಯ ವಸ್ತುಗಳನ್ನು ಕೊಟ್ಟು ಐಸ್‌ಕ್ಯಾಂಡಿ ಕೊಳ್ಳುತ್ತಿದ್ದೆವು.  ಇನ್ನು ಕೆಲ ಬಾರಿ ಡಬ್ಬಿಯಲ್ಲಿದ್ದ ಐಸ್‌ ತೆಗೆದು ಪುಡಿ ಮಾಡಿ ಕಡ್ಡಿಗೆ ಸಿಕ್ಕಿಸಿ, ಬೇಕಾದ ಬಣ್ಣ ಹಾಕಿ ಕೊಟ್ಟರೆ ‘ಐಸ್‌ ಗೋಲಾ’ ತಿನ್ನಲು ಸಿದ್ಧ.

ಆದರೆ, ಈಗ ಸಾಮಾನ್ಯ ಅಂಗಡಿಯಿಂದ ಹಿಡಿದು ಹವಾನಿಯಂತ್ರಿತ ಹೋಟೆಲಿನೊಳಗೆ ಕುಳಿತು ವಿವಿಧ ಬಗೆಯ ಐಸ್‌ಕ್ರೀಮ್‌ ಕಂಡು, ಕೇಳಿದ್ದನ್ನು ಪಡೆದು ತಿನ್ನುವಾಗ ಹಳೆಯ ದಿನಗಳ ನೆನಪು ಕಾಡುತ್ತವೆ.

ಎಪ್ಪತ್ತು, ಎಂಬತ್ತರ ದಶಕದಲ್ಲಿ ಐಸ್‌ಕ್ರೀಮ್‌ ತಯಾರಿಸಿ ಮಾರುವುದು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಂಘಟಿತ ಉದ್ಯಮವೇನೂ ಆಗಿರಲಿಲ್ಲ. ಇಲ್ಲಿ ಬಹುತೇಕ ಅಸಂಘಟಿತ ವಲಯದ ಪಾಲೇ ದೊಡ್ಡದಿತ್ತು. ಅಂದರೆ, ಸಣ್ಣ ಸಣ್ಣ ಘಟಕಗಳಲ್ಲಿ ಐಸ್‌ ತಯಾರಿಸಿ ಕ್ಯಾಂಡಿ ಇಲ್ಲವೆ ತಂಪು ಪಾನೀಯವಾಗಿ ಮಾರಾಟ ಮಾಡುವುದು ನಡೆಯುತ್ತಿತ್ತು. ಈಗಲೂ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಐಸ್‌ಕ್ಯಾಂಡಿ ಮತ್ತು ಐಸ್‌ಕ್ರೀಮ್‌ ತಯಾರಿಕೆ ಎನ್ನುವುದು ಗುಡಿ ಕೈಗಾರಿಕೆಯಾಗಿಯೇ ಉಳಿದಿದೆ.

ತೊಂಬತ್ತರ ದಶಕದ ನಂತರ ಐಸ್‌ಕ್ರೀಮ್‌ ಉದ್ಯಮ ಸಂಘಟಿತವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಯತೊಡಗಿತು. ಐಸ್‌ಕ್ರೀಮ್‌ ತಿನ್ನುವುದು ಕೇವಲ ಬಿರುಬೇಸಿಗೆಯ ಋತುವಿನಲ್ಲಷ್ಟೇ ಅಲ್ಲ, ಬಾಯಾರಿಕೆ ಆದಾಗ ಮಾತ್ರವೇ ಐಸ್‌ಕ್ಯಾಂಡಿ, ಐಸ್‌ ಕ್ರೀಮ್‌ ತಿನ್ನುವುದು ಕ್ರಮ ಎನ್ನುವಂತಿಲ್ಲ. ಚಳಿಗಾಲ ಹೊರತುಪಡಿಸಿ ವರ್ಷದ ಉಳಿದೆಲ್ಲಾ ಅವಧಿಯಲ್ಲೂ ಐಸ್‌ಕ್ರೀಮ್‌ ತಿನ್ನುವವರಿದ್ದಾರೆ. ಬಗೆಬಗೆಯ ಐಸ್‌ಕ್ರೀಮ್‌ ಸೇವನೆ ಈಗ ಆಧುನಿಕ ಜೀವನಶೈಲಿಯ ಭಾಗವೇ ಆಗಿಬಿಟ್ಟಿದೆ. ಹಾಗಾಗಿಯೇ, ಈಗ ಐಸ್‌ಕ್ರೀಮ್‌ ಉದ್ಯಮದ ವಾರ್ಷಿಕ ವಹಿವಾಟು ರಾಜ್ಯದಲ್ಲಿ ರೂ250–300 ಕೋಟಿಯನ್ನೂ ಮೀರುವಂತಿದೆ.

ಆರಂಭದಲ್ಲಿ ಐಸ್‌ಕ್ರೀಮ್‌ ಎಂದರೆ, ವೆನಿಲ್ಲಾ, ಪಿಸ್ತಾ, ಸ್ಟ್ರಾಬೆರಿ, ಬಟರ್ ಸ್ಕಾಚ್‌ ಮಾತ್ರ ಇದ್ದವು. ಈಗ ಎಂಬತ್ತಕ್ಕಿಂತ ಅಧಿಕ ಬಗೆಯ, ವೈವಿಧ್ಯಮಯ ಸ್ವಾಧ, ಬಣ್ಣದ ಐಸ್‌ಕ್ರೀಮ್‌ ಮತ್ತು ಕ್ಯಾಂಡಿಗಳು ಮಾರಾಟವಾಗುತ್ತಿವೆ. ಇವುಗಳಲ್ಲಿ ಚಾಕೊಬಾರ್‌, ನಟ್ಟಿ ಚಾಕೊಬಾರ್, ಡುಯೆಟ್ಸ್‌ ಮೊದಲಾದವು ಪ್ರಸಿದ್ಧ.

ಬೇಸಿಗೆ ಪ್ರಯುಕ್ತ ರಾಜ್ಯದಾದ್ಯಂತ ಈಗ ಐಸ್‌ಕ್ರೀಮ್‌ ಮಾರಾಟ ಜೋರಾಗಿದೆ. ಮನೆಯಲ್ಲಿನ ಲಿಂಬೆಹಣ್ಣಿನ ಪಾನಕದಿಂದ ಹಿಡಿದು, ಗೋಲಿ ಸೋಡಾ, ಬಹುರಾಷ್ಟ್ರೀಯ ಕಂಪೆನಿಯ ತಂಪು ಪಾನೀಯಗಳ ಜತೆಗೆ, ಸ್ಥಳೀಯವಾಗಿ ಸಿಗುವ ತಂಪು ಪಾನೀಯಗಳಿಗೆ ಮೊರೆ ಹೋಗುವವರೇ ಹೆಚ್ಚು. ಇದರೊಂದಿಗೆ ಐಸ್‌ಕ್ರೀಮ್‌ಗೂ ಈಗ ಬೇಡಿಕೆ ಹೆಚ್ಚು.
ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೂ ಐಸ್‌ಕ್ರೀಮ್‌ ಮಾರಾಟದ ಸೀಜನ್‌ ಆಗಿರುವುದರಿಂದ ಸ್ಥಳೀಯ ತಯಾರಕರ ಜತೆಗೆ, ಬ್ರ್ಯಾಂಡೆಡ್‌ ಕಂಪೆನಿಗಳ ಐಸ್‌ಕ್ರೀಮ್‌ಗೂ ಎಲ್ಲಿಲ್ಲದ ಬೇಡಿಕೆ. ಮೈಸೂರಿನಲ್ಲಿ ದಸರಾದಲ್ಲೂ ಐಸ್‌ಕ್ರೀಮ್ ಸೀಜನ್ ಇರುತ್ತದೆ.

ಮೈಸೂರು ಭಾಗದಲ್ಲಿ ಜಾಯ್‌ ಐಸ್‌ಕ್ರೀಮ್‌ ಸೇರಿದಂತೆ, ಆದಿತ್ಯ, ಕಿಡ್ಸ್‌, ಕೂಲ್‌ ಡೆ, ಟ್ರೆಂಜ್, ನ್ಯಾಚುರಲ್‌ ಪ್ರಮುಖ ಐಸ್‌ಕ್ರೀಮ್‌ ಮತ್ತು ಐಸ್‌ಕ್ಯಾಂಡಿ ಬ್ರ್ಯಾಂಡ್‌ಗಳು. ಇವುಗಳಲ್ಲಿ ಜಾಯ್‌ ಐಸ್‌ಕ್ರೀಮ್‌ ಬಹಳ ಹಿರಿಯ ಕಂಪೆನಿ. ದಾವಣಗೆರೆ ಭಾಗದಲ್ಲಿ ‘ಮೋತಿ’ ಕಂಪೆನಿ ಐಸ್‌ಕ್ರೀಮ್‌ ಉತ್ಪನ್ನಗಳು ಹೆಸರುವಾಸಿ. ಇದೆ.

ಕೃಷ್ಣಾ, ಅರುಣ, ವಾಡಿಲಾಲ್‌, ಅಮುಲ್‌, ಆದಿತ್ಯ ಹೆಸರಿನ ಐಸ್‌ಕ್ರೀಮ್ ಉತ್ಪನ್ನಗಳು ಉತ್ತರ ಕರ್ನಾಟಕದಲ್ಲಿ ಮಾರಾಟವಾಗುತ್ತಿವೆ. ಹುಬ್ಬಳ್ಳಿ ಮೂಲದ ‘ವೇವ್‌’ ಐಸ್‌ಕ್ರೀಮ್ ಇದೆ. ಇದರೊಂದಿಗೆ ಮಂಗಳೂರಿನಿಂದ ಬರುವ ‘ಕೃಷ್ಣಾ’ ಐಸ್‌ಕ್ರೀಮ್, ಚೆನ್ನೈಯಿಂದ ಅರುಣ ಐಸ್‌ಕ್ರೀಮ್ ಉತ್ಪನ್ನಗಳು ಉತ್ತರ ಕರ್ನಾಟಕದಲ್ಲಿ ಮಾರಾಟ ಆಗುತ್ತವೆ. 

ಉತ್ತರ ಕನ್ನಡದ ಯಲ್ಲಾಪುರದ ಕಿರವತ್ತಿಯಿಂದ ‘ಹಂಗ್ಯೊ’ ಐಸ್‌ಕ್ರೀಮ್ ಬರುತ್ತದೆ. ಕೊಂಕಣಿಯ ‘ಹಂಗ್ಯೊ’ ಕನ್ನಡದಲ್ಲಿ ‘ಇಲ್ಲಿ ಬಾ’ ಎಂದರ್ಥ. ಉಡುಪಿ ಜಿಲ್ಲೆಯ ಬ್ರಹ್ಮಾವರ ಹತ್ತಿರದ ಹಿರಿಯೂರು ಬಳಿ ಹಾಗೂ ಕಿರವತ್ತಿಯಲ್ಲಿ ‘ಹಂಗ್ಯೊ’ ಕಾರ್ಖಾನೆಗಳಿವೆ.
ಕರಾವಳಿ ಭಾಗದಲ್ಲಿ, ಅದರಲ್ಲೂ ಮಂಗಳೂರಿನಲ್ಲಿ ವರ್ಷದ ಬಹುತೇಕ ಅವಧಿಯಲ್ಲಿ ಐಸ್‌ಕ್ರೀಮ್‌ ಮಾರಾಟ ಜೋರಾಗಿರುತ್ತದೆ. ಮಂಗಳೂರಿನಲ್ಲಿ ಐಡಿಯಲ್‌ ಐಸ್‌ಕ್ರೀಮ್‌ ಬಹಳ ಜನಪ್ರಿಯ. ಹಂಗ್ಯೊ ಸಹ ಹೆಸರುವಾಸಿಯಾಗಿದೆ.

ವಿಜಯಪುರದಲ್ಲಿ ‘ಆಕ್ಟೊರಿಚ್‌’  ಎಂದಿದೆ. ಕಲಬುರ್ಗಿಯಲ್ಲಿ ‘ಕೃಷ್ಣಾ’ ಐಸ್‌ಕ್ರೀಮ್ ಪ್ರಸಿದ್ಧವಾಗಿದ್ದರೆ, ಹೈದರಾಬಾದ್‌ ಕರ್ನಾಟಕಕ್ಕೆ ಸೋಲಾಪುರ, ಹೈದ್ರಾಬಾದ್‌, ಬೆಂಗಳೂರು ಹಾಗೂ ಮೈಸೂರಿನಿಂದ ಐಸ್‌ಕ್ರೀಮ್ ಸರಬರಾಜಾಗುತ್ತವೆ.

ADVERTISEMENT
ಹೀಗೆ ತಯಾರಾಗುತ್ತದೆ

ಐಸ್‌ಕ್ರೀಮ್‌ ತಯಾರಿಕೆಗೆ ಹಾಲಿನ ಪುಡಿ, ಬೆಣ್ಣೆ, ಸಕ್ಕರೆ ಕಚ್ಚಾವಸ್ತುಗಳು. ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ 80 ಡಿಗ್ರಿ ಸೆಲ್ಸಿಯಸ್ ಶಾಖದಲ್ಲಿ ಪಾಶ್ಚರೀಕರಣ ಮಾಡಲಾಗುತ್ತದೆ. ನಂತರ ಹದವಾಗಿ ಬೆರೆಯಲು ಬೇಕಾದ ಕ್ರಮ ಕೈಗೊಂಡು ಯಾವ ಫ್ಲೇವರ್ ಬೇಕೋ ಅದನ್ನು ಮಿಶ್ರಣ ಮಾಡಿ ಐಸ್‌ಕ್ರೀಮ್‌ ಸಿದ್ಧಗೊಳಿಸಲಾಗುತ್ತದೆ. ನಂತರ ಮೈನಸ್‌ 5 ಡಿಗ್ರಿಯಲ್ಲಿ ತಂಪುಗೊಳಿಸಲಾಗುತ್ತದೆ.

ಐಸ್‌ಕ್ರೀಮ್‌ ತಯಾರಿಕೆಗೆ ಬೇಕಾದ ನೀರನ್ನು ಆಯ್ಕೆ ಮಾಡಿಕೊಳ್ಳುವಾಗಲೇ ಮುತುವರ್ಜಿ ವಹಿಸಲಾಗುತ್ತದೆ. ನೀರನ್ನು ಮೊದಲಿಗೆ ಫಿಲ್ಟರ್‌ ಮಾಡಿ ನಂತರ ಕುದಿಸಿ, ನಂತರ ತಂಪುಗೊಳಿಸಿ ಬಳಸಲಾಗುತ್ತದೆ.

ಎಷ್ಟೊಂದು ವೈವಿಧ್ಯ?
ಮಕ್ಕಳಿಗೆ ಕಿಡ್ಸ್ ಜಾಯ್‌ ಬಾಲ್‌ ಎಂಬುದಿದೆ. ಇದನ್ನು ತಿಂದ ಮೇಲೆ ಮಕ್ಕಳು ಆಟವಾಡಬಹುದು. ಹೀಗೆಯೇ ಅನೇಕ ಕಂಪೆನಿಗಳು ಮಕ್ಕಳಿಗೆ ಸಂಬಂಧಿಸಿ ಐಸ್‌ಕ್ರೀಮ್‌ ಸಿದ್ಧಗೊಳಿಸಿವೆ. ಡುಯೆಟ್ಸ್ ಎಂಬ ಐಸ್‌ಕ್ರೀಮ್‌ ಇದೆ. ಇದರಲ್ಲಿ ಎರಡು ಫ್ಲೇವರ್ ಇದ್ದರೆ, ಐಸ್‌ಕ್ರೀಮನ್ನು ಕಡ್ಡಿಯೊಂದಿಗೆ ಸೇರಿಸಿ ಕೊಡುವ ಕುಲ್ಫಿ ಸ್ಟಿಕ್ ಪ್ರಸಿದ್ಧ. ಇದರೊಂದಿಗೆ ಸಹ ಕೋನ್ಸ್‌ ಬಲು ಜನಪ್ರಿಯ.

ಬಿಸ್ಕೆಟ್‌ಗೆ ಚಾಕೊಲೆಟ್‌ ಕೋಟಿಂಗ್‌ ಕೊಟ್ಟ ಮೇಲೆ ಐಸ್‌ಕ್ರೀಮ್‌ ತುಂಬಿದ್ದು ಕೋನ್‌. ಇದು ಈಗ ಯಂತ್ರಗಳ ಮೂಲಕ ತುಂಬಲಾಗುತ್ತದೆ. ಯಂತ್ರಗಳಿಗೆ ಖಾಲಿ ಕೋನ್‌ ಜೋಡಿಸಿದರಾಯಿತು. ಅದಕ್ಕೆ ಸ್ವಯಂಚಾಲಿತ ಯಂತ್ರಗಳು ಐಸ್‌ಕ್ರೀಮ್‌ ತುಂಬಿಬಿಡುತ್ತವೆ. ನಂತರ ಚಾಕ್ಲೇಟ್‌ ಬೀಳುತ್ತದೆ. ಆಮೇಲೆ ಕವರ್‌ ಮುಚ್ಚಿಕೊಳ್ಳುತ್ತದೆ. ನಂತರ ಕಾರ್ಮಿಕರು ರಟ್ಟಿನ ಬಾಕ್ಸ್‌ನಲ್ಲಿ ಪ್ಯಾಕ್‌ ಮಾಡಿ ಮಾರಾಟ ವಿಭಾಗಕ್ಕೆ ರವಾನಿಸುತ್ತಾರೆ.

ಜಾಯ್‌ ಎಂಜಾಯ್‌
ಇವುಗಳಲ್ಲಿ ಪ್ರಥಮ ಬ್ರ್ಯಾಂಡೆಡ್ ಐಸ್‌ಕ್ರೀಮ್ ಜಾಯ್‌. 1948ರಲ್ಲಿ ಮುಂಬೈನಲ್ಲಿ ಎಲ್‌.ಸಿ. ಜಾವಾ ಎಂಬವರು ಶುರು ಮಾಡಿದರು. ಕಾರ್ಖಾನೆಯನ್ನು ಆರಂಭಿಸುವುದರ ಜತೆಗೆ, ದೇಶದಾದ್ಯಂತ ಮಾರಾಟವನ್ನು ವಿಸ್ತರಿಸಿದರು. ಆಮೇಲೆ ದೇಶದ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಒಂದಾಯಿತು. ಎಲ್.ಸಿ.ಜಾವಾ ಅವರ ನಂತರ ಅವರ ಪುತ್ರ ಓಂ ಜಾವಾ ಅವರು ಮುಂದುವರಿಸಿಕೊಂಡು ಹೋದರು. 1989ರಲ್ಲಿ ರಾಯಲ್ಟಿ ಪಡೆದು ಬೇರೆ ಬೇರೆ ರಾಜ್ಯಗಳಿಗೆ ಮಾರಾಟ ಮಾಡಿದರು.

ಕರ್ನಾಟಕದ ಫ್ರಾಂಚೈಸಿಯಾಗಿ ಮೈಸೂರಿನ ಪಿ.ಜಯರಾಮ್ ವಿತರಣೆ ಮತ್ತು ಮಾರಾಟದ ಹಕ್ಕು ಪಡೆದು ಕೊಂಡರು. ಅವರಿಗಿಂತ ಮೊದಲು ಮಾಧವ ರಾವ್‌ ನಡೆಸುತ್ತಿದ್ದರು. ಜಯರಾಮ್‌ ಅವರು ಜಾಯ್‌ ವಿತರಣೆ ಶುರು ಮಾಡಿ 25 ವರ್ಷಗಳೇ ಆಯಿತು.

ಆಧುನಿಕ ಸ್ಪರ್ಶ
ಆಧುನಿಕ ತಂತ್ರಜ್ಞಾನ ಐಸ್‌ಕ್ರೀಮ್‌ ತಯಾರಿಕೆ ಕ್ಷೇತ್ರವನ್ನೂ ಮುಟ್ಟಿದೆ. 2000ನೇ ಇಸವಿ ನಂತರ ಐಸ್‌ಕ್ರೀಮ್‌ ತಯಾರಿಕೆ ಕ್ಷೇತ್ರದಲ್ಲಿ ಆಟೊಮ್ಯಾಟಿಕ್‌ ಯಂತ್ರಗಳೂ ಹೆಚ್ಚಾದವು.
ಇತ್ತೀಚಿನ ವರ್ಷಗಳಲ್ಲಿ ಕೇವಲ ಒಂದು ಗಂಟೆಯಲ್ಲಿ ಐದು ಸಾವಿರ ಐಸ್‌ಕ್ರೀಮ್‌ ಕಪ್‌ ಸಿದ್ಧಗೊಳ್ಳುವಷ್ಟು ವೇಗದ ಚಟುವಟಿಕೆ ಯಂತ್ರಗಳು ಬಂದಿವೆ. ಅಷ್ಟೇ ಅಲ್ಲ, ವೇಗದ ಜತೆಗೇ ಐಸ್‌ಕ್ರೀಮ್‌ಗೆ ಫಿನಿಷಿಂಗ್ ಟಚ್ ನೀಡುವ ಕೆಲಸವೂ ಸ್ವಯಂಚಾಲಿತ ಯಂತ್ರ ಗಳದ್ದೇ ಆಗಿದೆ. ಹೀಗೆ ಆಧುನಿಕ ಯಂತ್ರ ಗಳು ಅವತರಿಸಿದ್ದರಿಂದಲೇ ವೈವಿಧ್ಯಮಯ ಐಸ್‌ಕ್ರೀಮ್‌, ಐಸ್‌ಕ್ಯಾಂಡಿಗಳನ್ನು ಗ್ರಾಹಕ ರಿಗೆ ತಯಾರಿಸಿ ಕೊಡಲು ಕಾರ್ಖಾನೆಗಳಿಗೆ ಸಾಧ್ಯವಾಗಿದೆ.  ಜತೆಗೆ, ಐಸ್‌ಕ್ರೀಮ್‌ ತಯಾರಿಕಾ ಕ್ಷೇತ್ರವೂ ಗುಣಮಟ್ಟ, ಗ್ರಾಹಕರ ಆರೋಗ್ಯ ಸುರಕ್ಷತೆಯತ್ತ ಕಾಳಜಿ ವಹಿಸುತ್ತಿದೆ ಎಂದು ಉದ್ಯಮದ ಬೆಳವಣಿಗೆ ಚಿತ್ರಣ ನೀಡುತ್ತಾರೆ ಮೈಸೂರಿನ ಜಾಯ್‌ ಐಸ್‌ಕ್ರೀಮ್‌ ಕಂಪೆನಿಯ ನಿರ್ದೇಶಕ ಜಯರಾಮ್.
ಹೀಗೆ, ಎಲ್ಲ ವಯೋಮಾನದವರನ್ನು ಸೆಳೆಯುವ ಐಸ್‌ಕ್ರೀಮ್‌ ವಹಿವಾಟೂ ಸಹ ಬಿಸಿಲ ಬೇಗೆ ಏರಿದಂತೆ ಹೆಚ್ಚುತ್ತಿದೆ.

ಎಪ್ಪತ್ತರ ದಶಕದಲ್ಲಿ ಐಸ್‌ಕ್ರೀಮ್‌  ಕಪ್‌ಗಳಲ್ಲಿ ಮಾತ್ರ ಮಾರಾಟವಾಗುತ್ತಿತ್ತು. ಆಗ ವೆನಿಲ್ಲಾ ಕಪ್‌ ಐಸ್‌ಕ್ರೀಂ ಮಾತ್ರ ಎಲ್ಲ ಕಡೆ ಪ್ರಸಿದ್ಧಿ ಪಡೆದಿತ್ತು. ಆದರೆ, ಈಗ ಗ್ರಾಹಕರ ಅಭಿರುಚಿಗೆ ತಕ್ಕಂತೆ ವೈವಿಧ್ಯಮಯ ಆಯ್ಕೆಗಳಿಗೆ ಅವಕಾಶವಿದೆ.

ಬೇಸಿಗೆ ಕಾಲದಲ್ಲಿ, ಬಾಯಾರಿಕೆ ಆದಾಗ ಮಾತ್ರ ಐಸ್‌ಕ್ರೀಮ್‌ ತಿನ್ನಬೇಕೆಂಬುದು ಹಳೆ ಮಾತಾಯಿತು. ಮದುವೆ, ಮಕ್ಕಳ ಹುಟ್ಟುಹಬ್ಬ, ನಾಮಕರಣ ಮೊದಲಾದ ಸಮಾರಂಭಗಳಲ್ಲಿ ಐಸ್‌ಕ್ರೀಮ್‌ ಬೇಡಿಕೆ ಹೆಚ್ಚಿದೆ. ಆದರೆ, ಮದುವೆಯಲ್ಲಿ ಬಗೆ ಬಗೆ ಸಿಹಿತಿಂಡಿ ಮಾಡಿಸುವವರು ಐಸ್‌ಕ್ರೀಮ್‌ ಕುರಿತು ಚೌಕಾಸಿ ಮಾಡುತ್ತಾರೆ. ಮದುವೆಗೆ 25ರಿಂದ 30 ಲಕ್ಷ ರೂಪಾಯಿ ವೆಚ್ಚ ಮಾಡಿರುತ್ತಾರೆ. ಆದರೆ ಒಳ್ಳೆಯ ಐಸ್‌ಕ್ರೀಮ್‌ ಕೊಡಲು ಹಿಂದೆಮುಂದೆ ನೋಡುತ್ತಾರೆ. ಒಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಉದ್ಯಮಕ್ಕೆ ವೇಗದ ಬೆಳವಣಿಗೆ ಬಂದಿದೆ.
ಜಯರಾಮ್, ನಿರ್ದೇಶಕ, ಜಾಯ್‌ ಐಸ್‌ಕ್ರೀಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.