ADVERTISEMENT

ಒಂದೇ ದಿನದಲ್ಲಿ ₹6 ಸಾವಿರ ಏರಿಕೆ ಕಂಡ ಅಡಿಕೆ ಧಾರಣೆ

ಬೆಂಬಲ ಬೆಲೆಗಿಂತ ಕ್ವಿಂಟಲ್‌ಗೆ ₹13 ಸಾವಿರ ಅಧಿಕ

ಚಂದ್ರಹಾಸ ಹಿರೇಮಳಲಿ
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ಒಂದೇ ದಿನದಲ್ಲಿ ₹6 ಸಾವಿರ ಏರಿಕೆ ಕಂಡ ಅಡಿಕೆ ಧಾರಣೆ
ಒಂದೇ ದಿನದಲ್ಲಿ ₹6 ಸಾವಿರ ಏರಿಕೆ ಕಂಡ ಅಡಿಕೆ ಧಾರಣೆ   
ಶಿವಮೊಗ್ಗ: ಅಡಿಕೆ ಧಾರಣೆ ಒಂದೇ ದಿನ ಕ್ವಿಂಟಲ್‌ಗೆ ₹ 6 ಸಾವಿರ ಹೆಚ್ಚಳವಾಗಿದ್ದು, ಮಲೆನಾಡಿನ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವ ರಾಶಿ ಅಡಿಕೆ ದರ ₹ 40 ಸಾವಿರ ದಾಟಿದೆ.
 
ಪ್ರಸಕ್ತ ವರ್ಷದ ಫೆಬ್ರುವರಿ ಅಂತ್ಯದವರೆಗೂ ಅಡಿಕೆ ಧಾರಣೆ ಕ್ವಿಂಟಲ್‌ಗೆ ₹ 25 ಸಾವಿರ–26 ಸಾವಿರದ ಮಧ್ಯೆಯೇ ಸುತ್ತುತ್ತಿತ್ತು. ಈ ತಿಂಗಳ ಆರಂಭದಲ್ಲಿ ₹ 30 ಸಾವಿರ ದಾಟಿತ್ತು. ಕಳೆದ ವಾರದ ಕೊನೆ ವಹಿವಾಟಿನಲ್ಲಿ ಗರಿಷ್ಠ ₹34 ಸಾವಿರ ಇದ್ದ ಧಾರಣೆ ಈ ವಾರದ ಆರಂಭದಲ್ಲಿ ₹ 40 ಸಾವಿರದ ಗಡಿ ದಾಟಿದೆ.
 
ಸರಕು ಮಾದರಿಯ ಅಡಿಕೆ ದರದಲ್ಲೂ ಗಣನೀಯ ಏರಿಕೆಯಾಗಿದ್ದು, ಒಂದು ಕ್ವಿಂಟಲ್‌ ಅಡಿಕೆ ₹ 53,129ಕ್ಕೆ ಮಾರಾಟವಾಗಿದೆ.
 
ಬೇಸಿಗೆಯ ಬಿಸಿಲಿನ ತಾಪಕ್ಕೆ ಅಡಿಕೆ ಹರಳು ಉದುರುತ್ತಿದ್ದು, ಇಳುವರಿ ಕಡಿಮೆಯಾಗಬಹುದು ಎಂಬ ಆತಂಕದಲ್ಲಿದ್ದ ರೈತರಿಗೆ ಬೆಲೆ ಏರಿಕೆ ಸ್ವಲ್ಪ ನೆಮ್ಮದಿ ತಂದಿದೆ. ಮಲೆನಾಡಿನ ಭಾಗದಲ್ಲಿ ಅಡಿಕೆ ಕೊಯ್ಲು ಮುಗಿದು ರೈತರು ಮಾರಾಟಕ್ಕೆ ಅಣಿಯಾಗುತ್ತಿರುವ ಈ ಸಮಯದಲ್ಲೇ ಧಾರಣೆ ಏರುಗತಿಯಲ್ಲಿ ಸಾಗಿರುವುದು ಅಡಿಕೆ ಬೆಳೆಗಾರರ ಮೊಗದಲ್ಲಿ ತೃಪ್ತಿಯ ಭಾವ ಮೂಡಿಸಿದೆ.
 
ಎರಡು ವರ್ಷಗಳ ಹಿಂದೆ ಅಡಿಕೆ ಧಾರಣೆ ₹ 1 ಲಕ್ಷಕ್ಕೆ ತಲುಪಿತ್ತು. ಆ ವರ್ಷ  ರೈತರು ಅಡಿಕೆ ಸಂಗ್ರಹಿಸದೇ ಮಾರಾಟ ಮಾಡಿದ್ದ ಕಾರಣ ವ್ಯಾಪಾರಿಗಳಿಗೆ ಮಾತ್ರ ಅದರ ಲಾಭ ದೊರಕಿತ್ತು. ನಂತರದ ದಿನಗಳಲ್ಲಿ ಧಾರಣೆ ಕುಸಿಯಲು ಆರಂಭಿಸಿ, ಕಳೆದ ಒಂದು ವರ್ಷದಿಂದಲೂ ₹ 25 ಸಾವಿರ ಸುತ್ತ ಸುತ್ತುತ್ತಿತ್ತು. ಅಡಿಕೆಗೆ ಬೆಂಬಲ ಬೆಲೆ ಘೋಷಿಸುವಂತೆ ಎಲ್ಲೆಡೆ ಹೋರಾಟಗಳೂ ನಡೆದಿದ್ದವು.
 
ಬೆಂಬಲ ಬೆಲೆಗಿಂತ ₹ 13 ಸಾವಿರ ಹೆಚ್ಚಳ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳೆಯುವ ಅಡಿಕೆಯನ್ನು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಡಿ ಖರೀದಿಸಲು ಕೇಂದ್ರ ಸರ್ಕಾರ ಡಿ. 8ರಂದು ಹಸಿರು ನಿಶಾನೆ ತೋರಿತ್ತು. ಮಧ್ಯವರ್ತಿಗಳಿಗೆ ಅವಕಾಶ ನೀಡದೇ ರಾಜ್ಯದ ಅಡಿಕೆ ಸಹಕಾರ ಸಂಘಗಳ ಮೂಲಕ ನೇರವಾಗಿ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ರಾಜ್ಯ ಸರ್ಕಾರಕ್ಕೆ ಖರೀದಿಯ ಮೇಲುಸ್ತುವಾರಿ ನೀಡಲಾಗಿತ್ತು. 
 
ಕೆಂಪು ಅಡಿಕೆಗೆ ಕ್ವಿಂಟಲ್‌ಗೆ ₹ 27 ಸಾವಿರ ಹಾಗೂ ಚಾಲಿ ಅಡಿಕೆಗೆ ₹ 25,100 ಬೆಂಬಲ ಬೆಲೆ ನಿಗದಿ ಮಾಡಿತ್ತು. ಆದರೆ, ಖರೀದಿ ಆರಂಭವಾಗಿರಲಿಲ್ಲ. ಈಗ ಬೆಂಬಲ ಬೆಲೆಗಿಂತ ಅಧಿಕ ದರಕ್ಕೆ ಮುಕ್ತ ಮಾರುಕಟ್ಟೆಯಲ್ಲೇ ಮಾರಾಟವಾಗುತ್ತಿದೆ.
 
4 ಲಕ್ಷ ಟನ್‌ ಉತ್ಪಾದನೆ:ರಾಜ್ಯದಲ್ಲಿ ಪ್ರತಿ ವರ್ಷ 4 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದೆ. ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ. ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.

ರಾಜ್ಯದಲ್ಲಿ ಬೆಳೆಯುವ ಶೇ 60ಕ್ಕೂ ಹೆಚ್ಚು ಅಡಿಕೆ ದಾವಣಗೆರೆ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತದೆ. ಹೀಗಾಗಿ, ಈ ಭಾಗದ ಬೆಳೆಗಾರರಿಗೆ ಈ ಧಾರಣೆ ‘ಯುಗಾದಿ ಬಂಪರ್’ ಎಂದೇ ಮಾರುಕಟ್ಟೆ ಪಂಡಿತರು ವಿಶ್ಲೇಷಿಸುತ್ತಾರೆ.
 
ಧಾರಣೆ ಹೆಚ್ಚಳ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲಿನ ಹೊರೆಯನ್ನೂ ಕಡಿಮೆ ಮಾಡಿದೆ. ಬೆಂಬಲ ಬೆಲೆ ಘೋಷಿಸಿದ್ದರೂ ಖರೀದಿಗೆ ಅಗತ್ಯ ಹಣ ಬಿಡುಗಡೆ ಮಾಡದ ಕೇಂದ್ರ ಸರ್ಕಾರ, ಖರೀದಿ ಆರಂಭಿಸಲು ಉತ್ಸಾಹವನ್ನೇ ತೋರದ ರಾಜ್ಯ ಸರ್ಕಾರಗಳು ಸದ್ಯ ನಿಟ್ಟುಸಿರುಬಿಟ್ಟಿವೆ.
**
ಅತಿಯಾದ ಏರಿಕೆಗಿಂತ ರೈತರಿಗೆ ಬೇಕಾಗಿರುವುದು ಸ್ಥಿರ ಧಾರಣೆ. ಇದೇ ದರ ಕಾಯ್ದುಕೊಂಡರೂ ಬೆಳೆಗಾರರ ಬದುಕು ಹಸನಾಗುತ್ತದೆ.
ಎನ್‌.ಎಸ್‌.ರುದ್ರೇಶ್, ಅಡಿಕೆ ಬೆಳೆಗಾರ, ಹನುಮಂತಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.