ADVERTISEMENT

ಒಣದ್ರಾಕ್ಷಿ ಬೆಲೆ ಕುಸಿತ: ಕಂಗಾಲು

ಜಿಎಸ್‌ಟಿ ಜಾರಿಯಾದ ಬಳಿಕ ಆನ್‌ಲೈನ್‌ ವಹಿವಾಟು ಆರಂಭಿಸುವ ಸಾಧ್ಯತೆ

ಡಿ.ಬಿ, ನಾಗರಾಜ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ಒಣದ್ರಾಕ್ಷಿ ಬೆಲೆ ಕುಸಿತ: ಕಂಗಾಲು
ಒಣದ್ರಾಕ್ಷಿ ಬೆಲೆ ಕುಸಿತ: ಕಂಗಾಲು   

ವಿಜಯಪುರ: ಒಣ ದ್ರಾಕ್ಷಿ ಬೆಲೆ ಏಕಾಏಕಿ ಕುಸಿತ ಕಂಡಿದೆ. ಒಂದು ಕೆ.ಜಿ.ಗೆ ₹ 50–60ರಷ್ಟು ಕಡಿಮೆಯಾಗಿದ್ದು, ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

ರಂಜಾನ್‌ ಮಾಸದ ಆರಂಭದಲ್ಲಿ ಹೆಚ್ಚಿನ ದರ ಸಿಗಬಹುದು ಎಂಬ ನಿರೀಕ್ಷೆಯಿಂದ 3 ತಿಂಗಳು ಕಾದ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.

‘ಭೀಕರ ಬರಕ್ಕೆ ಕೊಳವೆ ಬಾವಿ ಬತ್ತಿದವು. ಹೀಗಾಗಿ ನೀರು ನಿರ್ವಹಣೆಗಾಗಿಯೇ ಈ ಬಾರಿ ₹8 ರಿಂದ 10 ಲಕ್ಷ ಹೆಚ್ಚಿಗೆ ಖರ್ಚು ಮಾಡಿದ್ದೇವೆ. ಕೀಟನಾಶಕಗಳ ಸಾಲವನ್ನು ಇನ್ನೂ ತೀರಿಸಿಲ್ಲ. ಇಂತಹ ಸ್ಥಿತಿಯಲ್ಲಿ ಬೆಲೆ ಕುಸಿದಿರುವುದು ದಿಕ್ಕು ತೋಚದಂತೆ ಮಾಡಿದೆ’ ಎಂದು ಕೊಲ್ಹಾರದ ಪ್ರಗತಿಪರ ದ್ರಾಕ್ಷಿ ಬೆಳೆಗಾರ ಸಿದ್ದು ಬಾಲಗೊಂಡ ಅಳಲು ತೋಡಿಕೊಳ್ಳುತ್ತಾರೆ.

‘ಹೆಚ್ಚಿನ ಬೆಲೆ ಸಿಕ್ಕಾಗ ಮಾರಾಟ ಮಾಡೋಣವೆಂದು 60 ಟನ್‌ ದ್ರಾಕ್ಷಿಯನ್ನು ಶೈತ್ಯಾಗಾರದಲ್ಲಿ ಇಟ್ಟಿದ್ದೇನೆ. ಅದಕ್ಕೆ ಟನ್‌ ದ್ರಾಕ್ಷಿಗೆ ತಿಂಗಳಿಗೆ ₹4 ಸಾವಿರ ಬಾಡಿಗೆ ನೀಡಬೇಕು. ಇದರ ನಿರ್ವಹಣಾ ವೆಚ್ಚ ಕೂಡ ಏರುತ್ತಿದ್ದು, ಆ ಸಲುವಾಗಿ ಸಾಲ ಮಾಡಿದ್ದೇನೆ’ ಎಂದು ಅವರು ಹೇಳುತ್ತಾರೆ.

‘ಇಷ್ಟೆಲ್ಲ ಸಿದ್ಧತೆ ಮಾಡಿಕೊಂಡು ರಂಜಾನ್‌ ಮಾಸಕ್ಕಾಗಿ ಕಾಯುತ್ತಿದ್ದಾಗಲೇ ಬೆಲೆ ಕುಸಿತ ಕಂಡಿದೆ. ಏಪ್ರಿಲ್‌ನಲ್ಲಿ ₹100 ರಿಂದ 180ರ ಆಸುಪಾಸಿನಲ್ಲಿದ್ದ  ಕೆ.ಜಿ. ಒಣ ದ್ರಾಕ್ಷಿ ಬೆಲೆ ಇದೀಗ ಪಾತಾಳಕ್ಕೆ ಕುಸಿದಿದೆ. ಕೆ.ಜಿ.ಗೆ ₹50ರಿಂದ 120 ಸಿಕ್ಕರೆ ಸಾಕು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. 2016ರಲ್ಲಿ ಕೆ.ಜಿ. ಒಣದ್ರಾಕ್ಷಿ ₹150ರಿಂದ 180ರ ವರೆಗೂ ಮಾರಾಟವಾಗಿತ್ತು. 2015ರಲ್ಲಿ ಗರಿಷ್ಠ ದರ ಸಿಕ್ಕಿತ್ತು. ಕೆ.ಜಿ.ಗೆ ₹300ರಿಂದ 320 ದೊರಕಿತ್ತು. ಈ ಬಾರಿ ಶೇ 20ರಷ್ಟು ಉತ್ಪನ್ನ ಕಡಿಮೆ ಇದೆ. ಹೆಚ್ಚಿನ ದರ ದೊರಕಬಹುದು ಎಂಬ ವ್ಯಾಪಾರಿಗಳ ಮಾತು ನಂಬಿದ್ದಕ್ಕೆ ಮೂರ್ನಾಲ್ಕು ಲಕ್ಷ ನಷ್ಟ ಅನುಭವಿಸಬೇಕಿದೆ’ ಎಂದು ಬಾಲಗೊಂಡ ಆತಂಕ ವ್ಯಕ್ತಪಡಿಸಿದರು.

‘ರೈತರ ಅನುಕೂಲಕ್ಕಾಗಿಯೇ ಸರ್ಕಾರ ವಿಜಯಪುರದಲ್ಲಿ ₹ 2.75 ಕೋಟಿ ವೆಚ್ಚದಲ್ಲಿ ಆನ್‌ಲೈನ್‌ ವಹಿವಾಟು ಕೇಂದ್ರವನ್ನು 2015ರಲ್ಲಿ ಆರಂಭಿಸಿತು. ಆದರೆ, ಅದು ನಂತರದ ದಿನಗಳಲ್ಲಿ ಸ್ಥಗಿತಗೊಂಡಿತು. ವ್ಯಾಪಾರಿಗಳ ಕಪಿಮುಷ್ಠಿಗೆ ಸಿಲುಕಿರುವ ಎ.ಪಿ.ಎಂ.ಸಿ ಇದುವರೆಗೂ ಅದನ್ನು ಪುನರಾರಂಭಿಸಿಲ್ಲ. ದ್ರಾಕ್ಷಿ ಬೆಳೆಗಾರರ ಸಂಘಟನೆಗಳು ಸಹ ಧ್ವನಿ ಎತ್ತದೆ ವರ್ತಕರ ಲಾಬಿಗೆ ಮಣಿದಿವೆ’ ಎಂದು ಉಪ್ಪಲದಿನ್ನಿಯ ಸೋಮನಾಥ ಶಿವನಗೌಡ ಬಿರಾದಾರ ಅವರು ದೂರುತ್ತಾರೆ.
*
ಜುಲೈ 1ರ ಬಳಿಕ
‘ವ್ಯಾಪಾರಿಗಳು, ಬೆಳೆಗಾರರ ಸಂಘದವರು ಜಿಎಸ್‌ಟಿ ಜಾರಿಗೊಂಡ ಬಳಿಕ ಜುಲೈ 1ರಿಂದ ಆನ್‌ಲೈನ್‌ ವಹಿವಾಟು ಆರಂಭಿಸೋಣ ಎಂದಿದ್ದಾರೆ. ಅದಕ್ಕೆ ಸಿದ್ಧತೆ ನಡೆದಿದೆ’ ಎನ್ನುತ್ತಾರೆ ಎ.ಪಿ.ಎಂ.ಸಿ ಕಾರ್ಯದರ್ಶಿ ವಿ.ರಮೇಶ.
*
ದಿಕ್ಕು ತೋಚದ ಸ್ಥಿತಿ ದ್ರಾಕ್ಷಿ ಬೆಳೆಗಾರರದ್ದಾಗಿದೆ. ಮಣೂಕ ಬೆಲೆ ಪಾತಾಳಕ್ಕೆ ಕುಸಿದಿದ್ದು, ಭವಿಷ್ಯವೇ ಮಸುಕಾಗಿದೆ. ಯಾರೊಬ್ಬರ ನೆರವು ಸಿಗದಾಗಿದೆ.
ಸಿದ್ದು ಬಾಲಗೊಂಡ,
ಕೊಲ್ಹಾರದ ಪ್ರಗತಿಪರ ರೈತ
*
ಕೇಂದ್ರ– ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ, ಒಣ ದ್ರಾಕ್ಷಿಗೆ ಬೆಂಬಲ ಬೆಲೆ ನಿಗದಿ ಪಡಿಸಬೇಕು ಎಂಬ ಬೆಳೆಗಾರರ ಬೇಡಿಕೆ ಅರಣ್ಯ ರೋದನವಾಗಿದೆ.
ಅಭಯಕುಮಾರ ಎಸ್‌.ನಾಂದ್ರೇಕರ
ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.