ADVERTISEMENT

ಕರ್ಣಾಟಕ ಬ್ಯಾಂಕ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಮಂಗಳೂರು: ಸಣ್ಣ ಪ್ರಮಾಣದ ಬ್ಯಾಂಕ್‌ಗಳಲ್ಲಿ ಹಣಕಾಸು ಸೇರ್ಪಡೆಗಾಗಿ ತಂತ್ರಜ್ಞಾನ ಬಳಸಿಕೊಂಡಿದ್ದಕ್ಕಾಗಿ ಬ್ಯಾಂಕಿಂಗ್‌ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಐಡಿಆರ್‌ಬಿಟಿ) ನೀಡುವ ಪ್ರಶಸ್ತಿಗೆ ಕರ್ಣಾಟಕ ಬ್ಯಾಂಕ್‌ ಪಾತ್ರವಾಗಿದೆ.

ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ರಘುರಾಂ ರಾಜನ್‌ ಅವರು   ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಂ ಭಟ್‌ ಮತ್ತು ಮಹಾಪ್ರಬಂಧಕ ರಾಘವೇಂದ್ರ ಭಟ್‌ ಎಂ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಆರ್‌ಬಿಐ ಡೆಪ್ಯುಟಿ ಗವರ್ನರ್‌ ಆರ್‌. ಗಾಂಧಿ, ಐಡಿಆರ್‌ಬಿಟಿಯ ನಿರ್ದೇಶಕ ಡಾ.ಎ.ಎಸ್‌.ರಾಮಶಾಸ್ತ್ರಿ ಇದ್ದರು.

‘ಗರಿಷ್ಠ ಪ್ರಮಾಣದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಹಕರಿಗೆ ಒದಗಿಸುವ ಸೇವೆಯ ಮೌಲ್ಯವನ್ನು ಹೆಚ್ಚಿಸುವುದು ಬ್ಯಾಂಕ್‌ನ ಧ್ಯೇಯವಾಗಿದೆ. ಅದನ್ನು ಸಮರ್ಪಕವಾಗಿ ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ದೊರೆತ ಈ ಪ್ರತಿಷ್ಠಿತ ಪ್ರಶಸ್ತಿಯು ಬ್ಯಾಂಕ್‌ಗೆ ಸಂದ ದೊಡ್ಡ ಗೌರವವಾಗಿದೆ’ ಎಂದು ಪಿ. ಜಯರಾಂ ಭಟ್‌ ಹೇಳಿದ್ದಾರೆ.

‘ತಂತ್ರಜ್ಞಾನ ಅಳವಡಿಕೆಗಾಗಿ ಬ್ಯಾಂಕ್‌ ಇದಕ್ಕೂ ಮೊದಲು ನಾಲ್ಕು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ’ ಎಂದರು.

93 ವರ್ಷ ಹಳೆಯ ಈ ಬ್ಯಾಂಕ್‌ ವಾರ್ಷಿಕ ₹ 1 ಲಕ್ಷ ಕೋಟಿ ವಹಿವಾಟು ನಡೆಸುವ ಹಂತಕ್ಕೆ ಬೆಳೆದಿದ್ದು, ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ 765 ಶಾಖೆಗಳು, 1,500 ಎಟಿಎಂಗಳು ಹಾಗೂ 100 ಇ–ಲಾಬಿ, ಮಿನಿ ಲಾಬಿಗಳನ್ನು ಹೊಂದುವ ಗುರಿ
ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.