ADVERTISEMENT

ಕಾಫಿ ಇಳುವರಿ ಇಳಿಕೆ ಸಂಭವ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 20:11 IST
Last Updated 27 ಮಾರ್ಚ್ 2017, 20:11 IST
ಕಾಫಿ ಇಳುವರಿ ಇಳಿಕೆ ಸಂಭವ
ಕಾಫಿ ಇಳುವರಿ ಇಳಿಕೆ ಸಂಭವ   

ನವದೆಹಲಿ : ಪಶ್ಚಿಮ ಘಟ್ಟಗಳಲ್ಲಿ  ಫೆಬ್ರುವರಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಹೀಗಾಗಿ 2016–17ನೇ ಬೆಳೆ ಅವಧಿಯಲ್ಲಿ ಕಾಫಿ ಇಳುವರಿ ಶೇ 9 ರಷ್ಟು ಇಳಿಕೆ ಕಾಣಲಿದೆ ಎಂದು ಕಾಫಿ ಮಂಡಳಿ ಅಂದಾಜು ಮಾಡಿದೆ.

ಅತಿಯಾದ ಮಳೆ ಮತ್ತು ಗರಿಷ್ಠ ತಾಪಮಾನದಿಂದ ಕಾಫಿ ಉತ್ಪಾದನೆಗೆ ಅಡ್ಡಿಯಾಗುತ್ತಿದೆ ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಅರೇಬಿಕಾ ಕಾಫಿಗೆ ಬಿಳಿ ಕಾಂಡ ಕೊರಕ ಹುಳುವಿನ ಹಾವಳಿ ಹೆಚ್ಚಾಗಿದೆ. ಇದೂ ಸಹ ಇಳುವರಿ ತಗ್ಗುವಂತೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಮೊಬೈಲ್‌ ಪಾವತಿಗೆ ಸ್ಯಾಮ್ಸಂಗ್‌ ಪೇ
ಮುಂಬೈ (ಪಿಟಿಐ): ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌ ಕಂಪೆನಿ   ಭಾರತದಲ್ಲಿ ‘ಸ್ಯಾಮ್ಸಂಗ್‌ ಪೇ’ ಎಂಬ ಮೊಬೈಲ್‌ ಪಾವತಿ ಆ್ಯಪ್‌ ಬಿಡುಗಡೆ ಮಾಡಿದೆ.
ಈ ಆ್ಯಪ್‌ ಬಳಸಿ ತಕ್ಷಣಕ್ಕೆ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ. ಬಳಕೆದಾರರು ಮೊದಲಿಗೆ ತಮ್ಮ ಬ್ಯಾಂಕ್‌ ಖಾತೆ ಮತ್ತು ಕಾರ್ಡನ್ನು ಆ್ಯಪ್‌ ಜತೆ ಸಂಪರ್ಕಿಸಬೇಕು.  ಆ ಬಳಿಕ ಹಣ ಪಾವತಿ ಆರಂಭಿಸಬಹುದು ಎಂದು ಸ್ಯಾಮ್ಸಂಗ್‌ ಇಂಡಿಯಾ ಉಪಾಧ್ಯಕ್ಷ ಆಸಿಂ ವಾರ್ಸಿ ತಿಳಿಸಿದ್ದಾರೆ.
ಪೇಟಿಎಂ ಮತ್ತು ಯುಪಿಐ ಸೌಲಭ್ಯಗಳನ್ನೂ ಈ ಆ್ಯಪ್‌  ಒಳಗೊಂಡಿದೆ. ಇದು ಹೆಚ್ಚಿನ ಸುರಕ್ಷತೆಯಿಂದ ಕೂಡಿದೆ. ಬೆರಳಚ್ಚು (ಫಿಂಗರ್‌ಪ್ರಿಂಟ್‌) ದೃಢೀಕರಣ ಅಥವಾ ನಾಲ್ಕು ಸಂಖ್ಯೆಯ ಪಿನ್‌ ಬಳಸಿ ಹಣ ವರ್ಗಾವಣೆ ಅಥವಾ ಪಾವತಿ ಮಾಡಬೇಕು ಎಂದು ಕಂಪೆನಿ ತಿಳಿಸಿದೆ.

ADVERTISEMENT

ಭಾರತದ  ಗ್ರಾಹಕರು ಹೆಚ್ಚು  ಆಶಾವಾದಿಗಳು
ನವದೆಹಲಿ (ಪಿಟಿಐ): ಏಷ್ಯಾ –ಪೆಸಿಫಿಕ್‌ ವಲಯದಲ್ಲಿ ಭಾರತದ ಗ್ರಾಹಕರು ಅತಿ ಹೆಚ್ಚು ಆಶಾವಾದಿಗಳಾಗಿದ್ದಾರೆ ಎನ್ನುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಮಾಸ್ಟರ್‌ ಕಾರ್ಡ್‌ ನಡೆಸಿದ ‘ಕ್ಷೇಮ ಸೂಚ್ಯಂಕ’ ಸಮೀಕ್ಷೆಯಲ್ಲಿ ಭಾರತವು  100ಕ್ಕೆ 75 ಅಂಶ ಪಡೆದುಕೊಂಡು 18 ದೇಶಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇದೆ.  ನಂತರದ ಸ್ಥಾನಗಳಲ್ಲಿ ಫಿಲಿಪ್ಪೀನ್ಸ್‌ (73 ಅಂಶ), ಇಂಡೊನೇಷ್ಯಾ ಮತ್ತು ವಿಯೆಟ್ನಾಂ (71.4) ಮತ್ತು ಚೀನಾ (68.2 ) ಇವೆ.
ಕೆಲಸ, ಹಣಕಾಸು ಪರಿಸ್ಥಿತಿ, ವೈಯಕ್ತಿಕ ಮತ್ತು ಕೆಲಸದ  ತೃಪ್ತಿ ಹಾಗೂ  ವೈಯಕ್ತಿಕ ಕ್ಷೇಮ ವಿಷಯಗಳಲ್ಲಿ ಭಾರತೀಯರು ಹೆಚ್ಚು ಅಂಕಗಳಿಸಿದ್ದಾರೆ.

ಐಫೋನ್‌ 7 ರೆಡ್‌
ನವದೆಹಲಿ (ಪಿಟಿಐ): ಆ್ಯಪಲ್‌ ಕಂಪೆನಿ ಐಫೋನ್‌ 7 ಮತ್ತು ಐಫೋನ್‌ 7 ಪ್ಲಸ್‌ ರೆಡ್‌ ಎಂಬ ವಿಶೇಷ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.
128 ಜಿಬಿ ಮತ್ತು 256  ಜಿಬಿಗಳಲ್ಲಿ ಲಭ್ಯವಿದ್ದು ಆರಂಭಿಕ ಬೆಲೆ ₹82 ಸಾವಿರದಷ್ಟಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರ್ಚ್‌ 24 ರಿಂದಲೇ ಮಾರಾಟ ಆರಂಭವಾಗಲಿದೆ. ಭಾರತದಲ್ಲಿ ಏಪ್ರಿಲ್‌ 1 ರಿಂದ ಖರೀದಿಗೆ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಈ ಫೋನ್‌ಗಳ ಮಾರಾಟದಿಂದ ಬರುವ ಹಣ ಜಾಗತಿಕ  ಎಚ್‌ಐವಿ–ಏಡ್ಸ್‌ ಅನುದಾನ ನಿಧಿಗೆ ಹೋಗುತ್ತದೆ. ವಿಶ್ವದಲ್ಲಿರುವ ಎಚ್‌ಐವಿ ಸೋಂಕಿತರಲ್ಲಿ ಹೆಚ್ಚಿನ ಜನರು 
ಸಹರಾ ಮರುಭೂಮಿಯ ದಕ್ಷಿಣಕ್ಕಿರುವ ಆಫ್ರಿಕಾ  ಭಾಗದಲ್ಲಿಯೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.