ADVERTISEMENT

ಕಾರು ಮಾರಾಟ ಅಲ್ಪ ಇಳಿಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ನವದೆಹಲಿ(ಪಿಟಿಐ): ದೇಶದ ಪ್ರಮುಖ ಕಾರು ತಯಾರಿಕಾ ಕಂಪೆನಿಗಳ ಮಾರಾಟ ವಹಿವಾಟಿನಲ್ಲಿ ಸೆಪ್ಟೆಂಬರ್‌ನಲ್ಲಿ ಶೇ 1ರಷ್ಟು ಅಲ್ಪ ಕುಸಿತ ಕಂಡಿದೆ.
ಸೆಪ್ಟೆಂಬರ್‌ನಲ್ಲಿ 1,54,882 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷಕ್ಕೆ ಇದೇ ತಿಂಗಳಿನಲ್ಲಿ 1,56,494 ಕಾರುಗಳು ಮಾರಾಟವಾಗಿದ್ದವು ಎಂದು ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ (ಎಸ್‌ಐಎಎಂ) ತಿಳಿಸಿದೆ.

ದೀಪಾವಳಿ ಹಬ್ಬಕ್ಕೆ ಹೊಸ ಕಾರು ಖರೀದಿಸುವ ಗ್ರಾಹಕರ ಯೋಜನೆಯೇ ಸೆಪ್ಟೆಂಬರ್‌ ಮಾರಾಟದಲ್ಲಿ ಅಲ್ಪ ಪ್ರಮಾಣದ ಕುಸಿತಕ್ಕೆ ಕಾರಣ ಎಂದು ಎಸ್‌ಐಎಎಂ ಪ್ರಧಾನ ನಿರ್ದೇಶಕ ವಿಷ್ಣು ಮಥೂರ್‌ ವಿಶ್ಲೇಷಿಸಿದ್ದಾರೆ. ಈ ಬಾರಿ ಹಬ್ಬದ ಸಂದರ್ಭದಲ್ಲಿ ವಾಹನ ಮಾರಾಟ ಉತ್ತಮವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಹೆಚ್ಚಿನ ಕಾರು ಮಾರಾಟವಾಗುವ ನಿರೀಕ್ಷೆ ಇದೆ ಎಂದು  ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಇಳಿಮುಖವಾಗಿದ್ದ ಕಾರು ಮಾರಾಟ ಪ್ರಸಕ್ತ ಹಣಕಾಸು ವರ್ಷದ ಮೇ ತಿಂಗಳಿನಿಂದ ಆಗಸ್ಟ್‌ವರೆಗೆ ಉತ್ತಮ ಪ್ರಗತಿಯ ಹಾದಿಯಲ್ಲಿದೆ. ಗ್ರಾಹಕರ ಕಾರು ಖರೀದಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದಿದ್ದಾರೆ. ಮಾರುತಿ ಸುಜುಕಿ ಇಂಡಿಯಾ ಶೇ 3.13ರಷ್ಟು ಪ್ರಗತಿ ಸಾಧಿಸಿರುವುದಾಗಿ ಪ್ರಕಟಿಸಿದ್ದು, ಸೆಪ್ಟೆಂಬರ್‌ ನಲ್ಲಿ 81,447 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 78,975 ಕಾರು ಗಳನ್ನು ಮಾರಿತ್ತು.

ಹುಂಡೈ ಮೋಟಾರ್‌ ಇಂಡಿಯಾ ಪ್ರಗತಿ ಶೇ 14.14ರಷ್ಟಿದ್ದು, 34,906 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಗೆ 30,580 ಕಾರುಗಳನ್ನು ಮಾರಾಟ ಮಾಡಿತ್ತು. ಹೋಂಡಾ ಕಾರ್ಸ್‌ ಇಂಡಿಯಾ ಮಾರಾಟ ಶೇ 6.06ರಷ್ಟು ಇಳಿಕೆ ಅಗಿದ್ದು, 9,600 ಕಾರುಗಳನ್ನು ಮಾರಿದೆ. ಕಳೆದ ವರ್ಷ ಇದೇ ಅವಧಿಗೆ 10,220 ಕಾರುಗಳನ್ನು ಮಾರಿತ್ತು.

ಟಾಟಾ ಮೋಟಾರ್ಸ್‌ನ ಸೆಪ್ಟೆಂಬರ್‌ ವಹಿವಾಟಿ ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಯಾವುದೇ ಬದಲಾವಣೆ ಕಂಡಿಲ್ಲ. 2013ರ ಸೆಪ್ಟೆಂಬರ್‌ನಲ್ಲಿ 9,766 ಕಾರು ಮಾರಿದ್ದ ಟಾಟಾ ಮೋಟಾರ್ಸ್‌, ಈ ಬಾರಿಯ ಸೆಪ್ಟೆಂಬರ್‌ನಲ್ಲೂ 9,765 ಕಾರುಗಳನ್ನು ಮಾರಾಟ ಮಾಡಿದೆ. ಮಹೀಂದ್ರಾ ಆ್ಯಂಡ್‌ ಮಹೀಂದ್ರಾ  ಕಂಪೆನಿಯ ವಾಹನ ಮಾರಾಟ ಶೇ 9.03ರಷ್ಟು ಪ್ರಗತಿ ಕಂಡಿದ್ದು, 19,647 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ 18,019 ಕಾರುಗಳನ್ನು ಮಾರಿತ್ತು.

ದ್ವಿಚಕ್ರ ವಾಹನ ಏರಿಕೆ
ದ್ವಿಚಕ್ರ ವಾಹನ ಮಾರಾಟವೂ ಸೆಪ್ಟೆಂಬರ್‌ನಲ್ಲಿ ಶೇ 23.81ರಷ್ಟು ಏರಿಕೆ ಕಂಡಿದ್ದು, 15,67,351 ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 8,85,309 ದ್ವಿಚಕ್ರವಾಹನಗಳು ಮಾರಾಟವಾಗಿದ್ದವು.

ಹೀರೊಮೊಟೊಕಾರ್ಪ್‌ ಶೇ 29.41ರಷ್ಟು ಪ್ರಗತಿ ಸಾಧಿಸಿದ್ದು, 5,13,886 ದ್ವಿಚಕ್ರ ವಾಹನಗಳನ್ನು ಮಾರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,97,095 ದ್ವಿಚಕ್ರವಾಹನಗಳು ಮಾರಾಟ­ವಾಗಿ ದ್ದವು. ಬಜಾಜ್‌ ಆಟೊ ಮಾರಾಟ  2,02,310ರಿಂದ 1,99,251ಕ್ಕೆ ಇಳಿಕೆ ಕಂಡಿದೆ.
ಹೋಂಡಾ ಮೊಟಾರ್‌ ಸೈಕಲ್‌ ಅಂಡ್‌ ಸ್ಕೂಟರ್‌ ಇಂಡಿಯಾ ಶೇ 18.97ರಷ್ಟು ಪ್ರಗತಿ ಸಾಧಿಸಿದ್ದು, 1,79,472 ದ್ವಿಚಕ್ರ ವಾಹನಗಳನ್ನು ಮಾರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,50,872 ದ್ವಿಚಕ್ರ ವಾಹನಗಳನ್ನು ಮಾರಿತ್ತು.

ಸ್ಕೂಟರ್‌ ವೇಗ ಹೆಚ್ಚಳ
ಸೆಪ್ಟೆಂಬರ್‌ನಲ್ಲಿ ಒಟ್ಟಾರೆ ಸ್ಕೂಟರ್‌ ಮಾರಾಟ 3,17,750ರಿಂದ 4,38,470ಕ್ಕೆ ಏರಿಕೆ ಆಗಿದೆ. ಹೋಂಡಾ ಮೊಟಾರ್‌ ಸೈಕಲ್ಸ್‌ ಅಂಡ್‌ ಸ್ಕೂಟರ್‌ ಇಂಡಿಯಾ ಶೇ 49.67ರಷ್ಟು ಪ್ರಗತಿ ಸಾಧಿಸಿದ್ದು, 2,41,128 ಸ್ಕೂಟರ್‌ಗಳನ್ನು ಮಾರಿದೆ. ಕಳೆದ ವರ್ಷ ಇದೇ ಅವಧಿ­ಯಲ್ಲಿ 1,61,105 ಸ್ಕೂಟರ್‌­ಗಳನ್ನು ಮಾರಾಟ ಮಾಡಿತ್ತು.

ಹೀರೊ ಮೊಟೊಕಾರ್ಪ್‌ ಸ್ಕೂಟರ್‌ ಮಾರಾಟ ಶೇ 14.15ರಷ್ಟು ಏರಿಕೆ ಕಂಡಿದ್ದು, ಕಳೆದ ವರ್ಷದ 58,691 ಸ್ಕೂಟರ್‌ಗಳ ಬದಲಾಗಿ ಈ ಬಾರಿ 66,996 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಚೆನ್ನೈ ಮೂಲದ ಟಿವಿಎಸ್‌ ಮೊಟಾರ್‌ ಕಂಪೆನಿಯ ಸ್ಕೂಟರ್‌ ಮಾರಾಟ ಶೇ 64.85ರಷ್ಟು ಪ್ರಗತಿ ಸಾಧಿಸಿದ್ದು, 68,091 ಸ್ಕೂಟರ್‌ಗಳು ಮಾರಾಟ ವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 41,304 ಸ್ಕೂಟರ್‌ಗಳು ಮಾರಾಟವಾಗಿದ್ದವು.

ವಾಣಿಜ್ಯ ಬಳಕೆ ವಾಹನ ಮಾರಾಟ ಸೆಪ್ಟೆಂಬರ್‌ ನಲ್ಲಿ ಶೇ 80.59ರಷ್ಟು ಏರಿಕೆ ಕಂಡಿದೆ. ಕಳೆದ 16 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ವಾಣಿಜ್ಯ ಬಳಕೆ ವಾಹನ ಮಾರಾಟದಲ್ಲಿ ಇಷ್ಟೊಂದು ಭಾರಿ ಪ್ರಮಾ ಣದ ಪ್ರಗತಿ ಕಂಡುಬಂದಿದೆ. ಆರ್ಥಿಕ ಚಟುವಟಿಕೆಗಳು ಸುಧಾರಿಸುತ್ತಿರುವುದರಿಂದ ಸಾರಿಗೆ ಮತ್ತು ಗಣಿಗಾರಿಕೆ ಕಂಪೆನಿಗಳಿಂದ ಟ್ರಕ್‌ ಖರೀದಿ ಹೆಚ್ಚಿದೆ ಎಂದು ಮಾಥೂರ್‌ ತಿಳಿಸಿದ್ದಾರೆ. ಒಟ್ಟಾರೆ ಸೆಪ್ಟೆಂಬರ್‌ನಲ್ಲಿ ವಾಹನ ಮಾರಾಟ ಪ್ರಗತಿ ಶೇ 20.44ರಷ್ಟಿದ್ದು, 19,04,007 ವಾಹನ ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಗೆ 15,80,933 ವಾಹನಗಳು ಮಾರಾಟವಾಗಿದ್ದವು.

ಆಲ್ಟೊ ಆಟೊಗೇರ್‌ ನವೆಂಬರ್‌ಗೆ

ನವದೆಹಲಿ(ಪಿಟಿಐ): ದೇಶದ ಕಾರು ತಯಾರಿಕಾ ಕ್ಷೇತ್ರದಲ್ಲಿನ ಅತಿ ದೊಡ್ಡ ಕಂಪೆನಿ ‘ಮಾರುತಿ ಸುಜುಕಿ ಇಂಡಿಯ’ ಸ್ವಯಂಚಾಲಿತ ಗೇರ್‌ ವಿಭಾಗ ದಲ್ಲಿ ‘ಆಲ್ಟೊ ಕೆ10’ ಕಾರಿನ ಹೊಸ ಮಾದರಿ ಯನ್ನು ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.  ಆ ಮೂಲಕ ಕಂಪೆನಿ ಸಣ್ಣ ಕಾರುಗಳ ಮಾರುಕಟ್ಟೆಯಲ್ಲಿನ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸಿದೆ.

‘ಸೆಲೆರಿಯೊ’ ನಂತರ ಸ್ವಯಂಚಾಲಿತ ಗೇರ್‌  ವ್ಯವಸ್ಥೆ ಹೊಂದಿರುವ ಎರಡನೇ ಕಾರು ‘ಆಲ್ಟೊ ಕೆ10’ ಆಗಿದೆ. ‘ಅತ್ಯುನ್ನತ ಮಟ್ಟದ ತಂತ್ರಜ್ಞಾನದೊಂದಿಗೆ ₨200 ಕೋಟಿ ವೆಚ್ಚದಲ್ಲಿ ಈ ಹೊಸ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಒಂದು ಲೀಟರ್ ಪೆಟ್ರೋಲ್‌ಗೆ ಈ ಕಾರು 24.07 ಕಿಲೋಮೀಟರ್ ಚಲಿಸುತ್ತದೆ. ಅಂತೆಯೇ ಒಂದು ಕೆ.ಜಿ ಸಾಂದ್ರೀಕೃತ ನೈಸರ್ಗಿಕ ಅನಿಲಕ್ಕೆ(ಸಿಎನ್‌ಜಿ) 32.26 ಕಿ.ಮೀ ಮೈಲೇಜ್ ನೀಡಲಿದೆ’ ಎಂದು ‘ಮಾರುತಿ ಸುಜುಕಿ ಇಂಡಿಯಾ’ದ ಮಾರುಕಟ್ಟೆ ವಿಭಾಗದ  ಕಾರ್ಯನಿರ್ವಾಹಕ ನಿರ್ದೇಶಕ ಆರ್‌.ಎಸ್‌.ಕಲಾಸಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ನವದೆಹಲಿಯಲ್ಲಿ ಕಾರಿನ ಬೆಲೆ (ಎಕ್ಸ್‌ಷೋರೂಂ) ₨3.15 ಲಕ್ಷದಿಂದ ₨3.31 ಲಕ್ಷದವರೆಗೂ ಇರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.