ADVERTISEMENT

ಕೃಷಿ ಉತ್ಪನ್ನಗಳಿಗೂ ಇ–ಸ್ಪರ್ಶ!

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2016, 19:42 IST
Last Updated 19 ಏಪ್ರಿಲ್ 2016, 19:42 IST
ಕೃಷಿ ಉತ್ಪನ್ನಗಳಿಗೂ ಇ–ಸ್ಪರ್ಶ!
ಕೃಷಿ ಉತ್ಪನ್ನಗಳಿಗೂ ಇ–ಸ್ಪರ್ಶ!   

ಮಧ್ಯವರ್ತಿಗಳು ಮತ್ತು ವರ್ತಕರ ಶೋಷಣೆಯಿಂದ ರೈತರನ್ನು ಪಾರು ಮಾಡಲು ಏಕೀಕೃತ  ಆನ್‌ಲೈನ್‌ ಮಾರುಕಟ್ಟೆ ಈಗ ದೇಶದಾದ್ಯಂತ ಚಾಲನೆಗೆ ಬಂದಿದೆ. ಇಂಥದೊಂದು ಪ್ರಯತ್ನ ದೇಶದಲ್ಲಿಯೇ ಮೊದಲು ಎಂಬ ಹೆಗ್ಗಳಿಕೆಗೂ ಪಾತ್ರವಾದ  ಕರ್ನಾಟಕದ ‘ರೈತ ಸೇಹಿ ಮಾರುಕಟ್ಟೆ ವ್ಯವಸ್ಥೆ’ ಬಗ್ಗೆ ಗವಿ ಬ್ಯಾಳಿ ಇಲ್ಲಿ ವಿವರಿಸಿದ್ದಾರೆ.

ಇದು ಇ–ಕಾಮರ್ಸ್‌ ಹಾಗೂ ಆನ್‌ಲೈನ್‌ ಮಾರುಕಟ್ಟೆಯ ಯುಗ. ಜನಜೀವನದೊಂದಿಗೆ ಬೆರೆತು ಹೋಗಿರುವ ತಂತ್ರಜ್ಞಾನದ ಚಮತ್ಕಾರದಿಂದ ಬೆರಳ ತುದಿಯಲ್ಲಿಯೇ ಜಗತ್ತು ನಿಂತಿದೆ. ಒಂದೇ ಒಂದು ಬೆರಳ ಸ್ಪರ್ಶದಲ್ಲಿ ಎಲ್ಲ ಪವಾಡಗಳೂ ಸಂಭವಿಸುತ್ತಿವೆ. ಖರೀದಿಗಾಗಿ ಗ್ರಾಹಕ ಅಂಗಡಿಗಳಿಗೆ ಹೋಗಬೇಕಿಲ್ಲ. ಅಂಗಡಿಯೇ ಆತನ ಮನೆ ಬಾಗಿಲಿಗೆ ಬರುವ ಕಾಲವಿದು. ಇದರಿಂದಾಗಿಯೇ ಫ್ಲಿಪ್‌ಕಾರ್ಟ್, ಅಮೆಜಾನ್‌, ಇಬೆ ಮುಂತಾದ ಇ–ಕಾಮಸ್‌ ಸಂಸ್ಥೆಗಳ ಹೆಸರು ಅಂಬೆಗಾಲಿಡುವ ಮಕ್ಕಳ ನಾಲಿಗೆ ಮೇಲೂ ನಲಿದಾಡುತ್ತಿವೆ. 

ಆದರೆ, ಅದು ಏಕೋ ದೇಶದ ಅತಿ ದೊಡ್ಡದಾದ ಕೃಷಿ ಮಾರಾಟ ಕ್ಷೇತ್ರ ಈ ಬದಲಾವಣೆಯ ಗಾಳಿಗೆ ನಿರೀಕ್ಷಿಸಿದ ವೇಗದಲ್ಲಿ ತೆರೆದುಕೊಳ್ಳಲಿಲ್ಲ. ಇದೀಗ ಕರ್ನಾಟಕ ಸರ್ಕಾರ ಕೃಷಿ ಮಾರಾಟಕ್ಕೂ ಆನ್‌ಲೈನ್‌ ಸ್ಪರ್ಶ ನೀಡುವ ಮೂಲಕ ಈ ದಿಕ್ಕಿನಲ್ಲಿ ಹೊಸ ಹೆಜ್ಜೆ ಇಟ್ಟಿದೆ. ವೈಜ್ಞಾನಿಕ ಬೆಲೆ ಸಿಗದೆ ಕಂಗಾಲಾಗಿದ್ದ ರೈತರಿಗೆ ಕೃಷಿ ಉತ್ಪನ್ನಗಳಿಗೆ ನೈಜ ಹಾಗೂ ಸ್ಪರ್ಧಾತ್ಮಕ ಬೆಲೆ ದೊರಕಿಸಿಕೊಡುವ ಉದೇಶದಿಂದ ರಾಜ್ಯ ಸರ್ಕಾರ ರಾಷ್ಟ್ರಲ್ಲಿಯೇ ಮೊದಲ ಬಾರಿಗೆ ‘ಕೃಷಿ ಮಾರಾಟ ನೀತಿ–2013’ ಜಾರಿಗೆ ತಂದಿತು.

ಮಾರುಕಟ್ಟೆ ವ್ಯವಹಾರಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ‘ರೈತ ಹಾಗೂ ವರ್ತಕ’ ಸ್ನೇಹಿ ವ್ಯವಸ್ಥೆ ರೂಪಿಸಲು ಕೃಷಿ ಮಾರಾಟ ಸುಧಾರಣಾ ಸಮಿತಿ ರಚಿಸಿತು.  ಈ ಸಮಿತಿ  ದೇಶದ ಹಲವೆಡೆ ಸುತ್ತಿ  ವರದಿ ಸಿದ್ಧಪಡಿಸಿತು. ಸಮಿತಿಯ ಶಿಫಾರಸು ಅನುಷ್ಠಾನಕ್ಕೆ  ಸರ್ಕಾರ ಬಜೆಟ್‌ನಲ್ಲಿ 10 ಕೋಟಿ ರೂಪಾಯಿ ನೀಡಿತು. ಅದರ ಫಲವೇ ದೇಶದ ಮೊಟ್ಟ ಮೊದಲ ರೈತ ಸ್ನೇಹಿ ಏಕೀಕೃತ ಆನ್‌ಲೈನ್‌ ಮಾರುಕಟ್ಟೆ ಸ್ಥಾಪನೆ.

ಈ ಕಲ್ಪನೆ ಮೂರು ವರ್ಷಗಳ ನಿರಂತರ ಕಠಿಣ ಪರಿಶ್ರಮದ ಫಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರ ಬೆಳೆಗಳಿಗೆ ಯೋಗ್ಯ ಹಾಗೂ ವೈಜ್ಞಾನಿಕ ಬೆಲೆ ಸಿಗಬೇಕು ಎಂಬ ಮೂಲ ಉದ್ದೇಶದೊಂದಿಗೆ ಸರ್ಕಾರವು ರಾಜ್ಯದಲ್ಲಿ ಈ  ವಹಿವಾಟು ವ್ಯವಸ್ಥೆ ಜಾರಿಗೆ ತಂದಿದೆ. ಆನ್‌ಲೈನ್‌ ಮೂಲಕ ಕೃಷಿ ವಹಿವಾಟು ನಡೆಸುವ  ವಿನೂತ ಮಾರುಕಟ್ಟೆ ವ್ಯವಸ್ಥೆ ದೇಶದಲ್ಲಿಯೇ ಮೊದಲು.

ಏನಿದು ಆನ್‌ಲೈನ್‌ ಮಾರುಕಟ್ಟೆ?
ಇದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಅಂತರ್ಜಾಲ ಆಧಾರಿತ ವೇದಿಕೆ. ಅಂತರ್ಜಾಲ ಸೌಲಭ್ಯ ಹೊಂದಿರುವ ಅಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌ ಮೂಲಕ ಆನ್‌ಲೈನ್‌ ಮಾರುಕಟ್ಟೆ ಸಂಪರ್ಕ ಪಡೆಯಬಹುದು. ಕಡಿಮೆ ಬ್ಯಾಂಡ್‌ ವಿಡ್ತ್ ಸಾಮರ್ಥ್ಯ ಹೊಂದಿರುವ ಸ್ಥಳಗಳಲ್ಲಿಯೂ ಸುಲಭವಾಗಿ ಕಾರ್ಯನಿರ್ವಹಿಸುವಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. 

ಆಯಾ ದಿನದ ಮಾರುಕಟ್ಟೆಗಳಲ್ಲಿ ಯಾವ್ಯಾವ ಉತ್ಪನ್ನಕ್ಕೆ ಎಷ್ಟು ದರ ಎಂಬ ಬಗ್ಗೆ ಮಾರುಕಟ್ಟೆಗೆ ಬರುವ ರೈತರಿಗೆ ಮಾಹಿತಿ ನೀಡಲಾಗುತ್ತದೆ.  ರೈತರು ತಮ್ಮ ಹೆಸರು, ಉತ್ಪನ್ನದ ಹೆಸರು, ಪ್ರಮಾಣ, ತೂಕ, ವಿಳಾಸ, ಮೊಬೈಲ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆ ವಿವರ ನೀಡಬೇಕು. ನಂತರ ಅವರಿಗೆ ವಿಶೇಷ ಸಂಖ್ಯೆಯುಳ್ಳ ‘ಲಾಟ್‌ ನಂಬರ್‌’ ನೀಡಲಾಗುತ್ತದೆ. ಈ ಮಾಹಿತಿಯನ್ನು ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ.

ಆಯಾ ದಿನದ ಉತ್ಪನ್ನದ ಬೇಡಿಕೆ ಹಾಗೂ ಗುಣಮಟ್ಟದ ಆಧಾರದ ಮೇಲೆ ದೂರದ ಗುಜರಾತ್‌, ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿರುವ ವರ್ತಕರು ಅಲ್ಲೇ ಕುಳಿತು ಆನ್‌ಲೈನ್‌ ವಹಿವಾಟು ಮೂಲಕ ನಮ್ಮ ರೈತರ ಉತ್ಪನ್ನ ಖರೀದಿಸುತ್ತಾರೆ. ರೈತರು ಒಪ್ಪಿದರೆ ಅವರ  ಖಾತೆಗೆ ಹಣ ಜಮಾ ಆಗುತ್ತದೆ. ಜತೆಗೆ ರೈತರ ಮೊಬೈಲ್‌ಗಳಿಗೂ ಎಸ್‌ಎಂಎಸ್‌ ಮೂಲಕ ಮಾಹಿತಿ ಕಳುಹಿಸುವ ವ್ಯವಸ್ಥೆ ಇದೆ. ಈ ವ್ಯವಸ್ಥೆಯಿಂದಾಗಿ ಮಧ್ಯವರ್ತಿಗಳ ಹಾವಳಿ ಹಾಗೂ ಕೃತಕ ಬೆಲೆ ಕುಸಿತ ಸೃಷ್ಟಿಸಿ ಕಡಿಮೆ ಬೆಲೆಗೆ ರೈತರ ಉತ್ಪನ್ನ ಖರೀದಿಸುವುದು ತಪ್ಪಲಿದೆ.

ಮೊದಲ ಸಲವೇ ನಡೆದ ಚಮತ್ಕಾರ!
ರಾಜ್ಯದಲ್ಲಿ ಮೊದಲ ಬಾರಿಗೆ ತಿಪಟೂರು ಮತ್ತು ಅರಸೀಕೆರೆಯಲ್ಲಿ ಕೊಬ್ಬರಿ ಹಾಗೂ ಚಾಮರಾಜನಗರದಲ್ಲಿ ಅರಿಸಿನದ ಮಾರಾಟಕ್ಕೆ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ  ಜಾರಿ ಮಾಡಲಾಯಿತು. ಆರಂಭದಲ್ಲಿ  ವರ್ತಕರಿಂದ ವಿರೋಧ ವ್ಯಕ್ತವಾದರೂ ಸರ್ಕಾರ ಇದಕ್ಕೆ ಸೊಪ್ಪು ಹಾಕಲಿಲ್ಲ. ಏಷ್ಯಾದಲ್ಲೇ ಕೊಬ್ಬರಿಯ ಅತ್ಯಂತ ದೊಡ್ಡ ಮಾರುಕಟ್ಟೆ ಎಂಬ ಖ್ಯಾತಿ ಪಡೆದ ತಿಪಟೂರು ಎಪಿಎಂಸಿಯಲ್ಲಿ ಆನ್‌ಲೈನ್ ಟ್ರೇಡಿಂಗ್‌ ಜಾರಿಯಾದ ನಂತರ ಕೊಬ್ಬರಿ ಬೆಲೆಯಲ್ಲಿ ಭಾರಿ ಹೆಚ್ಚಳ ಕಂಡು ಬಂದಿತು. ಆಗ ನೂತನ ವ್ಯವಸ್ಥೆಯ ಸಾಮರ್ಥ್ಯದ ನಿಜ ಸ್ವರೂಪದ ದರ್ಶನವಾಯಿತು.

ಕ್ವಿಂಟಲ್‌ ಕೊಬ್ಬರಿಗೆ ಕೇವಲ ₹ 3 ಸಾವಿರ ಪಡೆಯುತ್ತಿದ್ದ ತೆಂಗು ಬೆಳೆಗಾರರು ಆನ್‌ಲೈನ್‌ ಹರಾಜಿನಲ್ಲಿ  ಕ್ವಿಂಟಲ್‌ಗೆ ₹ 9,106 ಎಣಿಸುವಂತಾಯಿತು. ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೊಬ್ಬರಿಗೆ ಬಂಪರ್‌ ಬೆಲೆ ದೊರೆತಿತ್ತು. ಐದಾರು ಸಾವಿರ ರೂಪಾಯಿಗಳಿದ್ದ ಕ್ವಿಂಟಲ್‌ ಹುಣಿಸೆ ಹಣ್ಣಿನ ಬೆಲೆ ₹13 ಸಾವಿರಕ್ಕೆ ನೆಗೆಯಿತು.  ಇದರ ಹಿಂದೆ  ಹೊಸ  ವ್ಯವಸ್ಥೆ ಯ ಚಮತ್ಕಾರ ಕೆಲಸ ಮಾಡಿತು. ತಮ್ಮ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಆನ್‌ಲೈನ್‌ ಟ್ರೇಡಿಂಗ್‌ ಕಾರಣ ಎಂದು ರೈತರಿಗೆ ಮನದಟ್ಟಾಗಲು ಹೆಚ್ಚು ಸಮಯ ಬೇಕಾಗಲಿಲ್ಲ . ರಾಜ್ಯದ 157 ಕೃಷಿ ಉತ್ಪನ್ನ ಮಾರುಕಟ್ಟೆಗಳ (ಎಪಿಎಂಸಿ) ಪೈಕಿ 27 ಜಿಲ್ಲೆಗಳ 105 ಮಾರುಕಟ್ಟೆಗಳಲ್ಲಿ ಈಗಾಗಲೇ ವಿದ್ಯುನ್ಮಾನ ವೇದಿಕೆ ಸ್ಥಾಪಿಸಲಾಗಿದೆ.

ರೆಮ್ಸ್‌ಗೆ ನಿರ್ವಹಣೆ ಹೊಣೆ
ಕೃಷಿ ಮಾರುಕಟ್ಟೆ ಸಚಿವಾಲಯದ ಮಾರ್ಗದರ್ಶನದಲ್ಲಿ 2014ರಲ್ಲಿ ಆರಂಭಗೊಂಡ  ಆನ್‌ಲೈನ್‌ ಮಾರುಕಟ್ಟೆ  ವ್ಯವಸ್ಥೆಯಲ್ಲಿ  ರಾಜ್ಯ ಕೃಷಿ ಮಾರಾಟ ಮಂಡಳಿ ಮತ್ತು ರಾಷ್ಟ್ರೀಯ ಇ ಮಾರ್ಕೆಟ್‌ ಸರ್ವಿಸಸ್‌ (ಆರ್‌ಇಎಂಎಸ್‌–ರೆಮ್ಸ್‌) ಭಾಗಿಯಾಗಿವೆ. ಇ–ಮಾರ್ಕೆಟ್‌ ಅನುಷ್ಠಾನ ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರ ಹಾಗೂ ‘ಎನ್‌ಸ್ಪಾಟ್‌‘ ಪಾಲುದಾರಿಕೆಯಲ್ಲಿ 2014ರಲ್ಲಿ ರಾಷ್ಟ್ರೀಯ ಇ–ಮಾರ್ಕೆಟಿಂಗ್‌ ಸರ್ವೀಸಸ್‌ ಪ್ರೈವೇಟ್ ಲಿಮಿಟೆಡ್‌ (ಆರ್‌ಇಎಂಎಸ್‌–ರೆಮ್ಸ್‌) ಎಂಬ ಸರ್ಕಾರಿ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಆ ಸಂಸ್ಥೆಗೆ ಆನ್‌ಲೈನ್‌ ಟ್ರೇಡಿಂಗ್  ನಿರ್ವಹಣೆ ಹೊರಗುತ್ತಿಗೆ ನೀಡಲಾಗಿದೆ. ಇಲ್ಲಿಯೇ ವರ್ತಕರು ಮತ್ತು ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. 

ಈವರೆಗೆ ರಾಜ್ಯದ 37,572 ವರ್ತಕರ ಪೈಕಿ ಅರ್ಧಕ್ಕೂ ಹೆಚ್ಚು ಮಂದಿ ಆನ್‌ಲೈನ್‌ ನೋಂದಣಿ ಮಾಡಿಸಿಕೊಂಡಿದ್ದಾರೆ. ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಪಾವತಿ, ಹೊಸ ಮಾರುಕಟ್ಟೆ ವಿಸ್ತರಣೆ, ಸುಗಮ ವ್ಯಾಪಾರ, ವಹಿವಾಟು, ಅಗತ್ಯ ತಂತ್ರಾಂಶ ನೆರವು ಒದಗಿಸುವುದು ಇದರ ಹೊಣೆ. ಎಪಿಎಂಸಿಯಲ್ಲಿ ನಡೆಯುವ ಒಟ್ಟು ವ್ಯವಹಾರದಲ್ಲಿ ಶೇ 0.20ರಷ್ಟನ್ನು ಸೇವಾ ಶುಲ್ಕವಾಗಿ ರೆಮ್ಸ್‌ಗೆ ನೀಡಲಾಗುತ್ತದೆ. ಮಾರುಕಟ್ಟೆಗೆ ತಂದ ಉತ್ಪನ್ನವನ್ನು ಮರಳಿ ಮನೆಗೆ ಮರಳಿ ಒಯ್ಯುವ ಜಂಜಾಟವಿಲ್ಲ. ಉತ್ತಮ ಧಾರಣೆ ಸಿಗುವವರೆಗೂ ರೈತರು ತಮಗೆ ಸೇರಿದ ಉತ್ಪನ್ನಗಳನ್ನು ಉಗ್ರಾಣದಲ್ಲಿ ಸಂಗ್ರಹಿಸಿಡಬಹುದು.

ಉಗ್ರಾಣ ಆಧಾರಿತ ಮಾರುಕಟ್ಟೆ
ಹಣದ ತುರ್ತು ಅಗತ್ಯವಿದ್ದರೆ ಗೋದಾಮಿನಲ್ಲಿ ದಾಸ್ತಾನು ಮಾಡಿದ ಉತ್ಪನ್ನದ ಮೇಲೆ ರೈತರು ಬ್ಯಾಂಕುಗಳಿಂದ   ಅಡಮಾನ ಸಾಲ ಪಡೆಯಬಹುದು.  ಇಲ್ಲಿ ಕೇವಲ ಎಪಿಎಂಸಿ ಮಾತ್ರವಲ್ಲ, ಉಗ್ರಾಣಗಳೂ ಉಪ ಮಾರುಕಟ್ಟೆಗಳಾಗಿ ಕೆಲಸ ಮಾಡುತ್ತವೆ.  ಉಗ್ರಾಣಗಳಲ್ಲಿ ದಾಸ್ತಾನಿನ ವಿವರಗಳನ್ನು ಆನ್‌ಲೈನ್‌ ಮಾರುಕಟ್ಟೆಯ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿ ಮಾರಾಟ ಮಾಡುವ ಅವಕಾಶವೂ ರೈತರಿಗಿದೆ. 

ಇಲ್ಲದಿದ್ದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಾಗ ಗೋದಾಮುಗಳಲ್ಲಿರುವ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ದೂರದ  ವರ್ತಕನಿಗೆ ಉತ್ಪನ್ನ ಇಷ್ಟವಾದರೆ ಆನ್‌ಲೈನ್‌ನಲ್ಲೇ ಖರೀದಿ ಮಾಡಲು ಅವಕಾಶ ಇರುತ್ತದೆ. ಇದರಿಂದ ಸ್ಪರ್ಧಾತ್ಮಕ ದರ ಕೂಡ ಸಿಗುತ್ತದೆ. ಸಾಗಾಣಿಕಾ ವೆಚ್ಚ ಕೂಡ ಕಡಿಮೆಯಾಗುತ್ತದೆ.

ಉತ್ಪನ್ನ ನೋಡದೆ ಖರೀದಿ ಹೇಗೆ?
ರೈತರ ಉತ್ಪನ್ನಗಳನ್ನು ಮುಖತಃ ನೋಡದೆ ಖರೀದಿಸುವುದು ಹೇಗೆ? ಎಂದು ತಾನು ಮೋಸ ಹೋಗುವ ಅನುಮಾನ ಖರೀದಿದಾರನ ಮನದಲ್ಲಿ ಮೂಡುವುದು ಸಹಜ. ಇಂತಹ ಸಂದೇಹಗಳನ್ನು ದೂರ ಮಾಡಲೆಂದೇ ಉತ್ಪನ್ನಗಳ ಗುಣಮಟ್ಟ ಪರಿಶೀಲಿಸಿ, ಪ್ರಮಾಣ ಪತ್ರ ನೀಡಲು ಅಂತರರಾಷ್ಟ್ರೀಯ ಮಾನ್ಯತೆ  ಪಡೆದ  ಸಂಸ್ಥೆಗಳನ್ನು ಗುರುತಿಸಲಾಗಿದೆ.

ಅವುಗಳ ವರದಿಯನ್ನು ಆನ್‌ಲೈನ್‌ನಲ್ಲಿ ಅಪಲೋಡ್‌ ಮಾಡಲಾಗುತ್ತದೆ. ಈ ವರದಿಗಳ ಆಧಾರದ ಮೇಲೆ ವರ್ತಕರು ದೂರದಿಂದಲೇ ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ. ಅಲ್ಲಿಂದಲೇ ರೈತರ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡುತ್ತಾರೆ. ಈ ಹಂತದಲ್ಲಿ  ದರ ನಿಗದಿ, ಗುಣಮಟ್ಟ, ತೂಕ, ಹಣ ಪಾವತಿ ಕುರಿತು ಉದ್ಭವವಾಗುವ  ವಿವಾದಗಳನ್ನು  ಇತ್ಯರ್ಥಗೊಳಿಸಲು ‘ವಿವಾದ ಇತ್ಯರ್ಥ ಸಮಿತಿ’ ರಚಿಸಲಾಗಿದೆ. ರೈತರು ಮತ್ತು ವರ್ತಕರ ನಡುವಿನ ಸಮಸ್ಯೆಗಳನ್ನು ಈ ಸಮಿತಿ ಬಗೆಹರಿಸುತ್ತದೆ.

ಮಾರುಕಟ್ಟೆಯಲ್ಲಿಯೇ ಪ್ರಯೋಗಾಲಯ!
ರೈತರು ಮಾರುಕಟ್ಟೆಗೆ ತಂದ ಉತ್ಪನ್ನಗಳ ಗುಣಮಟ್ಟ ಪರೀಕ್ಷೆಗೆ 22 ಮಾರುಕಟ್ಟೆಗಳಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಉಚಿತವಾಗಿ ಗುಣವಿಶ್ಲೇಷಣೆ ಮಾಡಲಾಗುತ್ತದೆ. ಆ ವರದಿಯನ್ನು ಖರೀದಿದಾರರ ಅನುಕೂಲಕ್ಕೆ ಅಂತರ್ಜಾಲದಲ್ಲಿ ಪ್ರಕಟಿಸಲಾಗುತ್ತದೆ. ಖರೀದಿದಾರ ತಾನು ಖರೀದಿಸುವ ವಸ್ತುವಿನ ಗುಣಮಟ್ಟ ತಿಳಿದು ಮೌಲ್ಯ ನಿರ್ಧರಿಸಲು ಇದು ನೆರವಾಗುತ್ತದೆ.

ಸದ್ಯ ಗದಗ, ಹುಬ್ಬಳ್ಳಿ ಹಾಗೂ ಮಂಡರಗಿ ಮಾರುಕಟ್ಟೆಯಲ್ಲಿ ಗುಣಮಟ್ಟ ವಿಶ್ಲೇಷಣೆ ಕಾರ್ಯ ನಡೆಯುತ್ತಿದೆ. ರೈತ ಮಾರುಕಟ್ಟೆಗೆ ತಂದ ಕೃಷಿ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಲು 35 ಮಾರುಕಟ್ಟೆಗಳಲ್ಲಿ ಸ್ವಚ್ಛತಾ ಮತ್ತು ವರ್ಗೀಕರಣ ಯಂತ್ರ ಸ್ಥಾಪಿಸಲಾಗಿದೆ.  ಅತ್ಯಾಧುನಿಕ ಯಂತ್ರಗಳ ನೆರವಿನಿಂದ ಉತ್ಪನ್ನಗಳನ್ನು ಸ್ವಚ್ಛ ಮಾಡಿ ಪ್ಯಾಕ್‌ ಮಾಡಲಾಗುತ್ತದೆ. ಖರೀದಿದಾರರು ಗುಣಮಟ್ಟ ಖಾತರಿಪಡಿಸಿಕೊಳ್ಳಲು ಇದು ನೆರವಾಗುತ್ತದೆ.

ಬ್ಯಾಂಕ್‌ ಖಾತೆಗೆ ನೇರ ಹಣ
ಖರೀದಿದಾರರು ನಿಗದಿ ಪಡಿಸುವ ದರ ರೈತರಿಗೆ ಒಪ್ಪಿಗೆಯಾದರೆ  ಮಾರಾಟ ಪ್ರಕ್ರಿಯೆ ಮುಗಿದಂತೆಯೇ.  ಹಣಕ್ಕಾಗಿ ಅನ್ನದಾತ ವರ್ತಕರ ಮುಂದೆ ಕೈಕಟ್ಟಿ ನಿಲ್ಲಬೇಕಿಲ್ಲ. ಚಪ್ಪಲಿ ಸವೆಯುವವರೆಗೆ ಅವರ ಅಂಗಡಿಗಳಿಗೆ ಎಡತಾಕಬೇಕಿಲ್ಲ. ದಲ್ಲಾಳಿಗಳ ಮುಂದೆ ಗೋಗರೆಯಬೇಕಿಲ್ಲ. ಮಾರಾಟ ಮಾಡಿದ 24 ಗಂಟೆಗಳಲ್ಲಿ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತದೆ. ಇದು ಆನ್‌ಲೈನ್‌ ಮಾರುಕಟ್ಟೆಯ ಮತ್ತೊಂದು ವಿಶೇಷ.

ಗದಗ, ತಿಪಟೂರು ಮತ್ತು ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಪ್ರಾಯೋಗಿಕವಾಗಿ ಆನ್‌ಲೈನ್‌ ಹಣ ಪಾವತಿ ಯಶಸ್ವಿಯಾಗಿ ನಡೆಯುತ್ತಿದೆ. ರೈತರ ಬ್ಯಾಂಕ್‌ ಖಾತೆಗೆ ನೇರ ಹಣ ವರ್ಗಾವಣೆ ಮಾಡಿದ ದೇಶದ  ಮೊಟ್ಟ ಮೊದಲ ವ್ಯವಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ರೈತರು ಮತ್ತು ಖರೀದಿದಾರರ ವ್ಯವಹಾರಕ್ಕೆ ಅನುಕೂಲವಾಗಲೆಂದು ಮಾರುಕಟ್ಟೆ ಪ್ರಾಂಗಣದಲ್ಲಿಯೇ ಬ್ಯಾಂಕರ್ಸ್ ಕೋರ್ಟ್ ಸ್ಥಾಪಿಸಲಾಗಿದೆ. ಠೇವಣಿ ಇಲ್ಲದೆ ರೈತರು ಇಲ್ಲಿ ಬ್ಯಾಂಕ್‌ ಖಾತೆ ತೆರೆಯಬಹುದು.  

ವರ್ತಕರಿಗೆ ಇ–ಪರ್ಮಿಟ್‌
ವರ್ತಕರು ಖರೀದಿಸಿದ ಉತ್ಪನ್ನಗಳ ಸಾಗಾಟಕ್ಕೆ ಇ–ಪರ್ಮಿಟ್‌ (ಪರವಾನಗಿ) ಸೌಲಭ್ಯ ಕಲ್ಪಿಸಲಾಗಿದೆ. ಯಾವುದೇ ತೊಂದರೆ ಇಲ್ಲದೆ ದೇಶದಾದ್ಯಂತ ಸುರಕ್ಷಿತವಾಗಿ ಖರೀದಿಸಿದ ಉತ್ಪನ್ನಗಳನ್ನು ಸಾಗಣೆ ಮಾಡಬಹುದು. ಸದ್ಯದಲ್ಲಿಯೇ ಎಲ್ಲ ಮಾರುಕಟ್ಟೆಗಳಿಗೂ ಈ ವ್ಯವಸ್ಥೆ ವಿಸ್ತರಣೆಯಾಗಲಿದೆ.

ಏಕೀಕೃತ ಲೈಸನ್ಸ್‌ ವ್ಯವಸ್ಥೆ
ನೂತನ ಕೃಷಿ ಮಾರಾಟ ನೀತಿ ಅನ್ವಯ ಖರೀದಿದಾರಿಗೆ ಏಕೀಕೃತ ಪರವಾನಗಿ ನೀಡಲಾಗುವುದು. ಇದರಿಂದ ವರ್ತಕರು ರಾಜ್ಯದ ಎಲ್ಲ ಮಾರುಕಟ್ಟೆಗಳಲ್ಲೂ ವ್ಯವಹರಿಸಬಹುದು. ಒಮ್ಮೆ ಪರವಾನಗಿ ಪಡೆದರೆ ಹತ್ತು ವರ್ಷ ನಿಶ್ಚಿಂತೆಯಿಂದ ವಹಿವಾಟು ನಡೆಸಬಹುದು. ಹಿಂದಿನ ಲೈಸನ್ಸ್‌ ಕೂಡ ನವೀಕರಿಸಿಕೊಳ್ಳಬಹುದು.

ಹೊರ ರಾಜ್ಯಗಳ ವರ್ತಕರೂ ಏಕೀಕೃತ ಲೈಸನ್ಸ್‌ ಪಡೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಎಪಿಎಂಸಿ ನೀಡುತ್ತಿದ್ದ ಪರವಾನಗಿಯಿಂದ ಒಂದೇ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಬಹುದಿತ್ತು. ಸೀಮಿತ ವ್ಯಾಪ್ತಿ ಮತ್ತು ಮಾರುಕಟ್ಟೆಯಿಂದಾಗಿ ರೈತರಿಗೆ  ಉತ್ತಮ ಬೆಲೆ ದೊರೆಯುತ್ತಿರಲಿಲ್ಲ. ಆನ್‌ಲೈನ್‌ ಮೂಲಕ ರಾಜ್ಯದ ಯಾವುದೇ ಟ್ರೇಡಿಂಗ್‌, ಬಿಡ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆಯುತ್ತಾರೆ. ಇದರಿಂದ ಮಾರುಕಟ್ಟೆ ವ್ಯಾಪ್ತಿ ಮತ್ತು ಪೈಪೋಟಿ ಹೆಚ್ಚುತ್ತದೆ.

ರೈತ ಜಾಗೃತಿಗೆ ಸಾಕ್ಷ್ಯಚಿತ್ರ
ಮಹತ್ವಾಕಾಂಕ್ಷೆಯ  ಏಕೀಕೃತ ಮಾರುಕಟ್ಟೆ ಅನುಕೂಲಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ರಾಜ್ಯದಾದ್ಯಂತ ರೈತ ಶಿಕ್ಷಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಮಗಳಿಗೂ ತೆರಳಿ ಮೊಬೈಲ್‌ ವ್ಯಾನ್‌ಗಳಲ್ಲಿ ‘ರೈತ ಜಾಗೃತಿ ಸಾಕ್ಷ್ಯಚಿತ್ರ ’  ಪ್ರದರ್ಶನ ಮಾಡಲಾಗುತ್ತಿದೆ. 

100 ಮಾರುಕಟ್ಟೆ ವ್ಯಾಪ್ತಿಯ 11 ಸಾವಿರ ಗ್ರಾಮಗಳಲ್ಲಿ ರೈತ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಅಂದಾಜು 22 ಸಾವಿರ ರೈತರಿಗೆ ಮಾಹಿತಿ ನೀಡಲಾಗಿದೆ. ಆಧುನಿಕ ತಂತ್ರಜ್ಞಾನದ ಕುರಿತು ರೈತರಿಗೆ ಅರಿವು ಮೂಡಿಸಲು ಹಲವು ಕೃಷಿ ಮಾರುಕಟ್ಟೆಗಳಲ್ಲಿ ತರಬೇತಿ ಮತ್ತು ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ.

ರಾಷ್ಟ್ರಕ್ಕೆ ಕರ್ನಾಟಕ ಮಾದರಿ!
ರಾಜ್ಯದ ಎಪಿಎಂಸಿ ಮಾರುಕಟ್ಟೆಗಳಲ್ಲಿ ಜಾರಿಗೆ ತಂದಿರುವ ಇ–ಮಾರುಕಟ್ಟೆ ವ್ಯವಸ್ಥೆ ಇದೀಗ ದೇಶಕ್ಕೆ ಮಾದರಿಯಾಗಿದ್ದು, ನ್ಯಾಷನಲ್‌ ಅಗ್ರಿಕಲ್ಚರಲ್‌ ಮಾರ್ಕೆಟ್‌ (ಎನ್‌ಎಎಂ) ಹೆಸರಿನಲ್ಲಿ ರಾಷ್ಟ್ರವ್ಯಾಪಿ ಅನುಷ್ಠಾನಕ್ಕೆ ಬರುತ್ತಿದೆ. ಇಂಥದ್ದೊಂದು ವ್ಯವಸ್ಥೆಯನ್ನು ಮೊದಲ ಬಾರಿಗೆ ಪರಿಚಯಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. 

ಮುಂದಿನ ದಿನಗಳಲ್ಲಿ ಕರ್ನಾಟಕದ ಮಾರುಕಟ್ಟೆಗಳೊಂದಿಗೆ ದೇಶದ ಎಲ್ಲ ರಾಜ್ಯಗಳ ಮಾರುಕಟ್ಟೆಗಳ ನಡುವೆಯೂ ಸಂಪರ್ಕ ಏರ್ಪಡಲಿದೆ. ನಮ್ಮ ರೈತರ ಉತ್ಪನ್ನಗಳಿಗೆ ರಾಷ್ಟ್ರೀಯ ಮಾರುಕಟ್ಟೆ ಲಭ್ಯವಾಗಲಿದೆ. ಕ್ರಾಂತಿಕಾರಿ ಬದಲಾವಣೆ ಎಂದು ಬಣ್ಣಿಸಲಾಗುವ ಕರ್ನಾಟಕದ ಕೃಷಿ  ಮಾರಾಟ ನೀತಿ ಮತ್ತು ಏಕೀಕೃತ ಆನ್‌ಲೈನ್‌ ಕೃಷಿ ಮಾರುಕಟ್ಟೆಯು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯಕ್ಕೆ ದೊಡ್ಡ ಹೆಸರನ್ನು ತಂದುಕೊಟ್ಟಿವೆ.

ಮತ್ತೊಮ್ಮೆ ಎಲ್ಲರೂ ಕರ್ನಾಟಕದತ್ತ  ಬೆರಗುಗಣ್ಣಿನಿಂದ ತಿರುಗಿ ನೋಡುವಂತೆ ಮಾಡಿದೆ. ಕೇಂದ್ರ ಸರ್ಕಾರದ 2014–15ನೇ ಸಾಲಿನ ಆರ್ಥಿಕ ಸಮೀಕ್ಷೆ ಕೂಡ ಈ ವಿನೂತನ ವ್ಯವಸ್ಥೆಯನ್ನು ‘ಕೃಷಿ ಕ್ಷೇತ್ರದ ಕ್ರಾಂತಿಕಾರಿ ಹೆಜ್ಜೆ’ ಎಂದು ಪ್ರಶಂಸಿಸಿದೆ. ಈ ವಿಷಯದಲ್ಲಿ ಇಡೀ ದೇಶಕ್ಕೆ ಕರ್ನಾಟಕ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಸೇರಿದಂತೆ ಎಲ್ಲ ರಾಜ್ಯಗಳೂ ಈ ‘ರೈತ ಸ್ನೇಹಿ ’ ಮಾದರಿ ಅನುಸರಿಸುವಂತೆ ಸಮೀಕ್ಷೆ ಸಲಹೆ ಮಾಡಿತ್ತು.

‘ಕರ್ನಾಟಕ ಮಾದರಿ’ಯನ್ನೇ ಅನುಕರಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಏಕೀಕೃತ ಆನ್‌ಲೈನ್ ಕೃಷಿ ಮಾರುಕಟ್ಟೆ ಯೋಜನೆಗೆ ಚಾಲನೆ ನೀಡಿದೆ. ಇದಕ್ಕೂ ಮೊದಲು ಆನ್‌ಲೈನ್‌ ಮಾರ್ಕೆಟಿಂಗ್‌ ವ್ಯವಸ್ಥೆಯನ್ನು ರಾಷ್ಟ್ರವ್ಯಾಪಿ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್ ಅವರು ಹಿರಿಯ ಅಧಿಕಾರಿಗಳ ತಂಡದ ಜತೆ ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು.

ತಾಂಜಾನಿಯಾ, ವಿಶ್ವ ಬ್ಯಾಂಕ್‌ ಆರ್ಥಿಕ ಸಲಹೆಗಾರರ ತಂಡ, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯಾ, ಆಂಧ್ರದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ರಾಜ್ಯಕ್ಕೆ ಖುದ್ದಾಗಿ ಬಂದು ಮಾಹಿತಿ ಪಡೆದಿದ್ದರು.

ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು,  ಜಾರ್ಖಂಡ್‌, ಒಡಿಶಾ, ಗುಜರಾತ್‌, ಪಶ್ಚಿಮ ಬಂಗಾಳ, ಉತ್ತರಾಖಂಡ, ರಾಜಸ್ತಾನ, ಛತ್ತೀಸ್‌ಗಡ ಸೇರಿದಂತೆ 26 ರಾಜ್ಯಗಳ ಕೃಷಿ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಗದಗ, ಹುಬ್ಬಳ್ಳಿ, ಕಲಬುರ್ಗಿ, ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಭೇಟಿ  ನೀಡಿ ಅಧ್ಯಯನ ನಡೆಸಿದ್ದರು. ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. 

ರಾಜ್ಯದ ಇ–ಟೆಂಡರ್‌ ಪ್ರಕ್ರಿಯೆಯಲ್ಲಿ  ಭಾಗವಹಿಸಲು ಎಂಟು ರಾಜ್ಯಗಳು ಸೇರಿದಂತೆ ಅನೇಕ ಖಾಸಗಿ ಸಂಘಗಳು, ದೊಡ್ಡ ವರ್ತಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಯೋಜನೆಯ ಜಾಲದಲ್ಲಿ ಕೇವಲ 20 ಎಪಿಎಂಸಿ ಮಾರುಕಟ್ಟೆಗಳಿವೆ.

ಅನ್ನದಾತನೇ ಸಾರ್ವಭೌಮ!
ಕೃಷಿ ಉತ್ಪನ್ನಗಳ ಬೆಲೆ ನಿರ್ಧಾರದಲ್ಲಿ ರೈತರದ್ದೇ ಅಂತಿಮ ಮಾತು. ಇ–ಟೆಂಡರ್‌ನಲ್ಲಿ ನಿರೀಕ್ಷಿತ ಬೆಲೆ ದೊರೆತರೆ ತಮ್ಮ  ಉತ್ಪನ್ನಗಳನ್ನು ಮಾರಾಟ ಮಾಡಬಹುದು, ಒಪ್ಪಿಗೆಯಾಗದಿದ್ದರೆ  ಯಾವ ಮುಲಾಜಿಲ್ಲದೆ ಮಾರಾಟ ನಿರಾಕರಿಸುವ ಹಕ್ಕು ರೈತರಿಗಿದೆ.   ಮಧ್ಯವರ್ತಿಗಳ  ಹಾವಳಿ ದೂರವಾಗಿ ಕೃಷಿಕರು ಮತ್ತು  ವರ್ತಕರು ನೇರ ಮುಖಾಮುಖಿಯಾಗುತ್ತಾರೆ.

ಬದಲಾವಣೆಯ ಪರ್ವ
‘ರೈತರ ಸಬಲೀಕರಣ ಆಶಯದ ಈ ವ್ಯವಸ್ಥೆ ಈಗಿನ ಮಾರುಕಟ್ಟೆಯಲ್ಲಿ ತೀವ್ರ ಬದಲಾವಣೆ ತರಲಿದೆ’ ಎನ್ನುವುದು ಸಹಕಾರ ಇಲಾಖೆಯ (ಮಾರುಕಟ್ಟೆ ಸುಧಾರಣೆ) ಹೆಚ್ಚುವರಿ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಇ– ಮಾರುಕಟ್ಟೆ ಸೇವೆಗಳ ವ್ಯವಸ್ಥಾಪಕ ನಿರ್ದೇಶಕ ಆರ್‌. ಮನೋಜ್ ಅವರ ಆಶಯ.

ADVERTISEMENT

‘ಕೃಷಿ ಮಾರಾಟ ನೀತಿ–2013’ ರೂಪಿಸಲು ಸರ್ಕಾರ ರಚಿಸಿದ ಕೃಷಿ ಮಾರಾಟ ಸುಧಾರಣಾ ಸಮಿತಿಯಲ್ಲಿದ್ದ ಮನೋಜ್‌ ಅವರು, ಈ ಆನ್‌ಲೈನ್‌ ಮಾರುಕಟ್ಟೆಯ ರೂವಾರಿಯೂ ಹೌದು. ಈ ಬಗ್ಗೆ ಸಮಗ್ರ ಮಾಹಿತಿ ಇವರ ನಾಲಿಗೆ ತುದಿಯಲ್ಲಿಯೇ ಇವೆ. ರಾಜ್ಯಕ್ಕೆ ಯಾವುದೇ ಗಣ್ಯರೂ ಬಂದರೂ ಮಾಹಿತಿ ನೀಡುವ ಜವಾಬ್ದಾರಿ ಮನೋಜ್‌ ಅವರ ಹೆಗಲೇರುತ್ತದೆ.

ಕೃಷಿ ಮಾರಾಟ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಸುವ ಮೂಲಕ ಎಲ್ಲ ಹಂತದಲ್ಲಿ ಪಾರದರ್ಶಕತೆ ಕಾಪಾಡುವುದು, ಮಾರುಕಟ್ಟೆಯ ಸಾಮರ್ಥ್ಯ ಮತ್ತು ದಕ್ಷತೆ ಹೆಚ್ಚಿಸುವುದು ಏಕೀಕೃತ  ಮಾರುಕಟ್ಟೆಯ ಉದ್ದೇಶ. ಹೆಚ್ಚಿನ ಸಂಖ್ಯೆಯ ವರ್ತಕರಿಗೆ ಪಾಲ್ಗೊಳ್ಳುವ ಅವಕಾಶದ ಜತೆಗೆ ಗುಣಮಟ್ಟದ ಉತ್ಪನ್ನ ಪಡೆಯುವ ಅವಕಾಶವೂ ಲಭ್ಯವಾಗಲಿದೆ. ಇದರಿಂದ ಕೇವಲ ರೈತರಿಗೆ ಮಾತ್ರವಲ್ಲ ವರ್ತಕರು, ಗ್ರಾಹಕರು ಸೇರಿದಂತೆ ಪ್ರತಿಯೊಬ್ಬರಿಗೂ ಲಾಭವಾಗುತ್ತದೆ ಎನ್ನುತ್ತಾರೆ ಮನೋಜ್‌.

ನಿಖರ ಬೆಲೆ, ಕರಾರುವಾಕ್ಕಾದ ತೂಕ, ಸ್ಪರ್ಧಾತ್ಮಕ ಬೆಲೆ, ಸರಳ ಹಾಗೂ ಪಾರದರ್ಶಕ ವ್ಯವಸ್ಥೆ, ಲೆಕ್ಕಪತ್ರ ನಿರ್ವಹಣೆ, ಕ್ಷಣ, ಕ್ಷಣದ ಮಾಹಿತಿ ಆನ್‌ಲೈನ್‌ ವಹಿವಾಟಿನ ಯಶಸ್ಸಿನ ಗುಟ್ಟು ಎನ್ನುವ  ಮನೋಜ್‌ ಅವರು, ಶೀಘ್ರವೇ 57 ಎಪಿಎಂಸಿಗಳಲ್ಲಿ ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ವಿಶ್ವಾಸ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.