ADVERTISEMENT

ಕೃಷಿ ಕ್ಷೇತ್ರಕ್ಕೆ ಉದ್ಯಮ ಸ್ವರೂಪ ಯತ್ನ

ಸುಬ್ರಹ್ಮಣ್ಯ ಎಚ್.ಎಂ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST
ಕೃಷಿಕರಿಗೆ ಮಾಹಿತಿ
ಕೃಷಿಕರಿಗೆ ಮಾಹಿತಿ   

ಕರ್ನಾಟಕವು ಪ್ರಗತಿಪರ ಕೃಷಿ ರಾಜ್ಯ ಎಂದೇ  ದೇಶದಲ್ಲಿ  ಖ್ಯಾತಿ ಪಡೆದಿದೆ. ಇಲ್ಲಿ 10 ವಿವಿಧ ಕೃಷಿ ಹವಾಮಾನ ಪ್ರದೇಶಗಳಿದ್ದು, ಸಾಕಷ್ಟು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸೂಕ್ತ ವಾತಾವರಣ ಇಲ್ಲಿದೆ. ಕೃಷಿ ಕ್ಷೇತ್ರದಲ್ಲಿ ಹೇರಳವಾದ ಅವಕಾಶವಿದ್ದು, ಹೆಚ್ಚಿನ ಬಂಡವಾಳ ಹೂಡುವುದರ ಮೂಲಕ ಹೆಚ್ಚಿನ ಲಾಭವನ್ನೂ ನಿರೀಕ್ಷೆ ಮಾಡಬಹುದು.

ಈ ನಿಟ್ಟಿನಲ್ಲಿ ರಾಜ್ಯದ ಮಾರುಕಟ್ಟೆ ಮಾಹಿತಿ ಮತ್ತು ಕೃಷಿ ಉದ್ಯಮದ ಚಟುವಟಿಕೆಯ  ಸಾಧಕ – ಬಾಧಕಗಳ ಬಗ್ಗೆ ಬೆಳಕು ಚೆಲ್ಲಲು ವೇ2ಅಗ್ರಿಬಿಸಿನೆಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ವೇ2ಎಬಿಐ) ‘ಅಗ್ರಿಬಿಸ್ನೆಸ್ ರಿಸರ್ಚ್ ಆಂಡ್ ಇನ್‌ಕ್ಯುಬೇಷನ್ ಸೆಂಟರ್’ ದಿಟ್ಟ ಹೆಜ್ಜೆ ಇಟ್ಟಿದ್ದು, ಸಂಘಟಿತ ವೃತ್ತಿಪರ ಕೃಷಿ ಉದ್ದಿಮೆ ಸೇವೆ ನೀಡಲು ಶ್ರಮಿಸುತ್ತಿದೆ.
ಅಲ್ಲದೆ, ಸಂಶೋಧನೆ ಆಧಾರಿತ ಕೃಷಿ ಉದ್ಯಮ ಸಲಹಾ ಸೇವೆ ಮತ್ತು ಮೊಬೈಲ್ ಆ್ಯಪ್  ಸೇವೆಯನ್ನು ಕೂಡ ಒದಗಿಸುತ್ತಿದೆ.

ಪ್ರಮುಖ ಸೇವೆ
ರೈತರು, ರೈತ ಸಂಘಗಳು, ಕೃಷಿ ಉದ್ದಿಮೆದಾರರು, ವ್ಯಾಪಾರಿಗಳು, ಸಂಸ್ಕರಣೆದಾರರು ಮತ್ತು ರಫ್ತುದಾರರು, ಕೃಷಿ ಪರಿಕರ, ತಂತ್ರಜ್ಞಾನ  ಒದಗಿಸುವವರಿಗೆ ಸಂಸ್ಥೆ ನೆರವು ನೀಡಿ, ಅಂತಿಮವಾಗಿ ಉದ್ದಿಮೆ ಸ್ಥಾಪನೆಯಾಗುವಂತೆ ನೋಡಿಕೊಂಡು ಮಾರ್ಗದರ್ಶನ ನೀಡುವ ಕೆಲಸವನ್ನು ಮಾಡುತ್ತಿದೆ.

ಯೋಜನಾ ಬದ್ಧ
ಬಹುತೇಕ ರೈತರು ಕೃಷಿಯಲ್ಲಿ ಯೋಜನಾಬದ್ಧವಾಗಿ ಬಂಡವಾಳ ಹೂಡುವುದಿಲ್ಲ. ಇದರಿಂದ ಸಂಕಷ್ಟಕ್ಕೆ ಸಿಲುಕುತ್ತಾರೆ.  ಸಮಸ್ಯೆಯ ಸುಳಿಯಿಂದ ಹೊರ ಬರಲು ಸಾಧ್ಯವಾಗದೆ ಆತ್ಮಹತ್ಯೆ ದಾರಿ ಹಿಡಿಯುತ್ತಾರೆ. ಇಲ್ಲವೇ ಕೃಷಿಯಿಂದ ವಿಮುಖರಾಗುವ ನಿರ್ಧಾರ ಕೈಗೊಳ್ಳುತ್ತಾರೆ. ಇಂತಹ ವಿಷಮ ಸ್ಥಿತಿಯಿಂದ ರೈತರು ಹೊರಬರಲು   ಸಂಸ್ಥೆಯು  ಕೃಷಿ ಯೋಜನೆ ತಯಾರಿಸಿ ಅನುಷ್ಠಾನಗೊಳಿಸುವ ಹೊಣೆಯನ್ನು  ಹೊರುತ್ತದೆ. ಈಗಾಗಲೇ ಕನಕಪುರ ಹಾಗೂ ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರಗತಿಪರ ರೈತರೊಂದಿಗೆ ಕೈಜೋಡಿಸಿ  ಕಾರ್ಯ ನಿರ್ವಹಿಸುತ್ತಿದೆ.

ಸುಸ್ಥಿರ ಸಂಬಂಧ
ರೈತರು ಯಾವ ಬೆಳೆ ಬೆಳೆಯಬೇಕು. ಯಾವಾಗ ಬೆಳೆಯಬೇಕು ಮತ್ತು ಕಟಾವು ಮಾಡಬೇಕು. ಉತ್ಪನ್ನ ಸಂಗ್ರಹಿಸ ಬೇಕೇ ಬೇಡವೇ ಮತ್ತು ಎಲ್ಲಿ ಮಾರಾಟ ಮಾಡ ಬೇಕು ಎನ್ನುವ ಮಾಹಿತಿ ನೀಡುವುದರ ಜತೆಗೆ ರೈತರೊಂದಿಗೆ ಸುಸ್ಥಿರ ಸಂಬಂಧ ಬೆಸೆಯುವ ನಿಟ್ಟಿನಲ್ಲೂ  ಕಾರ್ಯೋಖ್ಮವಾಗಿದೆ.

ಕೃಷಿಕರಿಗೆ ಉತ್ತೇಜನ
ಕೃಷಿ ಉದ್ದಿಮೆದಾರರು ಹೊಸದಾಗಿ ಬಂಡವಾಳ ಹೂಡುವುದಕ್ಕೂ ಮೊದಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಸಂಸ್ಥೆಯು   ಮಾಡುತ್ತಿದೆ. ಕೃಷಿ ಮಾಹಿತಿ ಮತ್ತು ಮಾರುಕಟ್ಟೆ ಜ್ಞಾನದ ಬಗ್ಗೆಯೂ ಕಾರ್ಯಾಗಾರ  ನಡೆಸಿ ಕೃಷಿಯಲ್ಲಿ ತೊಡಗುವವರಿಗೆ ಉತ್ತೇಜನ  ನೀಡುವ ಕೆಲಸ ಮಾಡುತ್ತಿದೆ.

ಮೊಬೈಲ್ ಆ್ಯಪ್
ಸಂಸ್ಥೆಯು ವೇ2ಎಬಿಐ ಅಗ್ರಿ ಎಫ್ ಬಿಐ ಎನ್ನುವ ಮೊಬೈಲ್  ಆ್ಯಪ್ ಸೇವೆಯನ್ನು ಈಚೆಗೆ ಪ್ರಾರಂಭಿಸಿದೆ. ಇದು ಅತಿ ಹೆಚ್ಚಿನ ಸಂಖ್ಯೆಯ ಖರೀದಿದಾರರು ಮತ್ತು ಮಾರಾಟಗಾರರ ಸಂಪರ್ಕದ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ  ಸೇವೆ ಇದಾಗಿದೆ. ಆಯ್ದ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಬೆಲೆಯ ಮುನ್ನೋಟ ಮತ್ತು ಮಾರುಕಟ್ಟೆ ಒಳನೋಟದ ಸೇವೆಯನ್ನೂ ಈ ಆ್ಯಪ್  ನೀಡುತ್ತದೆ.

ಕಾಫಿ, ಅಡಿಕೆ, ಕಾಳುಮೆಣಸು, ತೆಂಗು ಮತ್ತು ಕೊಬ್ಬರಿ, ಗೋಡಂಬಿ, ಮೆಕ್ಕೆಜೋಳ, ತೊಗರಿ, ಹತ್ತಿ, ಈರುಳ್ಳಿ ಮತ್ತು ಟೊಮೆಟೊ ಬೆಲೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು  ಈ  ಆ್ಯಪ್‌ ಮೂಲಕ ಪಡೆಯಬಹುದು.

ಆ್ಯಪ್ ನೀಡುವ ಬೆಲೆ ಮುನ್ನೋಟ ಮತ್ತು  ಮಾಹಿತಿ ಆಧರಿಸಿ ಬೆಳೆ ಬೆಳೆಯಲು, ಉತ್ಪನ್ನ ಸಂಗ್ರಹಿಸಲು ಮತ್ತು ಮಾರಾಟ ಮಾಡಲು ರೈತರು  ತೀರ್ಮಾನ ಕೈಗೊಳ್ಳಬಹುದು.
ವ್ಯಾಪಾರಿಗಳು ಖರೀದಿ ಮತ್ತು ಮಾರಾಟ ಚಟುವಟಿಕೆ ಕೈಗೊಳ್ಳಲು ಕೂಡ ಈ  ಆ್ಯಪ್ ನ ಸಹಾಯ ಪಡೆಯಬಹುದು. ರಾಜ್ಯದ ಪ್ರಮುಖ ಬೆಳೆಗಳ ಮಾಹಿತಿ ಹಾಗೂ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳ ಧಾರಣೆ ಬಗ್ಗೆಯೂ ಇಲ್ಲಿ ಮಾಹಿತಿ ದೊರೆಯುತ್ತದೆ.

ಖರೀದಿ ಮತ್ತು ಮಾರಾಟ  ತಂತ್ರದ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲೂ ಆ್ಯಪ್ ರೈತರಿಗೆ ನೆರವು ನೀಡುತ್ತದೆ. ಮಾರುಕಟ್ಟೆ ಅಂಕಿ – ಅಂಶ  ಆಧರಿಸಿದ ತಾಂತ್ರಿಕ ವಿಶ್ಲೇಷಣೆ ಹಾಗೂ ವಿವರವಾದ ಸಂಶೋಧನೆ ಬಗ್ಗೆಯೂ ಆ್ಯಪ್‌ ಮಾಹಿತಿ ಒದಗಿಸುತ್ತದೆ.

ಆಯ್ದ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಹೊಸ ಬೆಳವಣಿಗೆ ಮತ್ತು ಕೃಷಿ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಮಾಹಿತಿ ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಗಳಲ್ಲೂ ಸಿಗುವಂತೆ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

‘ದೇಶದಲ್ಲಿ ಕೃಷಿ ಎಂದರೆ ನಷ್ಟದ ಉದ್ಯಮ ಎನ್ನುವ ಭಾವನೆ ಇದೆ.  ಮಳೆ – ಹವಾಮಾನ್ಯ ವೈಪರೀತ್ಯ, ಮಾರುಕಟ್ಟೆ, ಬೆಲೆ, ದಲ್ಲಾಳಿಗಳ ಕಾಟ ಕೃಷಿಯೊಂದಿಗೆ ತಳಕು ಹಾಕಿಕೊಂಡಿರುವುದರಿಂದ ಕೃಷಿಯತ್ತ ಯಾರೂ ಕೂಡ ಮುಖ ಮಾಡುತ್ತಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೃಷಿಯನ್ನು ಉದ್ಯಮವಾಗಿ ರೂಪಿಸುವ ಸವಾಲು ನಮ್ಮ ಎದುರು ಇದೆ’ ಎಂದು  ಕೃಷಿ ಉದ್ಯಮ ಪರಿಣತ ಹಾಗೂ ವೇ2ಎಬಿಐ ಸಂಸ್ಥೆ ಸಂಸ್ಥಾಪಕ ಡಾ. ಡಿ.ಪ್ರಸನ್ನ  ಅವರು ವಿಶ್ಲೇಷಿಸುತ್ತಾರೆ.

ಸರ್ಕಾರ ವೇ2ಎಬಿಐ ಸಂಸ್ಥೆಯ ವಿಶಿಷ್ಟತೆ ಮತ್ತು ತಾಂತ್ರಿಕ ಸೇವೆ ಪರಿಗಣಿಸಿ  ಕರ್ನಾಟಕ ಸ್ಟಾರ್ಟ್-ಆಪ್ ಪಾಲಿಸಿ 2015-20 ಅಡಿಯಲ್ಲಿ ಪರಿಗಣಿಸಿದ್ದು,  ಭವಿಷ್ಯದಲ್ಲಿ ಅತ್ಯುತ್ತಮ ಕೃಷಿ ಉದ್ಯಮ ಸೇವಾ ಸಂಸ್ಥೆಯಾಗಿ ಹೊರಹೊಮ್ಮಲಿದೆ  ಎಂದು ಪ್ರಸನ್ನ ಅವರು ವಿಶ್ವಾಸ  ವ್ಯಕ್ತಪಡಿಸುತ್ತಾರೆ.

ಸಂಸ್ಥೆಯ ವೈಶಿಷ್ಟ್ಯತೆಗಳು
* ಸಂಬಂಧಪಟ್ಟ ಕ್ಷೇತ್ರದಲ್ಲಿ ಅಪಾರ ಅನುಭವವಿರುವ ಪರಿಣತರ ತಂಡ
* ಸ್ಥಳೀಯ ಕೃಷಿ ಪರಿಸ್ಥಿತಿ ಬಗ್ಗೆ ಅಳವಾದ ತಿಳಿವಳಿಕೆ
* ಯೋಜನೆ ಪ್ರಾರಂಭದಿಂದ ಹಿಡಿದು ಕೊನೆಗೊಳ್ಳುವವರೆಗೂ ಸಂಪೂರ್ಣ ಯೋಜನೆ ಅನುಷ್ಠಾನದ ಜವಾಬ್ದಾರಿ

ಅಂಬೆಗಾಲು
ಎರಡೂವರೆ ವರ್ಷಗಳ ಹಿಂದೆ ಆರಂಭವಾದ ಸಂಸ್ಥೆ ಈಗಲೂ ಅಂಬೆಗಾಲು ಇಡುತ್ತಿದ್ದು, ಕೃಷಿ ಕ್ಷೇತ್ರದ ಉದ್ಯಮವಾಗಿ ರೂಪುಗೊಳ್ಳಬೇಕೆಂಬ ಉನ್ನತ್ತ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ.

ಕೃಷಿ ಕ್ಷೇತ್ರದ ಉದ್ಯಮದಾರರು ಹಾಗೂ ರೈತರಿಗೆ ಎಲ್ಲಾ ರೀತಿಯ ಮಾಹಿತಿ ಮತ್ತು ಸೇವೆ ನೀಡಲು ಸಂಸ್ಥೆ ಅಲ್ಪ ಶುಲ್ಕ ವಿಧಿಸುತ್ತಿದೆ. ಈ ಮೂಲಕ   ಬರುವ ವರಮಾನ ಆಧರಿಸಿಯೇ ಮುನ್ನಡೆಯುತ್ತಿದೆ. ಮಾಹಿತಿಗೆ 9449004956 ಮತ್ತು www.way2agribusiness.com ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.