ADVERTISEMENT

ಕೃಷಿ ಸಾಲ ಮನ್ನಾದಿಂದ ಆರ್ಥಿಕ ಹೊರೆ

ಪಿಟಿಐ
Published 17 ಏಪ್ರಿಲ್ 2017, 19:30 IST
Last Updated 17 ಏಪ್ರಿಲ್ 2017, 19:30 IST
ಕೃಷಿ ಸಾಲ ಮನ್ನಾದಿಂದ ಆರ್ಥಿಕ ಹೊರೆ
ಕೃಷಿ ಸಾಲ ಮನ್ನಾದಿಂದ ಆರ್ಥಿಕ ಹೊರೆ   

ಮುಂಬೈ: ಜನಪ್ರಿಯತೆಗಾಗಿ  ಕೃಷಿಸಾಲ ಮನ್ನಾ ಮಾಡುತ್ತಿರುವುದರಿಂದ ದೇಶದ ಆರ್ಥಿಕ ಶಿಸ್ತು ಹದಗೆಡಲಿದ್ದು, ತೀವ್ರ ಆರ್ಥಿಕ ಹೊರೆ ಬೀಳಲಿದೆ  ಎಂದು ಬ್ಯಾಂಕ್‌ ಆಫ್‌ ಅಮೆರಿಕ ಮೆರಿಲ್‌ ಲಿಂಚ್‌ದ ವಿಶ್ಲೇಷಕರು ಎಚ್ಚರಿಕೆ ನೀಡಿದ್ದಾರೆ.

ಕೃಷಿಸಾಲ ಮನ್ನಾ ನಿರ್ಧಾರದಿಂದ ವಿತ್ತೀಯ ಕೊರತೆ, ಬಡ್ಡಿದರ ಹೆಚ್ಚಾಗಲಿದೆ.  ಇದು ಸಾಲ ನೀಡಿಕೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಉತ್ತರ ಪ್ರದೇಶ ಸರ್ಕಾರದಂತೆಯೇ ಎಲ್ಲ ರಾಜ್ಯ ಸರ್ಕಾರಗಳು  ರೈತರ ಸಾಲ ಮನ್ನಾ  ಮಾಡಿದಲ್ಲಿ  2019ರ ಚುನಾವಣೆ ವೇಳೆಗೆ  ಒಟ್ಟು ಆಂತರಿಕ ಉತ್ಪನ್ನದ(ಜಿಡಿಪಿ) ಶೇ 2ರಷ್ಟು ಆರ್ಥಿಕ ಹೊರೆ ಬೀಳಲಿದೆ ಎಂದು ಎಚ್ಚರಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ರೈತರ ಸಾಲ ಮನ್ನಾ ಮಾಡಿದ ಬೆನ್ನಲ್ಲೇ ಇನ್ನುಳಿದ ರಾಜ್ಯಗಳು ಅದೇ ಕ್ರಮಕ್ಕೆ ಮುಂದಾಗಿರುವುದು ತಜ್ಞರ ಆತಂಕಕ್ಕೆ ಕಾರಣವಾಗಿದೆ.
ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ₹36,000 ಕೋಟಿ  ಅಥವಾ ರಾಜ್ಯ ಜಿಡಿಪಿಯ ಶೇ 0.4ರಷ್ಟು ಕೃಷಿಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ. ಇನ್ನುಳಿದ ರಾಜ್ಯಗಳೂ ಇದೇ ಹಾದಿ ತುಳಿದರೆ ಆರ್ಥಿಕ ಬೀಳಲಿದೆ ಎಂದು  ಆರ್ಥಿಕ ವಿಶ್ಲೇಷಕರು ಎಚ್ಚರಿಸಿದ್ದಾರೆ.

ADVERTISEMENT

ಈ ರೀತಿಯ ಸಾಲಮನ್ನಾ ನಿರ್ಧಾರ ತೆಗೆದುಕೊಳ್ಳುವ ಮೊದಲು ರಾಜ್ಯಗಳು ತಮ್ಮ ಆರ್ಥಿಕ ಸ್ಥಿತಿಗತಿಯನ್ನು  ಪರಿಶೀಲಿಸಿ ಕೊಂಡು ಎಚ್ಚರಿಕೆಯ ಹೆಜ್ಜೆ ಇಡುವುದು ಒಳ್ಳೆಯದು ಎಂದು ಕೇಂದ್ರ ಸರ್ಕಾರ ಸಲಹೆ ಮಾಡಿದೆ.

ಈ ಸಲಹೆಯ ಹೊರತಾಗಿಯೂ ಹೆಚ್ಚಿನ ರಾಜ್ಯಗಳು ಕೃಷಿಸಾಲ ಮನ್ನಾ ಮಾಡಲು ಮುಂದಾಗಿವೆ. ಈಗಾಗಲೇ  ಹಲವು ರಾಜ್ಯಗಳು ನಿಗದಿತ ಶೇ 3ರಿಂದ 3.5 ವಿತ್ತೀಯ ಕೊರತೆ  ಮಿತಿಯನ್ನು ಮೀರಿವೆ. ಉತ್ತರ ಪ್ರದೇಶ ಸರ್ಕಾರದ ಘೋಷಣೆ ಹೊರಬಿದ್ದ ಬೆನ್ನಲ್ಲೇ ಮಹಾರಾಷ್ಟ್ರ, ಹರಿಯಾಣ ಮತ್ತು ತಮಿಳುನಾಡಿನಲ್ಲಿಯೂ ಕೃಷಿ ಸಾಲಮನ್ನಾ ಮಾಡುವಂತೆ ಒತ್ತಡ ಹೆಚ್ಚಿದೆ.

ಎಲ್ಲ ಕೃಷಿಸಾಲ ಮನ್ನಾ ಮಾಡುವಂತೆ ಮದ್ರಾಸ್‌ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ ₹4,000 ಕೋಟಿ ಆರ್ಥಿಕ ಹೊರೆ ಬೀಳಲಿದೆ.

ರಾಜ್ಯ ಸರ್ಕಾರಗಳ ಇಂತಹ ನಿಲುವಿಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅಮೆರಿಕ ಬ್ಯಾಂಕ್‌ನ ಆರ್ಥಿಕ ವಿಶ್ಲೇಷಕರು, ಸಾಲಮನ್ನಾ ಪ್ರವೃತ್ತಿ ರೈತರು ಸಾಲ ಮರು ಪಾವತಿ ಮಾಡದಂತೆ ತಡೆಯುತ್ತದೆ ಮತ್ತು ಬಡ್ಡಿದರ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರು ನೀಡಿದ ಎಚ್ಚರಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಕಂದಾಯ ಮತ್ತು ವೆಚ್ಚ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎನ್‌.ಕೆ. ಸಿಂಗ್‌ ನೇತೃತ್ವದ ಐವರು ಸದಸ್ಯರ ಸಮಿತಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ ಕುರಿತು ಪರಾಮರ್ಶೆ ನಡೆಸಿದೆ. ಈ ವರದಿಯ ಅನುಷ್ಠಾನಕ್ಕೆ  ಕೃಷಿ ಸಾಲ ಮನ್ನಾ ಗಂಡಾಂತರವಾಗಲಿದೆ ಎಂದು ಬ್ಯಾಂಕ್‌ ಆಫ್‌ ಅಮೆರಿಕ ಮೆರಿಲ್‌ ಲಿಂಚ್‌ ತಜ್ಞರು ಹೇಳಿದ್ದಾರೆ.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.