ADVERTISEMENT

ಕೆಎಂಎಫ್‌ ಡೇರಿಗಳಿಗೆ ‘ಕ್ವಾಲಿಟಿ ಮಾರ್ಕ್‌’ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 19:30 IST
Last Updated 23 ಜುಲೈ 2017, 19:30 IST
ಕೆಎಂಎಫ್‌ ಡೇರಿಗಳಿಗೆ ‘ಕ್ವಾಲಿಟಿ ಮಾರ್ಕ್‌’ ಪ್ರಮಾಣಪತ್ರ
ಕೆಎಂಎಫ್‌ ಡೇರಿಗಳಿಗೆ ‘ಕ್ವಾಲಿಟಿ ಮಾರ್ಕ್‌’ ಪ್ರಮಾಣಪತ್ರ   

ಬೆಂಗಳೂರು: ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮವು ನೀಡುವ ಉತ್ಕೃಷ್ಟ ಗುಣಮಟ್ಟದ ‘ಕ್ವಾಲಿಟಿ ಮಾರ್ಕ್‌’ ಪ್ರಮಾಣಪತ್ರವು ಕರ್ನಾಟಕ ಸಹಕಾರಿ ಹಾಲು ಮಹಾಮಂಡಳದ (ಕೆಎಂಎಫ್‌) ಡೇರಿಗಳಿಗೆ ದೊರೆತಿದೆ.

ಮಹಾಮಂಡಳಕ್ಕೆ ಸೇರಿದ ಬೆಂಗಳೂರು, ಶಿವಮೊಗ್ಗ, ಮಂಡ್ಯ ಡೇರಿಗಳಿಗೆ ಹಾಗೂ ಮದರ್ ಡೇರಿ, ಯಲಹಂಕ ಮತ್ತು ಚನ್ನರಾಯಪಟ್ಟಣದ ಆತ್ಯಾಧುನಿಕ  ಘಟಕಗಳಿಗೆ ಈ ಪ್ರಮಾಣಪತ್ರ ಸಿಕ್ಕಿದೆ.

ದೆಹಲಿಯ ಕೃಷಿ ಭವನದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೇಂದ್ರದ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರು ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದ್ದರು.

ಮಹಾಮಂಡಳದ ಹಿರಿಯ ನಿರ್ದೇಶಕರಾದ ನರಸಿಂಹರೆಡ್ಡಿ, ಗೋವಿಂದೇಗೌಡ, ಡಾ.ಗುರುಲಿಂಗಯ್ಯ, ಹನುಮೇಶ್, ಡಾ.ಜಿ.ಟಿ.ಗೋಪಾಲ್, ಬಿ.ನಟರಾಜ್ ಪ್ರಮಾಣಪತ್ರಗಳನ್ನು ಸ್ವೀಕರಿಸಿದ್ದರು.

ಸಹಕಾರಿ ಡೇರಿಗಳಲ್ಲಿ ಉತ್ತಮ ನಿರ್ವಹಣೆ ಮಾಡಿ, ಉತ್ಕೃಷ್ಟ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸುವುದನ್ನು ಪರಿಗಣಿಸಿ ‘ಕ್ವಾಲಿಟಿ ಮಾರ್ಕ್‌’ ನೀಡಲಾಗಿದೆ.

ದೇಶದ ಎಲ್ಲ ರಾಜ್ಯಗಳ ಸಹಕಾರಿ ಡೇರಿಗಳು ‘ಕ್ವಾಲಿಟಿ ಮಾರ್ಕ್‌’ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಆದರೆ, ಕರ್ನಾಟಕದ ಡೇರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿವೆ. ರಾಜ್ಯದ ಇನ್ನುಳಿದ ಡೇರಿಗಳಿಗೆ 3 ತಿಂಗಳಲ್ಲಿ ಪ್ರಮಾಣಪತ್ರ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.