ADVERTISEMENT

‘ಕೇಂದ್ರದ ಪಾಲಿನಲ್ಲಿ ರಾಜ್ಯಕ್ಕೆ ₹ 11 ಸಾವಿರ ಕೋಟಿ ಕಡಿತ’

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ   

ಬೆಳಗಾವಿ: ‘ಕೇಂದ್ರವು 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಮೂರು ವರ್ಷಗಳಲ್ಲಿ ನೀಡಬೇಕಾದ ತೆರಿಗೆ ಪಾಲಿನಲ್ಲಿ ₹ 10,553 ಕೋಟಿ ಕಡಿತ ಆಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಗೆ ಗುರುವಾರ ಉತ್ತರ ನೀಡುವಾಗ ಅವರು ಈ ವಿಚಾರ ಪ್ರಸ್ತಾಪಿಸಿದರು.

ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಈಗಿನ ಸರ್ಕಾರ ಕೈಗೊಂಡ ಕ್ರಮಗಳನ್ನು ಮುಖ್ಯಮಂತ್ರಿ ವಿವರಿಸುವಾಗ ಮಧ್ಯಪ್ರವೇಶಿಸಿದ ಬಿಜೆಪಿಯ ಪ್ರಾಣೇಶ್‌,  ‘ಉತ್ತರ ಕರ್ನಾಟಕಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಹಣ ಎಷ್ಟು ಎಂದು ಮಾತ್ರ ಹೇಳುತ್ತಿದ್ದೀರಿ. ಅದರಲ್ಲಿ ಕೇಂದ್ರದ ಅನುದಾನ ಎಷ್ಟು ಎಂಬುದನ್ನೂ ಹೇಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕೇಂದ್ರವು ರಾಜ್ಯಕ್ಕೆ ನೀಡುವುದು ಭಿಕ್ಷೆ ಅಲ್ಲ. ಅದು ನಮ್ಮ ತೆರಿಗೆಯ ಪಾಲು. ಸ್ವಾಯತ್ತ ಸಂಸ್ಥೆಯಾಗಿರುವ ಹಣಕಾಸು ಆಯೋಗ ನಿಗದಿಪಡಿಸಿದಷ್ಟು ಮೊತ್ತವನ್ನು ಕೇಂದ್ರ ನಮಗೆ ನೀಡುತ್ತದೆ. ಮಾತನಾಡುವ ಮೊದಲು ನೀವು ಸಂವಿಧಾನ ತಿಳಿದುಕೊಳ್ಳಬೇಕು’ ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದರು.

‘ರಾಜ್ಯಗಳಿಂದ ಸಂಗ್ರಹವಾಗುವ ತೆರಿಗೆಯ ಹಣದಲ್ಲಿ ಶೇ 42ರಷ್ಟು ಮೊತ್ತವನ್ನು ಆಯಾ ರಾಜ್ಯಗಳಿಗೆ ನೀಡಬೇಕು ಎಂದು 14ನೇ ಹಣಕಾಸು ಆಯೋಗವು ಶಿಫಾರಸು ಮಾಡಿತ್ತು. ನಮ್ಮ ರಾಜ್ಯದಲ್ಲಿ 2015–18ರವರೆಗೆ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ₹ 1.86 ಲಕ್ಷ ಸಿಗಬೇಕು ಎಂದು ಅಂದಾಜು ಮಾಡಲಾಗಿದೆ.  ಸಂಗ್ರಹವಾದ ತೆರಿಗೆಯಲ್ಲಿ ಇದುವರೆಗೆ ನಮಗೆ ₹ 95 ಸಾವಿರ ಕೋಟಿ ಸಿಗಬೇಕಿತ್ತು. ಆದರೆ, ಇದುವರೆಗೆ ಬಿಡುಗಡೆ ಆಗಿರುವುದು ₹ 84,651 ಕೋಟಿ ಮಾತ್ರ’ ಎಂದರು.

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಲ್ಲಿ ರಾಜ್ಯದ ಪಾಲು ಶೇ 50ರಷ್ಟು ಇದೆ. ಆದರೆ, ಈ ಕಾರ್ಯಕ್ರಮದಲ್ಲಿ ರಾಜ್ಯದ ಹೆಸರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರದ ಹಣವೆಷ್ಟು ಎಂಬುದನ್ನೂ ಸೇರಿಸಿ ಹೇಳಿ’ ಎಂದು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

‘ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿ ಬಡವರಿಗೆ ಪ್ರತಿ ತಿಂಗಳು 7 ಕೆ.ಜಿ.ಅಕ್ಕಿ ನೀಡುತ್ತಿದ್ದಾರೆ ಹೇಳಿ. ರಾಜ್ಯ ಸರ್ಕಾರ ಈ ಯೋಜನೆಗೆ ₹ 3,000 ಕೋಟಿ ವೆಚ್ಚ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಏರುಧ್ವನಿಯಲ್ಲಿ ಹೇಳಿದರು. ಇದರಿಂದ ಸಿಟ್ಟಾದ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು.

ಬಿಜೆಪಿ ಸಭಾತ್ಯಾಗ
ಮುಖ್ಯಮಂತ್ರಿ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ‘ಇದು ಕೇವಲ ರಾಜಕೀಯ ಭಾಷಣ. ನಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ’ ಎಂದು ಸದನದಿಂದ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.