ADVERTISEMENT

ಕ್ವಿಂಟಾಲ್‌ ತೊಗರಿ ₹18,500

ದೇಶಿ ತೊಗರಿ ಖಾಲಿ: ಇನ್ನೂ ಎರಡು ತಿಂಗಳು ಇದೇ ಸ್ಥಿತಿ!

ಗಣೇಶ ಚಂದನಶಿವ
Published 8 ಅಕ್ಟೋಬರ್ 2015, 20:06 IST
Last Updated 8 ಅಕ್ಟೋಬರ್ 2015, 20:06 IST

ಕಲಬುರ್ಗಿ: ತೊಗರಿ ಬೇಳೆ ದರ ಗ್ರಾಹಕ ರಷ್ಟೇ ಅಲ್ಲ ವರ್ತಕರ ನಿರೀಕ್ಷೆಗೂ ಮೀರಿ ಗಗನಮುಖಿಯಾಗಿದೆ. ರಾಜ್ಯದಲ್ಲಿ ಕ್ವಿಂಟಲ್‌ ತೊಗರಿ ಬೇಳೆ ಸಗಟು ದರವೇ ₹18,500ರ ಗಡಿ ದಾಟಿದೆ.

ಶಿವಮೊಗ್ಗದಲ್ಲಿ ಗುರುವಾರ ತೊಗರಿ ಬೇಳೆ ಕ್ವಿಂಟಲ್‌ ಧಾರಣೆ ಗರಿಷ್ಠ ₹18,500ರವರೆಗೂ ಏರಿಕೆಯಾಯಿತು. ಸಗಟು ಧಾರಣೆಯೇ ಈ ಪರಿ ಏರಿಕೆ ಆಗಿರುವುದರಿಂದ ಚಿಲ್ಲರೆ ವಹಿವಾಟಿನ ಲ್ಲಿಯೂ ತೊಗರಿ ಬಹಳ ತುಟ್ಟಿಯಾಗಿದೆ. ಪ್ರತಿ ಕೆ.ಜಿಗೆ ಗರಿಷ್ಠ ₹200ರಂತೆ ಮಾರಾಟವಾಗುತ್ತಿದೆ.

‘ತೊಗರಿ ಬೇಳೆ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಐದು ಸಾವಿರ ಟನ್‌ಗೂ ಹೆಚ್ಚು ತೊಗರಿ ಬೇಳೆಯನ್ನು ಆಮದು ಮಾಡಿಕೊಂಡಿದೆ. ಹಾಗಿದ್ದರೂ ಧಾರಣೆ ಹೆಚ್ಚುತ್ತಲೇ ಇದೆ. ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಬಿತ್ತನೆಯಾಗಿರುವ ತೊಗರಿ ಕೊಯ್ಲಾಗಿ ಹೊಸ ಸರಕು ನವೆಂಬರ್‌ನಿಂದ ಮಾರುಕಟ್ಟೆಗೆ ಬರಲಾರಂಭಿಸುತ್ತದೆ. ಮುಂಗಾರು ವಿಳಂಬವಾಗಿದ್ದರಿಂದ ತಡವಾಗಿ ಬಿತ್ತನೆಯಾಗಿದ್ದು, ಮಾರುಕಟ್ಟೆಗೆ ಹೊಸ ತೊಗರಿ ಬರುವುದೂ ವಿಳಂಬವಾಗಲಿದೆ. ಹೀಗಾಗಿ ಇನ್ನೆರಡು ತಿಂಗಳು ತೊಗರಿ ಬೇಳೆಯ ದರ ಕಡಿಮೆಯಾಗುವ ಯಾವ ಲಕ್ಷಣಗಳೂ ಇಲ್ಲ’ ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ವಿವರಣೆ.

‘ನಮ್ಮ ದೇಶಕ್ಕೆ ವರ್ಷಕ್ಕೆ 38 ಲಕ್ಷ ಟನ್‌ ತೊಗರಿ ಬೇಳೆ ಅವಶ್ಯಕತೆ ಇದೆ. ನಮ್ಮಲ್ಲಿ 28 ಲಕ್ಷ ಟನ್‌ ಬೆಳೆಯಲಾಗುತ್ತಿದ್ದು, ಸದ್ಯ 10 ಲಕ್ಷ ಟನ್‌ ತೊಗರಿ ಬೇಳೆ ಕೊರತೆ ಇದೆ. ಮಾರುಕಟ್ಟೆ ಮತ್ತು ಆಮದುದಾರರ ಮೇಲೆ ಸರ್ಕಾರದ ಹಿಡಿತ ಇಲ್ಲ. ಆಮದು ಮಾಡಿ ಕೊಂಡ ಎಲ್ಲ ತೊಗರಿ ಬೇಳೆಯನ್ನು ಮಾರುಕಟ್ಟೆಗೆ ಬಿಡದೆ, ದಾಸ್ತಾನು ಮಾಡಿಟ್ಟುಕೊಳ್ಳಲಾಗಿದೆ. ದರ ಹೆಚ್ಚಳಕ್ಕೆ ಇದೂ ಕಾರಣ’ ಎಂದು ಸ್ಥಳೀಯ ದಾಲ್‌ಮಿಲ್‌ಗಳ ಮಾಲೀಕರು ಆರೋಪಿ ಸುತ್ತಿದ್ದಾರೆ.

‘ಆಮದು ಮಾಡಿಕೊಂಡ ತೊಗರಿ ಬೇಳೆಯನ್ನು ನಮ್ಮ ಬಂದರುಗಳಿಗೆ ಬಂದ 15 ದಿನಗಳಲ್ಲಿ ವಿಲೇವಾರಿ ಮಾಡಬೇಕು. ಅದಕ್ಕಿಂತ ಹೆಚ್ಚಿನ ಅವಧಿ ದಾಸ್ತಾನು ಮಾಡಿಕೊಳ್ಳಬಾರದು ಎಂಬ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು. ಹೀಗಾದರೆ ಮಾತ್ರ ಕಡಿಮೆ ದರಕ್ಕೆ ಆಮದು ಮಾಡಿಕೊಂಡರೂ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಗ್ರಾಹಕರನ್ನು ವಂಚಿಸುವವರಿಗೆ ಕಡಿವಾಣ ಹಾಕಬಹುದು’ ಎಂದು ಕಲಬುರ್ಗಿ ದಾಲ್‌ಮಿಲ್‌ವೊಂದರ ಮಾಲೀಕ ಶಿವಶರಣಪ್ಪ ನಿಗ್ಗುಡಗಿ ಹೇಳಿದ್ದಾರೆ.

‘ಇಲ್ಲವಾದರೆ ಕೇಂದ್ರ ಸರ್ಕಾರವೇ ತೊಗರಿ ಬೇಳೆ ಆಮದು ಮಾಡಿಕೊಂಡು ಮುಕ್ತ ಮಾರುಕಟ್ಟೆಯಲ್ಲಿ ಅದನ್ನು ದಾಲ್‌ಮಿಲ್‌ಗಳು, ಸ್ಥಳೀಯ ವರ್ತಕರಿಗೆ ಮಾರಾಟ ಮಾಡಲಿ. ಹೀಗಾದರೆ ಪ್ರತಿ ಕೆ.ಜಿ. ತೊಗರಿ ಬೇಳೆ ದರ ತಕ್ಷಣಕ್ಕೆ ಕನಿಷ್ಠ ವೆಂದರೂ ₹30ರಿಂದ ₹40 ಕಡಿಮೆಯಾಗುತ್ತದೆ. ಇದರಿಂದ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ’ ಎಂದು ಅವರು ಹೇಳುತ್ತಾರೆ.

ದೇಶಿಯ ತೊಗರಿಗೆ ಬರ: ತೊಗರಿಯ ಪ್ರಮುಖ ವಹಿವಾಟು ಕೇಂದ್ರವಾಗಿರುವ ಕಲಬುರ್ಗಿ ಎಪಿಎಂಸಿಗೆ ತೊಗರಿ ಆವಕ ವಾಗುವುದು ನವೆಂಬರ್‌ನಿಂದ ಮಾರ್ಚ್‌ ಅವಧಿಯಲ್ಲಿ ಮಾತ್ರ. ಡಿಸೆಂಬರ್‌ನಿಂದ ಏಪ್ರಿಲ್‌ ತಿಂಗಳ ವರೆಗೆ ಆವಕದ ಪ್ರಮಾಣ ಹೆಚ್ಚಾಗಿರುತ್ತದೆ. ಹಿಂದಿನ ವರ್ಷಗಳ ಅಂಕಿ ಅಂಶಗಳನ್ನು ಗಮಿಸಿದರೆ ಪ್ರತಿ ತಿಂಗಳೂ ತೊಗರಿಯ ಆವಕವಾಗುತ್ತಿತ್ತು. ಈಗ ಅದು ಗಣನೀಯವಾಗಿ ಕುಸಿದಿದೆ. ವಿಜಯಪುರ ಸೇರಿದಂತೆ ಇತರೆ ಪ್ರಮುಖ ತೊಗರಿ ಮಾರಾಟವಾಗುವ ಎಪಿಎಂಸಿಗಳಲ್ಲಿ ತೊಗರಿ ಆವಕವೇ ಇಲ್ಲ. ಬೇಳೆ ಕೊರತೆಯಿಂದ ಕಲಬುರ್ಗಿಯಲ್ಲಿ 200ಕ್ಕೂ ಹೆಚ್ಚು ದಾಲ್‌ಮಿಲ್‌ಗಳು ಸ್ಥಗಿತೊಂಡಿವೆ.

ಇನ್ನು ರಾಜ್ಯದ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಸೆಪ್ಟೆಂಬರ್‌ ತಿಂಗಳಲ್ಲಿ 32,421 ಕ್ವಿಂಟಲ್‌ ತೊಗರಿ ಬೇಳೆ ಆವಕವಾಗಿತ್ತು. ಆಗ ಸರಾಸರಿ ದರ ₹14 ಸಾವಿರದಷ್ಟಿತ್ತು. ಅಕ್ಟೋಬರ್‌ ತಿಂಗಳ ಮೊದಲ ವಾರದಲ್ಲಿ ರಾಜ್ಯದ ಕೃಷಿ ಉತ್ತನ್ನ ಮಾರುಕಟ್ಟೆಗಳಿಗೆ ಆವಕ ವಾಗಿರುವ ತೊಗರಿ ಬೇಳೆ 9,759 ಕ್ವಿಂಟಲ್‌ ಮಾತ್ರ. ಎಪಿಎಂಸಿಗಳಲ್ಲಿಯೇ ಗರಿಷ್ಠ ಮಾರಾಟ ದರ ₹16.250 ಇದೆ. ಇನ್ನು ದೇಶದ ಪ್ರಮುಖ ಮಾರುಕಟ್ಟೆ ಗಳಲ್ಲಿ ಗರಿಷ್ಠ ಬೆಲೆ ಕ್ವಿಂಟಲ್‌ಗೆ ₹18,500ರಷ್ಟಿದೆ ಎನ್ನುವುದು ಕೃಷಿ ಮಾರುಕಟ್ಟೆ ಇಲಾಖೆಯ ಮೂಲಗಳ ಮಾಹಿತಿ.

‘ರಾಜ್ಯದಲ್ಲಿ ಒಟ್ಟು 7 ಲಕ್ಷ ಹೆಕ್ಟೇರ್‌ ತೊಗರಿ ಕೃಷಿ ಕ್ಷೇತ್ರವಿದೆ. ಈಗ ಮಳೆ ಆಗುತ್ತಿದ್ದು, ತೊಗರಿ ಬೆಳೆ ಚೇತರಿಸಿ ಕೊಳ್ಳುತ್ತಿದೆ. ಈ ವರ್ಷ 5ರಿಂದ 5.50 ಲಕ್ಷ ಟನ್‌ ತೊಗರಿ ಉತ್ಪಾದನೆ ನಿರೀಕ್ಷೆ ಇದೆ. ಹೊಸ ತೊಗರಿ ಮಾರುಕಟ್ಟೆಗೆ ಬಂದರೂ ತೊಗರಿಯ ದರ ಕ್ವಿಂಟಲ್‌ಗೆ 7ಸಾವಿರಕ್ಕಿಂತ ಕಡಿಮೆಯಾಗುವುದಿಲ್ಲ’ ಎಂಬುದು  ವರ್ತಕರ ಅಂದಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.