ADVERTISEMENT

ಗ್ರೀನ್‌ಪೀಸ್‌ ಚಟುವಟಿಕೆಗೆ ನಿರ್ಬಂಧ

ಸುದ್ದಿ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST

ವಿದೇಶಗಳಿಂದ ದೇಣಿಗೆ ಪಡೆಯುತ್ತಿರು ವುದಕ್ಕೆ ಸಂಬಂಧಿಸಿದಂತೆ ಶಾಶ್ವತವಾಗಿ ಲೈಸನ್ಸ್‌ ರದ್ದತಿ ಮಾಡಬಾರದೇಕೆ ಎಂದು ಕೇಂದ್ರ ಸರ್ಕಾರವು, ಅಂತರರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ (ಎನ್ ಜಿಒ)  ಗ್ರೀನ್‌ಪೀಸ್‌ನ ಭಾರತದ ಘಟಕಕ್ಕೆ ನೋಟಿಸ್‌ ಜಾರಿ ಮಾಡಿದೆ.

ದೇಶದ  ಸಾರ್ವಜನಿಕ ಮತ್ತು ಆರ್ಥಿಕ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನೂ ಉಲ್ಲಂಘಿಸಿದೆ. ಗ್ರೀನ್‌ಪೀಸ್‌ ಸಂಸ್ಥೆಯು ತನ್ನ ಹಣಕಾಸು ವಹಿವಾಟಿನ  ಲೆಕ್ಕಪತ್ರಗಳನ್ನು ಸಮರ್ಪಕವಾಗಿ ಇಟ್ಟಿಲ್ಲ  ಎನ್ನುವುದು ಕೇಂದ್ರ ಗೃಹ ಸಚಿವಾಲಯದ ಆರೋಪವಾಗಿದೆ. ಜತೆಗೆ ಸಂಸ್ಥೆಯ 7 ಬ್ಯಾಂಕ್‌ ಖಾತೆಗಳನ್ನೂ ನಿರ್ಬಂಧಿಸಿದೆ.

ಕೇಂದ್ರ ಸರ್ಕಾರ ಕೈಗೊಂಡಿರುವ ಈ ಕ್ರಮಗಳು ನಾಗರಿಕ ಸಮಾಜದಿಂದ ತೀವ್ರ ಟೀಕೆಗೆ ಒಳಗಾಗಿರುವುದರ ಜತೆಗೆ, ಅಚ್ಚರಿಯನ್ನೂ ಮೂಡಿಸಿದೆ. ಕೇಂದ್ರ ಸರ್ಕಾರದ ಈ ನಿಲುವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಯತ್ನವಾಗಿದೆ ಎನ್ನುವ ಟೀಕೆಯೂ ಕೇಳಿ ಬಂದಿದೆ.

ರಾಷ್ಟ್ರೀಯ, ಸಾರ್ವಜನಿಕ ಮತ್ತು ಆರ್ಥಿಕ ಹಿತಾಸಕ್ತಿಗಳ  ವಿರುದ್ಧವಾಗಿ ಕೆಲಸ ಮಾಡುವ ಗ್ರೀನ್‌ಪೀಸ್‌ನಂತಹ ಇತರ ಸರ್ಕಾರಿಯೇತರ ಸ್ವಯಂ ಸೇವಾ ಸಂಸ್ಥೆಗಳ  ವಿರುದ್ಧವೂ ಸರ್ಕಾರ ಇದೇ ಬಗೆಯಲ್ಲಿ ನಿರ್ಬಂಧ ವಿಧಿಸುವ ಸಾಧ್ಯತೆಗಳಿವೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು, ಜಯಪ್ರಕಾಶ್ ನಾರಾಯಣ ನೇತೃತ್ವದ ಚಳವಳಿಗೆ ವಿದೇಶಿ ದೇಣಿಗೆ ಹರಿದು ಬರುತ್ತಿದೆ ಎಂದು ಶಂಕಿಸಿ  ವಿದೇಶ ದೇಣಿಗೆ ನಿಯಂತ್ರಣ  (ಎಫ್ ಸಿ ಆರ್ಎ)  ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸಿದ್ದರು. 

ಅಂತರರಾಷ್ಟ್ರೀಯ ಮಟ್ಟದ ಎನ್ ಜಿಒಗಳ ಸ್ಥಳೀಯ ಘಟಕಗಳು ಪರಿಸರಕ್ಕೆ ಮಾರಕವಾದ ವಿದ್ಯುತ್ ಉತ್ಪಾದನಾ ಯೋಜನೆಗಳು, ಕುಲಾಂತರಿ ಹತ್ತಿ,  ಆಹಾರ, ಅಣುವಿದ್ಯುತ್ ಸ್ಥಾವರಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಜನಾಭಿಪ್ರಾಯ ಮೂಡಿಸುತ್ತವೆ. ಇದು ಸರ್ಕಾರಕ್ಕೆ ಅಪಥ್ಯವಾಗಿ ಪರಿಣಮಿಸಿದೆ.

ದೇಶದಲ್ಲಿನ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಯೋಜನೆಗಳ ವಿರುದ್ಧ ಜನಾಭಿಪ್ರಾಯ ಮೂಡಿಸುತ್ತಿದ್ದ ಗ್ರೀನ್‌ಪೀಸ್ ಸಂಘಟನೆಯು ಪುನರ್ ಬಳಕೆಯ ಇಂಧನ ಗಳನ್ನಷ್ಟೇ ಬಳಸುವ ಬಗ್ಗೆ ವ್ಯಾಪಕ ಪ್ರಚಾರ ಮಾಡುತ್ತಿದೆ. ಬೃಹತ್ ಯೋಜನೆಗಳ ವಿರುದ್ಧ ಸ್ಥಳೀಯರನ್ನು ಬಡಿದೆಬ್ಬಿಸುವ ಕಾರ್ಯದಲ್ಲಿಯೂ ತೊಡಗಿದೆ.

ಸಿಂಗರೌಲಿಯಲ್ಲಿ 15 ಸಾವಿರ ಮೆಗಾವಾಟ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ವಿರುದ್ಧ ಸ್ಥಳೀಯರನ್ನು ಗ್ರೀನ್ ಪೀಸ್ ಎತ್ತಿಕಟ್ಟಿದ್ದೆ ಕೇಂದ್ರದ ಕಠಿಣ ಕ್ರಮಕ್ಕೆ  ಕಾರಣ ಇರಬಹುದು ಎಂದೂ ಶಂಕಿಸಲಾಗಿದೆ. ಭಾರತದ ಚಹದಲ್ಲಿನ ಕ್ರಿಮಿನಾಶಕಗಳನ್ನು ತೆಗೆದು ಹಾಕಲು ಗ್ರೀನ್ ಪೀಸ್ ಕಾರ್ಯಕರ್ತರು ಮುಂಬೈ ನಲ್ಲಿ   ನಡೆಸಿದ ವಿಶಿಷ್ಟ ಪ್ರತಿಭ ಟನೆ ಕೂಡ ಸರ್ಕಾರವನ್ನು ಇರುಸು ಮುರುಸಿಗೆ ಗುರಿಪಡಿಸಿತ್ತು.

ಗ್ರೀನ್‌ಪೀಸ್‌ ವಾದ: ಭಾರತದಲ್ಲಿನ ತನ್ನ ಕಾರ್ಯ ಚಟುವಟಿಕೆಗಳನ್ನು ಸಂಪೂರ್ಣ ವಾಗಿ ಸ್ಥಗಿತಗೊಳಿಸುವ ಉದ್ದೇಶ ದಿಂದಲೇ ಸರ್ಕಾರ ಈ ನೋಟಿಸ್‌ ನೀಡಿದೆ ಎಂದು ಗ್ರೀನ್‌ಪೀಸ್‌ ಸಂಘಟನೆ ಆರೋಪಿಸಿದೆ.

ಸಂಸ್ಥೆ ಸ್ವೀಕರಿಸುವ ದೇಣಿಗೆಗಳ ಪೈಕಿ ಶೇ 70ರಷ್ಟು ಭಾರತೀಯರಿಂದಲೇ ಬರುತ್ತದೆ. ಶುದ್ಧ ಗಾಳಿ, ಅರಣ್ಯ ರಕ್ಷಣೆ, ಕೀಟನಾಶಕ ಮುಕ್ತ ಆಹಾರ ಪದಾರ್ಥಗಳ  ಬಗ್ಗೆ ನಮ್ಮ ಹೋರಾಟಕ್ಕೆ ಬೆಂಬಲ ನೀಡುವವರನ್ನು ತಡೆಯುವ ಉದ್ದೇಶವೂ ಸರ್ಕಾರಕ್ಕೆ ಇರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ.  ವಿದೇಶಿ ದೇಣಿಗೆಗಳನ್ನು ನಿರ್ಬಂಧಿಸುವುದಕ್ಕಿಂತ  ನಮ್ಮ ಚಟುವಟಿಕೆಗಳಿಗೆ ಸಂಪೂರ್ಣವಾಗಿ ತಡೆ ಹಾಕುವುದೇ ಸರ್ಕಾರದ ಮುಖ್ಯ ಉದ್ದೇಶ ಇರುವಂತಿದೆ ಎಂದು ಸಂಸ್ಥೆ ಆರೋಪಿಸಿದೆ. 

ಭಾರತೀಯರು ನೀಡಿರುವ ದೇಣಿಗೆಗಳ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಕ್ಕೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಲ್ಲಿ ಅವಕಾಶವೇ ಇಲ್ಲ ಎಂದೂ ಸಂಸ್ಥೆ ಅಭಿಪ್ರಾಯಪಟ್ಟಿದೆ. ಎನ್‌ಜಿಒಗಳ  ಬೆಂಬಲಿಗರು ಮತ್ತು ವಿರೋಧಿಗಳು ಕೂಡ, ಸರ್ಕಾರವು ಕಾಯ್ದೆಯ ನೆಪದಲ್ಲಿ ಭಿನ್ನಮತದ ದನಿ ಅಡಗಿಸುವುದನ್ನು ಮಾತ್ರ  ಒಪ್ಪಿಕೊಳ್ಳುವುದಿಲ್ಲ.

ವಿವರ ಸಲ್ಲಿಸದ ಎನ್‌ಜಿಒಗಳು: ಎಫ್‌ಸಿಆರ್ಎ ಕಾಯ್ದೆಯಡಿ ನೋಂದಾವಣೆಗೊಂಡಿರುವ ಎನ್‌ಜಿಒಗಳ ಪೈಕಿ ಅರ್ಧದಷ್ಟು ಸಂಸ್ಥೆಗಳು ವಿದೇಶಗಳಿಂದ ತಾವು ಪಡೆಯುತ್ತಿರುವ ದೇಣಿಗೆ ಬಗ್ಗೆ ವಿವರಗಳನ್ನೇ ಸಲ್ಲಿಸಿಲ್ಲ.

ಅಂಕಿ–ಅಂಶ
ರೂ 17 ಸಾವಿರ 2013–14ರಲ್ಲಿ ವಿದೇಶಿ ದೇಣಿಗೆ ಪಡೆದ ಎನ್‌ಜಿಒಗಳ ಸಂಖ್ಯೆ
ರೂ 13 ಸಾವಿರ ಕೋಟಿ ಹರಿದು ಬಂದ ವಿದೇಶಿ ದೇಣಿಗೆ
ರೂ 1,300 ಕೋಟಿ ಕರ್ನಾಟಕದ ಎನ್‌ಜಿಒಗಳು ಪಡೆದಿರುವ ವಿದೇಶಿ ನೆರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.