ADVERTISEMENT

ಚಿಲ್ಲರೆ ಮಾರಾಟದ್ದೇ ಮೇಲುಗೈ

ವಿಶ್ವನಾಥ ಎಸ್.
Published 1 ನವೆಂಬರ್ 2016, 19:30 IST
Last Updated 1 ನವೆಂಬರ್ 2016, 19:30 IST
ಚಿಲ್ಲರೆ ಮಾರಾಟದ್ದೇ ಮೇಲುಗೈ
ಚಿಲ್ಲರೆ ಮಾರಾಟದ್ದೇ ಮೇಲುಗೈ   

ಡಿಜಿಟಲ್ ಯುಗವಾದರೂ ಸಹ ವಸ್ತುಗಳನ್ನು ಮುಟ್ಟಿ ಅದರ ನೈಜ ಅನುಭವವನ್ನು ಪಡೆದು ಖರೀದಿಸುವ ಗ್ರಾಹಕರ ಸಂಖ್ಯೆಯೇ ಹೆಚ್ಚಿದೆ. ಇದರಿಂದಲೇ ದೇಶದಲ್ಲಿ ಚಿಲ್ಲರೆ ಮಾರುಕಟ್ಟೆ ಇಂದಿಗೂ ಖರೀದಿ ವಹಿವಾಟಿನ ಪ್ರಮುಖ ಮೂಲವಾಗಿದೆ.

‘ದೇಶದಲ್ಲಿ ಚಿಲ್ಲರೆ ಮಾರಾಟಗಳಿಗೆ ಉತ್ತಮ ಬೇಡಿಕೆ ಇದೆ.  ಗ್ರಾಹಕರನ್ನು ತಲುಪಲು ಇದೊಂದು ಪ್ರಮುಖ ಮಾರ್ಗವೂ ಹೌದು. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಮಳಿಗೆಗಳನ್ನು ತೆರೆಯುವ ಮೂಲಕ ವಹಿವಾಟು ವಿಸ್ತರಿಸಿಕೊಳ್ಳಲಾಗುವುದು’ ಎಂದು ಹಿಂಡ್‌ವೇರ್‌ ಹೋಮ್‌ ರಿಟೇಲ್‌ (ಎಚ್‌ಎಚ್‌ಆರ್‌ಪಿಎಲ್‌) ಕಂಪೆನಿಯ ಮುಖ್ಯ ಕಾರ್ಯಾಚರಣೆ ಅಧಿಕಾರಿ (ಸಿಒಒ) ಥಾಮಸ್‌ ಜಾನ್‌ ಹೇಳುತ್ತಾರೆ.

‘ಭಾರತದಲ್ಲಿ ಶೇ 5 ರಷ್ಟು ಖರೀದಿ ವಹಿವಾಟು ಮಾತ್ರವೇ ಇ–ಕಾಮರ್ಸ್‌ ಮೂಲಕ ನಡೆಯುತ್ತಿದೆ. ಇನ್ನುಳಿದ ಶೇ 95 ರಷ್ಟು ಪಾಲನ್ನು ಚಿಲ್ಲರೆ ಮಾರಾಟ ಮಳಿಗೆಗಳು ಹೊಂದಿವೆ. ಇಲ್ಲಿ ಬೆಳವಣಿಗೆಗೆ ಹೆಚ್ಚು ಅವಕಾಶವಿದೆ. ಐಷಾರಾಮಿ ಪೀಠೋಪಕರಣಗಳು, ವಾರ್ಡ್‌ರೋಬ್‌, ಮಾಡ್ಯುಲರ್‌ ಕಿಚನ್‌  ಮಾರಾಟದಲ್ಲಿ ಕಂಪೆನಿ ಉತ್ತಮ ಪ್ರಗತಿ ಕಾಣುತ್ತಿದೆ. ಹೋಮ್ ಇಂಟೀರಿಯರ್‌ ಸಲ್ಯೂಷನ್ಸ್‌ಗಳಿಗಾಗಿ ಕಾರ್ಪೊರೇಟ್‌ಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

‘ಈ ವಿಭಾಗದಲ್ಲಿ ನಾವು ಉತ್ತಮ ವಹಿವಾಟು ನಡೆಸುತ್ತಿದ್ದೇವೆ. ಅದರಲ್ಲೂ ಮುಖ್ಯವಾಗಿ ಪೀಠೋಪಕರಣ ಮತ್ತು ಒಳಾಂಗಣ ಅಲಂಕಾರಕ್ಕೆ ಸಂಬಂಧಿಸಿದಂತೆ ಗ್ರಾಹಕರು ನೈಜ ಅನುಭವ ಪಡೆಯಲು ಬಯಸುತ್ತಾರೆ. ಹೀಗಾಗಿ ಈ ನಿಟ್ಟಿನಲ್ಲಿ ವಹಿವಾಟು ವಿಸ್ತರಣೆಗೆ ಹೆಚ್ಚಿನ ಗಮನ ನೀಡಿದ್ದೇವೆ.

‘ಮೆಗಾ ಸ್ಟೋರ್‌, ಸ್ಮಾಲ್‌ ಸ್ಟೋರ್‌, ಪ್ರಾಂಚೈಸಿ ಸ್ಟೋರ್‌ ಮತ್ತು ಇ–ಕಾಮರ್ಸ್‌ ಮೂಲಕ ಗ್ರಾಹಕರಿಗೆ ಅಗತ್ಯವಾದ ವಸ್ತುಗಳನ್ನು ನೀಡುತ್ತಿದ್ದೇವೆ. ವಿವಿಧ ಬೆಲೆಯ ಗೃಹ ಪೀಠೋಪಕರಣಗಳು ಮತ್ತು ಒಳಾಂಗಣ ಅಲಂಕಾರಿಕ ವಸ್ತುಗಳಿವೆ. ಶೇ 50 ರಷ್ಟು ದೇಶಿ ಮತ್ತು ಶೇ 50 ರಷ್ಟು ವಿದೇಶಿ ವಸ್ತುಗಳಿವೆ. ನಮ್ಮಲ್ಲಿ ತಯಾರಾಗುವ ವಸ್ತುಗಳಲ್ಲಿ ಶೇ 75ರಷ್ಟರ ವಿನ್ಯಾಸವನ್ನು ಕಂಪೆನಿಯಲ್ಲಿರುವ ವಿನ್ಯಾಸಕಾರರೇ ರೂಪಿಸುತ್ತಾರೆ’ ಎಂದು ಅವರು ಹೇಳುತ್ತಾರೆ.

ಉತ್ತಮ ಗುಣಮಟ್ಟ
‘ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಗ್ರಾಹಕರು ನೀಡುವ ಮೌಲ್ಯಕ್ಕೆ ತಕ್ಕಂತಹ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡುತ್ತೇವೆ. ಇದಕ್ಕಾಗಿ ಅನುಭವ ಉಳ್ಳ ತಜ್ಞರ ತಂಡವನ್ನು ಹೊಂದಿದ್ದೇವೆ’ ಎನ್ನುವುದು ಅಭಿಪ್ರಾಯವಾಗಿದೆ.
ಶೀಘ್ರವೇ ‘ಇವೋಕ್‌ ಎಕ್ಸ್‌ಪ್ರೆಸ್‌’

ಇವೋಕ್‌ ಎಂಬ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಹಿಂಡ್‌ವೇರ್‌ ಹೋಮ್‌ ರಿಟೇಲ್‌ ಕಂಪೆನಿಯ ವಸ್ತುಗಳು ಮಾರಾಟವಾಗುತ್ತಿವೆ. ಸದ್ಯ ದೇಶದಲ್ಲಿ ಒಟ್ಟು 15 ಮಳಿಗೆಗಳನ್ನು ಹೊಂದಿದೆ.

‘ವಹಿವಾಟು ವಿಸ್ತರಣೆ ಭಾಗವಾಗಿ,  ನಾಲ್ಕು ಮಹಾನಗರಗಳಲ್ಲಿ ಇವೋಕ್‌ ಎಕ್ಸ್‌ಪ್ರೆಸ್‌ ಎಂಬ ಸಣ್ಣ ಮಾರಾಟ ಮಳಿಗೆಗಳನ್ನು ತೆರೆಯಲು ಕಂಪೆನಿ ನಿರ್ಧರಿಸಿದೆ. ಈ ವರ್ಷದೊಳಗೆ 2 ಮತ್ತು ಮುಂದಿನ ವರ್ಷದೊಳಗೆ ಒಟ್ಟು 12 ಮಳಿಗೆಗಳನ್ನು ತೆರೆಯಲಾಗುವುದು’ ಎಂದು ಅವರು ತಿಳಿಸಿದರು.

ಇ–ಕಾಮರ್ಸ್‌
ಆನ್‌ಲೈನ್‌ ವಹಿವಾಟಿಗೆ ಕಂಪೆನಿ ಹೊಂದಿರುವ ಜಾಲತಾಣವನ್ನೇ ಬಳಸಿಕೊಳ್ಳಲಾಗುತ್ತಿದೆ. ಜತೆಗೆ, ಅಮೆಜಾನ್‌, ಫ್ಲಿಪ್‌ಕಾರ್ಟ್‌, ಸ್ನ್ಯಾಪ್‌ಡೀಲ್‌ ಮತ್ತು ಪೆಪ್ಪರ್‌ಫ್ರೈನಂತಹ ಪ್ರಮುಖ ಇ–ಕಾಮರ್ಸ್‌ ಕಂಪೆನಿಗಳೊಂದಿಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT