ADVERTISEMENT

ಜಿಎಸ್‌ಟಿ: ಅಡಿಕೆ ಮಾರುಕಟ್ಟೆ ತಲ್ಲಣ

ಖರೀದಿಗೆ ವರ್ತಕರ ಆಸಕ್ತಿ, ಮಾರಾಟಕ್ಕೆ ಬೆಳೆಗಾರರ ನಿರಾಸಕ್ತಿ

ಚಂದ್ರಹಾಸ ಹಿರೇಮಳಲಿ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಜಿಎಸ್‌ಟಿ: ಅಡಿಕೆ ಮಾರುಕಟ್ಟೆ ತಲ್ಲಣ
ಜಿಎಸ್‌ಟಿ: ಅಡಿಕೆ ಮಾರುಕಟ್ಟೆ ತಲ್ಲಣ   

ಶಿವಮೊಗ್ಗ: ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಮುನ್ನವೇ ಅಡಿಕೆ ಮಾರುಕಟ್ಟೆಯಲ್ಲಿ  ತಲ್ಲಣ ಸೃಷ್ಟಿಯಾಗಿದೆ.

ಎರಡು ವರ್ಷಗಳ ಹಿಂದೆ ಒಂದು ಕ್ವಿಂಟಲ್‌ ಅಡಿಕೆ ಧಾರಣೆ  ₹ 1 ಲಕ್ಷದ ಗಡಿ ತಲುಪಿತ್ತು. ನಂತರ ವರ್ಷಪೂರ್ತಿ ₹ 25 ಸಾವಿರದಿಂದ 30 ಸಾವಿರದ ನಡುವೆ  ಇತ್ತು. ಈ ವರ್ಷದ ಆರಂಭದಿಂದ ಮತ್ತೆ ಚೇತರಿಸಿಕೊಂಡು ₹ 50 ಸಾವಿರ ಗಡಿ ತಲುಪಿದ್ದು, ಸದ್ಯಕ್ಕೆ ₹ 40 ಸಾವಿರದ ಗಡಿಯಲ್ಲಿ ನಿಂತಿದೆ.

ಜಿಎಸ್‌ಟಿ ಜಾರಿಗೆ ದಿನ ಸಮೀಪಿಸುತ್ತಿದ್ದಂತೆ ಅಡಿಕೆ ಖರೀದಿ, ಮಾರಾಟದ ಚಟುವಟಿಕೆಗಳು ಗರಿಗೆದರಿವೆ. ಕೆಲವು ವರ್ತಕರು ಹಳೆಯ ತೆರಿಗೆ (ಶೇ 2) ಲೆಕ್ಕದಲ್ಲಿ ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಮುಂದಾಗಿದ್ದಾರೆ. ಜೂನ್‌ 30ರ ಒಳಗೆ ಒಟ್ಟಾರೆ ಸಂಗ್ರಹ ಘೋಷಿಸಿಕೊಂಡು, ಜಿಎಸ್‌ಟಿ ಜಾರಿಯಾದ ನಂತರ ಶೇ 5ರಷ್ಟು ತೆರಿಗೆ ಲೆಕ್ಕದಲ್ಲಿ ಮಾರಾಟ ಮಾಡುವ ಲೆಕ್ಕಾಚಾರ ಹೊಂದಿದ್ದಾರೆ.

ADVERTISEMENT

ಕೆಲವು ವರ್ತಕರು ಕಾದು ನೋಡುವ ತಂತ್ರದ ಮೊರೆ ಹೋಗಿದ್ದು, ಜಿಎಸ್‌ಟಿ ಜಾರಿಯ ನಂತರವೇ ವಹಿವಾಟು ಆರಂಭಿಸುವ ಯೋಜನೆಯಲ್ಲಿ ಇದ್ದಾರೆ. ಈ ಎಲ್ಲ ಬೆಳೆವಣಿಗೆಗಳ ನಡುವೆ ಕಳೆದ ಒಂದು ವಾರದಿಂದ ಅಡಿಕೆ ಧಾರಣೆ ಕೊಂಚ ಏರುಮುಖವಾಗಿದೆ.

ದಶಕಗಳಿಂದಲೂ ಅಡಿಕೆ ಧಾರಣೆಯ ಏರಿಳಿತಕ್ಕೆ ಹತ್ತು ಹಲವು ಕಾರಣಗಳು ಇವೆ. ಆದರೆ, ಖಚಿತ ಕಾರಣ ಗುರುತಿಸಲು ಸಾಧ್ಯವಾಗಿಲ್ಲ. ಸಂಪೂರ್ಣವಾಗಿ ಮಧ್ಯವರ್ತಿಗಳ ಮೇಲೆಯೇ ಅಡಿಕೆ ವಹಿವಾಟು ನಿಂತಿರುವುದೇ ಇದಕ್ಕೆ ಕಾರಣ ಎನ್ನುವುದು ಮಾರುಕಟ್ಟೆ ಪಂಡಿತರ ವಾದ. 

ಬೆಲೆ ಇನ್ನಷ್ಟು ಏರಿಕೆ ಕಾಣಬಹುದು ಎನ್ನುವ ನಿರೀಕ್ಷೆ ಹೊಂದಿರುವ ರೈತರು, ಅಡಿಕೆ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಖರೀದಿಸಲು ಅಗತ್ಯವಾದ ಅಡಿಕೆ ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ. ಮತ್ತೊಂದು ಕಡೆ ಗುಟ್ಕಾ, ಪಾನ್‌ ಮಸಾಲಾ ಉತ್ಪನ್ನದ ಮೇಲೆ ಶೇ 28ರಷ್ಟು ಜಿಎಸ್‌ಟಿ ವಿಧಿಸುವ ಕಾರಣ ಅಡಿಕೆ ಉತ್ಪನ್ನಗಳ ತಯಾರಕರು ಜೂನ್‌ 30ರ ಒಳಗೆ ಸಾಕಷ್ಟು ಉತ್ಪಾದನೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಗುಟ್ಕಾ ಕಂಪೆನಿಗಳಲ್ಲೂ ಅಡಿಕೆ ಸಂಗ್ರಹ ಖಾಲಿಯಾಗುತ್ತಿದೆ. ಇದರ ಪರಿಣಾಮ ಅಡಿಕೆ ಧಾರಣೆ ಸಾಕಷ್ಟು ಏರಿಕೆಯಾಗಬಹುದು ಎಂದು ಊಹಿಸುತ್ತಾರೆ ಅಡಿಕೆ ವರ್ತಕ ಹಾಲೇಶಪ್ಪ.

‘ಅಡಿಕೆ ವಹಿವಾಟಿನಲ್ಲಿ ಸಹಕಾರ ಸಂಘಗಳು ಬಲಿಷ್ಠವಾಗಿದ್ದರೂ, ರೈತರಿಂದ ನೇರವಾಗಿ ಅಡಿಕೆ ಖರೀದಿಸುವುದಿಲ್ಲ. ಎಲ್ಲವೂ ರಸೀದಿ ಮೂಲಕ ನಡೆಯುತ್ತದೆ. ಹಲವು ಮಧ್ಯವರ್ತಿಗಳು ತೆರಿಗೆ ತಪ್ಪಿಸುವ ಕಾರಣಕ್ಕೆ ಬೆಳೆಗಾರರ ಬಳಿ ನೇರವಾಗಿ ಖರೀದಿಸುತ್ತಿದ್ದರು. ಇಂತಹ ವ್ಯವಹಾರ ಶೇ 70ರಷ್ಟು ಇತ್ತು. ಜಿಎಸ್‌ಟಿ ಜಾರಿಯಾದರೆ ಇಂತಹ ತೆರಿಗೆ ವಂಚನೆಗೆ ಕಡಿವಾಣ ಬೀಳಲಿದೆ. ಬೆಳೆಗಾರರು, ಮಧ್ಯವರ್ತಿಗಳು, ಗುಟ್ಕಾ ಕಂಪೆನಿಗಳ ವ್ಯವಹಾರ ಪಾರದರ್ಶಕವಾಗಲಿದೆ. ಬೆಲೆಯಲ್ಲೂ ಸ್ಥಿರತೆ ಮೂಡಲಿದೆ’ ಎಂದು ವಿಶ್ಲೇಷಿಸುತ್ತಾರೆ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ಎಸ್‌.ಡೊಂಗ್ರೆ.

‘ಹಳೆಯ ಸಂಗ್ರಹವೂ ಸೇರಿ ಇದುವರೆಗೆ ವ್ಯಾಪಾರಿಗಳು 46 ಸಾವಿರ ಮೂಟೆ ಹೆಚ್ಚುವರಿ ಖರೀದಿಸಿದ್ದಾರೆ. ಜಿಎಸ್‌ಟಿ ಜಾರಿ ದಿನ ಹತ್ತಿರವಾಗುತ್ತಿದ್ದಂತೆ ಖರೀದಿ ಜಾಸ್ತಿಯಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

‘ಹೊಸ ತೆರಿಗೆ ಪದ್ಧತಿಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕಿದೆ. ಮೊದಲು ಅಡಿಕೆ ಖರೀದಿಯ ಮೇಲೆ ಶೇ 2ರಷ್ಟು ತೆರಿಗೆ ನೀಡುತ್ತಿದ್ದೆವು. ಜಿಎಸ್‌ಟಿ ಜಾರಿಯಾದರೆ ಶೇ 3ರಷ್ಟು ತೆರಿಗೆ ಹೊರೆಯಾಗಲಿದೆ. ಆದರೆ, ಖರೀದಿಸಿದ ಬಹುಪಾಲು ಅಡಿಕೆ ಹೊರ ರಾಜ್ಯಗಳಿಗೆ ಹೋಗುವ ಕಾರಣ ಆ ರಾಜ್ಯಗಳು ವಿಧಿಸುತ್ತಿದ್ದ ದುಬಾರಿ ತೆರಿಗೆ  ಉಳಿಯಲಿದೆ. ಉತ್ತರ ಭಾರತಕ್ಕೆ ಅಡಿಕೆ ಸಾಗಿಸಲು ಜಿಎಸ್‌ಟಿ ವರದಾನವಾಗಿದೆ. ಈ ಕಾರಣಕ್ಕೆ ಜಿಎಸ್‌ಟಿ ಜಾರಿ ನಂತರ ವಹಿವಾಟು ಜೋರಾಗಲಿದೆ’ ಎನ್ನುತ್ತಾರೆ ಎಪಿಎಂಸಿ ವರ್ತಕ ಕೆ.ಸಿ.ಮಲ್ಲಿಕಾರ್ಜುನ.

**

75 ಸಾವಿರ ಟನ್‌ ಅಡಿಕೆ ಉತ್ಪಾದನೆ
ಜಿಲ್ಲೆಯಲ್ಲಿ 80 ಸಾವಿರ ಹೆಕ್ಟೇರ್ ತೋಟಗಾರಿಕಾ ಬೆಳೆ ಇದೆ. ಅದರಲ್ಲಿ 52 ಸಾವಿರ ಹೆಕ್ಟೇರ್ ಅಡಿಕೆ ಬೆಳೆಯಲಾಗುತ್ತಿದೆ. ವರ್ಷಕ್ಕೆ ಸರಾಸರಿ 75 ಸಾವಿರ ಟನ್‌ ಅಡಿಕೆ ಉತ್ಪಾದನೆಯಾಗುತ್ತದೆ. ರಾಜ್ಯದ ಒಟ್ಟು ಉತ್ಪಾದನೆಯ ಶೇ 24ರಷ್ಟು  ಜಿಲ್ಲೆಯಲ್ಲೇ ಬೆಳೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.